ಬರದ ನಡುವೆಯೂ ದಾಳಿಂಬೆ ಬೆಳೆದ ರೈತನಿಗೆ ಕಳ್ಳರ ಕಾಟ: ಸಿಸಿ ಕ್ಯಾಮೆರಾ ಇದ್ದರೂ ಕಳ್ಳತನ

Published : Oct 11, 2026, 08:56 PM IST
Koppal Pomegranate Theft

ಸಾರಾಂಶ

ಕೊಪ್ಪಳ ತಾಲೂಕಿನ ಅಬ್ಬಿಗೇರಿ ಬಳಿ ದಾಳಿಂಬೆ ಕದ್ದು ಮಿನಿ ಲಾರಿಯಲ್ಲಿ ಸಾಗಿಸುತ್ತಿದ್ದ ಆರೋಪಿಯನ್ನು ರೈತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇಬ್ಬರು ಪರಾರಿಯಾಗಿದ್ದು, ದಾಳಿಂಬೆ ಕಳ್ಳತನ ತಡೆಗೆ ಕ್ರಮ ಕೈಗೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ.

ಕೊಪ್ಪಳ (ಅ.11): ಒಂದೆಡೆ ಬರದ ಹೊಡೆತ, ಮತ್ತೊಂದೆಡೆ ಬೆಳೆದ ಬೆಳೆಯನ್ನು ಕಾಪಾಡಿಕೊಳ್ಳುವ ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ರೈತರ ದಾಳಿಂಬೆ ತೋಟಗಳಿಗೆ ಕಳ್ಳರ ತಂಡ ಲಗ್ಗೆ ಹಾಕುತ್ತಿದ್ದು, ಅನ್ನದಾತರು ಬೆಳೆದ ಫಸಲನ್ನು ಉಳಿಸಿಕೊಳ್ಳಲು ರಾತ್ರಿ ಕಾವಲು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊಪ್ಪಳ ತಾಲೂಕಿನ ಅಬ್ಬಿಗೇರಿ ಗ್ರಾಮದ ಸಮೀಪ ದಾಳಿಂಬೆ ಕದ್ದು ಮಿನಿ ಲಾರಿಯಲ್ಲಿ ಸಾಗಿಸುತ್ತಿದ್ದ ಆರೋಪಿಗಳನ್ನು ರೈತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಗಂಗಾವತಿ ಮೂಲದ ದಸ್ತಗಿರ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನೊಂದಿಗೆ ಇದ್ದ ಶರಣಪ್ಪ ಮತ್ತು ಕೃಷ್ಣ ಎಂಬವರು ಪರಾರಿಯಾಗಿದ್ದಾರೆ. ಈ ಸಂಬಂಧ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಸಿ ಕ್ಯಾಮೆರಾ ಇದ್ದರೂ ಕಳ್ಳತನ

ಅಬ್ಬಿಗೇರಿ ಗ್ರಾಮದ ರಾಮಕೃಷ್ಣ ಎಂಬವರ ದಾಳಿಂಬೆ ತೋಟದಲ್ಲಿ ಕಳ್ಳತನ ನಡೆದಿದೆ. ತೋಟದಲ್ಲಿ ಸಿಸಿ ಕ್ಯಾಮೆರಾಗಳಿದ್ದರೂ ಅವುಗಳಿಗೆ ಸೆರೆಯಾಗದಂತೆ ಕಳ್ಳರು ಎಚ್ಚರಿಕೆ ವಹಿಸಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ತೋಟಗಳಲ್ಲಿ ರಾತ್ರಿ ವೇಳೆ ವಿದ್ಯುತ್ ಸೌಲಭ್ಯ ಇಲ್ಲದಿರುವುದರಿಂದ ಕತ್ತಲು ಆವರಿಸುತ್ತದೆ. ಇದೇ ಪರಿಸ್ಥಿತಿ ದುರುಪಯೋಗಪಡಿಸಿಕೊಂಡು ಕಳ್ಳರು ದಾಳಿಂಬೆ ಕಳವು ಮಾಡುತ್ತಿದ್ದಾರೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಗಂಗಾವತಿ, ಕುಷ್ಟಗಿ, ಬೆಂಗಳೂರಿನಲ್ಲಿ ಮಾರಾಟ?

ತೋಟಗಳಿಂದ ಕಳವು ಮಾಡಿದ ದಾಳಿಂಬೆ ಹಣ್ಣುಗಳನ್ನು ಗಂಗಾವತಿ, ಕುಷ್ಟಗಿ ಹಾಗೂ ಬೆಂಗಳೂರಿನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಬರದ ಪರಿಸ್ಥಿತಿಯ ನಡುವೆಯೂ ರೈತರು ಶ್ರಮಪಟ್ಟು ಬೆಳೆದ ದಾಳಿಂಬೆ ಬೆಳೆಯನ್ನು ಕಳ್ಳರು ಗುರಿಯಾಗಿಸಿಕೊಂಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ರಾತ್ರಿ ವೇಳೆ ತೋಟಗಳಲ್ಲಿ ವಿದ್ಯುತ್ ಇಲ್ಲದಿರುವುದರಿಂದ ಕಳ್ಳರ ಚಲನವಲನ ಪತ್ತೆಹಚ್ಚುವುದು ಕಷ್ಟವಾಗುತ್ತಿದೆ. ಹೀಗಾಗಿ ತೋಟಗಳಿಗೆ ರಾತ್ರಿ ಕಾವಲು ವ್ಯವಸ್ಥೆ ಕಲ್ಪಿಸುವುದು ಹಾಗೂ ದಾಳಿಂಬೆ ಕಳ್ಳತನ ತಡೆಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ. ದಾಳಿಂಬೆ ತುಂಬಿದ ಮಿನಿ ಲಾರಿಯೊಂದಿಗೆ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ರೈತರು, ಇಂತಹ ಕಳ್ಳತನಗಳಿಗೆ ಕಡಿವಾಣ ಹಾಕಿ ಬೆಳೆಗಾರರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

PREV
Read more Articles on
click me!

Recommended Stories

ಈ ಜಿಲ್ಲೆಯಲ್ಲಿ ಮಳೆಗಾಲದಲ್ಲೇ ಬೇಸಿಗೆಯ ಅನುಭವ: ಬಿಸಿಲಿನ ಝಳಕ್ಕೆ ಜನ, ಪ್ರವಾಸಿಗರು ಕಂಗಾಲು
'ಪ್ರೇಮದ ಊರಲಿ' ಸಿನಿಮಾದಿಂದಾಗಿ ಸಂಕಷ್ಟಕ್ಕೆ ಸಿಲುಕಿದೆ ಅದೊಂದು ಊರು!