ವರದಿ : ಅಂಶಿ ಪ್ರಸನ್ನಕುಮಾರ್
ಮೈಸೂರು (ನ.16): ಮೈಸೂರು- ಚಾಮರಾಜನಗರ (Mysuru - chamarajanagar) ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ದ್ವಿ ಸದಸ್ಯ ಕ್ಷೇತ್ರದಿಂದ ಮೊದಲ ಬಾರಿಗೆ ಉಪ ಚುನಾವಣೆಯು (By election) 2013ರ ಆ.22 ರಂದು ನಡೆದು, ಕಾಂಗ್ರೆಸ್‌ನ (CongresS) ಆರ್. ಧರ್ಮಸೇನ (R Dharmasena) ಸುಲಭ ಜಯ ಸಾಧಿಸಿದರು.
2009ರ ಡಿ.18 ರಂದು ನಡೆದಿದ್ದ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿಯ (BJP) ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಅವರು 2013ರ ವಿಧಾನಸಭಾ ಚುನಾವಣೆಯಲ್ಲಿ (Assembly Election) ಚಾಮರಾಜನಗರದಿಂದ ಕೆಜೆಪಿ ಅಭ್ಯರ್ಥಿಯಾಗಿ (KJP) ಕಣಕ್ಕಿಳಿದಿದ್ದರಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ (Resignation) ನೀಡಿದ್ದರು. ಹೀಗಾಗಿ ಈ ಉಪ ಚುನಾವಣೆ ನಡೆಯಿತು.
ಆಗ ಗ್ರಾಪಂ ಸದಸ್ಯರು- 6314, ತಾಪಂ- 256, ಜಿಪಂ- 67, ನಗರಸಭೆ- 62, ಪುರಸಭೆ- 122, ನಗರರಪಾಲಿಕೆ- 65, ವಿಧಾನಸಭಾ ಸದಸ್ಯರು- 15, ವಿಧಾನ ಪರಿಷತ್ ಸದಸ್ಯರು- 5, ಸಂಸದರು-2 ಮತದಾನದ ಹಕ್ಕಿತ್ತು. ಒಟ್ಟು 6982 ಮಂದಿ ಪೈಕಿ 6963 ಮಂದಿ ಮತ ಚಲಾಯಿಸಿದ್ದರು. 487 ತಿರಸ್ಕೃತವಾದವು. ಧರ್ಮಸೇನ- 3779 ಮತಗಳನ್ನು ಪಡೆದು ಪ್ರಥಮ ಸುತ್ತಿನಲ್ಲಿಯೇ ಆಯ್ಕೆಯಾದರು. ಯು.ಎಸ್. ಶೇಖರ್- 2611 ಮತಗಳನ್ನು ಪಡೆದರು. ಕಣದಲ್ಲಿದ್ದ ಅಯೂಬ್ ಖಾನ್- 76 ಮತಗಳನ್ನು ಪಡೆದಿದ್ದರು.
ಕಾಂಗ್ರೆಸ್: ಕಾಂಗ್ರೆಸ್ (Congress) ಟಿಕೆಟ್‌ಗೆ ಆರ್. ಧರ್ಮಸೇನ, ಮಾಜಿ ಸದಸ್ಯ ಎನ್. ಮಂಜುನಾಥ್, ಮಾಜಿ ಶಾಸಕ ಸಿ. ಗುರುಸ್ವಾಮಿ, ಎಂಡಿಎ (MDA) ಮಾಜಿ ಅಧ್ಯಕ್ಷ ಪಿ. ಗೋವಿಂದರಾಜು, ನಿವೃತ್ತ ಡಿಜಿಪಿ ಎಲ್. ರೇವಣಸಿದ್ದಯ್ಯ, ಮೈಲ್ಯಾಕ್ ಮಾಜಿ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಜಿಪಂ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಡಿಎಲ್‌ಡಿಬಿ ಮಾಜಿ ಅಧ್ಯಕ್ಷ ಕೆ.ಆರ್. ಮೋಹನಕುಮಾರ್, ಮಾಜಿ ಮೇಯರ್ ಅನಂತ, ರಘು ಆಚಾರ್, ಎಸ್. ಶಂಕರ್ ಮೊದಲಾದವರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಜಿಲ್ಲಾ ಕಾಂಗ್ರೆಸ್ (Congress) ಅಧ್ಯಕ್ಷರಾಗಿ ಸುಮಾರು 11 ವರ್ಷ ಸೇವೆ ಸಲ್ಲಿಸಿದ್ದ ಧರ್ಮಸೇನ ಅವರಿಗೆ ಟಿಕೆಟ್ ನೀಡಲಾಗಿತ್ತು.
