* ಶೆಟ್ಟರ್ ಮನೆ ಎದುರು ಶ್ರೀರಾಮಸೇನೆ ಪ್ರತಿಭಟನೆ
* ಧ್ವನಿವರ್ಧಕ ತೆರವುಗೊಳಿಸಲು ಸರ್ಕಾರಕ್ಕೆ 15 ದಿನದ ಗಡುವು
* ಮುತಾಲಿಕ್ ಪ್ರತಿಭಟನೆ ಮಾಡಲಿ ನಮ್ಮದೇನು ಅಭ್ಯಂತರವಿಲ್ಲ: ಶೆಟ್ಟರ್
ಹುಬ್ಬಳ್ಳಿ(ಜೂ.09): ಮಸೀದಿಗಳಲ್ಲಿ ಧ್ವನಿವರ್ಧಕ ತೆರವುಗೊಳಿಸುವ ಕುರಿತಂತೆ ಶ್ರೀರಾಮಸೇನೆ 2ನೇ ಹಂತದ ಹೋರಾಟ ಆರಂಭಿಸಿದೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಹುಬ್ಬಳ್ಳಿಯ ನಿವಾಸದೆದುರು ಧರಣಿ ನಡೆಸಿದ ಶ್ರೀರಾಮಸೇನೆ ಕಾರ್ಯಕರ್ತರು, ಧ್ವನಿವರ್ಧಕ ತೆರವುಗೊಳಿಸಲು 15 ದಿನದ ಗಡುವು ನೀಡಿದೆ.
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಮಾತನಾಡಿ, ರಾಜ್ಯದ ಎಲ್ಲ ಮಸೀದಿಗಳ ಧ್ವನಿವರ್ಧಕ ತೆರವುಗೊಳಿಸಲು ಸರ್ಕಾರಕ್ಕೆ 15 ದಿನಗಳ ಕಾಲಾವಕಾಶ ನೀಡಲಾಗುವುದು. ಅಷ್ಟರೊಳಗೆ ತೆರವುಗೊಳಿಸದೆ ಇದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮಸೀದಿಗಳಲ್ಲಿ 10ರಿಂದ 15 ಧ್ವನಿವರ್ಧಕ ಹಾಕಿ ಆಜಾನ್ ಕೂಗುವುದರಿಂದ ಸಾರ್ವಜನಿಕರಿಗೆ ಹಾಗೂ ರೋಗಿಗಳಿಗೆ ಆಗುತ್ತಿರುವ ಸಮಸ್ಯೆ ನಿವಾರಿಸುವಂತೆ ಕಳೆದ ಒಂದು ವರ್ಷದಿಂದ ಶ್ರೀರಾಮಸೇನೆ ಹೋರಾಟ ಮಾಡುತ್ತಿದೆ. ಆದರೆ, ಇದಕ್ಕೆ ಬಿಜೆಪಿಯ ನಾಯಕರು ಸ್ಪಂದಿಸಿಲ್ಲ. ಮುಸ್ಲಿಮರ ಓಲೈಕೆಗಾಗಿ ಸರ್ಕಾರ ಈ ರೀತಿ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದರು.
ಧ್ವನಿವರ್ಧಕ ಬಳಕೆ ವಿಚಾರದಲ್ಲಿ ಸುಪ್ರೀಂಕೋರ್ಚ್ ಆದೇಶದ ಸ್ಪಷ್ಟಉಲ್ಲಂಘನೆಯಾಗುತ್ತಿದ್ದು, ಕೋರ್ಚ್ ತೀರ್ಪುಗಳಿಗೆ ಗೌರವ ನೀಡುತ್ತಿಲ್ಲ. ಬಿಜೆಪಿಯನ್ನು ಹಿಂದೂಗಳ ಪರವಾಗಿ ಕೆಲಸ ಮಾಡುವುದಕ್ಕೆ ಆಯ್ಕೆ ಮಾಡಲಾಗಿದೆ. ಇದೇ ಮುಂದುವರಿದರೆ ಅನಾಹುತ ಆಗಲಿದೆ ಎಂದು ಎಚ್ಚರಿಕೆ ನೀಡಿದರು.
ಇಂದಿಗೂ ಮಸೀದಿಗಳಲ್ಲಿ ಐದು ಬಾರಿ ಧ್ವನಿವರ್ಧಕ ಬಳಸುತ್ತಿದ್ದಾರೆ. ಬಿಜೆಪಿ ಅವರ ನಿದ್ದೆಯಿಂದಲೇ ಇದು ಮುಂದುವರಿದಿದೆ. ಹಿಂದೂ ಸಂಘಟನೆಗಳನ್ನು ಬಿಜೆಪಿ ಅವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನಮ್ಮ ಪರ ಮಾತನಾಡುತ್ತಿಲ್ಲ. ಜನರಿಗೆ ಇವರು ಮಾಡುತ್ತಿರುವ ಅನ್ಯಾಯವನ್ನು ತಿಳಿಸುವ ಉದ್ದೇಶದಿಂದಲೇ ಪ್ರತಿಭಟನೆ ಮಾಡುತ್ತಿದ್ದೇವೆ. ಮುಂದಿನ ಚುನಾವಣೆಯಲ್ಲಿ ನೋಟಾ ಚಲಾವಣೆ ಮಾಡಿ ಪಾಠ ಕಲಿಸಬೇಕಾಗುತ್ತದೆ ಎಂದರು.
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಂವಿಧಾನದಲ್ಲಿ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ನಮ್ಮ ಮನೆಯ ಮುಂದೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಪ್ರತಿಭಟನೆ ಮಾಡಲಿ ನಮ್ಮದೇನು ಅಭ್ಯಂತರವಿಲ್ಲ. ಯಾರು ಪ್ರತಿಭಟನೆ ಮಾಡುತ್ತಾರೆ ಅವರ ಜತೆಗೆ ಚರ್ಚೆ ಮಾಡುತ್ತೇನೆ ಎಂದರು. ಮೈಕ್ ವಿಚಾರವಾಗಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಇಲಾಖೆಯೊಂದಿಗೆ ಚರ್ಚೆ ಮಾಡುವೆ. ಸರ್ಕಾರದ ವಿರುದ್ಧ ಅವರು ಮಾತನಾಡಿದರೆ ಈ ಬಗ್ಗೆ ಸರ್ಕಾರದ ಮುಖ್ಯ ಮಂತ್ರಿಗಳು ಗಮನ ನೀಡುತ್ತಾರೆ ಎಂದರು.