
ಬೆಂಗಳೂರು(ಮಾ.01): ತಮಿಳುನಾಡಿನ ಹೊಸೂರಿನವರೆಗೆ ಮೆಟ್ರೋ ವಿಸ್ತರಿಸುವ ವಿಚಾರ ಮುನ್ನೆಲೆಗೆ ಬರುತ್ತಲೇ ಅದಕ್ಕೂ ಮೊದಲು ನಗರದ ಸುತ್ತಮುತ್ತ, ಗ್ರಾಮಾಂತರ ಜಿಲ್ಲೆಗೆ ಮೆಟ್ರೋ ಸಂಪರ್ಕ ಕಲ್ಪಿಸಲು ಒತ್ತಾಯ ಹೆಚ್ಚಾಗಿದೆ. ಪ್ರಸ್ತುತ ಮೆಟ್ರೋದ 2ನೇ ಹಂತದ ಕಾಮಗಾರಿ ಚಾಲನೆಯಲ್ಲಿದ್ದು, ಈ ವರ್ಷ 40 ಕಿ.ಮೀ. ಮಾರ್ಗ ಜನಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ. 2024ರ ವೇಳೆಗೆ ಎರಡನೇ ಹಂತದ ಎಲ್ಲ ಮಾರ್ಗಗಳಲ್ಲಿ ಮೆಟ್ರೋ ರೈಲುಗಳು ಸಂಚಾರ ಆರಂಭಿಸುವ ನಿರೀಕ್ಷೆಯಿದೆ. ಇನ್ನು, 3ನೇ ಹಂತದ .16,328 ಕೋಟಿ ಮೊತ್ತದ ಕಾಮಗಾರಿ ಅನುಮೋದನೆ ವಿಚಾರ ಕೇಂದ್ರದ ಅಂಗಳದಲ್ಲಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮದ ಪ್ರಕಾರ ಜೆ.ಪಿ.ನಗರ 4ನೇ ಹಂತದಿಂದ ಹೆಬ್ಬಾಳ ಸಂಪರ್ಕಿಸುವ 31 ಕಿ.ಮೀ. ಮಾರ್ಗ (ಹಂತ-3ಎ), ಹೊಸಹಳ್ಳಿಯಿಂದ ಕಡಬಗೆರೆಗೆ 12 ಕಿ.ಮೀ. ಮಾರ್ಗಗಳಿಗೆ ಡಿಪಿಆರ್ ಸಿದ್ಧವಾಗಿದೆ. 17 ಕಿ.ಮೀ. ಸುರಂಗದ ಮೂಲಕ ಸಾಗಲಿರುವ ಸರ್ಜಾಪುರದಿಂದ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸುವ ಒಟ್ಟಾರೆ 37 ಕಿ.ಮೀ. ಮಾರ್ಗವು (ಹಂತ-3ಬಿ) ಸುರಂಗ ಮಾರ್ಗದಲ್ಲಿ 17 ಕಿ.ಮೀ. ಸಾಗುತ್ತದೆ. ಇಬ್ಲೂರು, ಕೋರಮಂಗಲ, ಕಾವೇರಿ ಥಿಯೇಟರ್ ಮೂಲಕ ಹಾದು ಹೋಗಲಿದೆ.
Bengaluru: ಜೆಪಿ ನಗರ ಡೆಲ್ಮಿಯಾ ಫ್ಲೈಓವರ್ ಬಚಾವ್: ಅದರ ಮೇಲೆಯೇ ಮೆಟ್ರೋ ಮಾರ್ಗ
ಇದರ ಮುಂದುವರಿದ ಹಂತವಾಗಿ ನಾಲ್ಕನೇ ಹಂತದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದ್ದು, ಇದು ಬೆಂಗಳೂರು ಸುತ್ತಮುತ್ತಲಿನ ಮಾಗಡಿ, ಬಿಡದಿಗೆ ಸಂಪರ್ಕಿಸುವ ಮಾರ್ಗದ ಯೋಜನೆ ಹೊಂದಿದೆ. ಇದರ ಡಿಪಿಆರ್ ಪೂರ್ಣಗೊಂಡು, ಕೇಂದ್ರದಿಂದ ಅನುಮೋದನೆ ದೊರೆತು ಕಾಮಗಾರಿ ಆರಂಭವಾಗಲು ಒಟ್ಟಾರೆ ನಾಲ್ಕೈದು ವರ್ಷ ಕಾಲಾವಧಿ ತೆಗೆದುಕೊಳ್ಳುವ ಅಂದಾಜಿದೆ. ಆದರೆ, ಇವೆಲ್ಲದರ ನಡುವೆಯೇ ಚೆನ್ನೈ ಮೆಟ್ರೋ ರೈಲು ನಿಗಮ (ಸಿಎಂಆರ್‌ಎಲ್) ಸಲ್ಲಿಸಿದ್ದ ಬೊಮ್ಮಸಂದ್ರ-ಹೊಸೂರು ಸಂಪರ್ಕಿಸುವ ಮೆಟ್ರೋ ಮಾರ್ಗ ಕಾಮಗಾರಿ ಕಾರ್ಯಸಾಧ್ಯತೆ ವರದಿಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿರುವುದು ಸಾಕಷ್ಟುಪ್ರಶ್ನೆಗೆ ಕಾರಣವಾಗಿದೆ. ಮೊದಲು ಬೆಂಗಳೂರು ಸುತ್ತಮುತ್ತ ಸಂಪರ್ಕ ಕಲ್ಪಿಸುವ ಯೋಜನೆಗೆ ಆದ್ಯತೆ ಸಿಗಲಿ, ಬಳಿಕವಷ್ಟೇ ಮುಂದಿನ ಯೋಜನೆ ಬಗ್ಗೆ ಯೋಚಿಸಲಿ ಎಂದು ಒತ್ತಾಯಿಸಲಾಗಿದೆ.
