Kodagu; ದಿಡ್ಡಳ್ಳಿ ಹೋರಾಟ ನಿರಾಶ್ರಿತರ ಬದುಕು ನರಕಸದೃಶ!

By Suvarna News  |  First Published Sep 17, 2022, 10:15 PM IST

ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕು ದಿಡ್ಡಳ್ಳಿ ಹೋರಾಟ ನಿರಾಶ್ರಿತರ ಬದುಕು ನರಕಸದೃಶವಾಗಿದೆ. ಕೆದಮುಳ್ಳೂರು ಗ್ರಾ.ಪಂ.ಯ ಬಾರಿಕಾಡುವಿನ ಗುಡಿಸಲುಗಳಲ್ಲಿ ಅತಂತ್ರ ಜೀವನ ನಡೆಸುತ್ತಿದ್ದಾರೆ. ಅವರಿಗಾಗಿ ಸಿದ್ಧಗೊಂಡ ಮನೆಗಳ ಉದ್ಘಾಟನೆಯೇ ಆಗಿಲ್ಲ!


ವರದಿ: ಮಂಜುನಾಥ್‌ ಟಿ.ಎನ್‌.

ವಿರಾಜಪೇಟೆ (ಸೆ.17): ಜಿಲ್ಲೆಯಲ್ಲಿ 2017ರಲ್ಲಿ ನಡೆದ ದಿಡ್ಡಳ್ಳಿ ಹೋರಾಟದ ಬಳಿಕ ನಿರಾಶ್ರಿತರಾದ ಮಂದಿ ವಿರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮವೊಂದರಲ್ಲಿ ಪ್ಲಾಸ್ಟಿಕ್‌ ಹೊದಿಕೆಯ ಗುಡಿಸಲುಗಳನ್ನು ನಿರ್ಮಿಸಿ ಜೀವನ ಸಾಗಿಸುತ್ತಿದ್ದು, ನಾನಾ ರೀತಿಯ ಸಮಸ್ಯೆಗಳನ್ನು ಹೊತ್ತು ಜೀವನ ಸಾಗಿಸುತ್ತಿದ್ದಾರೆ. ವಿರಾಜಪೇಟೆ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಕಾಡು ಪೈಸಾರಿ (ಸರ್ಕಾರಿ ಜಮೀನು) ನಿರಾಶ್ರಿತರಿಗೆ ಸಾಕಷ್ಟುಸಮಸ್ಯೆಗಳಿವೆ. ಐದು ವರ್ಷಗಳಿಂದ ಗುಡಿಸಲಿನಲ್ಲಿ ನೆಲೆ ಕಾಣುತ್ತಿರುವ ನಾಗರಿಕರು, ಕುಡಿಯುವ ನೀರಿನ ಸಮಸ್ಯೆ, ವನ್ಯಮೃಗಗಳ ಭಯ, ವಿದ್ಯುತ್‌ ಬೀದಿ ದೀಪ ಇಲ್ಲದಿರುವುದು ಮತ್ತಿತರ ಸಮಸ್ಯೆಗಳನ್ನು ಎದುರಿಸುತ್ತಿದ್ದು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಕೆದಮುಳ್ಳೂರು ಗ್ರಾ.ಪಂ. ವ್ಯಾಪ್ತಿಯ ಸರ್ವೇ ಸಂಖ್ಯೆ 370/1 ರಲ್ಲಿ ಸುಮಾರು 20 ಎಕ್ರೆ ಸ್ಥಳವಿದ್ದು 2017ರಲ್ಲಿ ದಿಡ್ಡಳ್ಳಿ ಹೋರಾಟದ ನಂತರದಲ್ಲಿ ಹೆಗ್ಗಳ ಗ್ರಾಮದಲ್ಲಿ ಬಿಡಾರ ಹೊಡಿದ್ದರು. ಕಂದಾಯ ಇಲಾಖೆ ಪೊಲೀಸು ಇಲಾಖೆ ಅರಣ್ಯ ಇಲಾಖೆ ಜಂಟಿಯಾಗಿ ಹೆಗ್ಗಳ ಗ್ರಾಮದಿಂದ ತೆರವು ಮಾಡಲಾಯಿತು. ಹೆಗ್ಗಳದಿಂದ ಮಾನವೀಯ ನೆಲೆಯಲ್ಲಿ ಬಾರಿಕಾಡುವಿನಲ್ಲಿ ತಾತ್ಕಾಲಿಕವಾಗಿ ತಂಗಲು ಆಶ್ರಯ ನೀಡಲಾಗಿದೆ ಎಂದು ಕೆದಮುಳ್ಳೂರು ಗ್ರಾ.ಪಂ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಪ್ರಮೋದ್‌ ಹೇಳಿದ್ದಾರೆ.

