* ಗಸ್ತು ತಿರುಗಿ ಮಾರ್ಷಲ್‌ಗಳಿಂದ ತಪಾಸಣೆ, ಸದ್ಯಕ್ಕಿಲ್ಲ ದಂಡ
* ಜೂನ್ ಆರಂಭದಿಂದ ಪ್ರತಿದಿನ 300ಕ್ಕೂ ಅಧಿಕ ಪ್ರಕರಣ ಪತ್ತೆ
* ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್ ಇರಲಿ
ಬೆಂಗಳೂರು(ಜೂ.09): ನಗರದಲ್ಲಿ ಕೊರೋನಾ ಸೋಂಕು ಪ್ರಕರಣ ಏರಿಕೆಯಾಗುತ್ತಿರುವುದರಿಂದ ಸಾರ್ವಜನಿಕರು ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಸದ್ಯ ದಂಡ ವಿಧಿಸುತ್ತಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ ಆರಂಭದಿಂದ ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳ ಆಗುತ್ತಿವೆ. ದಿನಕ್ಕೆ 300ಕ್ಕೂ ಅಧಿಕ ಸೋಂಕು ಪ್ರಕರಣ ಪತ್ತೆಯಾಗುತ್ತಿವೆ. ಆದರೂ ಜನರು ಆತಂಕ ಪಡುವ ಅಗತ್ಯ ಇಲ್ಲ. ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಗುಂಪು ಜನರಿರುವ ಪ್ರದೇಶಗಳಲ್ಲಿ ಹೋದಾಗ ಸಾಮಾಜಿಕ ಅಂತರ ಪಾಲಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕದಲ್ಲಿ ಕೊರೋನಾ ಮತ್ತೆ ಹೆಚ್ಚಳ, ಜನರಿಗೆ ಕೆಲ ಸಲಹೆಗಳೊಂದಿಗೆ ಎಚ್ಚರಿಕೆ ಕೊಟ್ಟ ತಜ್ಞರು
ಸಾರ್ವಜನಿಕರು ಹೆಚ್ಚಾಗಿ ಸೇರುತ್ತಿರುವ ಶಾಪಿಂಗ್ ಮಾಲ್, ಹೋಟೆಲ್, ರೆಸ್ಟೋರೆಂಟ್‌ಗಳು ಸೇರಿ ಜನರು ಒಂದೆಡೆ ಹೆಚ್ಚಾಗಿ ಸೇರುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿದವರಿಗೆ ಮಾತ್ರ ಪ್ರವೇಶ ಅವಕಾಶ ನೀಡುವಂತೆ ಪಾಲಿಕೆಯಿಂದ ನಿರ್ದೇಶಿಸಲಾಗಿದೆ. ಈ ಬಗ್ಗೆ ಪಾಲಿಕೆಯ ಮಾರ್ಷಲ್‌ಗಳು ನಿತ್ಯ ಶಾಪಿಂಗ್ ಮಾಲ್, ಹೋಟೆಲ್ ಸೇರಿ ವಿವಿಧ ಪ್ರದೇಶಗಳಲ್ಲಿ ಗಸ್ತು ತಿರುಗಿ ತಪಾಸಣೆ ಮಾಡಲಿದ್ದಾರೆ. ಮಾಸ್ಕ್ ಧರಿಸುವ ಮತ್ತು ಸಾಮಾಜಿಕ ಅಂತರ ಪಾಲಿಸುವ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಸದ್ಯಕ್ಕೆ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಯಾವುದೇ ಚಿಂತನೆ ಇಲ್ಲ. ಆದರೆ, ಪ್ರಕರಣ ತೀವ್ರವಾಗಿ ಹೆಚ್ಚಳವಾದಲ್ಲಿ ದಂಡ ವಿಧಿಸುವುದನ್ನು ಮರು ಜಾರಿಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಮಂಕಿಪಾಕ್ಸ್ ಬಗ್ಗೆ ನಿಗಾ
ವಿದೇಶಗಳಲ್ಲಿ ಕಾಣಿಸಿಕೊಂಡಿರುವ ಮಂಕಿ ಪಾಕ್ಸ್ ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗಿಲ್ಲ. ಆದರೆ, ಈ ರೋಗದ ಲಕ್ಷಣಗಳ ಬಗ್ಗೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ. ಇಂತಹ ರೋಗ ಲಕ್ಷಣದ ಪ್ರಕರಣ ಕಂಡು ಬಂದಲ್ಲಿ ಕೂಡಲೇ ಮೇಲಧಿಕಾರಿಗಳಿಗೆ ಮಾಹಿತಿ ರವಾನಿಸಿ ಹೆಚ್ಚಿನ ಚಿಕಿತ್ಸೆಗೆ ನಿಗಾವಹಿಸುವಂತೆ ಸೂಚಿಸಲಾಗಿದೆ. ಮಂಕಿ ಪಾಕ್ಸ್ ರೋಗ ಚಿಕಿತ್ಸೆಗೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದ್ದಾರೆ.