
ಬೆಂಗಳೂರು(ಮಾ.01): ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಬಿಬಿಎಂಪಿಗೆ ನೀಡಿದ ಅನುದಾನ ಹಾಗೂ ಸ್ವಂತ ವರಮಾನ ಸೇರಿದಂತೆ ಬರೋಬ್ಬರಿ 10 ಸಾವಿರ ಕೋಟಿಗೂ ಅಧಿಕ ಮೌಲ್ಯದ 2023-24ನೇ ಸಾಲಿನ ಆಯವ್ಯಯವನ್ನು ಮಾ.2ರ ಗುರುವಾರ ಪುರಭವನದಲ್ಲಿ ಮಂಡಿಸಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ. ರಾಜ್ಯ ಸರ್ಕಾರವು ತನ್ನ 2023-24ನೇ ಸಾಲಿನ ಆಯವ್ಯಯದಲ್ಲಿ ಬಿಬಿಎಂಪಿಗೆ ಸುಮಾರು .6 ಸಾವಿರ ಕೋಟಿ ಅನುದಾನ ನೀಡಿದೆ. ಈ ಅನುದಾನ ಸೇರಿದಂತೆ ಬಿಬಿಎಂಪಿಯ ಆದಾಯದ ಮೂಲಗಳಿಂದ ಸಂಗ್ರಹಿಸಲಾದ ಮೊತ್ತ ಸೇರಿದಂತೆ ಒಟ್ಟು .10 ಸಾವಿರ ಕೋಟಿಗೂ ಅಧಿಕ ಮೊತ್ತದ ಬಜೆಟ್ ಮಂಡನೆ ಆಗುವ ನಿರೀಕ್ಷೆ ಇದೆ.
ಈಗಾಗಲೇ ಬಿಬಿಎಂಪಿ ಆಯುಕ್ತರು ಹಾಗೂ ಹಣಕಾಸು ವಿಭಾಗದ ವಿಶೇಷ ಆಯುಕ್ತರ ನೇತೃತ್ವದಲ್ಲಿ ಹಲವು ಸಭೆಗಳನ್ನು ನಡೆಸಿ ಸಿದ್ಧಪಡಿಸಿದ ಬಜೆಟ್ ಕರಡು ಪ್ರತಿಗೆ ನಗರಾಭಿವೃದ್ಧಿ ಇಲಾಖೆಗೆಯ ಅನುಮೋದನೆ ಸಿಕ್ಕಿದೆ. ಕೆಲವು ಬದಲಾವಣೆಗೆ ಸೂಚನೆ ನೀಡಲಾಗಿದ್ದು, ಮಂಗಳವಾರ ಸಂಜೆಯೊಳಗಾಗಿ ಅಂತಿಮಗೊಳ್ಳಲಿದೆ. ಬುಧವಾರ ಬಜೆಟ್ ಪುಸಕ್ತ ಮುದ್ರಣಗೊಳ್ಳಲಿದ್ದು, ಗುರುವಾರ ಬೆಳಗ್ಗೆ 11ಕ್ಕೆ ಪುರಭವನದಲ್ಲಿ ಮಂಡಿಸಲಾಗುವುದು ಎಂದು ಹಣಕಾಸು ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Bengaluru: 9000 ಕೋಟಿ ಗಾತ್ರದ ಬಿಬಿಎಂಪಿ ಬಜೆಟ್: ಆಸ್ತಿ ತೆರಿಗೆದಾರರಿಗೆ ಸಿಹಿ ಸುದ್ದಿ
10 ಸಾವಿರ ಕೋಟಿಗೂ ಅಧಿಕ:
