Tumakur : ನೀರಿನ ಲಭ್ಯತೆಗೆ ಪ್ರಥಮಾದ್ಯತೆ ನೀಡಬೇಕು

By Kannadaprabha NewsFirst Published Dec 20, 2022, 6:01 AM IST
Highlights

ಗೋಹತ್ಯೆ ನಿಷೇಧ ಕಾಯ್ದೆ-2020 ಸೆಕ್ಷನ್‌ 8ರ ಪ್ರಕಾರ ಕಾನೂನು ಬಾಹಿರ ಕಸಾಯಿಖಾನೆಗಳನ್ನು ಸಬ್‌ ಇನ್ಸ್‌ಪೆಕ್ಟರ್‌ ದರ್ಜೆಗಿಂತ ಕಡಿಮೆ ಇಲ್ಲದ ಪೊಲೀಸ್‌ ಅಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರಿಯು ಜಪ್ತಿ ಮಾಡುವ ಅಧಿಕಾರ ಹೊಂದಿದ್ದು, ಜಪ್ತಿ ಮಾಡಿದ ನಂತರ ಮುಟ್ಟುಗೋಲಿಗಾಗಿ ಆಯಾ ಉಪವಿಭಾಗೀಯ ದಂಡಾಧಿಕಾರಿಗಳ ಮುಂದೆ ವರದಿ ಮಾಡತಕ್ಕದ್ದು ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಅವರು ಸೂಚಿಸಿದರು.

  ತುಮ​ಕೂರು (ಡಿ.20): ಗೋಹತ್ಯೆ ನಿಷೇಧ ಕಾಯ್ದೆ-2020 ಸೆಕ್ಷನ್‌ 8ರ ಪ್ರಕಾರ ಕಾನೂನು ಬಾಹಿರ ಕಸಾಯಿಖಾನೆಗಳನ್ನು ಸಬ್‌ ಇನ್ಸ್‌ಪೆಕ್ಟರ್‌ ದರ್ಜೆಗಿಂತ ಕಡಿಮೆ ಇಲ್ಲದ ಪೊಲೀಸ್‌ ಅಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರಿಯು ಜಪ್ತಿ ಮಾಡುವ ಅಧಿಕಾರ ಹೊಂದಿದ್ದು, ಜಪ್ತಿ ಮಾಡಿದ ನಂತರ ಮುಟ್ಟುಗೋಲಿಗಾಗಿ ಆಯಾ ಉಪವಿಭಾಗೀಯ ದಂಡಾಧಿಕಾರಿಗಳ ಮುಂದೆ ವರದಿ ಮಾಡತಕ್ಕದ್ದು ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಅವರು ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಪ್ತಿ ದಾಖಲೆಗಳ ವರದಿಯನ್ನು ಸ್ವೀಕರಿಸಿದ ನಂತರ ಉಪವಿಭಾಗೀಯ ದಂಡಾಧಿಕಾರಿಗಳು ಜಾನುವಾರು ಹತ್ಯೆ ಅಪರಾಧವನ್ನು ಜಾನುವಾರು ಹತ್ಯೆ ನಿಷೇಧ ಅಧಿನಿಯಮದಡಿಯಲ್ಲಿ ಎಸಗಲಾಗಿದೆ ಅಥವಾ ಎಸಗಬೇಕೆಂದು ಉದ್ದೇಶಿಸಲಾಗಿತ್ತು ಎಂಬುದನ್ನು ಸ್ವತಃ ಮನವರಿಕೆ ಮಾಡಿಕೊಂಡು ಅಂತಹ ಅಪರಾಧಕ್ಕೆ ಅಭಿಯೋಜನೆ ಹೂಡಬೇಕೆ ಅಥವಾ ಅದನ್ನು ಮುಟ್ಟುಗೋಲು ಹಾಕಿಕೊಂಡು ಅಂತಹ ಆದೇಶವನ್ನು ಹೊರಡಿಸಬೇಕೆ ಎಂಬುದನ್ನು ನಿರ್ಧರಿಸತಕ್ಕದ್ದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬೆಸ್ಕಾಂ-ಗ್ರಾಪಂ ಚೆಲ್ಲಾಟ: ಸಾರ್ವಜನಿಕರ ಆರೋಗ್ಯಕ್ಕೆ ಕುತ್ತು