Tap to resize

Latest Videos

undefined

53 ಕುಟುಂಬಗಳ ಸಂಕಷ್ಟ: ಇಲ್ಲಿನ ನಿವಾಸಿ ದಿವ್ಯಾ, ಸಂಕಷ್ಟಗಳ ಕುರಿತು ಮಾತನಾಡಿ, ಇಲ್ಲಿ ಸುಮಾರು 53 ಕುಟುಂಬಗಳು ವಾಸಿಸುತ್ತಿವೆ. ಸುಮಾರು 200 ಮಂದಿ ಜನರಿದ್ದಾರೆ. ಸರ್ಕಾರ, ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಮನೆ ನೀಡುವ ಮಾತು ಭರವಸೆಗೇ ಸೀಮಿತವಾಗಿದೆ. ಐದು ವರ್ಷಗಳಿಂದ ಪ್ಲಾಸ್ಟಿಕ್‌ ಹೊದಿಕೆಯಿಂದ ನಿರ್ಮಾಣ ಮಾಡಿರುವ ಗುಡಿಸಲಿನಲ್ಲಿ ಜೀವನ ಸಾಗಿಸುತಿದ್ದೇವೆ ಎಂದು ವಿವರಿಸಿದ್ದಾರೆ.

ಇಲ್ಲಿ ಕುಡಿಯುವ ನೀರಿಗಾಗಿ ಒಂದೇ ಕೊಳವೆ ಬಾವಿ ನಿರ್ಮಿಸಿದ್ದು, ನೀರು ಕುಡಿಯಲು ಯೋಗ್ಯವಾಗ್ಲಿ. ಕಲುಷಿತ ನೀರಿನಿಂದ ನಾನಾ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಮಳೆಗಾಲದಲ್ಲಿ ಸೋರುವ ಗುಡಿಸಲಿನಲ್ಲಿ ನಿದ್ರಿಸಲೂ ಸಾಧ್ಯವಿಲ್ಲ. ಬೀದಿ ದೀಪ ಅಳವಡಿಸಿ ಎಂದು ಗೊಗರೆದರೂ ಪರಿಹಾರ ಸಿಕ್ಕಿಲ್ಲ ಎಂದು ಅಲವತ್ತುಕೊಂಡಿದ್ದಾರೆ.

ಸನಿಹದಲ್ಲೇ ನೂತನವಾಗಿ ನಿರ್ಮಾಣ ಮಾಡಿರುವ ಸುಮಾರು 13 ಮನೆಗಳಿವೆ. ಇವುಗಳ ಉದ್ಘಾಟನೆಯೂ ಆಗದೆ, ನಿರಾಶ್ರಿತರಿಗೆ ಹಸ್ತಾಂತರವೂ ಆಗದೆ ಶಿಥಿಲ ಸ್ಥಿತಿಯಲ್ಲಿವೆ. ಶೀಘ್ರ ಇಲ್ಲಿನ ನಿರಾಶ್ರಿತರಿಗೆ ಸೂರು ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

6 ತಿಂಗಳಿಗೊಮ್ಮೆ ಪಡಿತರ!: ಹಿರಿಯ ನಾಗರಿಕ ಎಚ್‌.ರಾಮು ಮಾತನಾಡಿ, ದಿಡ್ಡಳ್ಳಿ ಹೋರಾಟದ ಸಂದರ್ಭದಲ್ಲಿ ಸೂರಿಗಾಗಿ ಹೋರಾಟ ಮಾಡಿದ್ದೇವೆ. ಆ ಸಂದರ್ಭ ನಮ್ಮನ್ನು ಪೊಲೀಸರ ಸಮ್ಮುಖದಲ್ಲಿ ಇಲ್ಲಿ ಬಿಟ್ಟು ತೆರಳಿದ್ದರು. ನಾವು ಲೈನ್‌ ಮನೆಗೂ ತೆರಳದೆ, ಇಲ್ಲಿಯೂ ನೆಲೆಸಲಾಗದೆ, ಅತಂತ್ರ ಜೀವನ ಸಾಗಿಸುತ್ತಿದ್ದೇವೆ. ಗಿರಿಜನ ಅಭಿವೃದ್ಧಿ ಇಲಾಖೆಯಿಂದ 6 ತಿಂಗಳಿಗೊಮ್ಮೆ ಪಡಿತರ ಸಾಮಗ್ರಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಸೂರಿಗೆ ಹೋರಾಟಗಳು ಮುಂದುವರಿದರೂ ನಿರ್ಗತಿಕರಿಗೆ ಸೂರು ಒದಗಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಪ್ರಸ್ತುತ ಸ್ಥಳದಲ್ಲಿರುವ ಸ್ಥಿತಿಗತಿಗಳನ್ನು ಅವಲೋಕಿಸಿದಲ್ಲಿ ಸರ್ಕಾರ ಮತ್ತು ಸಮಾಜ ತಲೆತಗ್ಗಿಸುವಂತಾಗಿದೆ. ಮುಂದೆ ನಿವಾಸಿಗಳು ನಡೆಸುವ ಹೋರಾಟಗಳಿಗೆ ಜೆಡಿಎಸ್‌ ಬೆಂಬಲ ನೀಡಲಿದೆ. ಉದ್ರ ಹೋರಾಟ ನಡೆಸಲಾಗುವುದು.

