ಆ.11ರಂದು 78 ಆಸನ ವ್ಯವಸ್ಥೆಯುಳ್ಳ ಎಟಿಆರ್-72 ಇಂಡಿಗೋ ವಿಮಾನ ಕಾರ್ಯಾಚರಣೆ. ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದ ಅಧಿಕೃತ ವೆಬ್‌ಸೈಟ್ ಅಭಿವೃದ್ಧಿಪಡಿಸಿ ಗಣ್ಯರಿಂದ ಲೋಕಾರ್ಪಣೆ ಮಾಡಿಸುವ ನಿಟ್ಟಿನಲ್ಲಿ ಮಹತ್ವದ ಸಭೆ.
ಶಿವಮೊಗ್ಗ (ಜು.16): ತಾಲೂಕಿನ ಸೋಗಾನೆ ವಿಮಾನ ನಿಲ್ದಾಣದಲ್ಲಿ ಆ.11ರಿಂದ ವಿಮಾನ ಹಾರಾಟ ಕಾರ್ಯಾಚರಣೆ ಹಿನ್ನೆಲೆ ಅಗತ್ಯ ಸಿದ್ಧತೆಗಳ ಕುರಿತು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅಧ್ಯಕ್ಷತೆಯಲ್ಲಿ ಶನಿವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಜಿಲ್ಲಾಧಿಕಾರಿ ಮಾತನಾಡಿ, ವಿಮಾನ ಕಾರ್ಯಾಚರಣೆಗೆ ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಿಕೊಳ್ಳಬೇಕು. ಇಂಡಿಗೋ ಅಧಿಕಾರಿ/ ಸಿಬ್ಬಂದಿಗಳೊಂದಿಗೆ ಚರ್ಚಿಸಿ ಅವರು ವೀಕ್ಷಣೆ ವೇಳೆ ನೀಡಿರುವ ಅಂಶಗಳು ಹಾಗೂ ಹೆಚ್ಚುವರಿ ಸೌಕರ್ಯಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದರು.
78 ಆಸನ ವ್ಯವಸ್ಥೆಯುಳ್ಳ ಎಟಿಆರ್-72 ಇಂಡಿಗೋ ವಿಮಾನ ಆ.11ರಂದು ಕಾರ್ಯಾಚರಣೆ ನಡೆಸಲಿದ್ದು, ಅವರು ಅಬ್ಸರ್ವೇಷನ್‌ನಲ್ಲಿ ಕೇಳಿರುವ ಸೌಕರ್ಯಗಳ ಕುರಿತು ಚರ್ಚಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಪಿಡಬ್ಲ್ಯುಡಿ ಅಧಿಕಾರಿಗಳು ಮತ್ತು ವಿಮಾಣ ನಿಲ್ದಾಣ ನಿರ್ದೇಶಕರಿಗೆ ಸೂಚಿಸಿದರು.
ಬೆಂಗಳೂರು ವಿಮಾನ ನಿಲ್ದಾಣ ಟರ್ಮಿನಲ್-2ಗೆ ಬಿಎಂಟಿಸಿ ಬಸ್ ಸೇವೆ ಆರಂಭ, ದರ ಮಾಹಿತಿ ಇಲ್ಲಿದೆ
ಜೊತೆಗೆ ವಿಮಾನ ನಿಲ್ದಾಣದ ಅಧಿಕೃತ ವೆಬ್‌ಸೈಟ್ ಅನ್ನು ಅಭಿವೃದ್ಧಿಪಡಿಸಿ ಅಂದು ಗಣ್ಯರಿಂದ ಲೋಕಾರ್ಪಣೆ ಮಾಡಿಸಬೇಕು. ಗಣ್ಯರ ಸ್ವಾಗತ ಮತ್ತು ಉದ್ಘಾಟನಾ ಕಾರ್ಯಕ್ರಮಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ವಿಮಾನ ನಿಲ್ದಾಣಕ್ಕೆ ಅಗತ್ಯವಾದ ವಾಹನಗಳ ಸೌಕರ್ಯ, ಕಾಫಿ-ತಿಂಡಿ ಮಳಿಗೆಗಳು, ಅಗತ್ಯ ಆಂಬ್ಯುಲೆನ್ಸ್ ಹಾಗೂ ಜಿಲ್ಲಾ ಪ್ರವಾಸೋದ್ಯಮಕ್ಕೆ ಒಂದು ಪ್ರತ್ಯೇಕ ಮಳಿಗೆಯನ್ನು ಸಿದ್ಧಪಡಿಸುವಂತೆ ತಿಳಿಸಿದರು.
