ನಂದಿ ಗಿರಿಧಾಮದ ರಸ್ತೆ ಪುನರ್‌ ನಿರ್ಮಾಣ ಇನ್ನಷ್ಟು ವಿಳಂಬ

  • ಕಳೆದ ಆಗಸ್ಟ್‌ 24ರಂದು ಸುರಿದ ಭಾರಿ ಮಳೆಯಿಂದ ಗುಡ್ಡ ಕುಸಿದು ರಸ್ತೆ ಕೋಚ್ಚಿ ಹೋದ ರಸ್ತೆ
  • ಸಂಪರ್ಕ ಕಡಿದಿರುವ ಜಿಲ್ಲೆಯ ಐತಿಹಾಸಿಕ ನಂದಿ ಗಿರಿಧಾಮದ ರಸ್ತೆ
  • ಪುನರ್‌ ನಿರ್ಮಾಣ ಇನ್ನಷ್ಟು ವಿಳಂಬ ಆಗುವ ಸಾಧ್ಯತೆ ದಟ್ಟ
Road construction of Nandi hill station delayed snr

ವರದಿ : ಕಾಗತಿ ನಾಗರಾಜಪ್ಪ.

 ಚಿಕ್ಕಬಳ್ಳಾಪುರ (ಸೆ.13):  ಕಳೆದ ಆಗಸ್ಟ್‌ 24ರಂದು ಸುರಿದ ಭಾರಿ ಮಳೆಯಿಂದ ಗುಡ್ಡ ಕುಸಿದು ರಸ್ತೆ ಕೋಚ್ಚಿ ಹೋಗಿ ಸಂಪರ್ಕ ಕಡಿದಿರುವ ಜಿಲ್ಲೆಯ ಐತಿಹಾಸಿಕ ನಂದಿ ಗಿರಿಧಾಮದ ರಸ್ತೆ ಪುನರ್‌ ನಿರ್ಮಾಣ ಇನ್ನಷ್ಟು ವಿಳಂಬ ಆಗುವ ಸಾಧ್ಯತೆ ದಟ್ಟವಾಗಿದೆ.

ಮಳೆಯ ಅವಾಂತಾರದಿಂದ ಕೊಚ್ಚಿ ಹೋಗಿರುವ ರಸ್ತೆಯ ಪುನರ್‌ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅಂದಾಜು ಮಾಡಿದ್ದು ಸುಮಾರು 40 ಮೀಟರ್‌ ಉದ್ದ, ಆರೂವರೆಯಿಂದ ಏಳು ಮೀಟರ್‌ ಅಗಲ ರಸ್ತೆ ನಿರ್ಮಾಣ. ಇದಕ್ಕಾಗಿ ಒಟ್ಟು 80 ಲಕ್ಷ ರು.ಗಳು ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ.

ನಂದಿಬೆಟ್ಟಕ್ಕೆ 2 ತಿಂಗಳು ಪ್ರವೇಶ ಬಂದ್‌?

ತಿಂಗಳಾದರೂ ಕಾಮಗಾರಿ ಅರಂಭಿಸಿಲ್ಲ :  ಆದರೆ ಸರ್ಕಾರ ಇದುವರೆಗೂ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಿಲ್ಲ. ಇದರಿಂದಾಗಿ ನಂಗಿರಿಧಾಮದ ರಸ್ತೆ ಕಾಮಗಾರಿ ವಿಳಂಬವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಗುಡ್ಡ ಕುಸಿದು ರಸ್ತೆ ನಾಶವಾದ ಘಟನೆ ನಡೆದು ತಿಂಗಳಾಗುತ್ತಾ ಬಂದರೂ ಕಾಮಗಾರಿ ಮಾತ್ರ ಇನ್ನೂ ಆರಂಭಗೊಂಡಿಲ್ಲ

ಪ್ರವಾಸಿಗರಿಗೆ ಈಗ ನಂದಿ ಗಿರಿಧಾಮದ ಪ್ರಾಕೃತಿಕ ಸೌಂದರ್ಯ ಆಸ್ವಾದಿಸುವ ಸೌಭಾಗ್ಯ ಇಲ್ಲದಂತಾಗಿದೆ. ರಸ್ತೆ ಸಂಕರ್ಪ ಕಡಿತಗೊಂಡ ಬಳಿಕ ಪ್ರವಾಸಿಗರಿಗೆ ಸಂಪೂರ್ಣವಾಗಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅಲ್ಲದೇ ಗಿರಿಧಾಮದ ಮೇಲೆ ಇರುವ ರೂಂ ಬುಕ್ಕಿಂಗ್‌ ಸಹ ರಾಜ್ಯ ಪ್ರವಾಸೋದ್ಯಮ ಇಲಾಖೆ ನಿಲ್ಲಿಸಿದೆ.