-ಪಿ.ಎ.ಮಂಜುನಾಥ್‌, ವಿರಾಜಪೇಟೆ ತಾಲೂಕು ಜೆಡಿಎಸ್‌ ಅಧ್ಯಕ್ಷ.

ಕೊಡಗಿನ ದಿಡ್ಡಳ್ಳಿ ನಿರಾಶ್ರಿತರ ಗುಡಿಸಲಿನತ್ತ ಗುಂಡು ಹಾರಿಸಿದ ವ್ಯಕ್ತಿ ಬಂಧನ

ಶೋಷಿತ ಸಮುದಾಯದ ಮಂದಿಗೆ ಸೂರು ಕಲ್ಪಿಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದ್ಯತೆ ಮೇರೆಗೆ ಸ್ಥಳೀಯರಿಗೆ ಅಂದರೆ ವಸತಿ ರಹಿತರಿಗೆ ಮನೆ ನೀಡಲಾಗುತ್ತದೆ. ನಂತರ ಬಾಕಿ ಉಳಿದ ಸ್ಥಳದಲ್ಲಿ ವಲಸೆ ಬಂದ ವಸತಿ ರಹಿತರಿಗೆ ಮನೆ ನಿರ್ಮಾಣ ಮಾಡಿ ನೀಡಲಾಗುವುದು. ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 73 ಮಂದಿ ಸ್ಥಳೀಯರು ಸೂರುಗಾಗಿ ಆರ್ಜಿ ಸಲ್ಲಿಸಿರುತ್ತಾರೆ, ಬಾರಿಕಾಡು ಪೈಸಾರಿಯಲ್ಲಿ ನಲೆನಿಂತ ಕುಟುಂಬಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಗಿರಿಜನ ಅಭಿವೃದ್ಧಿ ಇಲಾಖೆಯಿಂದ ಎರಡು ತಿಂಗಳಿಗೊಮ್ಮೆ ಪಡಿತರ ವಿತರಿಸಲಾಗುತ್ತಿದೆ.

-ಎಂ.ಎಂ. ಪರಮೇಶ್ವರ, ಕೆದಮುಳ್ಳೂರು ಗ್ರಾ.ಪಂ.ಸದಸ್ಯ.

 ದಿಡ್ಡಳ್ಳಿ ಬಿಟ್ಟು ನಾವೆಲ್ಲಿಗೂ ತೆರಳೋದಿಲ್ಲ: ಮತ್ತೊಂದು ಹೋರಾಟಕ್ಕೆ ರೆಡಿಯಾಗುತ್ತಿದೆ ಪ್ಲಾನ್

ಇಲ್ಲಿ ಸುಮಾರು 20 ಎಕ್ರೆ ಸ್ಥಳದಲ್ಲಿ 7.50 ಎಕ್ರೆ ಜಮೀನು ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಗೆ ನೀಡಲಾಗಿದೆ. ಸ್ಥಳದಲ್ಲಿ ವಸತಿ ರಹಿತರಿಗಾಗಿ 129 ಮನೆ ನಿರ್ಮಾಣವಾಗಲಿದೆ. ಇಗಾಲೇ 19 ಮನೆಗಳು ನಿರ್ಮಾಣವಾಗಿದ್ದು 11 ಮನೆಗಳು ನಿರ್ಮಾಣ ಹಂತದಲ್ಲಿದೆ. ಐ.ಟಿ.ಡಿ.ಪಿ, ಕೆಆರ್‌ಡಿಐಆರ್‌ಎಲ್‌ ಮತ್ತು ನಿರ್ಮಿತಿ ಕೇಂದ್ರ ಇಲಾಖೆಗಳು ಸಂಯುಕ್ತವಾಗಿ ಕಾರ್ಯನಿರ್ವಹಿಸುತ್ತಿದ್ದು ಇಲಾಖೆಗಳ ಮಧ್ಯೆ ಗೊಂದಲವಿದ್ದು ಮನೆಗಳ ಉದ್ಘಾಟನೆ ಮತ್ತು ಹಸ್ತಾಂತರಕ್ಕೆ ವಿಳಂಬವಾಗುತ್ತಿದೆ.

-ಕೆ.ಪ್ರಮೋದ್‌ ಪಿ.ಡಿ.ಒ., ಕೆದಮುಳ್ಳೂರು ಗ್ರಾ.ಪಂ.

click me!