- ಕಾರ್ಮಿಕರ ಬದುಕು ಅತಂತ್ರ, ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿವೆ ಬಸ್
- ಆರ್ಥಿಕ ನಷ್ಟ, ಸರ್ಕಾರದ ಅಸಹಾಕಾರದಿಂದ ಸಾರಿಗೆ ಸಂಸ್ಥೆ ಬಂದ್
- ಮಾರಾಟಕ್ಕೆ ಮುಂದಾದ್ರೂ ಖರೀದಿಗೆ ಯಾರು ಇಲ್ಲ!
- ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸಹಕಾರ ಸಾರಿಗೆ
ಚಿಕ್ಕಮಗಳೂರು (ಡಿ. 05): ಕಾಫಿನಾಡು ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಸಹಕಾರ ಸಾರಿಗೆ (Public Transport) ಕೇವಲ ನಾಲ್ಕು ಚಕ್ರದ ಬಸ್ಸಲ್ಲ, ಮಲೆನಾಡಿಗರ ಪಾಲಿನ ರಥ. ಮಕ್ಕಳನ್ನ ಶಾಲೆಗೆ, ವೃದ್ಧರನ್ನ ಆಸ್ಪತ್ರೆಗೆ ಸೇರಿದಂತೆ ಲಕ್ಷಾಂತರ ಜನರನ್ನ ಸಮಯಕ್ಕೆ ಸರಿಯಾಗಿ ಮುಟ್ಟಬೇಕಾದ ಜಾಗ ಮುಟ್ಟಿಸಿದ ಸಮಯ ಸಾಧಕ.
ಜೊತೆಗೆ, ಏಷ್ಯಾ (Asia) ಖಂಡದಲ್ಲೇ ಹಲವು ಮೊದಲುಗಳಿಗೆ ಸಾಕ್ಷಿಯಾದ ಕಾರ್ಮಿಕರ ಬೆವರಿನ ಸಂಸ್ಥೆ. ಆದರೆ, ಇಂತಹಾ ಸಹಕಾರ ಸಂಸ್ಥೆಗೆ ಸರ್ಕಾರದಿಂದ ಅಸಹಕಾರ ಸಿಕ್ಕಿದ್ದರಿಂದ ಬೀಗ ಹಾಕಿ (Shut Down) 3 ವರ್ಷಗಳೇ ಕಳೆದಿದೆ. ಸಂಸ್ಥೆಯನ್ನ ಭೋಗ್ಯಕ್ಕೆ ಅಥವ ಮಾರಾಟಕ್ಕೆ ಕಾರ್ಮಿಕರು ಚಿಂತಿಸಿದ್ದರೂ ಕೊಂಡುಕೊಳ್ಳಲು ಯಾರು ಮುಂದೆ ಬರುತ್ತಿಲ್ಲ.ಇದು ಕಾರ್ಮಿಕರಿಗೆ ಚಿಂತೆ ಗೆ ಮತ್ತಷ್ಟು ಕಾರಣವಾಗಿದೆ.
ಈ ಸಹಕಾರ ಸಾರಿಗೆ ಬಸ್ಸಿನ ಚಕ್ರಗಳು ಚಿಕ್ಕಮಗಳೂರು ಸೇರಿದಂತೆ ಮಂಗಳೂರು, ಉಡುಪಿ, ಶಿವಮೊಗ್ಗಾದ (Shivamogga) ಬೆಟ್ಟಗುಡ್ಡಗಳ ಬಹುತೇಕ ಗ್ರಾಮವನ್ನ ನೋಡಿವೆ. ಕಾರ್ಮಿಕರ ಬೆವರಲ್ಲಿ ಜನ್ಮ ತಾಳಿದ ಈ ಸಂಸ್ಥೆ ಮಲೆನಾಡ ಕುಗ್ರಾಮಗಳ ಮನೆ-ಮನಗಳಲ್ಲಿ ಬೆಸೆದ ಕೊಂಡಿಯ ಪರಿಗೆ ಏಷ್ಯಾದಲ್ಲೇ ಬೆಸ್ಟ್ ಸಹಕಾರ ಸಂಸ್ಥೆ ಎಂಬ ಹೆಗ್ಗಳಿಕೆ ಗಳಿಸಿತ್ತು.
