ರಾಜ್ಯ ರಾಜಧಾನಿಯ ಲಾಲ್‌ಬಾಗ್ ಸಸ್ಯ ಉದ್ಯಾನದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಜ.18ರಿಂದ 28ರವರೆಗೆ ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯ ಆಧಾರಿತ 215ನೇ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು ಭಾರಿ ಸಂಖ್ಯೆಯ ಜನರನ್ನು ಆಕರ್ಷಿಸುತ್ತಿದೆ.
ಬೆಂಗಳೂರು (ಜ.19): ರಾಜ್ಯ ರಾಜಧಾನಿಯ ಲಾಲ್‌ಬಾಗ್ ಸಸ್ಯ ಉದ್ಯಾನದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಜ.18ರಿಂದ 28ರವರೆಗೆ ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯ ಆಧಾರಿತ 215ನೇ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು ಭಾರಿ ಸಂಖ್ಯೆಯ ಜನರನ್ನು ಆಕರ್ಷಿಸುತ್ತಿದೆ. ಸುಮಾರು 70 ಬಗೆಯ ಹೂವಿನ ತಳಿಗಳ 30 ಲಕ್ಷಕ್ಕೂ ಹೆಚ್ಚು ಹೂವುಗಳಿಂದ ಅನುಭವ ಮಂಟಪ ನಿರ್ಮಾಣ ಮಾಡಲಾಗಿದೆ. ಈ ಮೂಲಕ 12ನೇ ಶತಮಾನದ ಬಸವಾದಿ ಶರಣರ ಎಲ್ಲ ಸಂದೇಶಗಳನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಲಾಗಿದೆ. ಜೊತೆಗೆ ತೋಟಗಾರಿಕೆ ಇಲಾಖೆಯವರು ಯಾವ ಹೂವು, ಹಣ್ಣು ಬೆಳೆಯುತ್ತಾರೆ. ಇಲಾಖೆ ಕಾರ್ಯೋದ್ದೇಶಗಳೇನು ಎಂಬಿತ್ಯಾದಿ ಮಾಹಿತಿಯನ್ನು ಈ ಪ್ರದರ್ಶನದಲ್ಲಿ ನೀಡಲಾಗುತ್ತಿದೆ.
ತೋಟಗಾರಿಕೆ ಇಲಾಖೆ ವತಿಯಿಂದ ಲಾಲ್‌ಬಾಗ್ ಗಾಜಿನಮನೆಯಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಉದ್ಘಾಟಿಸಿದ್ದಾರೆ. 12ನೇ ಶತಮಾನದಲ್ಲಿ ಜಾತಿ, ವರ್ಗ ರಹಿತವಾದ ಮತ್ತು ಮೂಢನಂಬಿಕೆಗಳು, ಕಂದಾಚಾರಗಳಿಂದ ವಿಮುಕ್ತವಾದ ಸಮಸಮಾಜ ನಿರ್ಮಾಣಕ್ಕಾಗಿ ಹೋರಾಡಿದ ಬಸವಾದಿ ಶರಣರನ್ನು ನಾಡಿಗೆ ಪರಿಚಯಿಸುವ ಉದ್ದೇಶದಿಂದ ಫಲಪುಷ್ಪ ಪ್ರದರ್ಶನ ಆಯೋಜಿಸಿರುವುದು ಸಮಯೋಚಿತವಾಗಿದೆ ಎಂದು ಮುಖ್ಯಮಂತ್ರಿಯವರು ಶ್ಲಾಘಿಸಿದರು.
ಇಂದಿನಿಂದ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಆರಂಭ: ಎಷ್ಟು ದಿನಗಳ ಕಾಲ ಇರಲಿದೆ? ಟಿಕೆಟ್ ದರ ಎಷ್ಟು?
ಹೊರಾಂಗಣದ ಆಕರ್ಷಣೆ: ಲಾಲ್‌ಬಾಗ್‌ನ ಆರು ಆಯ್ದ ಸ್ಥಳಗಳಲ್ಲಿ ಬಸವಾದಿ ಶರಣರ ದರ್ಶನ, ವಚನ ಸಾಹಿತ್ಯಕ್ಕೆ ಪೂರಕವಾದ ಸಚಿತ್ರ ಮಾಹಿತಿ ಒದಗಿಸಲು ಎಲ್‌ಇಡಿ ವ್ಯವಸ್ಥೆ ಮಾಡಲಾಗಿದೆ. ಗಾಜಿನ ಮನೆಯ ಪ್ರವೇಶ ದ್ವಾರದ ಇಕ್ಕೆಲಗಳಲ್ಲಿ ಬಸವಣ್ಣನವರು ಮತ್ತು ಅನುಭವ ಮಂಟಪದ ಆಕರ್ಷಕ ಚಿತ್ರಗಳನ್ನು ಬಿದಿರಿನ ಫ್ರೇಮ್‌ನಲ್ಲಿ ಅಳವಡಿಸಲಾಗಿದೆ.
