: ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪಂಚರತ್ನ ಯೋಜನೆ ರೂಪಿಸಿ ಅದನ್ನು ಜನರಿಗೆ ಮನದಟ್ಟು ಮಾಡಿಸುವ ನಿಟ್ಟಿನಲ್ಲಿ ರಥಯಾತ್ರೆ ಹೊರಟಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಶಕ್ತಿ ಪ್ರದರ್ಶನ ಮಾಡಿದರು.
ಚನ್ನಪಟ್ಟಣ (ಡಿ.20) : ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪಂಚರತ್ನ ಯೋಜನೆ ರೂಪಿಸಿ ಅದನ್ನು ಜನರಿಗೆ ಮನದಟ್ಟು ಮಾಡಿಸುವ ನಿಟ್ಟಿನಲ್ಲಿ ರಥಯಾತ್ರೆ ಹೊರಟಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಶಕ್ತಿ ಪ್ರದರ್ಶನ ಮಾಡಿದರು.
ಸಂಜೆ ಸುಮಾರು 6.30ರ ವೇಳೆಗೆ ತಾಲೂಕಿಗೆ ಆಗಮಿಸಿದ ಕುಮಾರಸ್ವಾಮಿ (HD Kumaraswamy) ಇತಿಹಾಸ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ರಥಯಾತ್ರೆಗೆ ಚಾಲನೆ ನೀಡಿದರು. ಜೆಡಿಎಸ್ (JDS) ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜತೆಯಲ್ಲಿದ್ದರು.
Mandya: ಡಿ.24ಕ್ಕೆ ಮೇಲುಕೋಟೆಗೆ ಪಂಚರತ್ನ ರಥಯಾತ್ರೆ: ಶಾಸಕ ಸಿ.ಎಸ್.ಪುಟ್ಟರಾಜು
ಅಲ್ಲಿಂದ ಕುಮಾರಸ್ವಾಮಿಯವರನ್ನು ಬೈಕ್ ರಾರಯಲಿಯ ಮೂಲಕ ಕರೆತರಲಾಯಿತು. ನಗರದ ಹನುಮಂತನಗರದ ಬಳಿಯಿಂದ ತೆರದ ವಾಹನದಲ್ಲಿ ನಗರ ಪ್ರವೇಶಿಸಿದ ಮಾಜಿ ಸಿಎಂ ಕುಮಾರಸ್ವಾಮಿಗೆ ಕ್ರೇನ್ ಮೂಲಕ ಬೃಹತ್ ಗುಲಾಬಿ ಹಾರ ಹಾಕಿ ಸ್ವಾಗತಿಸಿದ ಕಾರ‍್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಲ್ಲಿಂದ ನಗರದ ಬಡಾಮಖಾನ್‌ನಲ್ಲಿರುವ ಆಖಿಲ್ ಷಾ ದರ್ಗಾಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಅಲ್ಲಿಂದ ತೆರೆದ ವಾಹನದಲ್ಲಿ ಹೊರಟ ಕುಮಾರಸ್ವಾಮಿಗೆ ನಗರದ ಶೇರ್ವಾ ಸರ್ಕಲ್, ಸಾತನೂರು ಸರ್ಕಲ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸೇರಿದಂತೆ ಹಲವು ಕಡೆ ಅಭಿಮಾನಿಗಳು ಬೃಹತ್ ಹಾರಗಳನ್ನು ಹಾಕಿ ಭವ್ಯ ಸ್ವಾಗತ ಕೋರಿದರು.
ಮೆರವಣಿಗೆಯಲ್ಲಿ ಪಂಚರತ್ನ ಯೋಜನೆಯ ಉದ್ದೇಶ ಸಾರುವ ಟ್ಯಾಬ್ಲೋಗಳು ಸಂಚರಿಸಿದವು. ಟಮಟೆ, ಹುಲುಕುಣಿತದೊಂದಿಗೆ ಕುಮಾರಸ್ವಾಮಿಯನ್ನು ಅದ್ಧೂರಿಯಾಗಿ ಕರೆತರಲಾಯಿತು. ಆರತಿ ಬೆಳಗಿದ ಮಹಿಳೆಯರು ಕುಮಾರಸ್ವಾಮಿ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ಹರಸಿದರು.