ಒಮ್ಮತದ ಅಭ್ಯರ್ಥಿಯಾದರೂ ಗೆಲ್ಲದ ಯು.ಎಸ್. ಶೇಖರ್
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು 2013ರ ವಿಧಾನಸಭಾ ಚುನಾವಣೆಗೆ (Assembly Election) ಮುನ್ನಾ ಬಿಜೆಪಿಯಿಂದ ಹೊರಹೋಗಿ ಕೆಜೆಪಿ (KJP) ಕಟ್ಟಿದ್ದರು. ಆ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ- ಬಿಎಸ್‌ಆರ್ ಎಂದು ಒಡಕಾಗಿದ್ದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಜೆಡಿಎಸ್ ಅಧಿಕೃತ ವಿರೋಧ ಪಕ್ಷವಾಯಿತು.
ಈ ನಡುವೆ ಮೇಲ್ಮನೆ ಉಪ ಚುನಾವಣೆ ಎದುರಾಯಿತು. ಬಿಜೆಪಿಯಿಂದ ಯಶಸ್ವಿನಿ ಸೋಮಶೇಖರ್ ಹೆಸರು ಅಂತಿಮಗೊಳಿಸಲಾಗಿತ್ತು. ಏತನ್ಮಧ್ಯೆ ಚುನಾವಣಾ ಸೋಲಿನಿಂದ ಪಾಠ ಕಲಿತ ಕೆಜೆಪಿಯು ಬಿಜೆಪಿಯ ಜೊತೆ ಕೈಜೋಡಿಸಲು ಮುಂದಾಯಿತು. ಇದರಿಂದ ವರಿಷ್ಠರ ಸೂಚನೆಯ ಮೇರೆಗೆ ಯಶಸ್ವಿನಿ ಸೋಮಶೇಖರ್ ಕಣದಿಂದ ಹಿಂದೆ ಸರಿದು ಕೆಜೆಪಿಯ ಯು.ಎಸ್. ಶೇಖರ್ ಅವರಿಗೆ ದಾರಿ ಮಾಡಿಕೊಟ್ಟರು. ಜೆಡಿಎಸ್ ಕೂಡ ಅಭ್ಯರ್ಥಿ ಹಾಕಿರಲಿಲ್ಲ.
ಎಂಎಲ್‌ಎ ಆಸೆಗೆ ಹೋಗಿ ಎಂ.ಎಲ್ಸಿ ಸ್ಥಾನ ಕಳೆದುಕೊಂಡ ಪ್ರೊ.ಕೆಆರ್‌ಎಂ
ಮೈಸೂರು- ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಅದೇ ಮೊದಲ ಬಾರಿಗೆ ಬಿಜೆಪಿ ಗೆದ್ದಿತ್ತು. ಗೆದ್ದ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಅವರ ಅವಧಿ 2016 ರ ಜನವರಿವರೆಗೆ ಇತ್ತು. ಆದರೆ ಅವರು ಚಾಮರಾಜನಗರದಿಂದ 2013 ರಲ್ಲಿ ವಿಧಾನಸಭೆಗೆ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಪಕ್ಷ ಬದಲಾವಣೆಯಾಗಿದ್ದರಿಂದ ರಾಜೀನಾಮೆ ನೀಡುವುದು ಅನಿವಾರ್ಯವಾಗಿತ್ತು. ಆದರೆ ಆ ಚುನಾವಣೆಯಲ್ಲಿ ಅವರು ಗೆಲ್ಲಲಿಲ್ಲ. ಕಾಂಗ್ರೆಸ್‌ನ ಸಿ. ಪುಟ್ಟರಂಗಶೆಟ್ಟಿಅವರ ಎದುರು ಸೋತರು. ಇದರಿಂದ ಎಂಎಲ್‌ಎ ಆಸೆಗೆ ಹೋಗಿ ಎಂಎಲ್‌ಸಿ ಸ್ಥಾನ ಕಳೆದುಕೊಂಡರು.