
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಪ್ರಥಮ ಜೆಎನ್ 1 ಪ್ರಕರಣ ಪತ್ತೆಯಾಗಿದೆ. ನಗರದ ಖಾಸಗಿ ಆಸ್ಪತ್ರೆಯ ಮಾಲೀಕ ಹಾಗೂ ಬಿಜೆಪಿ ಮುಖಂಡರಾದ ವೈದ್ಯರೊಬ್ಬರಿಗೆ ಗೆ ಜೆಎನ್- 1 ಪಾಸಿಟಿವ್ ಬಂದಿದೆ.
ಇತ್ತೀಚೆಗಷ್ಟೇ ದೆಹಲಿ ಹಾಗೂ ತಮಿಳುನಾಡಿಗೆ ಹೋಗಿ ಬಂದಿದ್ದ 69 ವರ್ಷದ ಬಿಜೆಪಿ ಮುಖಂಡನಿಗೆ ಜ್ವರ ಕಾಣಿಸಿಕೊಂಡಿತ್ತು. ಸತತ 5 ದಿನಗಳ ನಿರಂತರ ಜ್ವರ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ. ಕೊರೊನಾ ಟೆಸ್ಟ್ ವರದಿ ಭಾನುವಾರ ಬಂದಿದ್ದು ಸೋಂಕು ದೃಢಪಟ್ಟಿದೆ. ಸದ್ಯ ಅವರು ಹೋಂ ಕ್ವಾರಂಟೈನಲ್ಲಿದ್ದಾರೆ.
ಚಿಕಿತ್ಸೆಗೆ ಹಳೆ ಆಸ್ಪತ್ರೆಯಲ್ಲಿ ವ್ಯವಸ್ಥೆ
ಕೊರೋನಾ ಹೊಸ ತಳಿ ಜೆಎನ್-1 ಆತಂಕ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲು ಸೂಚನೆ ನೀಡಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಹಳೆಯ ಜಿಲ್ಲಾಸ್ಪತ್ರೆಯನ್ನು ಮತ್ತೆ ಕೋವಿಡ್- 19 ಆಸ್ಪತ್ರೆಯಾಗಿ ಮಾರ್ಪಾಡು ಮಾಡಲಾಗಿದೆ.
ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಹಾಗೂ ಜಿಲ್ಲಾಸ್ಪತ್ರೆ ಸಹಯೋಗದೊಂದಿಗೆ ಕೋವಿಡ್ ಆಸ್ಪತ್ರೆಗೆ ಮರುಚಾಲನೆ ನೀಡಲು ಸಕಲ ಸಿದ್ದತೆಗಳನ್ನ ಮಾಡಿಕೊಳ್ಳಲಾಗುತ್ತಿದೆ. ಹಳೆಯ ಆಸ್ಪತ್ರೆಯಲ್ಲಿ 130 ಬೆಡ್‌ಗಳನ್ನ ಸಿದ್ಧ ಮಾಡಿಕೊಳ್ಳಲಾಗುತ್ತಿದ್ದು, ಆಕ್ಸಿಜನ್ ಹಾಗೂ ವೆಂಟಿಲೇಟರ್ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.
WHO ಎಚ್ಚರಿಕೆ
ನವದೆಹಲಿ: ಕೋವಿಡ್ ಉಪ ತಳಿಯಾದ ಜೆಎನ್1 ಪ್ರಸರಣ ಹೆಚ್ಚುತ್ತಿರುವ ನಡುವೆ, ಕೋವಿಡ್, ಜೆಎನ್.1 ಹಾಗೂ ಇತರ ಉಸಿರಾಟದ ಕಾಯಿಲೆಗಳ ಮೇಲೆ ಕಣ್ಣಾವಲು ಬಲಪಡಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ, ಭಾರತ ಸೇರಿ ಆಗ್ನೇಯ ಏಷ್ಯಾದ ದೇಶಗಳಿಗೆ ತಾಕೀತು ಮಾಡಿದೆ ಹಾಗೂ ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊ ಳ್ಳಬೇಕು ಎಂದು ಜನರಿಗೆ ಸೂಚಿಸಿದೆ.
