ಕಾರ್ಕಳ: ಮಲ್ಲಿಗೆ ಧಾರಣೆ ಕುಸಿತ: ಬೆಳೆಗಾರರು ಕಂಗಾಲು

By Kannadaprabha News  |  First Published Jun 1, 2023, 9:02 AM IST

ಸತತ ಏರಿಕೆ ಕಂಡಿದ್ದ ಮಲ್ಲಿಗೆ ಧಾರಣೆ ಕರಾವಳಿಯಲ್ಲಿ ದಿಢೀರ್‌ ಕುಸಿತ ಕಂಡಿದ್ದು ಮಲ್ಲಿಗೆ ಬೆಳೆಗಾರರನ್ನು ಕಂಗಾಲಾಗಿಸಿದೆ. ಭಾನುವಾರ ಶಂಕರಪುರ ಮಲ್ಲಿಗೆ ಒಂದು ಅಟ್ಟೆಗೆ ರು. 630 ನಿಗದಿಯಾಗಿತ್ತು ಸೋಮವಾರ ಹಾಗು ಮಂಗಳವಾರ ಧಾರಣೆ ಕುಸಿದಿದ್ದು 180 ರು.ಗಳಿಗೆ ಕುಸಿದಿದೆ.


ರಾಂ ಅಜೆಕಾರು

ಕಾರ್ಕಳ (ಜೂ.1) ಸತತ ಏರಿಕೆ ಕಂಡಿದ್ದ ಮಲ್ಲಿಗೆ ಧಾರಣೆ ಕರಾವಳಿಯಲ್ಲಿ ದಿಢೀರ್‌ ಕುಸಿತ ಕಂಡಿದ್ದು ಮಲ್ಲಿಗೆ ಬೆಳೆಗಾರರನ್ನು ಕಂಗಾಲಾಗಿಸಿದೆ. ಭಾನುವಾರ ಶಂಕರಪುರ ಮಲ್ಲಿಗೆ ಒಂದು ಅಟ್ಟೆಗೆ ರು. 630 ನಿಗದಿಯಾಗಿತ್ತು ಸೋಮವಾರ ಹಾಗು ಮಂಗಳವಾರ ಧಾರಣೆ ಕುಸಿದಿದ್ದು 180 ರು.ಗಳಿಗೆ ಕುಸಿದಿದೆ.

Latest Videos

undefined

ಸಮಾರಂಭಗಳಿಲ್ಲ:

ಕಾರ್ಕಳ ಸೇರಿದಂತೆ ಕರಾವಳಿಯಲ್ಲಿ ಮೇ 27ರ ತನಕ ಮದುವೆ, ಮುಂಜಿ, ಕೋಲ, ಜಾತ್ರೋತ್ಸವ, ಯಕ್ಷಗಾನ ಸೇರಿದಂತೆ ವಿವಿಧ ಸಮಾರಂಭಗಳು ನಿರಂತರವಾಗಿ ನಡೆಯುತಿದ್ದವು. ಆದ್ದರಿಂದ ಮಲ್ಲಿಗೆ ಹೂಗಳಿಗೆ ಭಾರಿ ಬೇಡಿಕೆ ಬರುತ್ತಿತ್ತು. ಪತ್ತನಾಜೆ ಬಳಿಕ ಉತ್ಸವಾದಿಗಳಿಗೆ ತೆರೆ ಬೀಳುತ್ತದೆ. ಮಳೆಗಾಲದಲ್ಲಿ ಮದುವೆ ಮತ್ತಿತರ ಶುಭ ಸಮಾರಂಭಗಳ ಸಂಖ್ಯೆಯೂ ಇಳಿಮುಖವಾಗುತ್ತದೆ. ಅದರಂತೆ, ಸೋಮವಾರದ ಬಳಿಕ ನಿರೀಕ್ಷಿತ ಮಟ್ಟದಲ್ಲಿ ಸಮಾರಂಭಗಳಿಲ್ಲ. ಇದು ಮಲ್ಲಿಗೆ ಬೆಲೆ ಕುಸಿತಕ್ಕೆ ಮುಖ್ಯ ಕಾರಣವಾಗಿದೆ.

ಕೊಡಗಿನ ಎಲ್ಲೆಡೆ ಅರಳಿ ಪ್ರವಾಸಿಗರ ಕಣ್ಮನ ಕೋರೈಸುತ್ತಿದೆ ಕಾಡು ಮಲ್ಲಿಗೆ!

ಇಳುವರಿಯೂ ಹೆಚ್ಚು:

ಕಳೆದ ಎರಡು ದಿನಗಳಲ್ಲಿ ಈ ಭಾಗದಲ್ಲಿ ಮಲ್ಲಿಗೆ ಹೂವಿನ ಇಳುವರಿ ಹೆಚ್ಚಿದ್ದು ಬೇಡಿಕೆ ಕುಸಿತದಿಂದ ಧಾರಣೆಯೂ ಬಿದ್ದಿದೆ ಎನ್ನುತ್ತಿದ್ದಾರೆ ಬೆಳೆಗಾರರು.

ಈ ವರ್ಷದ ಮಾಚ್‌ರ್‍ ತಿಂಗಳಲ್ಲಿ ಶಂಕರಪುರ ಮಲ್ಲಿಗೆಗೆ ಗರಿಷ್ಠ ಅಟ್ಟೆಗೆ ರು.1600 ಬೆಲೆ ದೊರಕಿತ್ತು. ಕಳೆದ ವರ್ಷ, 2022ರಲ್ಲಿ ಗರಿಷ್ಠ 2100 ರು. ತನಕ ಅಟ್ಟೆಗೆ ಧಾರಣೆ ಇತ್ತು ಎಂದು ವ್ಯಾಪಾರಿಗಳು ನೆನಪಿಸಿಕೊಳ್ಳುತ್ತಾರೆ.