ಸೆಲ್ಫಿ ಪಾಯಿಂಟ್: ತಾಳೆಗರಿ ವಿನ್ಯಾಸದ ಮೇಲೆ ಬಸವಣ್ಣ ಮತ್ತು ಬಸವಾದಿ ಶರಣರ ಚಿತ್ರ ಹಾಗೂ ಆಯ್ದ ವಚನಗಳಿರುವ 10 ಸೆಲ್ಫಿ ಪಾಯಿಂಟ್‌ಗಳನ್ನು ಸಸ್ಯ ತೋಟದ ಸ್ಥಳಗಳಲ್ಲಿ ಅನಾವರಣಗೊಳಿಸಲಾಗಿದೆ. ನಾಲ್ಕು ಪ್ರಮುಖ ದ್ವಾರಗಳ ಬಳಿ ವರ್ಟಿಕಲ್ ಗಾರ್ಡನ್‌ನಿಂದ ರೂಪಿತವಾಗಿರುವ ಕಮಾನುಗಳು ಪ್ರಮುಖ ಆಕರ್ಷಣೆ. ತೋಟಗಾರಿಕೆ ಆಸಕ್ತರು ಬೀಜ, ಗೊಬ್ಬರ, ಸಸಿಗಳು, ಸಲಕರಣೆ, ತಾಂತ್ರಿಕ ಮಾಹಿತಿ ಇತ್ಯಾದಿಯನ್ನು ಇಲ್ಲಿ ಪಡೆಯಬಹುದು.
ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ: ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆಂದು ಇದೇ ಮೊದಲ ಬಾರಿಗೆ ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿದೆ. ಬುಕ್ಕಿಂಗ್ ವ್ಯವಸ್ಥೆಯಲ್ಲಿ ಇಂಟರ್‌ನೆಟ್ ಬ್ಯಾಂಕಿಂಗ್, ಯುಪಿಐ, ಫೋನ್‌ಪೇ, ಗೂಗಲ್‌ಪೇ, ಪೇಟಿಎಂ ಹೀಗೆ ಎಲ್ಲ ಮಾದರಿಯಲ್ಲೂ ಪೇಮೆಂಟ್ ವ್ಯವಸ್ಥೆ ಕಲ್ಪಿಸಲಾಗಿದ್ದು ಸುಲಭವಾಗಿ ಟಿಕೆಟ್ ಬುಕ್ ಮಾಡಬಹುದಾಗಿದೆ.
ಸುರಕ್ಷತೆಗೆ ಆದ್ಯತೆ: ಪ್ರದರ್ಶನದಲ್ಲಿ ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಾಲ್ಕು ಪ್ರಮುಖ ದ್ವಾರಗಳು ಮತ್ತು ಗಾಜಿನ ಮನೆಯ ಪ್ರವೇಶ ದ್ವಾರಗಳಲ್ಲಿ ಡೋರ್‌ಫ್ರೇಮ್ ಮೆಟಲ್ ಡಿಕೆಕ್ಟರ್ಸ್ ಅಳವಡಿಸಲಾಗಿದೆ. ದ್ವಾರಗಳು, ಗಾಜಿನಮನೆ ಮತ್ತು ಪ್ರಮುಖ ಪ್ರದೇಶಗಳಲ್ಲಿ ಹ್ಯಾಂಡ್‌ಹೆಲ್ಡ್ ಮೆಷಿನ್ಸ್ ಮೂಲಕ ಅನುಮಾನಾಸ್ಪದ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಉದ್ಯಾನದ ಎಲ್ಲೆಡೆ 136 ಸಿಸಿ ಕ್ಯಾಮೆರಾ ಅಳವಡಿಸಿದ್ದು ಕಣ್ಗಾವಲು ಇಡಲಾಗಿದೆ. ಪೊಲೀಸರು, ಗೃಹರಕ್ಷಕರು, ಭದ್ರತಾ ಸಿಬ್ಬಂದಿ, ಸ್ವಯಂಸೇವಕರನ್ನು ನೇಮಿಸಲಾಗಿದೆ.
Lalbagh Flower Show 2024: ಲಾಲ್‌ಬಾಗ್ ಫಲಪುಷ್ಪಗಳಲ್ಲಿ ಅರಳಲಿದ್ದಾರೆ ವಿಶ್ವಗುರು ಬಸವಣ್ಣ!
ಶಾಲಾ ಮಕ್ಕಳಿಗೆ ಉಚಿತ ಪ್ರವೇಶ: ಒಂದರಿಂದ 10ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಸಮವಸ್ತ್ರ ಧರಿಸಿ ಬಂದರೆ, (ರಜಾ ದಿನಗಳನ್ನು ಹೊರತುಪಡಿಸಿ) ಉಚಿತ ಪ್ರವೇಶ ನೀಡಲಾಗುತ್ತಿದೆ. ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ ₹80 ರಜಾ ದಿನಗಳಲ್ಲಿ ₹100, ಹಾಗೆಯೇ 12 ವರ್ಷದೊಳಗಿನ ಮಕ್ಕಳಿಗೆ ಎಲ್ಲಾ ದಿನಗಳಲ್ಲೂ ₹30 ಪ್ರವೇಶ ಶುಲ್ಕವಿದೆ. ಪ್ರತಿದಿನ ಬೆಳಗ್ಗೆ 6ರಿಂದ ಸಂಜೆ 7ರವರೆಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ((((ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.