ವಿಧಾನಸಭಾ ಚುನಾವಣೆಗೆ ಇನ್ನೂ ನಾಲ್ಕು ತಿಂಗಳು ಇರುವಂತೆಯೇ ಜೆಡಿಎಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ಹುಣಸೂರು ಹೊರತುಪಡಿಸಿ ಉಳಿದ 6 ಕಡೆ ಹಳಬರಿಗೆ ಟಿಕೆಟ್ ಘೋಷಿಸಲಾಗಿದೆ.
ಅಂಶಿ ಪ್ರಸನ್ನಕುಮಾರ್
ಮೈಸೂರು (ಡಿ.20): ವಿಧಾನಸಭಾ ಚುನಾವಣೆಗೆ ಇನ್ನೂ ನಾಲ್ಕು ತಿಂಗಳು ಇರುವಂತೆಯೇ ಜೆಡಿಎಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ಹುಣಸೂರು ಹೊರತುಪಡಿಸಿ ಉಳಿದ 6 ಕಡೆ ಹಳಬರಿಗೆ ಟಿಕೆಟ್ ಘೋಷಿಸಲಾಗಿದೆ. ಹಾಲಿ ಶಾಸಕರಾದ ಜಿ.ಟಿ. ದೇವೇಗೌಡ- ಹುಣಸೂರು, ಸಾ.ರಾ. ಮಹೇಶ್- ಕೆ.ಆರ್. ನಗರ, ಕೆ. ಮಹದೇವ್- ಪಿರಿಯಾಪಟ್ಟಣ ಹಾಗೂ ಎಂ. ಅಶ್ವಿನ್‌ಕುಮಾರ್- ಟಿ. ನರಸೀಪುರ ಅವರು ಮತ್ತೊಮ್ಮೆ ಅದೃಷ್ಟಪರೀಕ್ಷಿಸಲಿದ್ದಾರೆ.
undefined
ನಗರದ ಕೃಷ್ಣರಾಜ ಕ್ಷೇತ್ರದಿಂದ ನಗಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್ ಹಾಗೂ ವರುಣದಿಂದ ಪ್ರೊ.ಸುಬ್ಬಪ್ಪ ಅವರ ಪುತ್ರ ಎಂ.ಎಸ್. ಅಭಿಷೇಕ್ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಈ ಇಬ್ಬರು 2018 ರಲ್ಲಿಯೂ ಸ್ಪರ್ಧಿಸಿ, ಪರಾಭವಗೊಂಡಿದ್ದರು.
ಹುಣಸೂರಿನಲ್ಲಿ ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್‌ಗೌಡ ಅವರಿಗೆ ಟಿಕೆಟ್ ನೀಡಲಾಗಿದೆ. ಇವರು ಜಿ.ಟಿ. ದೇವೇಗೌಡರ ಪುತ್ರ. ಕಳೆದ ಬಾರಿಯೇ ಹುಣಸೂರಿನಿಂದ ಸ್ಪರ್ಧಿಸಬೇಕಾಗಿತ್ತು. ಕೊನೆ ಕ್ಷಣದಲ್ಲಿ ಎಚ್. ವಿಶ್ವನಾಥ್ ಅವರಿಗೆ ಅವಕಾಶ ನೀಡಿದ್ದರಿಂದ ಅವರ ಪರ ದುಡಿದಿದ್ದರು.
ನರಸಿಂಹರಾಜದಲ್ಲಿ ಕಳೆದ ಬಾರಿ ಅಬ್ದುಲ್ಲಾ ಸ್ಪರ್ಧಿಸಿದ್ದರು. ಈ ಬಾರಿ ಕೂಡ ಅವರೇ ಪ್ರಬಲ ಆಕಾಂಕ್ಷಿ. ಆದರೂ ಮೊದಲ ಪಟ್ಟಿಯಲ್ಲಿ ಹೆಸರು ಪ್ರಕಟವಾಗಿಲ್ಲ. ಚಾಮರಾಜ ಕ್ಷೇತ್ರದಲ್ಲಿ ಪಾಲಿಕೆ ಸದಸ್ಯ, ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಕೆ.ವಿ. ಶ್ರೀಧರ್, ಎಸ್‌ಬಿಎಂ ಮಂಜು, ಮಾಜಿ ಸದಸ್ಯ ಸಿ. ಮಹದೇಶ್ ಮತ್ತಿತರರು ಆಕಾಂಕ್ಷಿಗಳು. ಅಲ್ಲಿ ಕೂಡ ಟಿಕೆಟ್ ಆಖೈರು ಆಗಿಲ್ಲ.
ನಂಜನಗೂಡಿನಲ್ಲಿ ಬೆಳವಾಡಿ ಶಿವಕುಮಾರ್ ಹಾಗೂ ಆರ್. ಮಾದೇಶ್ ಆಕಾಂಕ್ಷಿಗಳು. ಕಳೆದ ಬಾರಿ ಕೂಡ ಬೆಳವಾಡಿ ಶಿವಕುಮಾರ್ ಆಕಾಂಕ್ಷಿಯಾಗಿದ್ದರು. ಆದರೆ ಮಾಜಿ ಶಾಸಕ ಹೆಜ್ಜಿಗೆ ಶ್ರೀನಿವಾಸಯ್ಯ ಅವರ ಪುತ್ರ ಎಚ್.ಎಸ್. ದಯಾನಂದಮೂರ್ತಿ ಅವರಿಗೆ ಟಿಕೆಟ್ ನೀಡಲಾಗಿತ್ತು.
