
ಬೆಂಗಳೂರು: ತಂಪಾದ ಹವಾಮಾನ ಮತ್ತು ಹಿತಕರವಾದ ಮಳೆಗೆ ಹೆಸರಾದ ಬೆಂಗಳೂರು ನಗರವು ಜುಲೈ ತಿಂಗಳು ಕೆಟ್ಟ ಹವಾಮಾನ ದಾಖಲೆಗೆ ಸಾಕ್ಷಿಯಾಗಿದೆ. ಬರೋಬ್ಬರಿ 108 ವರ್ಷಗಳ ಇತಿಹಾಸದಲ್ಲಿ ನಗರವು ಈ ಬಾರಿ ಎರಡನೇ ಅತಿ ಒಣ (Driest July) ಜುಲೈ ತಿಂಗಳನ್ನು ಕಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ವರದಿ ಮಾಡಿದೆ.
ಹವಾಮಾನ ಇಲಾಖೆಯ ಅಂಕಿ-ಅಂಶಗಳ ಪ್ರಕಾರ.. ಜುಲೈ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ದಾಖಲಾಗಿರುವುದು ಕೇವಲ 23 ಮಿ.ಮೀ ಮಳೆ ಮಾತ್ರ. ನಗರದ ಇತಿಹಾಸವನ್ನು ಗಮನಿಸಿದರೆ, 1918ರ ಜುಲೈ ತಿಂಗಳಿನಲ್ಲಿ ಕೇವಲ 18.5 ಮಿ.ಮೀ ಮಳೆಯಾಗಿತ್ತು. ಅದಾದ ಬಳಿಕ ಅತಿ ಕಡಿಮೆ ಮಳೆ ಬಿದ್ದ ಜುಲೈ ಎಂದರೆ ಅದು 2026ರ ಜುಲೈ ತಿಂಗಳು. ಮಳೆಯ ತೀವ್ರ ಕೊರತೆಯಿಂದಾಗಿ ಗಾರ್ಡನ್ ಸಿಟಿಯ ಜನರು ಕಂಗಾಲಾಗಿದ್ದಾರೆ.
ಕೇವಲ ಮಳೆ ಕೊರತೆ ಮಾತ್ರವಲ್ಲ, ಬಿಸಿಲಿನಲ್ಲಿಯೂ ಬೆಂಗಳೂರು ಹೊಸ ದಾಖಲೆ ಬರೆದಿದೆ. ಜುಲೈ 14 ರಂದು ನಗರದಲ್ಲಿ ಗರಿಷ್ಠ ಉಷ್ಣಾಂಶ 33.6° ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು ಕಳೆದ 112 ವರ್ಷಗಳಲ್ಲೇ ಜುಲೈ ತಿಂಗಳಿನಲ್ಲಿ ದಾಖಲಾದ ಅತಿ ಹೆಚ್ಚಿನ ತಾಪಮಾನವಾಗಿದೆ. ಈ ಹಿಂದೆ 1914 ಮತ್ತು 1926ರಲ್ಲಿ 33.3° ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಈ ಮೂಲಕ 2026ರ ಜುಲೈ ತಿಂಗಳು ನಗರದ ಇತಿಹಾಸದಲ್ಲೇ ಅತ್ಯಂತ ಬಿಸಿಯಾದ ಮತ್ತು ಒಣ ತಿಂಗಳಾಗಿ ದಾಖಲೆ ಸೇರಿದೆ.
ಜುಲೈನಲ್ಲಿ ಮಳೆ ಕೈಕೊಟ್ಟಿದ್ದರೂ, ಈ ವರ್ಷದ ಒಟ್ಟಾರೆ ಮಳೆಯ ಪ್ರಮಾಣ ಇನ್ನೂ 'ಸಾಮಾನ್ಯ' ಮಟ್ಟದಲ್ಲಿದೆ. ವರ್ಷದ ಆರಂಭದಿಂದ ಇಲ್ಲಿಯವರೆಗೆ ಬೆಂಗಳೂರಿನಲ್ಲಿ 433 ಮಿ.ಮೀ ಮಳೆಯಾಗಿದೆ. ಮಾನ್ಸೂನ್ ಆರಂಭಕ್ಕೂ ಮುನ್ನ ಬಿದ್ದ ಭಾರಿ ಮಳೆಯು ಈ ಕೊರತೆಯನ್ನು ನೀಗಿಸಿದೆ. ಆದರೆ, ಮಾನ್ಸೂನ್ ಮಳೆಯು ನಿರೀಕ್ಷಿತ ಮಟ್ಟದಲ್ಲಿ ಸುರಿಯದ ಕಾರಣ ಕೃಷಿ ಮತ್ತು ನೀರಿನ ಮಟ್ಟದ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.
ನಗರದಲ್ಲಿ ಮುಂದಿನ 24 ಗಂಟೆಗಳ ಕಾಲ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಇರಲಿದ್ದು, ಉಷ್ಣಾಂಶವು 30°C ಆಸುಪಾಸಿನಲ್ಲಿರಲಿದೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಡಾ.ಎನ್.ಪುವಿಯರಸನ್ ತಿಳಿಸಿದ್ದಾರೆ. ಇದೇ ವೇಳೆ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಹೈ-ಅಲರ್ಟ್ ಘೋಷಿಸಲಾಗಿದೆ.