
ಬೆಂಗಳೂರು: ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯ ವೇಳೆಯಲ್ಲಿ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಇಂದು 20 ಸಚಿವರ ಪಟ್ಟಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಘೋಷಣೆಯಾಗಿದೆ. ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಸಾಗರ-ಹೊಸನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ಡಿಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಗೋಪಾಲಕೃಷ್ಣಗೆ ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಇದೀಗ ತಮ್ಮ ಶಾಸಕ ಸ್ಥಾನಕ್ಕೆ ನಾಳೆ ಬೆಳಗ್ಗೆ ಅಧಿಕೃತವಾಗಿ ರಾಜೀನಾಮೆ ನೀಡುವುದಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಹೇಳಿಕೆ ನೀಡಿದ್ದಾರೆ.
ಡಿಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ 20 ಸ್ಥಾನಗಳು ಬಾಕಿ ಉಳಿದಿದ್ದವು. ಇಂದು ಕಾಂಗ್ರೆಸ್ ಹೈಕಮಾಂಡ್ ಸಾಕಷ್ಟು ಅಳೆದುತೂಗಿ 20 ಸಚಿವರ ಹೆಸರನ್ನು ಅಂತಿಮಗೊಳಿಸಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯಿಂದ ಮತ್ತೊಮ್ಮೆ ಮಧು ಬಂಗಾರಪ್ಪ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಲಾಗಿದೆ. ಈಡಿಗ ಕೋಟಾದಡಿ ಸಚಿವರಾಗಲು ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ತೀವ್ರ ಲಾಭಿ ನಡೆಸಿದ್ದರು. ಜತೆಗೆ ಡಿಕೆ ಸಂಪುಟದಲ್ಲಿ ಸಚಿವರಾಗುವ ವಿಶ್ವಾಸದಲ್ಲಿದ್ದರು. ಆದರೆ ಮತ್ತೊಮ್ಮೆ ಬೇಳೂರು ಗೋಪಾಲಕೃಷ್ಣಗೆ ಕಾಂಗ್ರೆಸ್ ಹೈಕಮಾಂಡ್ ಶಾಕ್ ಕೊಟ್ಟಿದೆ.
ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ನಾನೇನು ಪಕ್ಷ ವಿರೋಧಿ ಚಟುವಟಿಕೆ ಮಾಡಿರಲಿಲ್ಲ. ಇಲ್ಲಿ ಪ್ರಭಾವಿ ಕುಟುಂಬಗಳಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ನಾನು ಕೂಡಾ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಗಳ ಹಾಗೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಮಾತ್ರ ಸೂಕ್ತ ಸ್ಥಾನಮಾನ ನೀಡಲಾಗುತ್ತಿದೆ ಎಂದ ಆರೋಪಿಸಿದ್ದಾರೆ.