ಡಬ್ಲ್ಯುಎಚ್‌ಒ ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕಿ ಡಾ। ಪೂನಂ ಖೇತ್ರಪಾಲ್ ಸಿಂಗ್ ಈ ಬಗ್ಗೆ ಹೇಳಿಕೆ ನೀಡಿದ್ದು, 'ಕೊರೋನಾ ವೈರಸ್ ಮತ್ತೆ ಜಾಗತಿಕವಾಗಿ ಎಲ್ಲಾ ದೇಶಗಳಲ್ಲಿ ವಿಕಸನಗೊಳ್ಳುತ್ತಿದೆ ಹಾಗೂ ಹೊಸ ರೂಪ ಪಡೆಯುತ್ತಿದೆ. ಪ್ರಸ್ತುತ ಅಧ್ಯ ಯನಗಳು ಜೆಎನ್.1 ರೂಪಾಂತರಿಯಿಂದ ಉಂಟಾಗುವ ಪರಿಣಾಮ ತುಂಬಾ ಕಮ್ಮಿ ಎಂದು ಹೇಳಿವೆ. ಆದರೂ ಇಂಥ ರೂಪಾಂತರಿ ವೈರಸ್‌ಗಳ ಮೇಲೆ ನಾವು ಕಣ್ಣಾವಲು ಇಡಬೇಕು ಹಾಗೂ ಅದರ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು. ಸೋಂಕಿನ ನೈಜ ದತ್ತಾಂಶಗಳನ್ನು ಹಂಚಿಕೊಳ್ಳಬೇಕು. ಜೆಎನ್.1 ಪರಿಣಾಮ ಕುರಿತು ಮತ್ತಷ್ಟು ಅಧ್ಯಯನ ನಡೆಸಬಹುದು' ಎಂದಿದ್ದಾರೆ.
ಸಮುದಾಯಕ್ಕೆ ಹಬ್ಬಿದ ಸೋಂಕು: ಕೊಚ್ಚಿಯಲ್ಲಿ ಜ್ವರವಿರುವ ಶೇ.30ರಷ್ಟು ಜನರಲ್ಲಿ ಕೋವಿಡ್ ಸೋಂಕು
ಜನರು ಎಚ್ಚರಿಕೆ ವಹಿಸಿ: ಇನ್ನು ಜನತೆಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿರುವ ಅವರು, ಈಗ ರಜೆ ಬಂದಿವೆ. ಜನರು ರಜಾ ಕಾಲದಲ್ಲಿ ಪ್ರಯಾಣ ಮಾಡುತ್ತಾರೆ ಹಾಗೂ ಹಬ್ಬಾಚರಣೆ ವೇಳೆ ಗುಂಪುಗೂಡುತ್ತಾರೆ. ಇಂಥ ಸಮಯದಲ್ಲಿ ವೈರಸ್ ಪ್ರಸರಣ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಜನ ರಕ್ಷಣಾತ್ಮಕ ಕ್ರಮ ತೆಗೆದುಕೊಳ್ಳಬೇಕು. ಅಸ್ವಸ್ಥರಾದಾಗ ಸಕಾಲಿಕ ಚಿಕಿತ್ಸೆ ಪಡೆಯಬೇಕು. 'ಡಬ್ಲ್ಯುಎಚ್ ಒ ಅನುಮೋದಿತ ಎಲ್ಲ ಕೋವಿಡ್ ಲಸಿಕೆಗಳು ಜೆಎನ್.1 ಸೇರಿ ಎಲ್ಲಾ ರೂಪಾಂತರಿಗಳ ಮೇಲೆ ಪರಿಣಾಮಕಾರಿಯಾಗಿವೆ. ಸೋಂಕು, ಸಾವು ಹಾಗೂ ಸೋಂಕಿನ ತೀವ್ರತೆ ವಿರುದ್ಧ ರಕ್ಷಣೆ ನೀಡುತ್ತವೆ ಎಂದು ಅಭಯ ನೀಡಿದ್ದಾರೆ.