10ಕ್ಕೂ ಹೆಚ್ಚು ಬೃಹತ್ ಹಾರ: ಬೊಂಬೆಗಳಿಗೆ ಖ್ಯಾತವಾದ ಬೊಂಬೆನಾಡಿನಲ್ಲಿ ಬೊಂಬೆಗಳಿಂದ ತಯಾರಿಸಿದ ಬೊಂಬೆಗಳ ಹಾರ, ಮೋಸಂಬಿ ಹಾರ, ಕರ್ಬೂಜ, ತುಳಸಿ, ಅನಾನಸ್, ಕಬ್ಬು, ಸೇಬು, ಬೇಬಿ ಕಾರ್ನ್ ಸೇರಿದಂತೆ ವಿವಿಧ ಹಣ್ಣು, ತರಕಾರಿಗಳಿಂದ ತಯಾರಿಸಿದ ಬೃಹತ್ ಹಾರಗಳನ್ನು ಹಾಕುವ ಮೂಲಕ ಭರ್ಜರಿಯಾಗಿ ಸ್ವಾಗತಿಸಲಾಯಿತು. ರಸ್ತೆಯುದ್ದಕ್ಕೂ ಅಲ್ಲಲ್ಲಿ ನಿಂತಿದ್ದ ಜೆಸಿಬಿಗಳ ಮೂಲಕ ಪುಷ್ಟಾರ್ಚನೆ ಮಾಡುವ ಮೂಲಕ ದಳಪತಿಯನ್ನು ಅದ್ಧೂರಿಯಾಗಿ ಕರೆತರಲಾಯಿತು.
ಪಂಚರತ್ನ ರಥಯಾತ್ರೆ ಹಿನ್ನೆಲೆಯಲ್ಲಿ ಬೊಂಬೆನಾಡು ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ನಗರದ ಪ್ರಮುಖ ಭಾಗಗಳಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ಬೃಹತ್ ಕಟೌಟ್‌ಗಳನ್ನು ನಿಲ್ಲಿಸಲಾಗಿತ್ತು. ದೇವೇಗೌಡರು, ಕುಮಾರಸ್ವಾಮಿ, ನಿಖಿಲ್ ಸೇರಿದಂತೆ ಜೆಡಿಎಸ್ ಮುಖಂಡರ ಫ್ಲೆಕ್ಸಗಳು, ಬಂಟಿಂಗ್ಸ್‌ಗಳು ಮತ್ತು ಬ್ಯಾನರ್‌ಗಳು ರಸ್ತೆಗಳಲ್ಲಿ ರಾರಾಜಿಸುತ್ತಿದ್ದವು. ನಗರ ಪ್ರದೇಶ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು.
ರಾಮನಗರ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಶಕ್ತಿ ಪ್ರದರ್ಶನ
ರಥಯಾತ್ರೆ ನಗರ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳು ಹರ್ಷೋದ್ಘಾರ ಮುಗಿಲು ಮುಟ್ಟಿತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಪರ ಜಯಘೋಷ ಮೊಳಗಿಸಿದ ಕಾರ‍್ಯಕರ್ತರು ರಣಕಹಳೆ ಮೊಳಗಿಸಿದರು. ಮುಂದಿನ ಸಿಎಂ ಕುಮಾರಣ್ಣ ಎಂದು ಕೂಗುವ ಮೂಲಕ ತಮ್ಮ ಅಭಿಮಾನ ಪ್ರದರ್ಶಿಸಿದರು.
ಪುರಪೊಲೀಸ್ ಠಾಣೆ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ರಾಷ್ಟ್ರಕವಿ ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಕುಮಾರಸ್ವಾಮಿ ನಂತರ ಕೊಲ್ಲಾಪುರದಮ್ಮನ ದೇವಾಲಯಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿದರು. ಅಲ್ಲಿಂದ ಅಂಚೆ ಕಚೇರಿ ರಸ್ತೆಯಲ್ಲಿರುವ ಸಿಎಸ್‌ಐ ಬೆಥನಿ ಚಚ್‌ರ್‍ಗೆ ತೆರಳಿ ಅಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಸಮಾವೇಶಕ್ಕೆ ಕರೆತರಲಾಯಿತು.