ವಿಮಾನದ ನಿಲ್ದಾಣದ ಸುತ್ತಮುತ್ತ ನಿಯಮಾನುಸಾರ ಬಫರ್ ಝೋನ್ ಅಧಿಸೂಚನೆಗೆ ಕ್ರಮ ಕೈಗೊಳ್ಳಬೇಕು. ಅಂದು ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ಪೊಲೀಸ್ ಬಂದೋಬಸ್ತ್ ಸೇರಿದಂತೆ ಕಾರ್ಯಕ್ರಮದ ಯಶಸ್ಸಿಗೆ ಅಗತ್ಯವಾದ ಎಲ್ಲ ಅಂಶಗಳ ಕುರಿತು ಸಮರ್ಪಕವಾಗಿ ವ್ಯವಸ್ಥೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ (ಪ್ರಭಾರ) ಆರ್. ಮೇಘನಾ, ಶಿವಮೊಗ್ಗ ಎಸಿ ರವಿಚಂದ್ರ ನಾಯಕ್, ಪಿಡಬ್ಲ್ಯುಡಿ ಕಾರ್ಯಪಾಲಕ ಅಭಿಯಂತರ ಸಂಪತ್‌ಕುಮಾರ್ ಪಿಂಗಳೆ, ಪೊಲೀಸ್ ಪಡೆ ಅಸಿಸ್ಟೆಂಟ್ ಕಮಾಂಡೆಂಟ್ ಚಂದ್ರಶೇಖರ್, ಕೆಎಸ್‌ಐಐಡಿಸಿ ಅಧಿಕಾರಿಗಳು, ಇತರೆ ಅಧಿಕಾರಿಗಳು, ಗುತ್ತಿಗೆದಾರರು ಹಾಜರಿದ್ದರು.
ಟೆಕ್ ವೃತ್ತಿಪರರಿಗೆ ಸಂತಸದ ಸುದ್ದಿ, ವೈಟ್‌ಫೀಲ್ಡ್-ಚಲ್ಲಘಟ್ಟ ನಮ್ಮ ಮೆಟ್ರೋ ಸೇವೆ ಆಗಸ್ಟ್‌ನಲ್ಲಿ
ಸಚಿವ ಪಾಟೀಲ್ 11 ಗಂಟೆಗೆ ಆಗಮನ: ಶಿವಮೊಗ್ಗ ವಿಮಾನ ನಿಲ್ದಾಣ ನಿರ್ದೇಶಕ ಕ್ಯಾಪ್ಟನ್ ಶಮಂತ್ ಮಾತನಾಡಿ, ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಆ.11ರ ಬೆಳಗ್ಗೆ 9.30ಕ್ಕೆ ಬೆಂಗಳೂರಿನಿಂದ ಇಂಡಿಗೋ ವಿಮಾನದಲ್ಲಿ ಹೊರಟು ಬೆಳಗ್ಗೆ 11 ಗಂಟೆಗೆ ಶಿವಮೊಗ್ಗ ವಿಮಾಣ ನಿಲ್ದಾಣಕ್ಕೆ ಆಗಮಿಸುವರು. ಬೆಳಗ್ಗೆ 11.20ಕ್ಕೆ ವಿಮಾನ ಪ್ರಯಾಣಿಕರೊಂದಿಗೆ ಶಿವಮೊಗ್ಗದಿಂದ ನಿರ್ಗಮಿಸಿ, ಮಧ್ಯಾಹ್ನ 12.15ಕ್ಕೆ ಬೆಂಗಳೂರು ವಿಮಾನ ನಿಲ್ದಾಣ ತಲುಪುವ ಯೋಜನೆ ಇದೆ ಎಂದು ಸಭೆಗೆ ಮಾಹಿತಿ ನೀಡಿದರು.
ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣಕ್ಕೆ (kuvempu airport shivamogga) ವಿಮಾನ ಪ್ರತಿ ದಿನ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಶಿವಮೊಗ್ಗಕ್ಕೆ 10.30ಕ್ಕೆ ತಲುಪಲಿದೆ. ಮಧ್ಯಾಹ್ನ 12 ಗಂಟೆಗೆ ಶಿವಮೊಗ್ಗದಿಂದ ಹೊರಡುವ ವಿಮಾನ 1.30ಕ್ಕೆ ಬೆಂಗಳೂರು ತಲುಪಲಿದೆ. ಸದ್ಯ ಇಂಡಿಗೋ ಸಂಸ್ಥೆ ಬೆಂಗಳೂರು-ಶಿವಮೊಗ್ಗ ನಡುವೆ ಒಂದು ವಿಮಾನವನ್ನು ಮಾತ್ರ ಓಡಿಸಲಿದೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ.
2,500ರಿಂದ 3,500 ರೂ. ಟಿಕೆಟ್ ದರ?
ಬೆಂಗಳೂರು- ಶಿವಮೊಗ್ಗ ಮಾರ್ಗಕ್ಕೆ 2,500ರಿಂದ 3,500 ರೂ. ತನಕ ದರ ನಿಗದಿ ಆಗುವ ನಿರೀಕ್ಷೆ ಇದೆ. ಶೀಘ್ರದಲ್ಲೇ ಇಂಡಿಗೋ ವೆಬ್‌ಸೈಟ್ ಮೂಲಕ ಟಿಕೆಟ್ ಬುಕ್ ಕೂಡ ಮಾಡಬಹುದಾಗಿದೆ.