ಬಿಬಿಎಂಪಿಗೆ ಆಸ್ತಿ ತೆರಿಗೆ ಮಾತ್ರ ಅತಿ ದೊಡ್ಡ ಆದಾಯದ ಮೂಲವಾಗಿದೆ. 2022-23 ಸಾಲಿನಲ್ಲಿ .10,943.54 ಕೋಟಿ ಬಜೆಟ್ ಮಂಡಿಸಲಾಗಿತ್ತು. .4,200 ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿತ್ತು. ಅದರಲ್ಲಿ ಈವರೆಗೆ .3 ಸಾವಿರ ಕೋಟಿ ತೆರಿಗೆ ಸಂಗ್ರಹಿಸಲಾಗಿದೆ. ಇದನ್ನು ಗಮನಿಸಿದರೆ ಬಿಬಿಎಂಪಿ ಆದಾಯದಿಂದ ಬೆಂಗಳೂರಿನಲ್ಲಿ ಮೂಲ ಸೌಕರ್ಯ ಕಾಮಗಾರಿ ಕೈಗೊಳ್ಳುವುದು ಕಷ್ಟವಾಗಿದೆ. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಬಿಬಿಎಂಪಿಗೆ ನೀಡಿದ ಸುಮಾರು 6 ಸಾವಿರ ಕೋಟಿ ಹಾಗೂ ಬಿಬಿಎಂಪಿ ಆದಾಯ ಸುಮಾರು .4 ಸಾವಿರ ಕೋಟಿ ಒಟ್ಟಾರೆ .10 ಸಾವಿರ ಕೋಟಿಗೂ ಅಧಿಕ ಮೊತ್ತದ ಬಜೆಟೆ ನಿರೀಕ್ಷಿಸಲಾಗಿದೆ.
5 ಸಾವಿರ ಕೋಟಿ ಕಂದಾಯ ವಸೂಲಿ
ಕಳೆದ 2022-23ನೇ ಸಾಲಿನಲ್ಲಿ .4200 ಕೋಟಿ ಆಸ್ತಿ ತೆರಿಗೆ ಸಂಗ್ರಹ ಗುರಿಯನ್ನು ಹಾಕಿಕೊಂಡಿದ್ದ ಬಿಬಿಎಂಪಿಯು 2023-24ನೇ ಸಾಲಿನಲ್ಲಿ ಹೆಚ್ಚುವರಿಯಾಗಿ .800 ಕೋಟಿ ಸೇರಿದಂತೆ ಬರೋಬ್ಬರಿ .5 ಸಾವಿರ ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಂಡಿದೆ. ಹೀಗಾಗಿ, ಹೊಸ ಆದಾಯ ಮೂಲಗಳ ಹುಡುಕಾಟದ ಜತೆಗೆ, ಕಂದಾಯ ಸೋರಿಕೆ ತಡೆಗಟ್ಟುವುದು ಹಾಗೂ ಬಾಕಿ ವಸೂಲಿಗೆ ಹೆಚ್ಚಿನ ಕಸರತು ಮಾಡಬೇಕಾಗಲಿದೆ.
ಇಂದಿರಾ ಕ್ಯಾಂಟೀನ್‌ಗೆ 50 ಕೋಟಿ ಮೀಸಲು
ಸರ್ಕಾರದ ಅನುದಾನದಲ್ಲಿ 2017ರಲ್ಲಿ ಆರಂಭಗೊಂಡ ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗೆ ಕಳೆದ ಐದು ವರ್ಷದಿಂದ ಸರ್ಕಾರ ಅನುದಾನ ನೀಡುತ್ತಿಲ್ಲ. ಹೀಗಾಗಿ, ಬಿಬಿಎಂಪಿಯೇ ಈ ಬಾರಿ ಸುಮಾರು .50 ಕೋಟಿ ಅನುದಾನ ಮೀಸಲಿಟ್ಟು, ಇಂದಿರಾ ಕ್ಯಾಂಟೀನ್‌ಗಳಿಗೆ ಹೊಸ ಚೇತನ್ಯ ನೀಡುವುದಕ್ಕೆ ಬಿಬಿಎಂಪಿ ಮುಂದಾಗಿದೆ.