ಎಲ್ಲೆಲ್ಲೂ ಜನಸಾಗರ:
ಪಂಚರತ್ನ ರಥಯಾತ್ರೆಯ ಮೂಲಕ ಜೆಡಿಎಸ್ ಬೊಂಬೆನಾಡಿನಲ್ಲಿ ಶಕ್ತಿ ಪ್ರದರ್ಶನ ನಡೆಸಿತು. ಯಾತ್ರೆಗೆ ಜನಸಾಗರವೇ ಹರಿದುಬಂದಿತ್ತು. ನಗರ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಿಂದ ಜೆಡಿಎಸ್ ಬೆಂಬಲಿಗರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ರಥಯಾತ್ರೆಯ ಜತೆಗೆ ಸಾವಿರಾರು ಜನ ಹೆಜ್ಜೆ ಹಾಕಿದರೆ, ರಸ್ತೆಯ ಎರಡು ಬದಿಯಲ್ಲಿ ನಿಂತಿದ್ದ ಜನ ರಥಯಾತ್ರೆಯನ್ನು ಕಣ್ತುಂಬಿಕೊಂಡರು.
ರಸ್ತೆಯಲ್ಲಿ ರಥಯಾತ್ರೆ ಸಾಗಿದ ಕಡೆಯಲ್ಲೆಲ್ಲಾ ಫೋಟೋ, ಸೆಲ್ಫಿಗಳಿಗೆ ಜನ ಮುಗಿಬಿದ್ದರು. ಕುಮಾರಸ್ವಾಮಿ, ನಿಖಿಲ್‌ಗೆ ಹಸ್ತಲಾಘವ ನೀಡಿ ಖುಷಿಪಟ್ಟರು. ಕುಮಾರಸ್ವಾಮಿ ಹತ್ತಿರ ಸುಳಿಯದಂತೆ ಜನರನ್ನು ತಡೆಯಲು ಜೆಡಿಎಸ್ ಮುಖಂಡರು ಹಾಗೂ ಪೊಲೀಸರು ಹರಸಾಹಸ ಪಡುತ್ತಿರುವ ದೃಶ್ಯ ಸಾಮಾನ್ಯವೆನಿಸಿತು.
ನಗರದ ಸರ್ಕಾರಿ ಬಾಲಕರ ಕಾಲೇಜು ಆವರಣದಲ್ಲಿ ನಡೆದ ಸಮಾವೇಶದಲ್ಲಿ ಜನ ಕಿಕ್ಕರಿದು ತುಂಬಿದ್ದರು. ಅರ್ಜುನ್ ಜನ್ಯ ಮ್ಯೂಸಿಕಲ್ ತಂಡದಿಂದ ರಸಮಂಜರಿ ಕಾರ‍್ಯಕ್ರಮ ಏರ್ಪಡಿಸಲಾಗಿತ್ತು. ಇದರೊಂದಿಗೆ ಕಳೆದ 5 ದಿನಗಳಿಂದ ಜಿಲ್ಲೆಯಲ್ಲಿ ನಡೆದ ಪಂಚರತ್ನ ರಥಯಾತ್ರೆಗೆ ಬೊಂಬೆನಾಡಿನಲ್ಲಿ ತೆರೆಬಿದ್ದಿದ್ದು, ಮಂಗಳವಾರದಿಂದ ಮಂಡ್ಯ ಜಿಲ್ಲೆಯಲ್ಲಿ ಯಾತ್ರೆ ಸಾಗಲಿದೆ.
ಈ ವೇಳೆ ಮಾಜಿ ಶಾಸಕ ಎಂ.ಸಿ. ಅಶ್ವತ್‌್ಥ, ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು, ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್‌ಕಾಮ್ಸ್ ದೇವರಾಜು, ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ಗೋವಿಂದಹಳ್ಳಿ ನಾಗರಾಜು, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಸದಸ್ಯರಾದ ರಫೀಕ್, ಮಹದೇವ, ನಾಗೇಶ್, ಮುಖಂಡರಾದ ಎಂ.ಸಿ.ಕರಿಯಪ್ಪ, ಮಾಗನೂರು ಗಂಗರಾಜು, ಲಾಯರ್ ಹನುಮಂತು, ನಿಸರ್ಗ ಲೋಕೇಶ್ ಇತರರಿದ್ದರು.
ಬಿಜೆಪಿ ಸರ್ಕಾರ ಕಿತ್ತೊಗೆಯುವ ಎಚ್ಡಿಕೆ ಸಂಕಲ್ಪ
ಚನ್ನಪಟ್ಟಣ: ರಾಜ್ಯ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮಿತಿ ಮೀರಿದ್ದು, ಭ್ರಷ್ಟಸರ್ಕಾರವನ್ನು ಕಿತ್ತೊಗೆಯುವ ಸಂಕಲ್ಪದೊಂದಿಗೆ ಹೋರಾಡುತ್ತಿದ್ದು, ಇದಕ್ಕೆ ನಿಮ್ಮೆಲ್ಲರ ಆರ್ಶಿವಾದ ಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.
