ಬೆಂಗಳೂರು ದಂಪತಿಯ ಟ್ರಿಪ್‌ ಹಾಳು ಮಾಡಿದ ಇಂಡಿಗೋ ಏರ್‌ಲೈನ್ಸ್‌ಗೆ 70 ಸಾವಿರ ರೂ. ದಂಡ!

By BK Ashwin  |  First Published Nov 14, 2023, 7:08 PM IST

ಬೆಂಗಳೂರು ದಂಪತಿಯ ಲಗೇಜ್‌ ಅನ್ನು ಇಂಡಿಗೋ ಏರ್‌ಲೈನ್ಸ್‌ 2 ದಿನಗಳ ನಂತರ ಹಿಂದಿರುಗಿಸಿದ್ದು, ಇದರಿಂದ ತಮ್ಮ ಟ್ರಿಪ್‌ ಹಾಳಾಗಿದೆ ಎಂದು ಅವರು ಆರೋಪಿಸಿದ್ದರು. ಅಲ್ಲದೆ, ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. 


ಬೆಂಗಳೂರು (ನವೆಂಬರ್ 14, 2023): ಬೆಂಗಳೂರಿನ ದಂಪತಿಯ ಹಾಲಿಡೇ ಟ್ರಿಪ್‌ ಅನ್ನು ಇಂಡಿಗೋ ಏರ್‌ಲೈನ್ಸ್‌ ಹಾಳು ಮಾಡಿದೆ ಎಂದು ಆರೋಪಿಸಿದ ದೂರುದಾರರು ನಗರದ ಗ್ರಾಹಕ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ 70,000 ರೂಪಾಯಿ ಪರಿಹಾರ ನೀಡುವಂತೆ ಏರ್‌ಲೈನ್ಸ್‌ಗೆ ಆದೇಶ ನೀಡಿದೆ.

ಬೆಂಗಳೂರು ದಂಪತಿಯ ಲಗೇಜ್‌ ಅನ್ನು ಇಂಡಿಗೋ ಏರ್‌ಲೈನ್ಸ್‌ 2 ದಿನಗಳ ನಂತರ ಹಿಂದಿರುಗಿಸಿದ್ದು, ಇದರಿಂದ ತಮ್ಮ ಟ್ರಿಪ್‌ ಹಾಳಾಗಿದೆ ಎಂದು ಅವರು ಆರೋಪಿಸಿದ್ದರು. 2021 ರ ಅಂತ್ಯದ ವೇಳೆಗೆ ಬೈಯಪ್ಪನಹಳ್ಳಿ ನಿವಾಸಿ ಸುರಭಿ ಶ್ರೀನಿವಾಸ್ ಮತ್ತು ಅವರ ಪತಿ ಬೋಲಾ ವೇದವ್ಯಾಸ್ ಶೆಣೈ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿರೋ ಪೋರ್ಟ್ ಬ್ಲೇರ್‌ಗೆ ರಜೆಯ ಮೇಲೆ ಹೋಗಲು ನಿರ್ಧರಿಸಿದರು.

Tap to resize

Latest Videos

ಇದನ್ನು ಓದಿ: 90 ನಿಮಿಷದ ಪ್ರಯಾಣ ಇನ್ಮುಂದೆ 7 ನಿಮಿಷದಲ್ಲಿ ಸಾಧ್ಯ: 2026ಕ್ಕೆ ಬೆಂಗ್ಳೂರಲ್ಲಿ ಹಾರಾಡಲಿದೆ ಏರ್‌ ಟ್ಯಾಕ್ಸಿ!

