ತುಮಕೂರು : 21 ಕೇಂದ್ರಗಳಲ್ಲಿ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ: ಶಾಸಕ

By Kannadaprabha News  |  First Published Jan 23, 2024, 11:17 AM IST

ಜಿಲ್ಲೆಯಲ್ಲಿ ಕೊಬ್ಬರಿ ಖರೀದಿಗೆ 21 ನಫೆಡ್ ಖರೀದಿ ಕೇಂದ್ರಗಳನ್ನು ತೆರೆದಿದ್ದು, ಈ ತಿಂಗಳ ೨೪ ಬುಧವಾರ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ತುಮಕೂರು ಎಪಿಎಂಸಿಯಲ್ಲಿ ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟಿಸಲಿದ್ದಾರೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕ ಬಿ. ಸುರೇಶ್ ಗೌಡ ಹೇಳಿದರು.


  ತುಮಕೂರು :  ಜಿಲ್ಲೆಯಲ್ಲಿ ಕೊಬ್ಬರಿ ಖರೀದಿಗೆ 21 ನಫೆಡ್ ಖರೀದಿ ಕೇಂದ್ರಗಳನ್ನು ತೆರೆದಿದ್ದು, ಈ ತಿಂಗಳ ೨೪ ಬುಧವಾರ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ತುಮಕೂರು ಎಪಿಎಂಸಿಯಲ್ಲಿ ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟಿಸಲಿದ್ದಾರೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕ ಬಿ. ಸುರೇಶ್ ಗೌಡ ಹೇಳಿದರು.

ಸೋಮವಾರ ನಗರದ ಜಿಲ್ಲಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 24 ರಂದು ಬೆಳಿಗ್ಗೆ 11 ಗಂಟೆಗೆ ಸಚಿವೆ ಶೋಭಾ ಕರಂದ್ಲಾಜೆ ನಗರದಲ್ಲಿ ಖರೀದಿ ಕೇಂದ್ರ ಉದ್ಘಾಟಿಸುವರು. ಕೇಂದ್ರ ಸರ್ಕಾರ ನಿಗಧಿಪಡಿಸಿರುವ ಪ್ರತಿ ಕ್ವಿಂಟಲ್ ಕೊಬ್ಬರಿಗೆ 12 ಸಾವಿರ ರು. ಬೆಂಬಲ ಬೆಲೆ ಯೋಜನೆಯಲ್ಲಿ ರೈತರಿಂದ ಕೊಬ್ಬರಿ ಖರೀದಿ ಮಾಡಲಾಗುತ್ತದೆ ಎಂದರು.

Tap to resize

Latest Videos

undefined

ಬೆಂಬಲ ಬೆಲೆ ಯೋಜನೆಯಡಿ ಉಂಡೆ ಕೊಬ್ಬರಿ ಖರೀದಿಸಲು ತುಮಕೂರು ನಗರ, ತಿಪಟೂರು, ಕೊನೇಹಳ್ಳಿ, ಕರಡಾಳು, ತುರುವೇಕೆರೆ, ಗುಬ್ಬಿ, ಚೇಳೂರು, ಕುಣಿಗಲ್, ಶಿರಾ, ಚಿಕ್ಕನಾಯಕನಹಳ್ಳಿ, ಹುಳಿಯಾರಿನಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿರುವ 12 ಸಾವಿರ ರು. ಜೊತೆಗೆ ರಾಜ್ಯ ಸರ್ಕಾರ ಭರವಸೆ ನೀಡಿದಂತೆ ಪ್ರತಿ ಕ್ವಿಂಟಲ್ ಕೊಬ್ಬರಿಗೆ 1500 ರು. ಸೇರಿಸಿ ತಲಾ ಕ್ವಿಂಟಲ್ ಕೊಬ್ಬರಿಯನ್ನು 13,500 ರು.ಗೆ ಖರೀದಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಸುರೇಶ್ ಗೌಡ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಕೊಬ್ಬರಿ ಬೆಳೆಗಾರರು ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಂಡು ನಿಗದಿತ ದಿನದಲ್ಲಿ ಕೊಬ್ಬರಿ ಮಾರಾಟ ಮಾಡಿದರೆ ಒಂದು ವಾರದೊಳಗೆ ರೈತರ ಬ್ಯಾಂಕ್ ಖಾತೆಗೆ ಕೊಬ್ಬರಿ ಹಣ ಜಮಾ ಆಗುತ್ತದೆ. ಬಯೋಮೆಟ್ರಿಕ್ ಪದ್ದತಿಯಲ್ಲಿ ಕೊಬ್ಬರಿ ಖರೀದಿಗೆ ಕ್ರಮ ತೆಗೆದುಕೊಂಡಿರುವುದರಿಂದ ಮಧ್ಯವರ್ತಿಗಳ ಕಾಟ ಇರುವುದಿಲ್ಲ ಎಂದು ಹೇಳಿದರು.

ಸರ್ಕಾರದ ಆದೇಶದಂತೆ ರೈತರಿಗೆ ಪ್ರತಿ ಎಕರೆಗೆ 6 ಕ್ವಿಂಟಲ್ ಮತ್ತು ಗರಿಷ್ಠ 20 ಕ್ವಿಂಟಲ್ ಕೊಬ್ಬರಿ ಖರೀದಿಗೆ ಅವಕಾಶವಿದೆ. ಖರೀದಿಗೆ 3 ತಿಂಗಳ ಅವಕಾಶ ನೀಡಲಾಗಿದ್ದು, ಅಗತ್ಯವಿದ್ದರೆ ಖರೀದಿ ಅವಧಿ ವಿಸ್ತರಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ ಸುರೇಶ್ ಗೌಡ ಹೇಳಿದರು.

ಸಂಸದ ಜಿ.ಎಸ್. ಬಸವರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್, ರಾಜ್ಯ ಬಿಜೆಪಿ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ಜಿಲ್ಲಾ ಮಾಧ್ಯಮ ಸಂಯೋಜಕ ಟಿ.ಆರ್‌. ಸದಾಶಿವಯ್ಯ, ಜಿಲ್ಲಾ ವಕ್ತಾರ ಜಗದೀಶ್ ಪತ್ರಿಕಾಗೋಷ್ಠಿಯಲ್ಲಿದ್ದರು.

click me!