ಅವೈಜ್ಞಾನಿಕ ಮೀಸಲಾತಿ: ಮತ್ತೆ ಹೈಕೋರ್ಟ್‌ ಕದ ತಟ್ಟಿದ ಕಾಂಗ್ರೆಸ್

By Kannadaprabha NewsFirst Published Jul 15, 2021, 10:46 AM IST
Highlights

* ಪಾಲಿಕೆ ಚುನಾವಣೆಗೆ ತಡೆ ನೀಡಿ ಮೀಸಲಾತಿ ಸರಿಯಾಗಿಲ್ಲ
* ಮತದಾರರ ಹಂಚಿಕೆಯೂ ಸಮರ್ಪಕವಾಗಿಲ್ಲ
* ಹೈಕೋರ್ಟ್‌ಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹಳ್ಳೂರು ದೂರು
 

ಹುಬ್ಬಳ್ಳಿ(ಜು.15): ಮಹಾನಗರ ಪಾಲಿಕೆ ಚುನಾವಣೆಗೆ ಮುಹೂರ್ತವೇ ಕೂಡಿ ಬರುತ್ತಿಲ್ಲ. ವಾರ್ಡ್‌ ಮೀಸಲಾತಿ ಹಾಗೂ ಮತದಾರರ ಹಂಚಿಕೆ ಅವೈಜ್ಞಾನಿಕವಾಗಿದೆ. ಇದಕ್ಕೆ ತಡೆ ನೀಡಬೇಕು ಎಂದು ಕಾಂಗ್ರೆಸ್‌ ಮತ್ತೆ ಹೈಕೋರ್ಟ್‌ ಕದ ತಟ್ಟಿದೆ. ಮತ್ತೆ ಚುನಾವಣೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

ಧಾರವಾಡ ನಲ್ಲಿ ಕಾಂಗ್ರೆಸ್‌ನ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರು ದೂರು ನೀಡಿದ್ದು, ಅದು ಬುಧವಾರ ದಾಖಲಾಗಿದೆ. ಅರ್ಜಿ ವಿಚಾರಣೆಯೂ ಇನ್ನೆರಡು ದಿನಗಳಲ್ಲಿ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಅದು ವಿಚಾರಣೆಗೆ ಬಂದ ನಂತರವೇ ಹೈಕೋರ್ಟ್‌ ಏನು ತೀರ್ಪು ನೀಡುತ್ತದೆ ಎಂಬುದರ ಮೇಲೆ ಚುನಾವಣೆ ನಿಂತಿದೆ. ಹೀಗಾಗಿ ಇನ್ನಷ್ಟು ದಿನ ಮುಂದಕ್ಕೆ ಹೋಗುವುದು ಖಚಿತ ಎಂದು ಮೂಲಗಳು ತಿಳಿಸಿವೆ.

ಹೊಸ ಮುಖಗಳೇ ಜೆಡಿಎಸ್‌ಗೆ ಆಧಾರ..!

ಕೋರ್ಟ್‌ಗೆ ಏಕೆ?

ಪಾಲಿಕೆಯಲ್ಲಿ 67 ವಾರ್ಡ್‌ಗಳನ್ನು 82 ವಾರ್ಡ್‌ಗಳನ್ನಾಗಿ ಮರುವಿಂಗಡಣೆ ಮಾಡಲಾಗಿದೆ. 82ರಲ್ಲಿ 40 ವಾರ್ಡ್‌ಗಳಲ್ಲಿ ಮಹಿಳಾ ಮೀಸಲಾತಿ ಪ್ರಕಟಿಸಲಾಗಿದೆ. ನಾಲ್ಕು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ವಾರ್ಡ್‌ಗಳು ಬರುತ್ತವೆ. ಪೂರ್ವ ಕ್ಷೇತ್ರಕ್ಕೆ 23 ವಾರ್ಡ್‌ಗಳು ಬರುತ್ತವೆ. 23 ವಾರ್ಡ್‌ ಪೈಕಿ 18 ವಾರ್ಡ್‌ಗಳು ಮಹಿಳೆಗೆ ಮೀಸಲಾಗಿದೆ. ಇನ್ನುಳಿದ ಪಶ್ಚಿಮ, ಸೆಂಟ್ರಲ್‌ ಹಾಗೂ ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಉಳಿದ 22 ವಾರ್ಡ್‌ಗಳು ಮೀಸಲಾಗಿದೆ. ಇದು ಸರಿಯಾಗಿ ಮೀಸಲಾತಿ ಮಾಡಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಸರಿಯಾಗಿ ಮಹಿಳಾ ಪ್ರಕಟಿಸಬೇಕು.