ಇನ್ನು ಮುಂದುವರೆದು, ನಿನ್ನೆಯವರೆಗೂ ಸಚಿವರಾಗುವ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಕಡೆಯ ಕ್ಷಣದಲ್ಲಿ ತಮ್ಮ ಹೆಸರು ಕೈತಪ್ಪಿದೆ. ಹೀಗಾಗಿ ಈ ಅನ್ಯಾಯದಿಂದ ನೊಂದು ನಾಳೆ ಬೆಳಗ್ಗೆ ಅಂದರೆ ಆಗಸ್ಟ್ 4ರಂದು ಬೆಳಗ್ಗೆ 10 ಗಂಟೆಗೆ ತಮ್ಮ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇವೆ. ಇದು ಒತ್ತಡ ತಂತ್ರವಲ್ಲ, ಖಂಡಿತ ನಾಳೆ ಬೆಳಗ್ಗೆ 10 ಗಂಟೆಗೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಬೇಳೂರು ಗೋಪಾಲಕೃಷ್ಣ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
1 ಪಿ.ಎಂ ನರೇಂದ್ರಸ್ವಾಮಿ ಮಳವಳ್ಳಿ (2ನೇ ಬಾರಿ ಸಚಿವ ಸ್ಥಾನ )
2 ಶಿವರಾಜ ತಂಗಡಗಿ ಕನಕಗಿರಿ (4ನೇ ಬಾರಿ ಸಚಿವ ಸ್ಥಾನ
3 ರುದ್ರಪ್ಪ ಲಮಾಣಿ ಹಾವೇರಿ (ಮೊದಲ ಬಾರಿ ಸಚಿವ ಸ್ಥಾನ)
4 ಕೆ.ಎಸ್ ಬಸವಂತಪ್ಪ ಮಾಯಕೊಂಡ (ಮೊದಲ ಬಾರಿ ಸಚಿವ ಸ್ಥಾನ
5 ಬಿ.ನಾಗೇಂದ್ರ ಬಳ್ಳಾರಿ (2ನೇ ಬಾರಿ ಸಚಿವ ಸ್ಥಾನ)
6 ಟಿ ರಘುಮೂರ್ತಿ ಚಳ್ಳಕೆರೆ (ಮೊದಲ ಬಾರಿ ಸಚಿವ ಸ್ಥಾನ)
7 ಜಮೀರ್ ಅಹಮದ್ ಖಾನ್ ಚಾಮರಾಜಪೇಟೆ (4 ಬಾರಿ ಸಚಿವ ಸ್ಥಾನ)
8 ರಿಜ್ವಾನ್ ಅರ್ಷದ್ ಶಿವಾಜಿನಗರ (ಮೊದಲ ಬಾರಿ ಸಚಿವ ಸ್ಥಾನ)
9 ಸಂತೋಷ್ ಲಾಡ್ ಕಲಘಟಗಿ (3ನೇ ಬಾರಿ ಸಚಿವ ಸ್ಥಾನ)
10 ಮಧು ಬಂಗಾರಪ್ಪ ಸೊರಬ (2ನೇ ಬಾರಿ ಸಚಿವ ಸ್ಥಾನ)
11 ಸಿ ಪುಟ್ಟರಂಗಶೆಟ್ಟಿ ಚಾಮರಾಜನಗರ (2ನೇ ಬಾರಿ ಸಚಿವ ಸ್ಥಾನ)
12 ಎಸ್ ಎಸ್ ಮಲ್ಲಿಕಾರ್ಜುನ್(ಮೂರನೇ ಬಾರಿ ಸಚಿವ ಸ್ಥಾನ)
13 ಅಜಯ್ ಸಿಂಗ್ ಜೇವರ್ಗಿ (ಮೊದಲ ಬಾರಿ ಸಚಿವ ಸ್ಥಾನ
14 ಎನ್.ಚಲುವರಾಯಸ್ವಾಮಿ ನಾಗಮಂಗಲ (3ನೇ ಬಾರಿ ಸಚಿವ ಸ್ಥಾನ)
15 ಕೆ.ಎಂ ಶಿವಲಿಂಗೇಗೌಡ ಅರಸೀಕೆರೆ ( ಮೊದಲ ಬಾರಿ ಸಚಿವ ಸ್ಥಾನ)
16 ಎಚ್.ಸಿ ಬಾಲಕೃಷ್ಣ ಮಾಗಡಿ (ಮೊದಲ ಬಾರಿ ಸಚಿವ ಸ್ಥಾನ)
17 ಗಾಯತ್ರಿ ಶಾಂತೇಗೌಡ ಪರಿಷತ್ ಸದಸ್ಯೆ (ಮೊದಲ ಬಾರಿ ಶಾಸಕಿ, ಮೊದಲ ಬಾರಿ ಸಚಿವ ಸ್ಥಾನ)
18 ಬಸವರಾಜ್ ರಾಯರೆಡ್ಡಿ ಯಲಬುರ್ಗಾ (4ನೇ ಬಾರಿ ಸಚಿವ ಸ್ಥಾನ)
19 ವಿಜಯಾನಂದ ಕಾಶಪ್ಪನವರ್ ಹುನಗುಂದ (ಮೊದಲ ಬಾರಿ ಸಚಿವ ಸ್ಥಾನ)
20 ಲಕ್ಷ್ಮಣ ಸವದಿ ಅಥಣಿ (3ನೇ ಬಾರಿ ಸಚಿವ ಸ್ಥಾನ)