ವಿದ್ಯಾರ್ಥಿಗಳಿಗೆ ಆಡಳಿತ, ರಾಜಕೀಯ ವ್ಯವಸ್ಥೆಯ ಅರಿವು ಮುಖ್ಯ: ಸಚಿವ ಸಂತೋಷ ಲಾಡ್

By Kannadaprabha News  |  First Published Dec 9, 2023, 8:54 PM IST

ವಿಧಾನಮಂಡಲ ಅಧಿವೇಶನವು ವಿದ್ಯಾರ್ಥಿಗಳು ಸೇರಿದಂತೆ ಅಧಿವೇಶನಕ್ಕೆ ಆಗಮಿಸುವ ಎಲ್ಲರಿಗೂ ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವದ ಜ್ಞಾನ ನೀಡುತ್ತದೆ ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.


ಧಾರವಾಡ (ಡಿ.09): ವಿಧಾನಮಂಡಲ ಅಧಿವೇಶನವು ವಿದ್ಯಾರ್ಥಿಗಳು ಸೇರಿದಂತೆ ಅಧಿವೇಶನಕ್ಕೆ ಆಗಮಿಸುವ ಎಲ್ಲರಿಗೂ ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವದ ಜ್ಞಾನ ನೀಡುತ್ತದೆ ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. ಮಧ್ಯಾಹ್ನ ಸುವರ್ಣ ಸೌಧದ ವಿಧಾನಮಂಡಲ ಅಧಿವೇಶನ ವೀಕ್ಷಣೆಗಾಗಿ ತಮ್ಮ ಮತಕ್ಷೇತ್ರ ಕಲಘಟಗಿಯ ಸರ್ಕಾರಿ ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಿಂದ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಎರಡು ಸದನಗಳ ಕಾರ್ಯಕಲಾಪ ಪರಿಚಯಿಸಿ, ವಿಧಾನಮಂಡಲ ಅಧಿವೇಶನ ಮತ್ತು ಸುವರ್ಣಸೌಧ ನಿರ್ಮಾಣದ ಬಗ್ಗೆ ಮಾಹಿತಿ ನೀಡಿ ತಮ್ಮ ಕಚೇರಿ ಸಭಾಂಗಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನ ಪ್ರತಿಯೊಬ್ಬರ ಬದುಕಿನಲ್ಲೂ ಮುಖ್ಯ. ಶಾಲಾ ಶಿಕ್ಷಣದೊಂದಿಗೆ ನಮ್ಮ ಆಡಳಿತ ವ್ಯವಸ್ಥೆ, ರಾಜಕೀಯ ಪದ್ದತಿಗಳನ್ನು ಅರ್ಥೈಸಿಕೊಳ್ಳಬೇಕು ಎಂದರು. ಮನುಷ್ಯ ರಾಜಕೀಯ ಜೀವಿ. ಬಲಿಷ್ಠ ಭಾರತ ನಿರ್ಮಾಣ ಆಗಬೇಕಾದರೆ ಯುವ ಸಮುದಾಯ ಪ್ರಾಮಾಣಿಕ ಸಮಾಜ ಸೇವೆಯ ದೀಕ್ಷೆ ತೊಡಬೇಕು. ರಾಜಕೀಯ ಪಕ್ಷ, ಆಡಳಿತ, ಸರ್ಕಾರ, ಮಂತ್ರಿಮಂಡಳ, ಅಧಿಕಾರಶಾಹಿ ಬಗ್ಗೆ ಅರಿವು ಹೊಂದಬೇಕು. ಪ್ರತಿಯೊಬ್ಬರು ಮತದಾನ, ಚುನಾವಣೆ ಮುಂತಾದ ರಾಜಕೀಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳವುದರಿಂದ ಉತ್ತಮ ಜನಪ್ರತಿನಿಧಿ, ಉತ್ತಮ ಸರ್ಕಾರ ಹೊಂದಲು, ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಲಾಡ್ ವಿದ್ಯಾರ್ಥಿಗಳಿಗೆ ಹೇಳಿದರು.