ಸರ್ಕಾರದ ಅನುಮೋದನ ದೊರೆತಿಲ್ಲ :  ಈಗಾಗಲೇ ರಸ್ತೆ ಕೊಚ್ಚಿ ಹೋಗಿರುವ ಸ್ಥಳಕ್ಕೆ ತೆರಳಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಅಂದಾಜು ಯೋಜನಾ ವರದಿಯನ್ನು ಸಹ ಸಿದ್ಧಪಡಿಸಿ ಸರ್ಕಾರಕ್ಕೆ ನೀಡಿದ್ದಾರೆ. ಸರ್ಕಾರದಿಂದ ಅನುಮೋದನೆ ದೊರೆತ ತಕ್ಷಣವೇ ಕಾಮಗಾರಿ ನಡೆಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಸದ್ಯಕ್ಕೆ ಬೆಟ್ಟದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ, ಅಧಿಕಾರಿಗಳ ಸಂಚಾರಕ್ಕಾಗಿ ತಾತ್ಕಲಿಕವಾದ ರಸ್ತೆ ನಿರ್ಮಿಸಲಾಗಿದೆ.

ಆದಾಯಕ್ಕೆ ಖೋತಾ :  ಸುರಕ್ಷತೆ ದೃಷ್ಟಿಯಿಂದ ಗಿರಿಧಾಮಕ್ಕೆ ಪ್ರವಾಸಿಗರನ್ನು ನಿರ್ಬಧಿಸಲಾಗಿದೆ. ಹೀಗಾಗಿ ಪ್ರವಾಸೋದ್ಯಮ ಇಲಾಖೆಗೆ ಹರಿದು ಬರುತ್ತಿದ್ದ ಆದಾಯಕ್ಕೆ ಕತ್ತರಿ ಬಿದ್ದಿದೆ. ವಾರಾಂತ್ಯದಲ್ಲಿ 8 ರಿಂದ 9 ಸಾವಿರ, ವಾರದಲ್ಲಿ 3 ರಿಂದ 4 ಸಾವಿರ ಪ್ರವಾಸಿಗರು ಬಂದು ಹೋಗುತ್ತಿದ್ದರು. ಮಾಸಿಕ ಲಕ್ಷಾಂತರ ರು, ಆದಾಯ ಬರುತ್ತಿತ್ತು. ಇನ್ನೂ ಗಿರಿಧಾಮದಲ್ಲಿ ಪ್ರವಾಸಿಗರನ್ನೆ ನಂಬಿ ತೆರೆದಿದ್ದ ಹೋಟೆಲ್‌ ಮಾಲೀಕರು ವಹಿವಾಟು ಸ್ಥಗಿತವಾಗಿ ದುಬಾರಿ ಬಾಡಿಗೆ ಕಟ್ಟಲಾಗದೇ ಪರಿತಪ್ಪಿಸುವಂತಾಗಿದೆ.

ಅನುಮೋದನೆಗಾಗಿ ನಿರೀಕ್ಷೆ : ಸರ್ಕಾರದ ಅನುಮೋದನೆ ದೊರೆತ ಕೂಡಲೆ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ತಿಮ್ಮರಾಯಪ್ಪ ತಿಳಿಸಿದ್ದಾರೆ. ಟೆಂಡರ್‌ ಕರೆದು ಕಾಮಗಾರಿ ಪ್ರಾರಂಭಿಸಲು ತಡವಾಗುತ್ತದೆ ಎಂಬ ಕಾರಣಕ್ಕೆ 4ಜಿ ವಿನಾಯ್ತಿ ಪಡೆದು, ಟೆಂಡರ್‌ ಇಲ್ಲದೆ ಕಾಮಗಾರಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಸುಮಾರು 80 ಲಕ್ಷ ರುಪಾಯಿ ವೆಚ್ಚವಾಗಲಿದ್ದು, ಸರ್ಕಾರಕ್ಕೆ ಅನುಮೋದನೆಗಾಗಿ ಕಾಯುತ್ತಿದ್ದೇವೆ ಎಂದರು.

Latest Videos
Follow Us:
Download App:
  • android
  • ios