ಬಳಿಕ, ಅವರು ಇಂಡಿಗೋದಲ್ಲಿ ಬೆಂಗಳೂರಿನಿಂದ ಪೋರ್ಟ್ ಬ್ಲೇರ್‌ಗೆ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಿದರು ಮತ್ತು ನವೆಂಬರ್ 1, 2021 ರಂದು ರಜಾ ತಾಣಕ್ಕೆ ಹೋದರು. ಆದರೆ, ಅಂಡಮಾನ್‌ನಲ್ಲಿ ದೋಣಿ ವಿಹಾರಕ್ಕಾಗಿ ಬಟ್ಟೆ, ಔಷಧ ಮತ್ತು ಬೋಟ್‌ ಟಿಕೆಟ್‌ಗಳನ್ನು ಒಳಗೊಂಡಿದ್ದ ಅವರ ತಪಾಸಣೆ ಮಾಡಿದ ಲಗೇಜ್, ಪೋರ್ಟ್ ಬ್ಲೇರ್ ತಲುಪಲು ವಿಫಲವಾಗಿದೆ. ಈ ಹಿನ್ನೆಲೆ ತಮ್ಮ ಸ್ವತ್ತು ತಲುಪಿಲ್ಲವೆಂದು ದಂಪತಿ ಇಂಡಿಗೋಗೆ ದೂರು ನೀಡಿದ್ದಾರೆ. ಇದರ ನಂತರ, ಇಂಡಿಗೋದ ಗ್ರೌಂಡ್ ಸಿಬ್ಬಂದಿ ಬ್ಯಾಗ್ ಅನ್ನು ಮರುದಿನವೇ ತಲುಪಿಸುವುದಾಗಿ ಭರವಸೆ ನೀಡಿದರು.

ಆದರೆ, ನವೆಂಬರ್ 3 ರ ಅಂತ್ಯದ ವೇಳೆಗೆ ಅವರ ಲಗೇಜ್‌ ತಲುಪಿದ್ದು, ಆ ಹೊತ್ತಿಗೆ ಅವರ ಅರ್ಧಕ್ಕಿಂತ ಹೆಚ್ಚು ರಜೆ ಮುಗಿದಿತ್ತು. ಈ ಕಾರಣಕ್ಕಾಗಿ ಅವರು ಮೂಲಭೂತ ವಸ್ತುಗಳನ್ನು ಸಹ ಖರೀದಿಸಬೇಕಾಯಿತು ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ಕ್ಯಾಬ್‌ ರೈಡ್‌ ಕ್ಯಾನ್ಸಲ್‌ ಮಾಡುತ್ತಲೇ ಬರೋಬ್ಬರಿ 23 ಲಕ್ಷ ರೂ. ಗಳಿಸಿದ ಚಾಲಾಕಿ ಉಬರ್‌ ಚಾಲಕ!

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನಕ್ಕೆ ಲಗೇಜ್ ಲೋಡ್ ಆಗಿಲ್ಲ ಎಂದು ಇಂಡಿಗೋ ಪ್ರತಿನಿಧಿಗಳಿಗೆ ತಿಳಿದಿತ್ತು. ಆದರೆ ಅವರು ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ ಎಂದು ಸುರಭಿ ಮತ್ತು ಬೋಲಾ ದಂಪತಿ ಆರೋಪಿಸಿದ್ದರು. 

ಅಲ್ಲದೆ, ನವೆಂಬರ್ 18 ರಂದು ಇಂಡಿಗೋ ಏರ್‌ಲೈನ್‌ನ ನಿರ್ವಾಹಕರಾದ ಇಂಟರ್‌ಗ್ಲೋಬ್ ಏವಿಯೇಷನ್ ಲಿಮಿಟೆಡ್‌ಗೆ ಲೀಗಲ್‌ ನೋಟಿಸ್ ಕಳುಹಿಸಿದ್ದಾರೆ. ಒಂದು ವರ್ಷದ ನಂತರ, ಅವರು ತಮ್ಮ ರಜೆಯನ್ನು ಹಾಳು ಮಾಡಿದ್ದಕ್ಕಾಗಿ ಪರಿಹಾರವನ್ನು ಕೋರಿ ವಿಮಾನಯಾನ ಸಂಸ್ಥೆಯ ವಿರುದ್ಧ ದೂರು ನೀಡಿ ಶಾಂತಿನಗರದಲ್ಲಿರುವ ಬೆಂಗಳೂರು ನಗರ 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಸಂಪರ್ಕಿಸಿದರು.

ಇದನ್ನೂ ಓದಿ: ಮಗಳನ್ನೇ ಅಪಹರಿಸಿದ ಒತ್ತೆಯಾಳು ತಂದೆ: 12 ಗಂಟೆಯಾದ್ರೂ ಏರ್‌ಪೋರ್ಟ್‌ ಬಂದ್‌; 60ಕ್ಕೂ ಹೆಚ್ಚು ವಿಮಾನ ಹಾರಾಟ ಸ್ಥಗಿತ!