ಜೆಡಿಎಸ್‌ನ ಪಂಚರತ್ನ ರಥಯಾತ್ರೆಯಲ್ಲಿ ಮಾತನಾಡಿದ ಅವರು, ನಮ್ಮ ನಾಡು ಸರ್ವಜನಾಂಗದ ಶಾಂತಿಯ ತೋಟವಾಗಿದ್ದು, ಸಮುದಾಯಗಳ ನಡುವೆ ಭಾವೈಕೈತೆ ಮೂಡಿಸುವುದು ಅಗತ್ಯ. ಆದರೆ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಸೌಹಾರ್ದಯುತ ವಾತಾವರಣವನ್ನು ಹಾಳುಗೆಡವುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಡಿನ 6.5 ಕೋಟಿ ಒಂದಾಗಿ ಬದಲಾವಣೆ ಬಯಸಿದ್ದಾರೆ. ಬಡವವರು, ಮಧ್ಯಮವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಪಂಚರತ್ನ ಯೋಜನೆಯನ್ನು ರೂಪಿಸಲಾಗಿದೆ. ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಭ್ರಷ್ಟಾಚಾರವನ್ನು ಕಿತ್ತೊಗೆದು ಜನಪರ ಆಡಳಿತ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಂಚರತ್ನ ಯಾತ್ರೆ ಆರಂಭಿಸಿದ ನಂತರ ಇದುವರೆಗೆ ಸುಮಾರು 22 ಕಡೆ ಯಾತ್ರೆ ಸಾಗಿದ್ದು, ಎಲ್ಲೆಡೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಆದರೆ, ಇಂದು ನನ್ನ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಎಲ್ಲೆಡೆಗಿಂದ ಅಭೂರ್ತಪೂರ್ವ ಸ್ವಾಗತ ದೊರಕಿದೆ. ಕ್ಷೇತ್ರ ಜನರ ಈ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋುಣಿಯಾಗಿದ್ದು, ನಿಮ್ಮೆಲ್ಲರ ಋುಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಪಂಚರತ್ನ ಯಾತ್ರೆಗೆ ಅಭೂತಪೂರ್ವ ಸ್ಪಂದನೆ: ನಿಖಿಲ್
ಚನ್ನಪಟ್ಟಣ: ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಸತತ 23ದಿನಗಳಿಂದ ಮಾಜಿ ಸಿಎಂ ಕುಮಾರಸ್ವಾಮಿ ಪಂಚರತ್ನ ಯಾತ್ರೆ ನಡೆಸುತ್ತಿದ್ದು, ಹೋದಲ್ಲೆಲ್ಲಾ ಅಭೂರ್ತಪೂರ್ವ ಸ್ವಾಗತ ದೊರಕುತ್ತಿದ್ದು, ಇದನ್ನು ನೋಡಿದರೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಏರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬ ಭರವಸೆ ವ್ಯಕ್ತವಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಪಂಚರತ್ನ ರಥಯಾತ್ರೆಯಲ್ಲಿ ಮಾತನಾಡಿದ ಅವರು, ರಥಯಾತ್ರೆ ಸಾಗಿದ ಕಡೆಯಲ್ಲೆಲ್ಲಾ ಜನ ಪ್ರೀತಿಯಿಂದ ಕುಮಾರಣ್ಣನವರನ್ನು ಸ್ವಾಗತಿಸುತ್ತಿದ್ದಾರೆ. ರಾಜ್ಯದೆಲ್ಲೆಡೆ ಜೆಡಿಎಸ್ ಪರ ಅಲೆ ಎದ್ದಿದ್ದು, ಜನಾಶೀರ್ವದಿಸುವ ವಿಶ್ವಾಸವಿದೆ. ಪಂಚರತ್ನ ರಥಯಾತ್ರೆ ಸಾಗಿದ ಕಡೆಯಲ್ಲೆಲ್ಲಾ ಜನ ರಾತ್ರಿ ಒಂದು-ಎರಡು ಗಂಟೆಯಾದರೂ ಕಾದು ಕುಳಿತು ಕುಮಾರಣ್ಣನವರನ್ನು ಸ್ವಾಗತಿಸಿದ್ದಾರೆ. ಜನರ ಈ ಪ್ರೀತಿ ವಿಶ್ವಾಸವೇ ಕಂಡು ನಾನು ನಿಬ್ಬೆರಗಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಹೀಗೆ ಇರಲಿ ಎಂದು ಮನವಿ ಮಾಡಿದರು.