ಬೆಳೆಗಾರರಿಗೆ ನಷ್ಟ: ಮಲ್ಲಿಗೆ ಬೆಳೆಗಾರರಿಗೆ ನಡು ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು ಆಗ ಹೂವಿನ ಇಳುವರಿ ಕುಸಿತವಾಗಿತ್ತು ಧಾರಣೆ ಕಳೆದ ಒಂದು ತಿಂಗಳಿನಿಂದ ಹೆಚ್ಚಿದ್ದರೂ, ಇಳುವರಿ ಕಡಿಮೆಯಾದ ಹಿನ್ನೆಲೆಯಲ್ಲಿ ಪೂರೈಕೆ ವ್ಯತ್ಯಯವಾಗಿತ್ತು.

ಆದರೆ ಈಗ ಕೆಲವೆಡೆ ಮುಂಗಾರು ಪೂರ್ವ ಮಳೆ ಸುರಿದಿದೆ. ಮಳೆ ಸುರಿದ ಪ್ರದೇಶಗಳಾದ ಪಳ್ಳಿ, ಬೆಳ್ಮಣ್‌, ಅಜೆಕಾರು, ದೊಂಡೆರಂಗಡಿ ,ಎಳ್ಳಾರೆ, ಎಣ್ಣೆಹೊಳೆ, ಇನ್ನಾ, ನಂದಳಿಕೆ, ಮಟ್ಟಾರಿನಲ್ಲಿ ಹೂವಿನ ಪೂರೈಕೆ ಹೆಚ್ಚಾಗಿದ್ದರೂ ಬೆಲೆಯಿಲ್ಲದಂತಾಗಿದೆ.

ಇತರ ಹೂಗಳ ಧಾರಣೆ ಸ್ಥಿರ:

ಹೂವಿನ ಅಂಗಡಿಗಳಲ್ಲಿ ಸೇವಂತಿಗೆ ಹಾಗೂ ಕಾಕಡ ಹೂಗಳು ಮೊಳಕ್ಕೆ ರು.40, ಒಂದು ಮಾರು ಮಾಲೆಗೆ 130 ರು. ಧಾರಣೆ ಇದೆ. ಭಟ್ಕಳ ಮಲ್ಲಿಗೆ ಅಟ್ಟೆಗೆ 200 ರು. ದರ ಇದೆ. ಕಾಕಡ ಹಾಗೂ ಸೇವಂತಿಗೆ ಹೂಗಳಿಗೆ ಧಾರಣೆ ಏರಿಕೆಯಾಗಿದ್ದು ಸ್ಥಿರವಾಗಿಯೆ ಇದೆ. ಆದರೆ ಸ್ಥಳೀಯವಾಗಿ ಬೆಳೆಯುವ ಶಂಕರಪುರ ಮಲ್ಲಿಗೆ ಹೂವಿನ ಧಾರಣೆ ಮಾತ್ರ ಇಳಿಮುಖವಾಗಿದೆ.

ರೇಷ್ಮೆ ಬೆಲೆ ಕುಸಿತ: ಸಂಕಷ್ಟದಲ್ಲಿ ಬೆಳೆಗಾರರು

ಮಕ್ಕಳಿಗೆ ಶಾಲಾ ಕಾಲೇಜುಗಳು ಆರಂಭವಾಗಿದ್ದು, ಸಮಾರಂಭಗಳೂ ಕಡಿಮೆಯಾದವು. ಈಗ ಮಲ್ಲಿಗೆ ಹೂವಿನ ಇಳುವರಿ ಹೆಚ್ಚಿ, ಪೂರೈಕೆ ಹೆಚ್ಚಾಗಿದೆ. ಆದರೆ ಧಾರಣೆ ಕಡಿಮೆಯಾಗಿದೆ. ಇದರಿಂದ ಬೆಳೆಗಾರರಿಗೆ ನಷ್ಟವಾಗುತ್ತದೆ. ಕೆಲವು ದಿನಗಳಲ್ಲಿ ಮತ್ತೆ ಮಲ್ಲಿಗೆ ಧಾರಣೆ ಚೇತರಿಸಬಹುದು.

-ಸಂಧ್ಯಾ, ಮಲ್ಲಿಗೆ ಹೂವಿನ ಬೆಳೆಗಾರರು ಬೆಳ್ಮಣ್‌.

ಮಲ್ಲಿಗೆ ಸಮಾರಂಭಗಳ ಸೀಸನ್‌ನಲ್ಲಿ ಈ ವರ್ಷ ಗರಿಷ್ಠ ಅಟ್ಟೆಗೆ 1600 ರು.ಗಳಿಗೆ ಮಾರಾಟವಾಗಿದೆ. ಕಳೆದ ವರ್ಷ ಗರಿಷ್ಠ 2100 ರು. ತನಕ ಧಾರಣೆ ಏರಿಕೆ ಕಂಡಿತ್ತು. ಮುಂದೆ ಮಳೆ ಆರಂಭವಾದಾಗ ಮಲ್ಲಿಗೆಯ ಇಳುವರಿ ಕುಸಿತವಾಗುತ್ತದೆ. ಆಗ, ಸಹಜವಾಗಿ ಧಾರಣೆ ಹೆಚ್ಚಾಗುವ ನಿರೀಕ್ಷೆ ಇದೆ.

-ರಾಜೇಶ್‌, ಹೂವಿನ ವ್ಯಾಪಾರಿ ಕಾರ್ಕಳ.

click me!