ಚಿಕ್ಕಬಳ್ಳಾಪುರ (ಸೆ.23): ಅಂತೂ ಇಂತೂ ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ (nandhi Hill) ತಿಂಗಳ ಹಿಂದೆ ಭಾರಿ ಮಳೆಗೆ ಕೊಚ್ಚಿ ಹೋಗಿದ್ದ ರಸ್ತೆ (Road) ಪುನರ್ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಿದ್ದು ಕಾಮಗಾರಿ ಭರದಿಂದ ಸಾಗಿದೆ.
ಕಳೆದ ಆಗಸ್ಟ್ 24 ರಂದು ಜಿಲ್ಲೆಯಲ್ಲಿ ಬಿದ್ದ ಮಳೆಯ ಅರ್ಭಟಕ್ಕೆ ನಂದಿಗಿರಿಧಾಮದಲ್ಲಿ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಭಾರೀ ಭೂ ಕುಸಿತವಾಗಿ (land slide) ಮಣ್ಣು ಗುಡ್ಡೆ ರಸ್ತೆ ಮೇಲೆ ಬಿದ್ದ ಪರಿಣಾಮ ಗಿರಿಧಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಾಶವಾಗಿ ಅಪಾರ ಪ್ರಮಾಣದಲ್ಲಿ ಸಸ್ಯ ಸಂಪತ್ತು ಕೂಡ ಮಳೆಗೆ ತೀವ್ರತೆಗೆ ಕೊಚ್ಚಿ ಹೋಗಿತ್ತು.
undefined
ನಂದಿ ಬೆಟ್ಟ ರಸ್ತೆ ಕಾಮಗಾರಿಗೆ 2 ತಿಂಗಳ ಗಡುವು
ಸುರಕ್ಷತೆಯ ದೃಷ್ಟಿಯಿಂದ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಮಳೆಯಿಂದ ಹಾಳಾದ ರಸ್ತೆ ಅಭಿವೃದ್ದಿಗೆ ಅನುದಾನದ ಕೊರತೆಯಿಂದ ತಿಂಗಳಾದರೂ ರಸ್ತೆ ಪುನರ್ ನಿರ್ಮಾಣ ಕಾಮಗಾರಿ ಆರಂಭಗೊಂಡಿರಲಿಲ್ಲ. ರಸ್ತೆ ಹಾಳಾಗಿದ್ದನ್ನು ಜಿಲ್ಲೆಯ ಲೋಕೋಪಯೋಗಿ ಇಲಾಖೆ (Public Works Department) ಅಧಿಕಾರಿಗಳು ಪರಿಶೀಲಿಸಿ ಸುಮಾರು 40 ಮೀಟರ್ ಉದ್ದ, 6 ರಿಂದ 7 ಮೀಟರ್ ಅಗಲ ರಸ್ತೆ ನಿರ್ಮಾಣಕ್ಕೆ ಸುಮಾರು 80 ಲಕ್ಷ ರು, ಅನುದಾನ ಅವಶ್ಯಕತೆ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
ಸರ್ಕಾರ ಕಳೆದ ಸೆ.17 ರಂದು ಆದೇಶ ಹೊರಡಿಸಿ 2021-22ನೇ ಸಾಲಿನಲ್ಲಿ ರಾಜ್ಯದಲ್ಲಿ ಉಂಟಾದ ಅತಿವೃಷ್ಠಿ ಹಾಗೂ ನೆರೆ ಹಾವಳಿಯಿಂದ ಹಾನಿಗೊಳಗಾದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಹಮತಿಸಿರುವ ಮೊತ್ತದಲ್ಲಿ 80 ಲಕ್ಷ ರು, ಅನುದಾನ ಬಿಡುಗಡೆ ಮಾಡಿದೆ. ಸದ್ಯ ರಸ್ತೆಯನ್ನು