ಬೇಸಿಗೆ ರಜೆ ಮೂಡ್‌ನಲ್ಲಿದ್ದ ಮಕ್ಕಳು ಶಾಲೆಗಳತ್ತ

By Kannadaprabha NewsFirst Published Jun 1, 2023, 6:04 AM IST
Highlights

ಕಳೆದ ಎರಡು ತಿಂಗಳಿನಿಂದಲೂ ಬೇಸಿಗೆ ರಜೆಯಿದ್ದ ಕಾರಣ ಶಾಲೆ, ಟೀಚರ್‌, ಪಾಠ, ಹೋಂವರ್ಕ್ಗಳಿಂದ ದೂರ ಉಳಿದು ಬರೀ ಆಟ, ಮೋಜು, ಮಸ್ತಿಯಿಂದ ಕಾಲ ಕಳೆಯುತ್ತಿದ್ದ ಮಕ್ಕಳು ಬುಧವಾರದಿಂದ ಆರಂಭವಾಗಿರುವ ಶಾಲೆಗಳತ್ತ ಮುಖ ಮಾಡಿದ್ದಾರೆ.

  ತಿಪಟೂರು :  ಕಳೆದ ಎರಡು ತಿಂಗಳಿನಿಂದಲೂ ಬೇಸಿಗೆ ರಜೆಯಿದ್ದ ಕಾರಣ ಶಾಲೆ, ಟೀಚರ್‌, ಪಾಠ, ಹೋಂವರ್ಕ್ಗಳಿಂದ ದೂರ ಉಳಿದು ಬರೀ ಆಟ, ಮೋಜು, ಮಸ್ತಿಯಿಂದ ಕಾಲ ಕಳೆಯುತ್ತಿದ್ದ ಮಕ್ಕಳು ಬುಧವಾರದಿಂದ ಆರಂಭವಾಗಿರುವ ಶಾಲೆಗಳತ್ತ ಮುಖ ಮಾಡಿದ್ದಾರೆ.

ಬುಧವಾರದಿಂದ 1ರಿಂದ 10ನೇ ತರಗತಿಗೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಪ್ರಾರಂಭವಾಗಿದ್ದು, ಬೇಸಿಗೆ ರಜೆಯಲ್ಲಿ ನೆಂಟರಿಷ್ಟರು, ಬಂಧು ಬಳಗ, ಅಜ್ಜಿಯ ಮನೆ, ಸ್ನೇಹಿತರ ಮನೆ ಎಂದು ತಿರುಗಾಡಿಕೊಂಡು ಕಾಲ ಕಳೆಯುತ್ತಿದ್ದ ಮಕ್ಕಳಿಗೆ ಈಗ ಶಾಲೆ ಪ್ರಾರಂಭವಾಗಿದೆ. ಶಾಲೆಗೆ ಖುಷಿಯಿಂದ ಬರುವ ಮಕ್ಕಳು ಒಂದು ಕಡೆಯಾದರೆ ಕೆಲ ಮಕ್ಕಳು ಯಾಕಾದರೂ ಇಷ್ಟುಬೇಗ ಶಾಲೆ ಪ್ರಾರಂಭವಾಗಿದೆಯೋ ಇನ್ನಷ್ಟುದಿನ ಮುಂದಕ್ಕೆ ಹೋಗಬಾರದಾಗಿತ್ತೆ ಎಂದು ಶಾಲೆಯತ್ತ ಸಪ್ಪೆ ಮೊರೆ ಹಾಕಿಕೊಂಡು ಬ್ಯಾಗನ್ನು ಹೆಗಲಿಗೇರಿಸಿಕೊಂಡು ಬರುತ್ತಿದ್ದ ದೃಶ್ಯಗಳು ಕಂಡು ಬಂದವು.