ವಸತಿ ವ್ಯವಸ್ಥೆ ಯೋಜನೆ
ರಾಜ್ಯದ ಗ್ರಾಮಾಂತರ ಪ್ರದೇಶದಿಂದ ಬೆಂಗಳೂರಿಗೆ ಉದ್ಯೋಗ ಅರಸಿ ಬರುವ ಯುವತಿ ಹಾಗೂ ಮಹಿಳೆಯರಿಗೆ ಸಾವಿತ್ರಿಬಾಯಿ ಪುಲೆ ಹೆಸರಿನಲ್ಲಿ ಹಾಸ್ಟೆಲ್ ವ್ಯವಸ್ಥೆ ಹಾಗೂ ನಿರಾಶ್ರಿತ ವೃದ್ಧರಿಗೆ ಶ್ರವಣ ಕುಮಾರ ಹೆಸರಿನಲ್ಲಿ ವಸತಿ ವ್ಯವಸ್ಥೆ ಕಲ್ಪಿಸುವ ಯೋಜನೆ ಘೋಷಿಸುವ ಸಾಧ್ಯತೆ ಇದೆ.
ಸರ್ಕಾರದ 6 ಕೋಟಿ ಬಿಬಿಎಂಪಿ ಅನುಷ್ಠಾನ
ರಾಜ್ಯ ಸರ್ಕಾರ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ .9 ಸಾವಿರ ಕೋಟಿಗೂ ಅಧಿಕ ಮೊತ್ತದ ಅನುದಾನವನ್ನು 2023-24ನೇ ಸಾಲಿನ ಆಯವ್ಯಯದಲ್ಲಿ ನೀಡಿದೆ. ಈ ಪೈಕಿ ಪ್ರವಾಹ ತಡೆಗೆ ಚರಂಡಿ ಮತ್ತು ಕಲ್ವರ್ಚ್‌ಗಳ ಅಭಿವೃದ್ಧಿಗಾಗಿ 1,813 ಕೋಟಿ, ಕೆರೆಗಳಿಗೆ ತಡೆ ಗೇಟ್, ಹೈ ಡೆನ್ಸಿಟಿ ಕಾರಿಡಾರ್ ಅಭಿವೃದ್ಧಿಗೆ .273 ಕೋಟಿ, ಪ್ರಮುಖ 75 ಜಂಕ್ಷನ್ ಅಭಿವೃದ್ಧಿಗೆ .150 ಕೋಟಿ, ಟಿನ್ ಫ್ಯಾಕ್ಟರಿಯಿಂದ ಮೇಡಹಳ್ಳಿವರೆಗೆ .350 ಕೋಟಿ ವೆಚ್ಚದಲ್ಲಿ 5 ಕಿ.ಮೀ. ಎಲಿವೇಟೆಡ್ ರಸ್ತೆ ನಿರ್ಮಾಣ. 110 ಗ್ರಾಮಗಳಲ್ಲಿ ದುಸ್ಥಿತಿಯಲ್ಲಿರುವ ರಸ್ತೆಗಳ ಪುನರ್ ನಿರ್ಮಾಣಕ್ಕಾಗಿ .300 ಕೋಟಿ ಪ್ರತಿ ವಾರ್ಡಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ, ಬೆಂಗಳೂರಿಗೆ ಪ್ರತ್ಯೇಕ ಆರೋಗ್ಯ ವ್ಯವಸ್ಥೆ ಜಾರಿಗೊಳಿಸುವುದು. ಬಿಬಿಎಂಪಿ ಆಸ್ತಿ ರಕ್ಷಣೆಗೆ .35 ಕೋಟಿ ವೆಚ್ಚದಲ್ಲಿ ಬೇಲಿ ಹಾಕುವುದು ಸೇರಿದಂತೆ ಸುಮಾರು .6 ಕೋಟಿ ಮೊತ್ತದ ಯೋಜನೆಗಳನ್ನು ಬಿಬಿಎಂಪಿ ಅನುಷ್ಠಾನ ಮಾಡಬೇಕಾಗಿದೆ. ಆದ್ದರಿಂದ ಈ ಯೋಜನೆಗಳು ಬಿಬಿಎಂಪಿ ಬಜೆಟ್‌ನಲ್ಲಿ ಮರು ಪ್ರಸ್ತಾಪವಾಗಲಿವೆ.