ಇನ್ನೂ ಪಾಲಿಕೆ ವ್ಯಾಪ್ತಿಯಲ್ಲಿ 8,11,632 ಮತದಾರರಿದ್ದಾರೆ. 82 ವಾರ್ಡ್‌ಗಳಿಗೆ ಸರಿಯಾಗಿ ಹಂಚಿಕೆ ಮಾಡಬೇಕಿತ್ತು. ಆದರೆ ಕೆಲವೊಂದು ವಾರ್ಡ್‌ಗಳಲ್ಲಿ 5-6 ಸಾವಿರ ಮತದಾರರಿದ್ದರೆ, ಕೆಲವೊಂದಿಷ್ಟುವಾರ್ಡ್‌ಗಳಲ್ಲಿ 13-14 ಸಾವಿರ ಮತದಾರರ ಹಂಚಿಕೆ ಮಾಡಲಾಗಿದೆ. ಇದು ಕೂಡ ಅವೈಜ್ಞಾನಿಕವಾಗಿದೆ. ಆದಕಾರಣ ವಾರ್ಡ್‌ ಮೀಸಲಾತಿ ಸಮರ್ಪಕವಾಗಿ ಮಾಡಬೇಕು. ಜತೆಗೆ ಮತದಾರರನ್ನು ಸಮನಾಗಿ ಹಂಚಿಕೆ ಮಾಡಬೇಕು. ಅಲ್ಲಿಯವರೆಗೂ ಚುನಾವಣೆ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಈ ಅರ್ಜಿಯ ವಿಚಾರಣೆ ಬರುವ ಸಾಧ್ಯತೆ ಇದೆ ಎಂದು ದೂರುದಾರ ಅಲ್ತಾಫ್‌ ಹಳ್ಳೂರು ತಿಳಿಸಿದ್ದಾರೆ.

ಕಾಂಗ್ರೆಸ್‌ಗೆ ಠಕ್ಕರ್‌ ಕೊಡಲು ಸಿದ್ಧವಾದ ಓವೈಸಿ ಪಕ್ಷ..!

ನಿರಾಸೆ:

ಈಗಾಗಲೇ ಎರಡೂವರೆ ವರ್ಷದಿಂದ ಪಾಲಿಕೆಯಲ್ಲಿ ಚುನಾಯಿತ ಆಡಳಿತ ಮಂಡಳಿಯೇ ಇಲ್ಲ. ಇದೀಗ ಇನ್ನೆರಡು ದಿನಗಳಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇತ್ತು. ಆದರೆ ಇದೀಗ ಕಾಂಗ್ರೆಸ್‌ ಹೈಕೋರ್ಟ್‌ ಮೊರೆ ಹೋಗಿರುವ ಕಾರಣ ಇನ್ನಷ್ಟುದಿನಗಳ ಕಾಲ ಚುನಾವಣೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಇದು ಪಾಲಿಕೆ ಚುನಾವಣೆ ಮೇಲೆ ಕಣ್ಣಿಟ್ಟು ಈ ವರೆಗೂ ಪ್ರಚಾರ ಆರಂಭಿಸಿರುವ ಆಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದಂತಾಗಿದೆ.

ಪಾಲಿಕೆ ವಾರ್ಡ್‌ ವ್ಯಾಪ್ತಿಯಲ್ಲಿ ಮಹಿಳಾ ಮೀಸಲಾತಿ ಹಾಗೂ ಮತದಾರರ ಹಂಚಿಕೆ ಸರಿಯಾಗಿಲ್ಲ. ಈ ಕಾರಣಕ್ಕಾಗಿ ನಾನು ಹೈಕೋರ್ಟ್‌ಗೆ ದೂರು ಸಲ್ಲಿಸಿದ್ದೇನೆ. ಇನ್ನೆರಡು ದಿನಗಳಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎಂದು ಮಹಾನಗರ ಕಾಂಗ್ರೆಸ್‌ ಸಮಿತಿ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರು ತಿಳಿಸಿದ್ದಾರೆ. 
 

click me!