ಎಚ್.ಡಿ. ಕೋಟೆಯಲ್ಲಿ ಮಾಜಿ ಶಾಸಕ ಚಿಕ್ಕಣ್ಣ ಅವರ ಪುತ್ರ ಜಯಪ್ರಕಾಶ್ ಅವರಿಗೆ ಟಿಕೆಟ್ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಚಿವ ಜಿ.ಟಿ. ದೇವೇಗೌಡ ಪ್ರಕಟಿಸಿದ್ದರು. ಆದರೆ ಕೆ.ಎಂ. ಕೃಷ್ಣನಾಯಕ ಕೂಡ ಆಕಾಂಕ್ಷಿಯಾಗಿದ್ದು, ಮೊದಲ ಪಟ್ಟಿಯಲ್ಲಿ ಹೆಸರು ಅಂತಿಮವಾಗಿಲ್ಲ.
ಜಿಟಿಡಿ ಗೆದ್ದರೆ ಐದನೇ ಬಾರಿ, ಸಾರಾ ಗೆದ್ದರೇ ನಾಲ್ಕನೇ ಬಾರಿ
ಜಿ.ಟಿ. ದೇವೇಗೌಡರು ಈ ಬಾರಿ ಚಾಮುಂಡೇಶ್ಪರಿಯಿಂದ ಗೆದ್ದರೆ ಹ್ಯಾಟ್ರಿಕ್ ಅಲ್ಲದೇ ಐದನೇ ಬಾರಿ ಶಾಸಕರಾಗುತ್ತಾರೆ. ಹುಣಸೂರಿನಿಂದ 1998ರ ಉಪ ಚುನಾವಣೆ, 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದ್ದ ಅವರು 1999 ಹಾಗೂ 2008 ರಲ್ಲಿ ಸೋತಿದ್ದರು. 2013 ಹಾಗೂ 2018 ರಲ್ಲಿ ಚಾಮುಂಡೇಶ್ವರಿಯಿಂದ ಸತತ ಎರಡು ಗೆಲವು ದಾಖಸಿದ್ದಾರೆ. ಕಳೆದ ಬಾರಿಯಂತೂ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ 36 ಸಾವಿರ ಮತಗಳ ಅಂತರದಿಂದ ಸೋಲಿಸಿ, ದಾಖಲೆ ನಿರ್ಮಿಸಿದ್ದರು.
ಕೆ.ಆರ್. ನಗರದಲ್ಲಿ 2004 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋತಿದ್ದ ಸಾ.ರಾ. ಮಹೇಶ್ 2008, 2013 ಹಾಗೂ 2018 ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಹ್ಯಾಟ್ರಿಕ್ ಗೆಲವು ಸಾಧಿಸಿದವರು. ಕೆ.ಆರ್. ನಗರದಿಂದ ಈ ಶ್ರೇಯಕ್ಕೆ ಭಾಜನರಾದ ಮೊದಲ ವ್ಯಕ್ತಿ ಸಾ.ರಾ.ಮಹೇಶ್. ಈ ಬಾರಿಯೂ ಗೆದ್ದರೇ ಸತತ 4ನೇ ಬಾರಿ ಗೆಲವು.
ಪಿರಿಯಾಪಟ್ಟಣದಲ್ಲಿ ಕೆ. ಮಹದೇವ್ 2008, 2013 ರಲ್ಲಿ ಸೋತು, 2018 ರಲ್ಲಿ ಗೆದ್ದವರು. ಟಿ. ನರಸೀಪುರದಲ್ಲಿ ಎಂ. ಅಶ್ವಿನ್‌ಕುಮಾರ್ ಮೊದಲ ಯತ್ನದಲ್ಲಿಯೇ ಜಯಗಳಿಸಿದವರು. ಇವರಿಬ್ಬರು ಪುನಾರಾಯ್ಕೆಯಾದಲ್ಲಿ 2ನೇ ಬಾರಿ ಶಾಸಕರಾಗಲಿದ್ದಾರೆ.
ಅಪ್ಪ- ಮಗ ಗೆದ್ದರೆ ದಾಖಲೆ
ಈವರೆಗೆ ಅವಿಭಜಿತ ಮೈಸೂರು ಜಿಲ್ಲೆಯಿಂದ ಅಪ್ಪ- ಮಗ ಒಟ್ಟಿಗೆ ವಿಧಾನಸಭೆಗೆ ಆಯ್ಕೆಯಾಗಿಲ್ಲ. Pಳೆದ ಬಾರಿ ಈ ಅವಕಾಶ ಇತ್ತಾದರೂ ವರುಣದಿಂದ ಡಾ.ಎಸ್. ಯತೀಂದ್ರ ಆಯ್ಕೆಯಾದರೆ ಚಾಮುಂಡೇಶ್ವರಿಯಲ್ಲಿ ಅವರ ತಂದೆ ಸಿದ್ದರಾಮಯ್ಯ ಸೋತರು. ಆದರೆ ಬಾದಾಮಿಯಲ್ಲಿ ಗೆದ್ದರು. ಈ ಬಾರಿ ಚಾಮುಂಡೇಶ್ವರಿಯಿಂದ ಜಿ.ಟಿ. ದೇವೇಗೌಡ, ಹುಣಸೂರಿನಿಂದ ಅವರ ಪುತ್ರ ಜಿ.ಡಿ. ಹರೀಶ್‌ಗೌಡ ಗೆದ್ದರೆ ದಾಖಲೆ ನಿರ್ಮಾಣವಾಗಲಿದೆ.