ಕರಾವಳಿ ಜಿಲ್ಲೆಯಲ್ಲಿ ಸರ್ಕಾರಿ ಬಸ್‌ಗಳ ಜತೆಗೆ ಖಾಸಗಿ ಬಸ್‌ಗಳೂ ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆಸುತ್ತಿದ್ದು, ಈ ಯೋಜನೆ ಅನುಷ್ಠಾನಕ್ಕೆ ಬಂದಾಗ ಖಾಸಗಿ ಬಸ್‌ಗಳ ಆದಾಯಕ್ಕೆ ಕತ್ತರಿ ಬೀಳುವ ಆತಂಕ ಎದುರಾಗಿದೆ.
ಮಂಗಳೂರು(ಜೂ.01): ರಾಜ್ಯ ಸರ್ಕಾರ ಜಾರಿಗೆ ತರಲುದ್ದೇಶಿಸಿರುವ ಮಹಿಳೆಯರಿಗೆ ಉಚಿತ ಬಸ್ ಸಂಚಾರ ಯೋಜನೆ ಕಾರ್ಯಗತಗೊಂಡರೆ ಇದರ ಮೊದಲ ಏಟು ಕರಾವಳಿ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಮೇಲೆ ಆಗಲಿದೆ. ಕರಾವಳಿ ಜಿಲ್ಲೆಯಲ್ಲಿ ಸರ್ಕಾರಿ ಬಸ್‌ಗಳ ಜತೆಗೆ ಖಾಸಗಿ ಬಸ್‌ಗಳೂ ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆಸುತ್ತಿದ್ದು, ಈ ಯೋಜನೆ ಅನುಷ್ಠಾನಕ್ಕೆ ಬಂದಾಗ ಖಾಸಗಿ ಬಸ್‌ಗಳ ಆದಾಯಕ್ಕೆ ಕತ್ತರಿ ಬೀಳುವ ಆತಂಕ ಎದುರಾಗಿದೆ. ಹೀಗಾಗಿ ಡೀಸೆಲ್ ಸಬ್ಸಿಡಿ ಮೊದಲಾದ ಪರಿಹಾರ ಕ್ರಮಕ್ಕೆ ಮುಖ್ಯಮಂತ್ರಿ ಮೊರೆ ಹೋಗಲು ದ.ಕ.ಜಿಲ್ಲಾ ಸಿಟಿ ಬಸ್ ಮಾಲೀಕರ ಸಂಘ ನಿರ್ಧರಿಸಿದೆ.
ದ.ಕ.ಜಿಲ್ಲಾ ಕೇಂದ್ರ ಮಂಗಳೂರಿನಲ್ಲಿ 328 ಖಾಸಗಿ ಬಸ್‌ಗಳು ನಗರ ಹಾಗೂ ಗ್ರಾಮಾಂತರದಲ್ಲಿ ಸಂಚರಿಸುತ್ತಿವೆ. 68 ಕಾಂಟ್ರಾಕ್ಟ್ ಕ್ಯಾರೇಜ್ ಹಾಗೂ 400 ನಂಬರು ರಹಿತ ಗ್ರಾಮಾಂತರ ಬಸ್‌ಗಳಿವೆ. ಇಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಪೈಪೋಟಿಯಾಗಿ ಖಾಸಗಿ ಬಸ್‌ಗಳು ಓಡಾಟ ನಡೆಸುತ್ತಿವೆ. ಸರ್ಕಾರಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣ ಯೋಜನೆ ಜಾರಿಯಾದರೆ, ಖಾಸಗಿ ಬಸ್‌ಗಳು ಮಹಿಳೆಯರಿಲ್ಲದೆ ಸಂಚರಿಸಬೇಕಾಗುತ್ತದೆ.
ಪ್ರಸಕ್ತ ಒಂದು ಸಾವಿರಕ್ಕೂ ಅಧಿಕ ಖಾಸಗಿ ಸಿಟಿ ಬಸ್‌ಗಳು ಸಂಚರಿಸುತ್ತಿವೆ. ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಜಾರಿಯಾದರೆ ಮಹಿಳೆಯರೆಲ್ಲರೂ ಸರ್ಕಾರಿ ಬಸ್ ಅನ್ನು ಅವಲಂಬಿಸುತ್ತಾರೆ. ಈ ಬಗ್ಗೆ ಈಗಾಗಲೇ ಕಾರ್ಕಳ ಶಾಸಕ ಸುನಿಲ್ ಕುಮಾರ್ ಟ್ವೀಟ್ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.
ಕರಾವಳಿಯ ಖಾಸಗಿ ಬಸ್‌ಗಳಲ್ಲೂ ಉಚಿತ ‘ಗ್ಯಾರಂಟಿ’ಗೆ ಸುನಿಲ್ ಆಗ್ರಹ
ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಯೋಜನೆ ಜಾರಿಯಿಂದ ಖಾಸಗಿ ಬಸ್‌ಗಳ ಆದಾಯಕ್ಕೆ ಹೊಡೆತ ಖಂಡಿತ. ಇದಕ್ಕಾಗಿ ಖಾಸಗಿ ಬಸ್‌ಗಳಿಗೆ ರಿಯಾಯ್ತಿ ಡೀಸೆಲ್ ಮುಂತಾದ ಪರಿಹಾರ ಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಅಂತ ದ.ಕ.ಜಿಲ್ಲಾ ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ ತಿಳಿಸಿದ್ದಾರೆ.