ಕೋಲಾರ: ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ನೀಡಿದ ಉಪಹಾರದಲ್ಲಿ ಹಲ್ಲಿ ಪತ್ತೆಯಾಗಿದ್ದು, ಇದನ್ನು ನೋಡಿಯೇ ಮಕ್ಕಳು ಆತಂಕಗೊಂಡು ಸುಸ್ತಾಗಿದ್ದಾರೆ. ವಿದ್ಯಾರ್ಥಿಗಳನ್ನು ಕೋಲಾರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಎಂದಿನಂತೆ ಹಾಸ್ಟೆಲ್‌ನಲ್ಲಿದ್ದ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಉಪಹಾರ ಸೇವಿಸಿ ಕಾಲೇಜಿಗೆ ಹೊರಡಲು ಸಿದ್ಧರಾಗಿದ್ದ ಉಪಹಾರದಲ್ಲಿ ಸತ್ತು ಬಿದ್ದಿದ್ದ ಹಲ್ಲಿ ಪತ್ತೆಯಾಗಿದೆ.
ಕೋಲಾರ (Kolara) ತಾಲೂಕು ದೊಡ್ಡಹಸಾಳ ಗ್ರಾಮದ (Doddahasala grama) ಬಳಿ ಇರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ. ಹಾಸ್ಟೆಲ್‌ನಲ್ಲಿ ಇಂದು ಉಪಹಾರಕ್ಕೆ ಚಿತ್ರಾನ್ನ ಮಾಡಲಾಗಿತ್ತು. 40 ಜನ ವಿದ್ಯಾರ್ಥಿಗಳಿರುವ ಹಾಸ್ಟೆಲ್‌ನಲ್ಲಿ ಸುಮಾರು 34 ಜನ ವಿದ್ಯಾರ್ಥಿಗಳು ತಿಂಡಿ ತಿಂದಿದ್ದರು. ಈ ವೇಳೆ ಚಿತ್ರಾನ್ನದಲ್ಲಿ ಒಂದು ಹಲ್ಲಿ ಬಿದ್ದಿರುವುದು ಕಂಡು ಬಂದಿದೆ. ಹಲ್ಲಿ ಸತ್ತು ತಿಂಡಿಯಲ್ಲಿ ಬೆಂದು ಹೋಗಿತ್ತು ಇದನ್ನು ಕಂಡ ಕೆಲವು ವಿದ್ಯಾರ್ಥಿಗಳು (Student) ತಿಂಡಿ ತಿನ್ನುವುದನ್ನು ನಿಲ್ಲಿಸಿದ್ದಾರೆ. ಜೊತೆಗೆ ಈಗಾಗಲೇ ತಿಂಡಿ ತಿಂದಿದ್ದ ವಿದ್ಯಾರ್ಥಿಗಳಿಗೆ ವಿಷಯ ತಿಳಿಸಿದ್ದಾರೆ, ಅಷ್ಟೊತ್ತಿಗಾಗಲೇ ಪರೀಕ್ಷೆ ಬರೆಯಲು ಹೋಗಿದ್ದ ಕೆಲವು ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡು ಸುಸ್ತಾಗಿದ್ದು, ಹಲ್ಲಿ ಬಿದ್ದ ವಿಷಯ ತಿಳಿದು ತಕ್ಷಣ ಎಲ್ಲಾ ವಿದ್ಯಾರ್ಥಿಗಳು ಕೋಲಾರ ಜಿಲ್ಲಾಸ್ಪತ್ರೆ (Kolara District Hospital) ಬಂದು ದಾಖಲಾಗಿದ್ದಾರೆ. ಇನ್ನು ಹಾಸ್ಟೆಲ್‌ನಲ್ಲಿದ್ದ(Hostel) ಕೆಲವು ವಿದ್ಯಾರ್ಥಿಗಳು ಕೂಡಾ ಸಿಕ್ಕ ಯಾವುದೋ ಒಂದು ವಾಹನದಲ್ಲಿ ಹತ್ತಿ ಸೀದಾ ಆಸ್ಪತ್ರಗೆ ಬಂದು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ 34 ಜನ ವಿದ್ಯಾರ್ಥಿಗಳು ಜಿಲ್ಲಾಸ್ಪತ್ರೆಯಲ್ಲಿ ಬಂದು ಚಿಕಿತ್ಸೆ ಪಡೆಯುತ್ತಿದ್ದು ಯಾರಿಗೂ ಏನೂ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ವೈದ್ಯರಿಗೆ ಆಹಾರದಲ್ಲಿ ಸಿಕ್ತು ಹಲ್ಲಿ: ಫೇಮಸ್ ಮಾಲ್‌ನ ರೆಸ್ಟೋರೆಂಟ್‌ನಲ್ಲಿ ಘಟನೆ
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾಸ್ಪತ್ರೆಗೆ ಸಮಾಜ ಕಲ್ಯಾಣ ಇಲಾಖೆಯ (Social Welfare Department) ಅಧಿಕಾರಿಗಳು ಕೆಲವು ಸಂಘಟನೆಗಳ ಮುಖಂಡರು, ಹಾಗೂ ಪೊಲೀಸರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸಮಾಜ ಕಲ್ಯಾಣ ಇಲಾಖೆಗೆ ಒಳಪಡುವ ಕಾನೂನು ವಿದ್ಯಾರ್ಥಿಗಳ ಈ ಹಾಸ್ಟೆಲ್‌ನಲ್ಲಿ ಹಲವು ದಿನಗಳಿಂದ ಸಮಸ್ಯೆ ಇದೆ, ಜೊತೆಗೆ ವಿದ್ಯಾರ್ಥಿಗಳು ಹಾಗೂ ವಾರ್ಡನ್ ನಡುವೆ ಕೆಲವು ವಿಷಯಗಳಿಗೆ ಹಲವು ಬಾರಿ ಜಗಳ ನಡೆದಿದೆ ಎನ್ನಲಾಗಿದೆ. ಈ ಎಲ್ಲಾ ಕಾರಣಗಳಿಂದ ಹಾಸ್ಟೆಲ್‌ನಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋ ಮಾತುಗಳು ಕೂಡಾ ಕೇಳಿ ಬರುತ್ತಿವೆ ಈ ನಡುವೆ ವಿದ್ಯಾರ್ಥಿಗಳು ಇಂದು ತಿಂದ ಉಪಹಾರದಲ್ಲಿ ಹಲ್ಲಿ ಸತ್ತು ಬಿದ್ದಿದೆ.
ಕೂಲ್ ಡ್ರಿಂಕ್ಸ್ ನಲ್ಲಿ ಸತ್ತ ಹಲ್ಲಿ, ಅಹಮದಾಬಾದ್ ಮೆಕ್ ಡೊನಾಲ್ಡ್ ಸೀಲ್ ಮಾಡಿದ ಅಧಿಕಾರಿಗಳು!
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕಲ್ಲೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಣೆ ನಡೆಸಿದ್ದು, ಈ ವೇಳೆ ಹಾಸ್ಟೆಲ್‌ನಲ್ಲಿ ಕೆಲವು ಸಮಸ್ಯೆಗಳು ಗೊಂದಲಗಳಿರುವುದು ಕಂಡು ಬಂದಿದ್ದು ಅದನ್ನು ಕೂಡಲೇ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ.