₹18 ಲಕ್ಷದ ಬೀದಿದೀಪ ಕಾಮಗಾರಿಗೆ ₹9 ಲಕ್ಷಕ್ಕೆ ಟೆಂಡರ್‌: ಶೇ. 50ರಷ್ಟು ಕಡಿಮೆ ಬಿಡ್‌

Published : Oct 12, 2026, 06:07 AM IST
Koppal

ಸಾರಾಂಶ

ಕೊಪ್ಪಳ ನಗರಸಭೆಯ ಬೀದಿದೀಪ ಅಳವಡಿಕೆ ಕಾಮಗಾರಿಗೆ ಗುತ್ತಿಗೆದಾರರೊಬ್ಬರು ಶೇ. 50ರಷ್ಟು ಕಡಿಮೆ ದರಕ್ಕೆ (₹9 ಲಕ್ಷ) ಬಿಡ್ ಸಲ್ಲಿಸಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ಆತಂಕ ಸೃಷ್ಟಿಸಿದೆ. ಈ ಹಿಂದೆ ಬೋಗಸ್ ಬಿಲ್ ಮೂಲಕ ಹಣ ದುರುಪಯೋಗವಾಗಿರುವ ಆರೋಪಗಳಿದ್ದು, ಈ ಅತಿ ಕಡಿಮೆ ಬಿಡ್ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಕೊಪ್ಪಳ ನಗರಸಭೆಯ ಟೆಂಡರ್‌ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರ ‘ಲೆಸ್‌’ ಆಟ ಹೊಸ ಚರ್ಚೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಗುತ್ತಿಗೆದಾರರು ಶೇ. 5ರಿಂದ 10ರಷ್ಟು ಕಡಿಮೆ ದರಕ್ಕೆ ಬಿಡ್‌ ಸಲ್ಲಿಸುವುದು ಸಾಮಾನ್ಯ. ಆದರೆ, ಈ ನಗರಸಭೆಯ ಬೀದಿದೀಪ ಅಳವಡಿಕೆ ಕಾಮಗಾರಿಗೆ ನಿಗದಿತ ಮೊತ್ತಕ್ಕಿಂತ ಶೇ. 50ರಷ್ಟು ಕಡಿಮೆ ದರಕ್ಕೆ ಬಿಡ್‌ ಸಲ್ಲಿಸಿರುವುದು ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕಡಿಮೆ ಮೊತ್ತದಲ್ಲಿ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ.

₹18 ಲಕ್ಷದ ಕಾಮಗಾರಿಗೆ ₹9 ಲಕ್ಷದ ಬಿಡ್‌

ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಒಂದು ವರ್ಷದ ಅವಧಿಗೆ ಬೀದಿದೀಪ ಅಳವಡಿಕೆ ಹಾಗೂ ನಿರ್ವಹಣೆಗಾಗಿ ವಿದ್ಯುತ್‌ ದೀಪಗಳ ಲೆಕ್ಕಾಚಾರದ ಆಧಾರದಲ್ಲಿ ₹18 ಲಕ್ಷ ಮೊತ್ತಕ್ಕೆ ಟೆಂಡರ್‌ ಕರೆಯಲಾಗಿದೆ. ಆದರೆ, ಗುತ್ತಿಗೆದಾರರೊಬ್ಬರು ಕೇವಲ ₹9 ಲಕ್ಷಕ್ಕೆ ಕಾಮಗಾರಿ ನಿರ್ವಹಿಸುವುದಾಗಿ ಬಿಡ್‌ ಸಲ್ಲಿಸಿದ್ದಾರೆ. ನಿಗದಿತ ಮೊತ್ತದ ಅರ್ಧದಷ್ಟು ಹಣಕ್ಕೆ ಕಾಮಗಾರಿ ಪೂರ್ಣಗೊಳಿಸುವುದಾದರೂ ಹೇಗೆ ಎಂಬ ಪ್ರಶ್ನೆ ನಗರಸಭೆ ಅಧಿಕಾರಿಗಳನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಟೆಂಡರ್‌ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.

ಲೆಕ್ಕಾಚಾರದಲ್ಲಿ ಗೋಲ್‌ಮಾಲ್‌ ಶಂಕೆ

ನಗರಸಭೆ ವ್ಯಾಪ್ತಿಯಲ್ಲಿ ಬೀದಿದೀಪ ಅಳವಡಿಕೆ ಹೆಸರಿನಲ್ಲಿ ಈ ಹಿಂದೆ ಬೋಗಸ್‌ ಬಿಲ್‌ ಸೃಷ್ಟಿಸಿ ಹಣ ದುರುಪಯೋಗ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಕೆಲವೇ ದೀಪಗಳನ್ನು ಅಳವಡಿಸಿ ಹೆಚ್ಚಿನ ಸಂಖ್ಯೆಯ ದೀಪಗಳನ್ನು ಅಳವಡಿಸಿದಂತೆ ಲೆಕ್ಕ ತೋರಿಸುವ ಮೂಲಕ ಹಣ ಪಡೆಯಲಾಗುತ್ತಿದೆ ಎಂಬ ದೂರುಗಳೂ ಇವೆ. ನಿಜವಾದ ಕಾಮಗಾರಿ ಪ್ರಮಾಣಕ್ಕೂ ಬಿಲ್‌ನಲ್ಲಿ ತೋರಿಸುವ ಲೆಕ್ಕಕ್ಕೂ ವ್ಯತ್ಯಾಸವಿದ್ದರೆ, ಸಾರ್ವಜನಿಕರ ಹಣ ದುರುಪಯೋಗವಾಗುವ ಸಾಧ್ಯತೆ ಇದೆ.