ಲಿಂಗ ನಿರ್ಧಾರಿತ ವೀರ್ಯ ನಳಿಕೆಗಳನ್ನು ಸಹಾಯಧನದೊಂದಿಗೆ ಪಶುಪಾಲನಾ ಇಲಾಖೆಯು ರೈತರಿಗೆ ಸರಬರಾಜು ಮಾಡುತ್ತಿದ್ದು, ಈ ವೀರ್ಯ ನಳಿಕೆಗಳನ್ನು ಪಡೆಯುವ ಮೂಲಕ ರೈತರು ತಮ್ಮ ಹೆಣ್ಣು ರಾಸುಗಳಿಗೆ ಕೃತಕ ಗರ್ಭಧಾರಣೆ ಮಾಡಿಸಬಹುದಾಗಿದ್ದು, ಈ ಕುರಿತು ವ್ಯಾಪಕ ಪ್ರಚಾರ ಮಾಡುವಂತೆ ಸೂಚಿಸಿದರು.

2022-23ನೇ ಸಾಲಿನ ಆಯ-ವ್ಯಯದಲ್ಲಿ ಘೋಷಿಸಿರುವಂತೆ ತುಮಕೂರು ಜಿಲ್ಲೆಗೆ 4 ಸರ್ಕಾರಿ ಗೋಶಾಲೆಗಳು ಮಂಜೂರಾಗಿದ್ದು, ಈಗಾಗಲೇ ಶಿರಾ ತಾಲೂಕಿನಲ್ಲಿ ಸರ್ಕಾರಿ ಗೋಶಾಲೆ ನಿರ್ಮಿಸಲಾಗಿದೆ. ಉಳಿದಂತೆ ಚಿಕ್ಕನಾಯಕನಹಳ್ಳಿ, ತುರುವೇಕೆರೆ ಮತ್ತು ಪಾವಗಡದ ಅಮೃತ್‌ ಮಹಲ್‌ ಕಾವಲ್‌ನಲ್ಲಿ ಗೋಶಾಲೆ ನಿರ್ಮಿಸಬೇಕಿದ್ದು, ಗೋಶಾಲೆ ನಿರ್ಮಿಸುವ ಮುನ್ನ ಅಕ್ಕಪಕ್ಕದಲ್ಲಿ ಕೆರೆ-ಕಟ್ಟೆಮೂಲಕ ಜಾನುವಾರುಗಳಿಗೆ ನೀರು ಲಭ್ಯವಾಗುತ್ತದೆಯೇ ಅಥವಾ ಕೊಳವೆ ಬಾವಿಯಿಂದ ನೀರು ದೊರೆಯಬಹುದೇ, ವಿದ್ಯುತ್‌ ವ್ಯವಸ್ಥೆ ಸರಿಯಾಗಿ ಮಾಡಬಹುದೆ ಮುಂತಾದವುಗಳನ್ನು ಪರಿಶೀಲಿಸಿ ಗೋಶಾಲೆ ನಿರ್ಮಾಣ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಪಶುಪಾಲನಾ ಉಪನಿರ್ದೇಶಕರಿಗೆ ಸೂಚಿಸಿದರು.