Tap to resize

Latest Videos

ನಾನು ದೂರ ಹೋಗುವವರೆಗೆ ನನ್ನನ್ನ ನೋಡಿದ್ದರು: ಮೊದಲ ಬಾರಿಗೆ ಲೀಲಾವತಿ ಬಗ್ಗೆ ಮೊಮ್ಮಗ ಯುವರಾಜ್ ಪ್ರತಿಕ್ರಿಯೆ!

ವಿಧಾನ ಮಂಡಲ ಅಧಿವೇಶನ ನಮ್ಮ ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವದ ಮಹತ್ವ, ಕಾಯ್ದೆ, ಕಾನೂನುಗಳ ರಚನೆ, ಜನಪ್ರತಿನಿಧಿಗಳ ಹಕ್ಕು, ಕರ್ತವ್ಯಗಳನ್ನು ಪರಿಚಯಿಸುತ್ತದೆ. ನನ್ನ ಕ್ಷೇತ್ರದ ನೂರಾರು ಜನ ಅಧಿವೇಶನ ವೀಕ್ಷಣೆಗಾಗಿ ಬೆಳಗಾವಿ ಸುವರ್ಣಸೌಧಕ್ಕೆ ಆಗಿಮಿಸುತ್ತಾರೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಅಧಿವೇಶನ ವೀಕ್ಷಿಸಲು ಸಿಬ್ಬಂದಿ ಸಹಾಯ, ಮಕ್ಕಳಿಗೆ ಉಪಹಾರ, ವಿಧಾನ ಮಂಡಳ ಗ್ರಂಥಾಲಯ ವೀಕ್ಷಣೆಗೆ ಅವಕಾಶ ಮಾಡಿದ್ದೇನೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಸೇವೆಯ ಆಸಕ್ತಿ, ಅಭಿರುಚಿ ಬೆಳೆಸುವ ನನ್ನ ಸಣ್ಣ ಪ್ರಯತ್ನವಿದು ಎಂದರು.

ನೂರು ಕುಟುಂಬಗಳಿಗೆ 15-20 ದಿನದಲ್ಲಿ ಹಕ್ಕುಪತ್ರ: ಶಾಸಕ ಶಾಮನೂರು ಶಿವಶಂಕರಪ್ಪ

ಕಾಲೇಜು ವಿದ್ಯಾರ್ಥಿಗಳು ಬೆಳಗ್ಗೆ ಸುವರ್ಣಸೌಧಕ್ಕೆ ಆಗಮಿಸಿದ ತಕ್ಷಣ, ಮೊದಲ ಮಹಡಿಯಲ್ಲಿ ಸ್ಥಾಪಿಸಿರುವ ವಿಶೇಷ ಕೊಠಡಿಯಲ್ಲಿ ಸಂವಿಧಾನದ ಮೌಲ್ಯಗಳು, ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಪಡೆದುಕೊಂಡರು ಮತ್ತು ಈ ಕುರಿತು ಪ್ರಸ್ತುತ ಪಡಿಸಿದ ಸಾಕ್ಷ್ಯಚಿತ್ರ ವೀಕ್ಷಿಸಿದರು. ನಂತರ ವಿಧಾನಸಭೆ ಕಲಾಪ, ವಿಧಾನಪರಿಷತ್ ಕಲಾಪ ವೀಕ್ಷಿಸಿದರು. ವಿಧಾನ ಮಂಡಲ ಗ್ರಂಥಾಲಯಕ್ಕೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳಾದ ನಾಗೇಶ, ಎಂ.ಬಿ. ಅನ್ಸಾರಿ, ಮಲ್ಲಿಕಾರ್ಜುನ ಜೋಗುರ, ಮಂಜುನಾಥ ಅಸ್ತಿಕಟ್ಟಿ, ಕಾಲೇಜು ಮುಖ್ಯಸ್ಥರಾದ ಡಾ.ಮಾಲತಿ ಹಿರೇಮಠ, ಗ್ರಂಥಪಾಲಕಿ ಭಾರತಿ ದಂಡಿನ ಇದ್ದರು.

click me!