ದಕ್ಷಿಣ ಕನ್ನಡ: ಎಸ್‌ಡಿಪಿಐ ಹೊಡೆತಕ್ಕೆ ಕಾಂಗ್ರೆಸ್ ತತ್ತರ; ಬಿಜೆಪಿಗೆ ಹೆಚ್ಚು ಸ್ಥಾನ, ಕಡಿಮೆ ಅಧಿಕಾರ!

By Web DeskFirst Published 3, Sep 2018, 6:26 PM IST
Highlights

ದಕ್ಷಿಣ ಕನ್ನಡ ಜಿಲ್ಲೆಯ ಮೂರು ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟ |  ಹೆಚ್ಚು ಸ್ಥಾನ ಪಡೆದ ಬಿಜೆಪಿ, ಆದರೆ ಅಧಿಕಾರ ಒಂದರಲ್ಲಿ ಮಾತ್ರ |  ಹೆಚ್ಚಿದ ಜೆಡಿಎಸ್, ಎಸ್‌ಡಿಪಿಐ ಪ್ರಭಾವ, ಕಾಂಗ್ರೆಸ್ ಗೆ ಹೊಡೆತ 
 

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಬಿಜೆಪಿಯು ಹೆಚ್ಚು ಸೀಟುಗಳನ್ನು ಪಡೆಯುವ ಮೂಲಕ ಕರಾವಳಿಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದ್ದು, ಕಾಂಗ್ರೆಸ್‌ಗೆ ಎಸ್‌ಡಿಪಿಐ ಬಲವಾದ ಹೊಡೆತ ಕೊಟ್ಟಿದೆ. 3 ಸ್ಥಳೀಯ ಸಂಸ್ಥೆಗಳ ಪೈಕಿ 1ರಲ್ಲಿ ಬಿಜೆಪಿ ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದ್ದು, ಉಳಿದೆರಡು ಕಡೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಅತಂತ್ರ ಸ್ಥಿತಿ ನಿರ್ಮಾಣವಾಗಿರುವಲ್ಲಿ ಜೆಡಿಎಸ್, ಎಸ್‌ಡಿಪಿಐ ಕಿಂಗ್ ಮೇಕರ್ ಆಗಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್‌ಡಿಪಿಐ ಭಾರೀ ಬಲವನ್ನು ಹೆಚ್ಚಿಸಿಕೊಂಡಿದೆ. ಎಸ್‌ಡಿಪಿಐನ ಹೊಡೆತಕ್ಕೆ ಸಚಿವ ಯು.ಟಿ. ಖಾದರ್ ತತ್ತರಿಸಿದ್ದಾರೆ. ಉಳ್ಳಾಲದಲ್ಲಿ ಕಾಂಗ್ರೆಸ್ ನಾಗಾಲೋಟಕ್ಕೆ ಜೆಡಿಎಸ್ - ಎಸ್‌ಡಿಪಿಐ ಬ್ರೇಕ್ ಹಾಕಿದೆ. ಕಳೆದ ಬಾರಿ 1 ಸ್ಥಾನಗಳಿಸಿದ್ದ  ಎಸ್‌ಡಿಪಿಐ ಈ ಬಾರಿ 6 ಸ್ಥಾನಕ್ಕೆ ಏರಿದ್ದರೆ, ಜೆಡಿಎಸ್ ಮೊದಲ ಬಾರಿಗೆ ಖಾತೆ ತೆರೆದು 4 ಸ್ಥಾನ ಗೆದ್ದಿದೆ. ಉಳ್ಳಾಲ ನಗರಸಭೆಯಲ್ಲಿ  ಅಧಿಕಾರ ಹಿಡಿಯಬೇಕಾದರೆ  ಜೆಡಿಎಸ್ ಅಥವಾ ಎಸ್‌ಡಿಪಿಐ ಜೊತೆ ಮೈತ್ರಿ ಅನಿವಾರ್ಯ. ಇಲ್ಲವೇ ಮ್ಯಾಜಿಕ್ ನಂಬರ್ ತಲುಪಲು ಪಕ್ಷೇತರರ ಬೆಂಬಲ ಜೊತೆಗೆ ಯು.ಟಿ. ಖಾದರ್ ಮತವೂ ಅಗತ್ಯವಾಗಿದೆ.

ಸ್ಥಳೀಯ ಸಂಸ್ಥೆ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಎಸ್ ಡಿಪಿಐ ಪಕ್ಷೇತರರು
ಉಳ್ಳಾಲ ನಗರಸಭೆ 6 13 4 6 2
ಪುತ್ತೂರು ನಗರಸಭೆ 26 5 0 1 0
ಬಂಟ್ವಾಳ ಪುರಸಭೆ 11 12 0 4 0
  43 30 4 11 2

ಪುತ್ತೂರಿನಲ್ಲಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿಗೆ ಈ ಬಾರಿಯೂ ಭಾರಿ ಮುಖಭಂಗವಾಗಿದೆ. ನಗರಸಭೆಯಲ್ಲಿ  ಬಿಜೆಪಿ ಸ್ಪಷ್ಟಬಹುಮತವನ್ನು ಪಡೆದಿದೆ. ಇಲ್ಲಿ ಎಸ್‌ಡಿಪಿಐ ಮೊದಲ ಬಾರಿಗೆ ಇಲ್ಲಿ 1 ಸ್ಥಾನ ಗೆದ್ದಿದೆ.

ಇನ್ನು, ಬಂಟ್ವಾಳದಲ್ಲಿ ಮಾಜಿ ಸಚಿವ ರಮಾನಾಥ ರೈ ಸೋಲಿನ ಸರಣಿ ಮುಂದುವರೆದಿದೆ. ಬಂಟ್ವಾಳ ಪುರಸಭೆಯಲ್ಲಿ ಎಸ್‌ಡಿಪಿಐ 4 ಸ್ಥಾನ ಗೆದ್ದು, ಕಾಂಗ್ರೆಸ್‌ಗೆ ಹೊಡೆತ ಕೊಟ್ಟಿದೆ. ಬಂಟ್ವಾಳದಲ್ಲಿ  ಅಧಿಕಾರ ಹಿಡಿಯಲು ಕಾಂಗ್ರೆಸ್ ಅಥವಾ ಬಿಜೆಪಿಗೆ ಎಸ್‌ಡಿಪಿಐ  ಬೆಂಬಲ ಅನಿವಾರ್ಯವಾಗಿದೆ.  ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಡಿಪಿಐಯು ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಅವರನ್ನು ಬೆಂಬಲಿಸಿತ್ತಾದರೂ, ಬಿಜೆಪಿ ಗೆದ್ದಿತ್ತು.

ಕಳೆದ ಆ.31ರಂದು ರಾಜ್ಯದ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. 

Last Updated 9, Sep 2018, 9:11 PM IST