15 ರೂ ನೀರು ಬಾಟಲಿಗೆ 20 ರೂ ವಸೂಲಿ: IRTC ಗುತ್ತಿಗೆದಾರನಿಗೆ 1 ಲಕ್ಷ ದಂಡ

ಗೋಮಾಳಗಳ ಗಡಿಗಳನ್ನು ಗುರುತಿಸಿ ಅಳತೆ ಮಾಡಿಸುವ ಕುರಿತು ಚರ್ಚಿಸಿದ ಜಿಲ್ಲಾಧಿಕಾರಿಗಳು, ಆಯ್ದ ಗೋಮಾಳಗಳ ಗಡಿಗಳಲ್ಲಿ ನರೇಗಾ ಯೋಜನೆಯ ಮುಖಾಂತರ ಬೇಲಿ ಹಾಕಿಸುವ ಅಥವಾ ಬಾರ್ಡರ್‌ ಪ್ಲಾಂಟೇಷನ್‌ ಮಾಡಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.

ಜಿಲ್ಲೆಯ ಪ್ರತಿ ಗ್ರಾ.ಪಂಗೆ ಇಬ್ಬರಂತೆ ಪ್ರಾಣಿ ಸ್ವಯಂ ಸೇವಕರು ಮತ್ತು ಪ್ರಾಣಿ ರಕ್ಷಕರನ್ನು ನೇಮಿಸಬೇಕು. ಆ್ಯಂಟಿ ಕೃಯಾಲಿಟಿ ಇನ್ಸ್‌ಪೆಕ್ಟರ್‌ಗಳನ್ನು 6 ತಿಂಗಳ ಅವಧಿಗೆ ನೇಮಿಸಿ ಅವರಿಗೆ ಗುರುತಿನ ಚೀಟಿ ನೀಡಬೇಕು ಮತ್ತು ಸಾಧ್ಯವಾದಷ್ಟುಪ್ರಾಣಿದಯಾ ಸಂಘದಲ್ಲಿರುವ ಸದಸ್ಯರನ್ನು ಮತ್ತು ಸ್ವಯಂ ಸದಸ್ಯರನ್ನು ಈ ತಂಡಕ್ಕೆ ನೇಮಿಸಿಕೊಳ್ಳುವಂತೆ ಸೂಚಿಸಿದರು.

ರಕ್ಷಿಸಲ್ಪಟ್ಟಂತಹ ಜಾನುವಾರುಗಳನ್ನು ಗೋಶಾಲೆಗಳಿಗೆ ಸಾಗಿಸಲು ತುರ್ತಾಗಿ ಜಿಲ್ಲೆಗೆ 4 ವಾಹನಗಳ ಅವಶ್ಯಕತೆ ಇದ್ದು, ಈ ಕುರಿತು ಸರ್ಕಾರಕ್ಕೆ ಶೀಘ್ರ ಪ್ರಸ್ತಾವನೆ ಕಳುಹಿಸುವಂತೆ ಪಶುಸಂಗೋಪನಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿರುವ ಪ್ರಾಣಿದಯಾ ಸಂಘಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಒಂದು ವ್ಯವಸ್ಥಿತ ಸಂಪರ್ಕ ಜಾಲವನ್ನು ರಚಿಸಿ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಜಾನುವಾರು ಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕೆಂದು ಅವರು ಕರೆ ನೀಡಿದರು.

ಸಭೆಯಲ್ಲಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ನಾಮನಿರ್ದೇಶಿತ ಸದಸ್ಯ ಪಾರಸ್‌ ಜೈನ್‌, ಜಿಲ್ಲಾ ಪ್ರಾಣಿ ದಯಾ ಸಂಘದ ಸದಸ್ಯ ಸುಜಾತ ರಾಘವೇಂದ್ರ, ನಿವೃತ್ತ ಸಹಾಯಕ ನಿರ್ದೇಶಕ ಡಾ.ಚಂದ್ರಶೇಖರ್‌, ಜಾನ್‌ ಕ್ಯಾಲ್‌ವಿನ್‌, ಮಹಾನಂದಿ ಗೋಶಾಲೆ ಟ್ರಸ್ಟ್‌ನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

click me!