ಗ್ರಾಮಾಂತರಕ್ಕೆ ಮೆಟ್ರೋ ಅಗತ್ಯ
ಮುಖ್ಯವಾಗಿ ಬೆಂಗಳೂರಿನ ಗಡಿಯಲ್ಲಿರುವ ಗ್ರಾಮಾಂತರ ಜಿಲ್ಲೆಗೆ ಮೆಟ್ರೋ ವಿಸ್ತರಣೆ ಆಗಬೇಕಿದೆ. ಇಲ್ಲಿ ನಿವೇಶನ ಖರೀದಿ ತೀರಾ ದುಬಾರಿಯಲ್ಲದ ಕಾರಣ ನಗರದ ಉದ್ಯೋಗಿಗಳು ನೆಲಮಂಗಲ ಸೇರಿ ಇತರೆಡೆ ವಾಸಿಸಲು ಮುಂದಾಗುತ್ತಿದ್ದಾರೆ. ಮೆಜೆಸ್ಟಿಕ್, ಶಿವಾಜಿನಗರ, ಜಯನಗರ, ಜೆಪಿ ನಗರ, ನಾಗಾವರ, ಮಾನ್ಯತಾ ಟೆಕ್‌ಪಾರ್ಕ್ ಸೇರಿ ಪ್ರತಿನಿತ್ಯ ಉದ್ಯೊಗಕ್ಕಾಗಿ ಇಲ್ಲಿನ ಸಾವಿರಾರು ಜನ ನಗರಕ್ಕೆ ಆಗಮಿಸುತ್ತಾರೆ. ಈ ಪೈಕಿ ನೆಲಮಂಗಲದ ನಿವಾಸಿಗಳು ಮೆಟ್ರೋ ಏರಲು ನಾಗಸಂದ್ರದವರೆಗೆ ತೆರಳಬೇಕಿದೆ. ಈ ಹಸಿರು ಮಾರ್ಗ ವಿಸ್ತರಿಸಿ ಮಂಜುನಾಥ್ ನಗರ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದವರೆಗೆ ಸಂಪರ್ಕ ಅಗಬೇಕಿದೆ.
ಬೆಂಗಳೂರು: ನಗರದಲ್ಲಿ ಶೀಘ್ರ ಚಾಲಕನಿಲ್ಲದ ಮೆಟ್ರೋ ಓಡಾಟ!
ದೊಡ್ಡಬಳ್ಳಾಪುರ, ಹೊಸಕೋಟೆಗೆ ಆದ್ಯತೆ ನೀಡಿ
ಇನ್ನೊಂದೆಡೆ ನಾಗಾವರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಯೋಜನೆ ಪ್ರಗತಿಯಲ್ಲಿದೆ. ಇದರಿಂದ ದೇವನಹಳ್ಳಿಗೆ ಮೆಟ್ರೋ ಸಂಪರ್ಕ ಲಭ್ಯವಾದರೂ ಪೂರ್ಣ ಗ್ರಾಮಾಂತರಕ್ಕೆ ಹೆಚ್ಚು ಸಂಪರ್ಕ ಸಾಧ್ಯವಾಗಿಸುತ್ತಿಲ್ಲ. ಇಲ್ಲಿಂದ ಆಗಮಿಸುವ ಜನ ಹೆಬ್ಬಾಳ, ಮೇಖ್ರಿ ವೃತ್ತ, ಪ್ಯಾಲೇಸ್ ಗುಟ್ಟಹಳ್ಳಿ ಟ್ರಾಫಿಕ್, ಕೆ.ಆರ್.ಪುರಂ, ಗೊರಗುಂಟೆ ಪಾಳ್ಯದ ಸಂಚಾರ ದಟ್ಟಣೆ ಎದುರಿಸುವ ಅನಿವಾರ್ಯತೆ ಇದೆ. ಹೀಗಾಗಿ ಮೆಟ್ರೋವನ್ನು ದೊಡ್ಡಬಳ್ಳಾಪುರ ಮಾರ್ಗದಲ್ಲಿ ಯಲಹಂಕದವರೆಗೆ, ಅದೇ ರೀತಿ ಹೊಸಕೋಟೆ ಬೈಯ್ಯಪ್ಪನಹಳ್ಳಿಯಿಂದ ಮುಂದುವರಿಸುವ ಅಗತ್ಯವಿದೆ ಎಂಬುದು ಜನತೆಯ ಆಗ್ರಹ.
ಇಲ್ಲಿಂದ 12 ಕಿ.ಮೀ. ಮೆಟ್ರೋ ಮಾರ್ಗ ವಿಸ್ತರಿಸಿದರೆ ಗ್ರಾಮಾಂತರದ ಉಳಿದ ತಾಲೂಕುಗಳಿಗೆ ಮೆಟ್ರೋ ಕೈಗೆಟುಕಲಿದೆ. ವಿಶೇಷವಾಗಿ ದೊಡ್ಡಬಳ್ಳಾಪುರದ ಪ್ರಯಾಣಿಕರು ಬೆಂಗಳೂರಿಗೆ ನಿತ್ಯ ಸಂಚಾರ ಮಾಡುತ್ತಿದ್ದು, ಯಲಹಂಕದವರೆಗೆ ವಿಸ್ತರಣೆಗೊಳ್ಳುತ್ತಿರುವ ನಮ್ಮ ಮೆಟ್ರೋ ವಿಸ್ತರಣೆ ಮಾಡಬೇಕು ಎಂಬುದು ಈ ಭಾಗದ ನಿವಾಸಿಗಳ ಒತ್ತಾಯ.