ಕೋರ್ಟ್‌ನಲ್ಲಿ ಸುರಭಿ ಮತ್ತು ಬೋಲಾ ತಮ್ಮ ವಾದವನ್ನು ಮಂಡಿಸಿದ್ದು, ಆದರೆ, ಇಂಡಿಗೋದ ವಕೀಲರು  ಪೋರ್ಟ್ ಬ್ಲೇರ್‌ನಲ್ಲಿರುವ ಏರ್‌ಲೈನ್‌ನ ಸಿಬ್ಬಂದಿ ಅವರು ಇಳಿದ ಒಂದು ದಿನದ ನಂತರ ಲಗೇಜ್‌ನೊಂದಿಗೆ ಅವರನ್ನು ತಲುಪಲು ಪ್ರಯತ್ನಿಸಿದರು, ಆದರೆ ಸಾಧ್ಯವಾಗಲಿಲ್ಲ ಎಂದು ಪ್ರತಿವಾದ ಮಾಡಿದ್ದಾರೆ. ಹಾಗೂ, ಅಂಡಮಾನ್‌ನ ಹ್ಯಾವ್‌ಲಾಕ್ ದ್ವೀಪಕ್ಕೆ ಹೋಗುತ್ತಿದ್ದ ದೋಣಿ ಹೋಗಿದ್ದ ಕಾರಣ ನವೆಂಬರ್ 3 ರಂದು ಪ್ರಯಾಣಿಕರಿಗೆ ಸಮಯಕ್ಕೆ ಸಾಮಾನುಗಳನ್ನು ತಲುಪಿಸಲು ಸಾಧ್ಯವಾಗಲಿಲ್ಲ ಎಂದು ಏರ್‌ಲೈನ್‌ನ ಪ್ರತಿನಿಧಿ ತಿಳಿಸಿದ್ದರು.

ಆದರೆ, ದಂಪತಿಗೆ ಆನಂದದಾಯಕ ಮತ್ತು ಸ್ಮರಣೀಯ ಅಂಡಮಾನ್ ರಜಾ ದಿನಗಳನ್ನು ಹಾಳು ಮಾಡಿರುವುದು ಇಂಡಿಗೋ ಏರ್‌ಲೈನ್ಸ್‌ ಎಂದು ಸೆಪ್ಟೆಂಬರ್ 26, 2023 ರಂದು ನೀಡಿದ ತೀರ್ಪಿನಲ್ಲಿ ಗ್ರಾಹಕರ ವೇದಿಕೆ ತೀರ್ಮಾನಿಸಿದೆ. ಅಲ್ಲದೆ, ಇಂಟರ್ ಗ್ಲೋಬ್ ಏವಿಯೇಷನ್ ದಂಪತಿಯ ಲಗೇಜ್‌ನಿಂದ ಉಂಟಾದ ತೊಂದರೆಗಾಗಿ 50,000 ರೂಪಾಯಿ ಪರಿಹಾರವನ್ನು ನೀಡಬೇಕು ಎಂದೂ ನ್ಯಾಯಾಲಯ ತೀರ್ಪು ನೀಡಿದೆ. ಅಲ್ಲದೆ, ಅವರಿಗೆ ಉಂಟಾದ ಮಾನಸಿಕ ಸಂಕಟಕ್ಕಾಗಿ ಹೆಚ್ಚುವರಿಯಾಗಿ 10,000 ರೂ. ಮತ್ತು ಅವರ ನ್ಯಾಯಾಲಯದ ವೆಚ್ಚಕ್ಕಾಗಿ 10,000 ರೂ. ನೀಡಬೇಕೆಂದೂ ಇಂಡಿಗೋಗೆ ತಿಳಿಸಿದೆ. 

ಇದನ್ನೂ ಓದಿ: ಭಾರತೀಯ ಪ್ರವಾಸಿಗರಿಗೆ ಸಿಹಿ ಸುದ್ದಿ: ಈ ದೇಶಕ್ಕೆ ಹೋಗಲು ಇನ್ಮುಂದೆ ವೀಸಾನೇ ಬೇಕಿಲ್ಲ!

click me!