
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಪಾದಯಾತ್ರೆ ವೇಳೆ ಚಿರತೆ ದಾಳಿಗೆ ಬಾಲಕ ಬಲಿಯಾದ ದುರ್ಘಟನೆ ಈಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ಬಳಿಕ ಮೃತ ಬಾಲಕನ ಕುಟುಂಬಸ್ಥರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ದುರ್ಘಟನೆ ನಡೆಯಲು ಅರಣ್ಯ ಇಲಾಖೆಯೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನಾಗಮಲೆಗೆ ತೆರಳುವ ಪಾದಯಾತ್ರಿಗಳಿಗೆ ಅರಣ್ಯ ಇಲಾಖೆ ತಲಾ ₹200 ಶುಲ್ಕವನ್ನು ನಿಗದಿ ಮಾಡಿದೆ. ಈ ಶುಲ್ಕವನ್ನು ಪಾವತಿಸುವ ಭಕ್ತರಿಗೆ ಅರಣ್ಯ ಸಿಬ್ಬಂದಿ ಸುರಕ್ಷತೆ ಬಗ್ಗೆ ಮಾರ್ಗದರ್ಶನ ನೀಡಬೇಕು ಎಂಬ ನಿಯಮವಿದೆ. ಆದರೆ, ನಿಯಮಬಾಹಿರವಾಗಿ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಜೊತೆಗೆ ಪಾದಯಾತ್ರಿಗಳಿಗೆ ಯಾವುದೇ ರಕ್ಷಣಾ ವ್ಯವಸ್ಥೆ ಒದಗಿಸದೇ, ಜೊತೆಯಲ್ಲಿ ಯಾವುದೇ ಸಿಬ್ಬಂದಿಗಳು ಕೂಡ ಇರದೆ. ಪ್ರಾಣಿಗಳಿವೆ ಎಚ್ಚರಿಕೆ ಇಂದಿರಿ ಎಂಬ ನಾಮಫಲಕವನ್ನೂ ಹಾಕದೆ. ಕನಿಷ್ಠ ಕಾಡು ಪ್ರಾಣಿಗಳ ಸಂಚಾರದ ಬಗ್ಗೆ ಮಾಹಿತಿಯನ್ನೂ ನೀಡದೆ ಅರಣ್ಯ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಕುಟುಂಬಸ್ಥರು ಮತ್ತು ಜೊತೆಯಲ್ಲಿದ್ದವರು ಗಂಭೀರ ಆರೋಪ ಮಾಡಿದ್ದಾರೆ.
ಮಹದೇಶ್ವರ ಬೆಟ್ಟದಿಂದ ನಾಗಮಲೆಯತ್ತ ಹೋಗುವ ಮಾರ್ಗವು ದಟ್ಟ ಅರಣ್ಯ ಪ್ರದೇಶವಾಗಿದ್ದು, ಇಲ್ಲಿ ಕಾಡುಪ್ರಾಣಿಗಳ ಸಂಚಾರ ಸಾಮಾನ್ಯವಾಗಿದೆ. ಇಂತಹ ಅಪಾಯಕರ ಮಾರ್ಗದಲ್ಲಿ ಪಾದಯಾತ್ರೆ ಮಾಡುವ ಭಕ್ತರಿಗೆ ಸೂಕ್ತ ಭದ್ರತೆ ಕಲ್ಪಿಸುವುದು ಅತ್ಯವಶ್ಯಕವಾಗಿದ್ದರೂ, ಅದು ಸರಿಯಾಗಿ ಜಾರಿಯಾಗಿಲ್ಲ ಎಂಬುದು ಈ ಘಟನೆ ನಂತರ ಬಹಿರಂಗವಾಗಿದೆ.
ಈ ದುರ್ಘಟನೆ ಕುರಿತು ಹನೂರು ಕ್ಷೇತ್ರದ ಶಾಸಕ ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದು, ಬಾಲಕನ ಸಾವಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಬೆಳಗಿನ ವೇಳೆಯಲ್ಲಿ ಕಾಡುಪ್ರಾಣಿಗಳ ಸಂಚಾರ ಹೆಚ್ಚು ಇರುತ್ತದೆ. ನಡೆಯಬಾರದ ಘಟನೆ ನಡೆದಿದೆ. ಭಕ್ತರ ಸುರಕ್ಷತೆ ನಮ್ಮ ಆದ್ಯತೆ ಎಂದು ತಿಳಿಸಿದರು.
ಹೆಚ್ಚು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಮಾತನಾಡಿದ ಶಾಸಕ ಮಂಜುನಾಥ್, ಪಾದಯಾತ್ರೆ ಮಾಡುವ ಭಕ್ತರಿಗೆ ಅನುಕೂಲವಾಗುವಂತೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸುವುದಾಗಿ ತಿಳಿಸಿದ್ದಾರೆ. ಜೊತೆಗೆ ನಾಗಮಲೆಗೆ ಸುರಕ್ಷಿತ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಹೇಳಿದರು.
ಭಕ್ತರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಾಧಿಕಾರದ ವತಿಯಿಂದ ಮಿನಿ ಬಸ್ ವ್ಯವಸ್ಥೆ ಕಲ್ಪಿಸುವ ಯೋಜನೆಯೂ ರೂಪಿಸಲಾಗುತ್ತಿದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಮಲೆ ಮಹದೇಶ್ವರ ಬೆಟ್ಟ ಹಾಗೂ ನಾಗಮಲೆ ಪ್ರದೇಶಗಳಿಗೆ ಪ್ರತಿದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಮಾಡುತ್ತಿದ್ದು, ಇಂತಹ ಘಟನೆಗಳು ಅವರಲ್ಲಿ ಭೀತಿ ಹುಟ್ಟಿಸಿವೆ. ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.