ಕೃಷ್ಣಾ ಯೋಜನೆ ರಾಷ್ಟ್ರೀಯ ಯೋಜನೆಯನ್ನಾಗಿಸಿ: ಕೋನರಡ್ಡಿ

By Kannadaprabha News  |  First Published Sep 23, 2021, 2:50 PM IST

*   ರಾಷ್ಟ್ರೀಯ ಯೋಜನೆಯಾಗಲು ಕೃಷ್ಣಾ ಯೋಜನೆ ಶೇ.100ರಷ್ಟು ಅರ್ಹತೆ
*   ಕೃಷ್ಣಾ ರಾಷ್ಟ್ರೀಯ ಯೋಜನೆಗೆ ಪಕ್ಷಾತೀತ ಹೋರಾಟ ಅನಿವಾರ್ಯ
*   ನಾನು ಜೆಡಿಎಸ್‌ ಬಿಡುತ್ತೇನೆಂದು ಎಲ್ಲೂ ಹೇಳಿಲ್ಲ
 


ವಿಜಯಪುರ(ಸೆ.23): ರಾಷ್ಟ್ರೀಯ ಯೋಜನೆಯಾಗಲು ಕೃಷ್ಣಾ ಮೇಲ್ದಂಡೆ ಯೋಜನೆ ಶೇ.100ರಷ್ಟು ಅರ್ಹತೆ ಹೊಂದಿದ್ದು, ಆದರೂ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಅದಕ್ಕಾಗಿ ಪಕ್ಷಾತೀತವಾಗಿ ಜನತೆ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಜೆಡಿಎಸ್‌(JDS) ರಾಷ್ಟ್ರೀಯ ಕಾರ್ಯದರ್ಶಿ ಎನ್‌.ಎಚ್‌.ಕೋನರಡ್ಡಿ ಆಗ್ರಹಿಸಿದ್ದಾರೆ. 

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಸಂಜೀವಿನಿಯಾಗಿರುವ ಕೃಷ್ಣಾ ಮೇಲ್ದಂ​ಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕೆಂಬ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ಹಾಕಬೇಕು. ಹಿಂದಿನ ಸಿಎಂ ಯಡಿಯೂರಪ್ಪ, ಇಂದಿನ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರು ದಿಲ್ಲಿಗೆ ಹೋಗಿ ಮನವಿ ಮಾಡಿಕೊಂಡರೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

Latest Videos

undefined

ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ(HD Kumaraswamy) ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲರು ಕೃಷ್ಣ ನೀರಾವರಿ ಯೋಜನೆ ಕೆಲಸ ಮಾಡಿದ್ದಾರೆ. ಎಂ.ಬಿ.ಪಾಟೀಲರಿಗಿದ್ದ ಕಾಳಜಿಯನ್ನು ಇದೇ ಭಾಗದವರೇ ಆದ ಗೋವಿಂದ ಕಾರಜೋಳರು ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.

ಆಲಮಟ್ಟಿ: 26 ಗೇಟ್‌ ಮೂಲಕ 1,20,000 ಕ್ಯುಸೆಕ್‌ ನೀರು ಬಿಡುಗಡೆ

ಪಕ್ಷಾತೀತ ಹೋರಾಟ ಅನಿವಾರ್ಯ:

ಕೃಷ್ಣಾ ರಾಷ್ಟ್ರೀಯ ಯೋಜನೆಗೆ ಪಕ್ಷಾತೀತ ಹೋರಾಟ ಅನಿವಾರ್ಯ. ಈ ಬಗ್ಗೆ ಮೂರು ಪಕ್ಷಗಳು ಆಸಕ್ತಿ ವಹಿಸಬೇಕು. ಜತೆಗೆ 7 ಜಿಲ್ಲೆಗಳ ಜನತೆ ಹೋರಾಟಕ್ಕೆ ಕೈಜೋಡಿಸಬೇಕು. ಆಲಮಟ್ಟಿ ಡ್ಯಾಂ (Almatti Dam)ಎತ್ತರಿಸಿದರೆ ಮುಳುಗಡೆಯಾಗುವ ಜಮೀನಿಗೆ ಮಾರುಕಟ್ಟೆಬೆಲೆಗಿಂತ 4 ಪಟ್ಟು ಹೆಚ್ಚಿನ ದರ ಅಥವಾ ಏಕರೂಪದ ಬೆಲೆ ನಿಗದಿಪಡಿಸಬೇಕು. ಆಲಮಟ್ಟಿ ಡ್ಯಾಂ ನಿರ್ಮಾಣಗೊಂಡು, ಕಾಲುವೆ ಕಾಮಗಾರಿ ಆಗಿವೆ. ಆದರೆ ನೀರು ಬಳಸಿಕೊಳ್ಳಲಾಗುತ್ತಿಲ್ಲ. ಆದರೆ ಆಂಧ್ರ, ತೆಲಂಗಾಣ ಸರ್ಕಾರಗಳು ಸಾಕಷ್ಟ್ರ ನೀರಾವರಿ ಕೆಲಸ ಮಾಡಿವೆ. ಅದೇ ರೀತಿ ನಮ್ಮಲ್ಲೂ ನೀರಾವರಿ ಕೆಲಸ ಆಗಬೇಕು. ಕೃಷ್ಣಾ ಯೋಜನೆ ಅನುಷ್ಠಾನಕ್ಕೆ ಮೂರು ಪಕ್ಷಗಳು ಕೇಂದ್ರದ ಗಮನ ಸೆಳೆಯಬೇಕು ಎಂದರು.