ಶಾಲೆ ಪ್ರಾರಂಭವಾಗುತ್ತಿದ್ದಂತೆ ತಂದೆ-ತಾಯಿಗಳು ತಮ್ಮ ಮಕ್ಕಳಿಗೆ ಪಠ್ಯಪುಸ್ತಕ, ನೋಟ್‌ಬುಕ್‌, ಸ್ಕೂಲ್‌ ಬ್ಯಾಗ್‌, ಚಪ್ಪಲಿ, ಶೂ ಹೀಗೆ ಎಲ್ಲವನ್ನೂ ಹೊಸದಾಗಿ ಕೊಡಿಸಬೇಕು. ಹೀಗೆಂತಲೇ ಎಷ್ಟೋ ತಂದೆ-ತಾಯಿಗಳು ಮಕ್ಕಳ ಓದಿಗಾಗಿ ಮುಂಗಡವಾಗಿ ಹಣ ಹೊಂದಿಸಿಟ್ಟು ಎಲ್ಲವನ್ನೂ ಕೊಡಿಸಿ ತಮ್ಮ ಜವಾಬ್ದಾರಿಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಇಷ್ಟುದಿನ ಮಕ್ಕಳಿಗೆ ಯಾವುದೇ ಹೋಂ ವರ್ಕ್ ಇಲ್ಲದ ಕಾರಣ ಅವರು ಆಡಿದ್ದೇ ಆಟವಾಗಿತ್ತು. ಆದರೆ ಈಗ ಶಾಲೆ ಪ್ರಾರಂಭವಾಗಿದ್ದು ಪೋಷಕರು ಮನೆಗೆಲಸದ ಜೊತೆಗೆ ಹೋಂ ವರ್ಕ್ ಮಾಡಿಸುವ ಹೊಣೆಯನ್ನೂ ಹೊರಬೇಕಿದೆ.

ಶೃಂಗಾರಗೊಂಡ ಶಾಲೆಗಳು: ಶಾಲೆ ಪ್ರಾರಂಭವಾದ ಮೊದಲ ದಿನವಾದ ಕಾರಣ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳನ್ನು ಮಾವಿನಸೊಪ್ಪು, ಹೂಗಳಿಂದ ತಳಿರು ತೋರಣ ಕಟ್ಟಿಶೃಂಗಾರ ಮಾಡಲಾಗಿತ್ತು. ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತ ಮಾಡಿ ಸಿಹಿ ಔತಣ ನೀಡಲಾಯಿತು. ಅಜ್ಜಿ, ತಾತನ ಮನೆಯಲ್ಲಿರುವ ಮಕ್ಕಳಿಗೆ ಶಾಲೆ ಪ್ರಾರಂಭವಾಗಿದೆ. ತಮ್ಮ ಮಗುವನ್ನು ಶಾಲೆಗೆ ಕಳುಹಿಸಬೇಕೆಂದು ಪೋಷಕರಿಗೆ ಅರಿವು ಮೂಡಿಸಲು ಈ ರೀತಿ ಭವ್ಯ ಸ್ವಾಗತ ನೀಡಲಾಗುತ್ತಿದೆ ಎನ್ನುತ್ತಾರೆ ನೊಣವಿನಕೆರೆ ಕರ್ನಾಟಕ ಪಬ್ಲಿಕ್‌ ಶಾಲೆಯ ವಿಜ್ಞಾನ ಶಿಕ್ಷಕ ಜಗದೀಶ್‌. ಮೊದಲ ದಿನ ಮಕ್ಕಳಿಗೆ ತಮ್ಮ ರಜೆಯ ದಿನಗಳನ್ನು ಹೇಗೆ ಕಳೆದಿರಿ, ಯಾರಾರ‍ಯರು ಎಲ್ಲಿಲ್ಲಿಗೆ ಪ್ರವಾಸ ಹೋಗಿದ್ದೀರಿ ಎಂದು ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸುತ್ತಲೇ ಪಠ್ಯ ಚಟುವಟಿಕೆಗಳ ಬಗ್ಗೆ ಶಿಕ್ಷಕರು ತೊಡಗಿಸಿಕೊಳ್ಳುತ್ತಿದ್ದಾರೆ.

ಒಟ್ಟಾರೆ ಬೇಸಿಗೆ ರಜೆಯನ್ನು ಮಜಾ ಮಾಡುತ್ತಾ ಕಾಲ ಕಳೆದ ಮಕ್ಕಳು ಇವತ್ತಿನಿಂದ ಶಾಲೆಯ ಬ್ಯಾಗ್‌ ಹೆಗಲಿಗೇರಿಸಿಕೊಂಡು ಹೋಂವರ್ಕ್ ಚಿಂತೆಯಲ್ಲೇ ತಮ್ಮ ತಮ್ಮ ಶಾಲೆಗಳತ್ತ ಹಾಗೂ ಪಾಠಪ್ರವಚನಗಳತ್ತ ಮುಖ ಮಾಡಬೇಕಿದೆ.

click me!