ಕಾರ್ಮಿಕರೇ ಕಟ್ಟಿ, ಕಾರ್ಮಿಕರೇ ಮಾಲೀಕರಾಗಿ 6 ಬಸ್‌ನಿಂದ 76 ಬಸ್‌ಗೆ ತಂದಿದ್ದರು. ರಾಜ್ಯಕ್ಕೆ ಕೆ.ಎಸ್.ಆರ್.ಟಿ.ಸಿ. (KSRTC) ಮಲೆನಾಡಿಗೆ ಸಹಕಾರ ಸಾರಿಗೆ ಎಂಬ ಗಾದೆಯೂ ಜನ್ಮ ತಾಳಿತ್ತು. ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕದ ಏಕೀಕರಣಕ್ಕೆ ಹೋರಾಡಿದವರು, ವಿದ್ಯಾರ್ಥಿಗಳು, ಸಂಸ್ಥೆಯ ಕಾರ್ಮಿಕರ ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರಿಗೆ ಶೇ.50 ರಷ್ಟು ರಿಯಾಯಿತಿ ಕೊಟ್ಟು, ದಟ್ಟಕಾನನ, ಕಲ್ಲು-ಮಣ್ಣಿನ ದುರ್ಗಮ ಹಾದಿಯಲ್ಲೂ ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿದ ಹೆಗ್ಗಳಿಕೆ ಈ ಕಾರ್ಮಿಕರ ಸಂಸ್ಥೆಯದ್ದು.
Chikkamagaluru Tourism: ಎತ್ತಿನಭುಜಕ್ಕೆ ಹೋಗುವ ಪ್ರವಾಸಿಗರಿಗೆ ಶಾಕ್..!
ಅಂತಹಾ ಸಂಸ್ಥೆ ಸರ್ಕಾರದ ರೀತಿ-ನೀತಿ-ರಿವಾಜುಗಳಿಂದ ಕಾರ್ಮಿಕರಿಗೆ ಸಂಬಳ (Salary) ಕೊಡಲಾಗದೆ ಕಳೆದ ಮೂರು ವರ್ಷಗಳಿಂದ ಬೀಗ ಹಾಕಿದೆ. . ಇದರಿಂದ ಕಾರ್ಮಿಕರ ಜೀವನ ನಡೆಸುವುದೇ ದುಸ್ಥಿರವಾದ್ರೆ ಡಿಪೋದಲ್ಲಿ ನಿಂತಲ್ಲೇ ನಿಂತಿರುವ ಬಸ್ ಗಳು ತುಕ್ಕು ಹಿಡಿಯುತ್ತಿವೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸಹಕಾರ ಸಂಸ್ಥೆಗೆ ಸರ್ಕಾರದಿಂದ ಸಿಕ್ಕಿದ್ದು ಬರೀ ಅಸಹಕಾರ. ಇದರಿಂದ ಈ ಸಂಸ್ಥೆಯಲ್ಲಿ ಇರುವ 300 ಕ್ಕೂ ಹೆಚ್ಚು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಕಳೆದ 3 ವರ್ಷಗಳಿಂದ ಕಾರ್ಮಿಕರ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಜೊತೆಗೆ ಈಗಾಗಲೇ ಖಾಸಗಿ ಸಂಸ್ಥೆಗಳಲ್ಲಿ ಮಾಡಿರುವ ಸಾಲಕ್ಕೆ ಬಸ್ ಗಳನ್ನು ಹರಾಜು ಹಾಕುವ ಯತ್ನವೂ ಒಮ್ಮೆ ನಡೆಯಿತು. ಕಾರ್ಮಿಕರ ವಿರೋಧ, ಕೋರ್ಟ್ ನ ಮೊರೆಗೆ ಕಾರ್ಮಿಕರು ಹೋಗಿರುವ ಕಾರಣ ಈ ಪ್ರಕ್ರಿಯೆಗೆ ತಡೆಯಿತು. ಸರ್ಕಾರ ಇನ್ನಾದ್ರು ಇತ್ತ ಗಮನ ಹರಿಸಿ ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯಾಗಿದ್ದ ಕಾರ್ಮಿಕರ ಬೆವರಿನ ಸಂಸ್ಥೆಗೆ ಸರ್ಕಾರ ಸಾಥ್ ನೀಡಬೇಕಿದೆ.