ಉದ್ಘಾಟನೆಗೆ ಪ್ರಧಾನಿ, ಸಮಾರೋಪಕ್ಕೆ ರಾಷ್ಟ್ರಪತಿಗೆ ಆಮಂತ್ರಣ
ಕಲಬುರಗಿ(ಜು.22): ವಿಭಾಗೀಯ ಕೇಂದ್ರವಾಗಿರುವ ನಗರದಲ್ಲಿ ಸೆ.17ರಂದು ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಸಮಾರೋಪ ಸಮಾರಂಭಕ್ಕೆ ರಾಷ್ಟ್ರಪತಿಗಳನ್ನು ಆಮಂತ್ರಿಸಲಾಗುತ್ತಿದೆ ಎಂದು ಎಂಎಲ್‌ಸಿ ಹಾಗೂ ಕಲ್ಯಾಣ ಕರ್ನಾಟಕ ಉತ್ಸವ ಸಮಿತಿ ಅಧ್ಯಕ್ಷ ಶಶೀಲ್ ನಮೋಶಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ನಿಮಿತ್ಯ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮೈಸೂರು ಉತ್ಸವ ಮಾದರಿಯಲ್ಲಿ ಒಂದು ವರ್ಷವಿಡಿ ಈ ಭಾಗದ ಕಲೆ, ಸಂಸ್ಕ್ರತಿ ಸಾಹಿತ್ಯ, ಶಿಕ್ಷಣ ಇತಿಹಾಸ ಮತ್ತು ಅಭಿವೃದ್ದಿಯ ವಿಷಯಗಳ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮಗಳು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ರಾಜ್ಯಪಾಲರು, ಮುಖ್ಯ ಮಂತ್ರಿಗಳು ಮತ್ತು ಆಯಾ ಇಲಾಖೆಯ ಸಚಿವರು ಈ ಐತಿಹಾಸಿಕ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಲು ಕಲ್ಯಾಣ ಕರ್ನಾಟಕ ಸಚಿವರು ಸಂಸದರು ಶಾಸಕರು ಸೇರಿದಂತೆ ಉತ್ಸವ ಸಮಿತಿಯ ನಿಯೋಗ ಆದಷ್ಟುಶೀಘ್ರ ಸಿಎಂ ಮುಂದೆ ಪ್ರಸ್ತಾವನೆ ಸಲ್ಲಿಸಲಿದೆ ಎಂದರು.
ಕಲ್ಯಾಣ ಕರ್ನಾಟಕದಲ್ಲಿ ಅದ್ದೂರಿ ಅಮೃತ ಮಹೋತ್ಸವಕ್ಕೆ ಸಜ್ಜು, 1 ಲಕ್ಷ ಜನ ಸೇರಿಸಿ ಆಚರಣೆ
ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು 1 ತಿಂಗಳು ಪೂರ್ವದಲ್ಲಿಯೇ ಹಮ್ಮಿಕೊಳ್ಳಲು, ಆರಂಭೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಮರೋಪ ಸಮಾರಂಭಕ್ಕೆ ರಾಷ್ಟ್ರಪತಿಗಳಿಗೆ ಆಮಂತ್ರಿಸುವುದು, ವಿಚಾರ ಸಂಕಿರಣಗಳು, ಚರ್ಚೆಕೂಟಗಳು, ವಿವಿಧ ಸ್ಪರ್ಧೆಗಳು, ವೀರ ಸ್ವಾತಂತ್ರ್ಯ ಯೋಧರ ಸ್ಮರಣ ಸಂಚಿಕೆಗಳ ಬಿಡುಗಡೆ, ವಿಮೋಚನಾ ದಿನಾಚರಣೆಯ ವಿಶೇಷ ಸಂಚಿಕೆ ಬಿಡುಗಡೆ, ಆಯಾ ಸ್ಥಳಗಳಿಗೆ ವೀರ ಯೋಧರ ಹೆಸರುಗಳ ನಾಮಕರಣ, ವೀರ ಯೋಧರ ವಂಶದವರಿಗೆ ಸನ್ಮಾನ, ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಯ ಅವಲೋಕನ ಪ್ರದರ್ಶನ, 371(ಜೆ) ಕಲಂನ ಪರಿಣಾಮಕಾರಿ ಅನುಷ್ಠಾನ, ಅಮೃತ ಮಹೋತ್ಸವದ ಸಮಿತಿ ರಚನೆಯಂತಹ ಪ್ರಸ್ತಾವನೆಗಳನ್ನು ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷರೂ ಆದ ಎಂಎಲ್‌ಸಿ ಬಿ.ಜಿ. ಪಾಟೀಲ, ಉಪಾಧ್ಯಕ್ಷ ಅಮರನಾಥ್ ಪಾಟೀಲ, ಲಕ್ಷ್ಮಣ್ ದಸ್ತಿ, ಶಾಮರಾವ್ ಪ್ಯಾಟಿ, ಸುರೇಶ್ ನಂದ್ಯಾಳ, ಶಿವಲಿಂಗ್ ಬಂಡಕ, ಲಿಂಗರಾಜ್ ಸಿರಗಾಪುರ, ಮನೀಶ್ ಜಾಜು, ಡಾ. ಮಜೀದ್ ಅಸ್ಲಾಂ ಚೊಂಗೆ ಇದ್ದರು.