ಈಗ ಶೇ. 50ರಷ್ಟು ಕಡಿಮೆ ಬಿಡ್‌ ಸಲ್ಲಿಸಿರುವ ಪ್ರಕರಣವೂ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಡಿಮೆ ದರದಲ್ಲಿ ಕಾಮಗಾರಿ ಪಡೆದು, ನಂತರ ಹೆಚ್ಚುವರಿ ಕಾಮಗಾರಿ ಅಥವಾ ಇತರ ನೆಪಗಳಲ್ಲಿ ಹಣ ಪಡೆಯುವ ಉದ್ದೇಶವಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಆದರೆ, ಈ ಕುರಿತು ಸಮಗ್ರ ಪರಿಶೀಲನೆಯಿಂದಲೇ ಸತ್ಯಾಂಶ ಹೊರಬರಬೇಕಿದೆ.

ನಗರಸಭೆಗೆ ತಲೆನೋವು

ಮರಂ ಹಾಕುವುದು, ಬೀದಿದೀಪ ಅಳವಡಿಕೆ, ರಾಜಕಾಲುವೆ ಸ್ವಚ್ಛತೆ ಹಾಗೂ ವಾಹನಗಳ ದುರಸ್ತಿ ಹೆಸರಿನಲ್ಲಿ ಬೋಗಸ್‌ ಬಿಲ್‌ ಸೃಷ್ಟಿಸಿ ಹಣ ದುರುಪಯೋಗ ಮಾಡಲಾಗುತ್ತಿದೆ ಎಂಬ ಆರೋಪಗಳು ನಗರಸಭೆಯಲ್ಲಿ ಆಗಾಗ ಕೇಳಿ ಬರುತ್ತಿವೆ. ರಾಜಕಾಲುವೆ ಸ್ವಚ್ಛತೆಗೆ ₹50ರಿಂದ ₹60 ಲಕ್ಷ ವೆಚ್ಚ ಮಾಡಲಾಗುತ್ತಿದೆ ಎಂಬ ಆರೋಪವೂ ಇದೆ. ಈ ಎಲ್ಲ ಕಾಮಗಾರಿಗಳ ಟೆಂಡರ್‌, ಅಂದಾಜು ಪಟ್ಟಿ, ನೈಜ ಕಾಮಗಾರಿ ಪ್ರಮಾಣ ಮತ್ತು ಬಿಲ್‌ಗಳ ಕುರಿತು ಪರಿಶೀಲನೆ ನಡೆಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ಗುತ್ತಿಗೆದಾರರು ಅತಿ ಕಡಿಮೆ ದರಕ್ಕೆ ಬಿಡ್‌ ಸಲ್ಲಿಸುವುದರಿಂದ ನಗರಸಭೆಗೆ ಆರಂಭದಲ್ಲಿ ಉಳಿತಾಯವಾದಂತೆ ಕಂಡರೂ, ನಿಗದಿತ ಗುಣಮಟ್ಟದಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬೀದಿದೀಪ ಕಾಮಗಾರಿಯ ಟೆಂಡರ್‌ ಪ್ರಕ್ರಿಯೆ ಹಾಗೂ ಹಿಂದಿನ ಕಾಮಗಾರಿಗಳ ಲೆಕ್ಕಪತ್ರಗಳ ಸಮಗ್ರ ತನಿಖೆ ನಡೆಸಬೇಕೆಂಬ ಒತ್ತಾಯ ಕೇಳಿಬಂದಿದೆ.

₹18 ಲಕ್ಷದ ಬೀದಿದೀಪ ಕಾಮಗಾರಿಗೆ ₹9 ಲಕ್ಷಕ್ಕೆ ಲೆಸ್‌ ಬಿಡ್‌ ಸಲ್ಲಿಸಿದ್ದಾರೆ. ಅಷ್ಟು ಕಡಿಮೆ ಮೊತ್ತದಲ್ಲಿ ಕಾಮಗಾರಿಯನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದೇ ಅರ್ಥವಾಗುತ್ತಿಲ್ಲ. ಈ ಕಾರಣಕ್ಕಾಗಿಯೇ ಟೆಂಡರ್‌ ಪ್ರಕ್ರಿಯೆಯನ್ನು ಇನ್ನೂ ಪೂರ್ಣಗೊಳಿಸಿಲ್ಲ.

ಕೆ. ರಾಘವೇಂದ್ರ ಹಿಟ್ನಾಳ, ಶಾಸಕರು, ಕೊಪ್ಪಳ

ಇದನ್ನೂ ಓದಿ: ಕೇವಲ ₹500 ರಿಂದ ₹700ಕ್ಕೆ ದೇವಸ್ಥಾನಗಳ ದರ್ಶನ: ಮಂಗಳೂರು ದಸರಾಕ್ಕೆ KSRTC ಟೂರ್ ಪ್ಯಾಕೇಜ್ ಘೋಷಣೆ!

PREV
Read more Articles on
click me!

Recommended Stories

ಬೆಂಗಳೂರು-ಹೊಸೂರು ಮೆಟ್ರೋ ಸಂಪರ್ಕ ಕಲ್ಪಿಸಿ: ಪ್ರಧಾನಿ ಮೋದಿಗೆ ಮನವಿ ಸಲ್ಲಿಸಿದ ತಮಿಳುನಾಡು ಸಿಎಂ ವಿಜಯ್!
ಬರದ ನಡುವೆಯೂ ದಾಳಿಂಬೆ ಬೆಳೆದ ರೈತನಿಗೆ ಕಳ್ಳರ ಕಾಟ: ಸಿಸಿ ಕ್ಯಾಮೆರಾ ಇದ್ದರೂ ಕಳ್ಳತನ