ಚುನಾವಣೆಗೆ ಪೂರಕವಾದ ಯೋಜನೆಗಳ ಘೋಷಣೆ?
ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಘೋಷಿಸಿದ ಯೋಜನೆಗಳು, ಬಿಬಿಎಂಪಿಯ ಯೋಜನೆಗಳ ಜತೆಗೆ, ಬೆಂಗಳೂರಿನ ಮತದಾರರನ್ನು ಸೆಳೆಯುವ ಉದ್ದೇಶದಿಂದ ಮತ್ತಷ್ಟುಜನಪ್ರಿಯ ಯೋಜನೆಗಳನ್ನು ಬಿಬಿಎಂಪಿಯ ಬಜೆಟ್‌ನಲ್ಲಿ ಆಡಳಿತ ಪಕ್ಷ ಘೋಷಿಸುವ ಸಾಧ್ಯತೆಯೂ ಇದೆ.
ಬೆಂಗಳೂರು: ಈ ಬಾರಿ ಬಿಬಿಎಂಪಿ ಬಜೆಟ್ ಬರೀ 5,000 ಕೋಟಿ ರೂ..?
3ನೇ ಬಾರಿ ಅಧಿಕಾರಿಗಳ ಮಂಡನೆ
ಬಿಬಿಎಂಪಿ ಸದಸ್ಯರ ಅವಧಿ 2020ರ ಸೆಪ್ಟೆಂಬರ್‌ನಲ್ಲಿ ಮುಕ್ತಾಯಗೊಂಡಿದ್ದು, ಈವರೆಗೆ ಚುನಾವಣೆ ನಡೆದಿಲ್ಲ. ಹೀಗಾಗಿ ಚುನಾಯಿತಿ ಪ್ರತಿನಿಧಿಗಳಿಲ್ಲ. ಆದ್ದರಿಂದ ಅಧಿಕಾರಿಗಳೇ ಬಜೆಟ್ ಮಂಡಿಸಬೇಕಿದೆ. 2021-22 ಮತ್ತು 2022-23ನೇ ಸಾಲಿನ ಬಜೆಟನ್ನು ಅಧಿಕಾರಿಗಳು ಮಂಡಿಸಿದ್ದರು. ಈ ಬಾರಿಯೂ ಹಣಕಾಸು ವಿಭಾಗದ ವಿಶೇಷ ಆಯುಕ್ತರೇ ಮಂಡಿಸಲಿದ್ದಾರೆ. ಒಟ್ಟು ಮೂರು ಬಾರಿ ಅಧಿಕಾರಿಗಳು ಬಜೆಟ್ ಮಂಡಿಸಿದಂತಾಗುತ್ತದೆ.
ಕಳೆದ ಬಾರಿ ರಾತ್ರಿ ಬಜೆಟ್ ಮಂಡನೆ
ಬಿಬಿಎಂಪಿ ಕಾಯ್ದೆ ಪ್ರಕಾರ ಮಾಚ್‌ರ್ ಮೊದಲ ವಾರದಲ್ಲಿ ಬಜೆಟ್ ಮಂಡನೆ ಮಾಡಬೇಕು. ಮೂರು ವಾರದಲ್ಲಿ ಸರ್ಕಾರ ಅನುಮೋದನೆ ನೀಡಿ, ಏಪ್ರಿಲ್ 1ರಿಂದ ಅನುಷ್ಠಾನಕ್ಕೆ ಅವಕಾಶ ನೀಡಬೇಕು. ಕಳೆದ ವರ್ಷ ಬಜೆಟ್ ರೂಪಿಸುವ ವಿಚಾರದಲ್ಲಿ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯಿಂದ ಆರ್ಥಿಕ ವರ್ಷ ಕಟ್ಟಕಡೆಯ ದಿನವಾದ ಮಾ.31ರ ತಡರಾತ್ರಿ ವಿಕಾಸಸೌಧದಲ್ಲಿ ಮಂಡನೆ ಮಾಡಲಾಗಿತ್ತು.