ಇಂಡಿಯಲ್ಲಿ ಸಮಗ್ರ ನೀರಾವರಿಗಾಗಿ ಹೋರಾಟದ ವೇಳೆ ಜೆಡಿಎಸ್‌ಪಕ್ಷದ ಒಬ್ಬರು ಸಚಿವ ಕಾರಜೋಳರ ಬಗ್ಗೆ ಮಾತನಾಡಿದ್ದಕ್ಕೆ ಕೇಸು ದಾಖಲಿಸಲಾಗಿದೆ. ಆದರೆ ಆ ವ್ಯಕ್ತಿ ಕ್ಷಮೆ ಕೇಳಿದ್ದರಿಂದ ಪ್ರಕರಣವನ್ನು ಅಷ್ಟಕ್ಕೇ ಬಿಡಬೇಕು. ಹೋರಾಟಕ್ಕೆ 22 ದಿನಗಳಾಗುತ್ತಿದ್ದರೂ ಜಿಲ್ಲಾಡಳಿತದಿಂದ ಒಬ್ಬರೂ ರೈತರ ಬಳಿಗೆ ಹೋಗಿ ಮಾತನಾಡಿಲ್ಲ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಮುಖಂಡರಾದ ರಿಯಾಜ್‌ಫಾರುಕಿ, ರಾಜು ಹಿಪ್ಪರಗಿ, ಸಿದ್ದು ಕಾಮತ್‌, ಖಾದ್ರಿ ಇನಾಮದಾರ, ಹುಸೇನ್‌ಬಾಗಾಯತ್‌, ಬಿರಾದಾರ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.

ಪಕ್ಷ ಬಿಡುವ ವಿಚಾರ ಇಲ್ಲ

ಪಕ್ಷದ ವರಿಷ್ಠರ ಜತೆ ನನಗೆ ಭಿನ್ನಾಭಿಪ್ರಾಯ ಇಲ್ಲ. ನಾನು ಜೆಡಿಎಸ್‌ ಬಿಡುತ್ತೇನೆಂದು ಎಲ್ಲೂ ಹೇಳಿಲ್ಲ. ಜೆಡಿಎಸ್‌ನಲ್ಲೇ ಇದ್ದೀನಿ ಎಂದು ಜೆಡಿಎಸ್‌ ರಾಷ್ಟ್ರೀಯ ಕಾರ್ಯದರ್ಶಿ ಎನ್‌.ಎಚ್‌.ಕೋನರೆಡ್ಡಿ ಸ್ಪಷ್ಟಪಡಿಸಿದರು. ನೀವು ಸೇರಿದಂತೆ ಕೆಲವರು ಜೆಡಿಎಸ್‌ ತೊರೆಯುವ ಸುದ್ದಿ ಇದೆಲ್ಲ ಎಂಬ ಪ್ರಶ್ನೆಗೆ ಎನ್‌.ಎಚ್‌.ಕೋನರೆಡ್ಡಿ ಉತ್ತರಿಸಿದರು. ನಾನು ಜೆಡಿಎಸ್‌ನಲ್ಲಿರುವುದರಿಂದಲೇ ಇಂಡಿಯಲ್ಲಿ ನಡೆದ ನೀರಾವರಿ ಹೋರಾಟ ಸ್ಥಳಕ್ಕೆ ಕುಮಾರಸ್ವಾಮಿ ನನ್ನನ್ನು ಕಳುಹಿಸಿದ್ದಾರೆ. ಈಗಂತೂ ಪಕ್ಷ ಬಿಡುವ ವಿಚಾರ ಇಲ್ಲ. ಸೆ.27ರಿಂದ ನಡೆಯುವ ಪಕ್ಷದ ಕಾರ್ಯಾಗಾರದಲ್ಲಿ ಸಾಕಷ್ಟು ವಿಚಾರ ಚರ್ಚೆಯಾಗಲಿವೆ ಎಂದರು.
 

click me!