ಬೆಂಗಳೂರು-ಹೊಸೂರು ಮೆಟ್ರೋ ಸಂಪರ್ಕ ಕಲ್ಪಿಸಿ: ಪ್ರಧಾನಿ ಮೋದಿಗೆ ಮನವಿ ಸಲ್ಲಿಸಿದ ತಮಿಳುನಾಡು ಸಿಎಂ ವಿಜಯ್!

Published : Oct 11, 2026, 10:36 PM IST
PM Modi and Vijay

ಸಾರಾಂಶ

ತಮಿಳುನಾಡು ಸಿಎಂ ವಿಜಯ್ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಬೆಂಗಳೂರಿನ ಬೊಮ್ಮಸಂದ್ರ-ಹೊಸೂರು ನಡುವೆ ಅಂತರರಾಜ್ಯ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಅನುಮತಿ ಕೋರಿದ್ದಾರೆ. ಚೆನ್ನೈನಲ್ಲಿ ಇಬ್ಬರೂ ನಾಯಕರು ಒಟ್ಟಿಗೆ ಮೆಟ್ರೋದಲ್ಲಿ ಪ್ರಯಾಣಿಸಿದ್ದು, ಈ ಭೇಟಿಯು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಕರ್ನಾಟಕ ಮತ್ತು ತಮಿಳುನಾಡು ನಡುವಿನ ಬಹುನಿರೀಕ್ಷಿತ ಸಂಪರ್ಕ ಕೊಂಡಿಯಾಗಿರುವ ಬೆಂಗಳೂರು–ಹೊಸೂರು ಮೆಟ್ರೋ ಯೋಜನೆಗೆ ಜೀವ ಬಂದಿದೆ. ಭಾನುವಾರ ತಮಿಳುನಾಡಿಗೆ ಭೇಟಿ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಳಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು, ಬೆಂಗಳೂರಿನ ಬೊಮ್ಮಸಂದ್ರ ಹಾಗೂ ಹೊಸೂರು ನಡುವೆ ಅಂತರರಾಜ್ಯ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕೆಂದು ನೇರವಾಗಿ ವೇದಿಕೆ ಮೇಲೆಯೇ ಮನವಿ ಮಾಡಿದ್ದಾರೆ.

ಈ ಮಹತ್ವದ ಮನವಿಯ ಜೊತೆಗೆ ಚೆನ್ನೈನಲ್ಲಿ ಪ್ರಧಾನಿ ಮೋದಿ ಮತ್ತು ಸಿಎಂ ವಿಜಯ್ ಅವರ ಒಡನಾಟ ಹಾಗೂ ಬಾಂಧವ್ಯ ಇಡೀ ದೇಶದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಬೊಮ್ಮಸಂದ್ರ – ಹೊಸೂರು ಮೆಟ್ರೋ ಮಾರ್ಗದ ಮಹತ್ವವೇನು?

ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಮಾರ್ಗವಾಗಿ ಬೊಮ್ಮಸಂದ್ರದವರೆಗೆ ನಮ್ಮ ಮೆಟ್ರೋದ ಹಳದಿ ಮಾರ್ಗ ಈಗಾಗಲೇ ಸಿದ್ಧವಾಗುತ್ತಿದೆ. ಅಲ್ಲಿಂದ ಕೈಗಾರಿಕಾ ಕೇಂದ್ರವಾಗಿರುವ ತಮಿಳುನಾಡಿನ ಗಡಿ ಪಟ್ಟಣ ಹೊಸೂರಿಗೆ ಮೆಟ್ರೋ ವಿಸ್ತರಣೆಯಾದರೆ, ದಿನನಿತ್ಯ ಉದ್ಯೋಗಕ್ಕಾಗಿ ಸಂಚರಿಸುವ ಲಕ್ಷಾಂತರ ಐಟಿ ಉದ್ಯೋಗಿಗಳು ಹಾಗೂ ಕಾರ್ಮಿಕರಿಗೆ ಸಂಚಾರ ದಟ್ಟಣೆಯಿಂದ ಮುಕ್ತಿ ಸಿಗಲಿದೆ. ಇದು ಎರಡು ಪ್ರಮುಖ ದಕ್ಷಿಣದ ರಾಜ್ಯಗಳನ್ನು ಬೆಸೆಯುವ ದೇಶದ ಮೊದಲ ಅಂತರರಾಜ್ಯ ಮೆಟ್ರೋ ಯೋಜನೆಗಳಲ್ಲಿ ಒಂದಾಗಲಿದ್ದು, ಇದಕ್ಕೆ ಕೇಂದ್ರದ ಹಸಿರು ನಿಶಾನೆ ಅಗತ್ಯವಿದೆ ಎಂದು ಸಿಎಂ ವಿಜಯ್ ಪ್ರಧಾನಿಗೆ ವಿವರಿಸಿದರು.

ನಿನ್ನೆ ರಾಹುಲ್ ಜೊತೆ ಕಾಫಿ, ಇಂದು ಮೋದಿಗೆ ಶಲ್ಯ ಹೊದಿಸಿ ಸ್ವಾಗತ!

ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚೆನ್ನೈ ತಲುಪಿದ ವೇಳೆ ರಾಜಕೀಯವಾಗಿ ಅಪರೂಪದ ದೃಶ್ಯಗಳು ಕಂಡುಬಂದವು. ಶನಿವಾರವಷ್ಟೇ ಕೆಫೆಯೊಂದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಲಂಚ್ ಮತ್ತು ಕಾಫಿ ಸವಿದಿದ್ದ ಸಿಎಂ ವಿಜಯ್, ಭಾನುವಾರ ಪ್ರಧಾನಿ ಮೋದಿ ಅವರ ವಿಮಾನ ಲ್ಯಾಂಡ್ ಆಗುವ ಮೊದಲೇ ಚೆನ್ನೈ ವಿಮಾನ ನಿಲ್ದಾಣಕ್ಕೆ ಭರ್ಜರಿ ಬೆಂಗಾವಲು ಪಡೆಯೊಂದಿಗೆ ಆಗಮಿಸಿದರು.

ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯವರಿಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಅತ್ಯಂತ ಆತ್ಮೀಯತೆಯಿಂದ ಸ್ವಾಗತಿಸಿದರು. ಇಬ್ಬರೂ ನಾಯಕರು ಪರಸ್ಪರ ಮುಗುಳ್ನಕ್ಕು ಗೌರವ ವಿನಿಮಯ ಮಾಡಿಕೊಂಡ ಕ್ಷಣಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಚೆನ್ನೈನಲ್ಲಿ 15,000 ಪೊಲೀಸರ ಸರ್ಪಗಾವಲು:

ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಚೆನ್ನೈ ನಗರದಾದ್ಯಂತ ಬೆಳಗ್ಗೆ 8 ಗಂಟೆಯಿಂದ ಸಂಜೆ 4:30 ರವರೆಗೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿತ್ತು. ಪ್ರಧಾನಿಯವರ ರಕ್ಷಣೆಗಾಗಿ 5 ಹಂತಗಳ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಬರೋಬ್ಬರಿ 15,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಟಿಕೆಟ್ ಖರೀದಿಸಿ ಸಾಮಾನ್ಯರಂತೆ ಮೆಟ್ರೋದಲ್ಲಿ ಸವಾರಿ:

ವಿಮಾನ ನಿಲ್ದಾಣದಿಂದ ಇಬ್ಬರೂ ನಾಯಕರ ಕಾರುಗಳ ಬೆಂಗಾವಲು ಪಡೆ ಜತೆಯಾಗಿಯೇ ಸಾಗಿತು. ನಂತರ ಪೋರೂರ್ ಬೈಪಾಸ್ ಮೆಟ್ರೋ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಹಾಗೂ ಸಿಎಂ ವಿಜಯ್ ಚೆನ್ನೈ ಮೆಟ್ರೋ ಫೇಸ್-2 ಗೆ ಜಂಟಿಯಾಗಿ ಹಸಿರು ನಿಶಾನೆ ತೋರಿದರು.

ಬಳಿಕ ಸಾಮಾನ್ಯ ಪ್ರಯಾಣಿಕರಂತೆ ಸ್ವತಃ ಟಿಕೆಟ್ ಖರೀದಿಸಿದ ನಾಯಕರಿಬ್ಬರೂ ಮೆಟ್ರೋ ರೈಲಿನಲ್ಲಿ ಒಟ್ಟಿಗೆ ಕುಳಿತು ಪ್ರಯಾಣಿಸಿದರು. ಪ್ರಯಾಣದ ವೇಳೆ ಇಬ್ಬರೂ ಗಂಭೀರವಾಗಿ ಹಾಗೂ ನಗುನಗುತ್ತಾ ಚರ್ಚೆ ನಡೆಸಿದ್ದಲ್ಲದೆ, ಮೆಟ್ರೋದಲ್ಲಿದ್ದ ಇತರ ಪ್ರಯಾಣಿಕರೊಂದಿಗೂ ಬೆರೆತು ಮಾತುಕತೆ ನಡೆಸಿದರು. ಮೆಟ್ರೋ ಪ್ರಯಾಣದ ಬಳಿಕ ನಾಯಕರು ದೇವಾಲಯ ದರ್ಶನವನ್ನೂ ಪಡೆದರು.

PREV
Read more Articles on
click me!

Recommended Stories

ಬರದ ನಡುವೆಯೂ ದಾಳಿಂಬೆ ಬೆಳೆದ ರೈತನಿಗೆ ಕಳ್ಳರ ಕಾಟ: ಸಿಸಿ ಕ್ಯಾಮೆರಾ ಇದ್ದರೂ ಕಳ್ಳತನ
ಈ ಜಿಲ್ಲೆಯಲ್ಲಿ ಮಳೆಗಾಲದಲ್ಲೇ ಬೇಸಿಗೆಯ ಅನುಭವ: ಬಿಸಿಲಿನ ಝಳಕ್ಕೆ ಜನ, ಪ್ರವಾಸಿಗರು ಕಂಗಾಲು