ಅತ್ಯಂತ ವೈಜ್ಞಾನಿಕವಾಗಿ ಶಾಶ್ವತವಾಗಿ ಗುಣಮಟ್ಟದಿಂದ ನಿರ್ಮಿಸಲು ಯೋಜನೆ ರೂಪಿಸಿರುವ ಅಧಿಕಾರಿಗಳು ಕೊಚ್ಚಿ ಹೋಗಿರುವ ರಸ್ತೆಯನ್ನು ಇನ್ನಷ್ಟು ಆಗಲೀಕರಣ ಮಾಡಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಕಾಮಗಾರಿಗೆ ಅಡ್ಡವಾಗಿರುವ ಕೆಲ ಬಂಡೆಗಳನ್ನು ಸಣ್ಣ ಪ್ರಮಾಣದಲ್ಲಿ ಸ್ಪೋಟಕಗಳ ಸಹಾಯದೊಂದಿಗೆ ಸೀಳಿ ತೆರವುಗೊಳಿಸಲಾಗುತ್ತಿದೆ. ಸ್ಥಳೀಯ ಲೋಕೋಪಯೋಗಿ ಇಲಾಖೆ ಅಭಿಯಂತರರು ಸ್ಥಳದಲ್ಲಿ ಮೊಕ್ಕಾಂ ಹೂಡಿ ಕಾಮಗಾರಿ ಉಸ್ತುವಾರಿ ವಹಿಸಿದ್ದಾರೆ. ಸುಮಾರು ಒಂದೂವರೆ ತಿಂಗಳ ಕಾಲ ಕಾಮಗಾರಿ ನಡೆಯಲಿದ್ದು ಅಲ್ಲಿಯವರೆಗೂ ಗಿರಿಧಾಮ ಪ್ರವಾಸಿಗರಿಂದ ದೂರ ಉಳಿಯಲಿದೆ
ನಂದಿ ಗಿರಿಧಾಮದ ರಸ್ತೆ ಪುನರ್ ನಿರ್ಮಾಣ ಇನ್ನಷ್ಟು ವಿಳಂಬ
ಗಮನ ಸೆಳೆದಿದ್ದ ಕನ್ನಡಪ್ರಭ ವರದಿ : ಐತಿಹಾಸಿಕವಾದ ವಿಶ್ವ ವಿಖ್ಯಾತ ನಂದಿಗಿರಿಧಾಮ ರಸ್ತೆ ಮಳೆಗೆ ಕೊಚ್ಚಿ ಹೋಗಿ ತಿಂಗಳಾದರೂ ರಸ್ತೆ ಕಾಮಗಾರಿ ಆರಂಭಗೊಳ್ಳದ ಕುರಿತು, ಸರ್ಕಾರಕ್ಕೆ ಲೋಕೋಪಯೋಗಿ ಇಲಾಖೆ ಸಲ್ಲಿಸಿದ್ದ 80 ಲಕ್ಷ ರು, ಯೋಜನಾ ವೆಚ್ಚದ ಕಡತ ಅನುಮೋದನೆಗೆ ಕಾಯುತ್ತಿರುವ ಬಗ್ಗೆ ಸೆ.13 ರಂದು ಕೋಲಾರ ಚಿಕ್ಕಬಳ್ಳಾಪುರ ಆವೃತ್ತಿಯಲ್ಲಿ ನಂದಿ ರಸ್ತೆ ಕಾಮಗಾರಿ ಇನ್ನಷ್ಟು ವಿಳಂಬ ಸಾಧ್ಯತೆ ಎಂಬ ಶಿರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಕನ್ನಡಪ್ರಭ ವರದಿ ಉಲ್ಲೇಖಿಸಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಇಲಾಖೆ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದು ಆಧ್ಯತೆಯ ಮೇರೆಗೆ ಕ್ರಮ ವಹಿಸಿ ಕೈಗೊಂಡ ಕ್ರಮದ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದರು. ಸಚಿವ ಸಿ.ಸಿ.ಪಾಟೀಲ್ ಪತ್ರ ಬರೆದ ಬೆನ್ನಲೇ ಸರ್ಕಾರ ನಂದಿ ರಸ್ತೆ ಕಾಮಗಾರಿ ದುರಸ್ತಿಗೆ 80 ಲಕ್ಷ ರು, ಬಿಡುಗಡೆ ಮಾಡಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.