Hubballi: ಮತ್ತಷ್ಟು ಸುಂದರವಾಗಲಿದೆ ಏರ್‌ಪೋರ್ಟ್‌

By Kannadaprabha NewsFirst Published Nov 26, 2021, 9:09 AM IST
Highlights

*   ರಸ್ತೆಗೆ ಹೊಂದಿಕೊಂಡ ಖಾಲಿ ಸ್ಥಳದಲ್ಲಿ ಉದ್ಯಾನ ನಿರ್ಮಾಣ
*  ಎಎಐ ಖರ್ಚಿಲ್ಲದೆ ಪ್ರತಿಷ್ಠಿತ ಕಂಪನಿಗಳು ಉದ್ಯಾನ ರೂಪಿಸಲಿವೆ
*  ಉದ್ಯಾನ ನಿರ್ಮಿಸಲು ಟೆಂಡರ್‌ 
 

ಮಯೂರ ಹೆಗಡೆ

ಹುಬ್ಬಳ್ಳಿ(ನ.26):  ಹುಬ್ಬಳ್ಳಿ ವಿಮಾನ ನಿಲ್ದಾಣ(Hubballi Airport) ಮತ್ತಷ್ಟು ಸುಂದರವಾಗಲಿದೆ. ಗೋಕುಲ ರಸ್ತೆ ಹೊಂದಿಕೊಂಡಂತೆ ಇರುವ ನಿಲ್ದಾಣದ ಎದುರಿನ ಖಾಲಿ ಜಾಗದಲ್ಲಿ ಪ್ರತಿಷ್ಠಿತ ಕಂಪನಿಗಳ ಸಹಕಾರದಲ್ಲಿ ಉದ್ಯಾನ ನಿರ್ಮಿಸಲು ವಿಮಾನ ನಿಲ್ದಾಣ ಪ್ರಾಧಿಕಾರ ಮುಂದಾಗಿದೆ.

ನಿಲ್ದಾಣದ ಎದುರಿನ ರಸ್ತೆಗೆ ಹೊಂದಿಕೊಂಡ ಸ್ಥಳದಲ್ಲಿ ಪ್ರಸ್ತುತ ಒಂದಿಷ್ಟು ಹುಲ್ಲು, ಪೊದೆಗಳು ಬೆಳೆದು ಅಸ್ತವ್ಯಸ್ತ ಸ್ಥಿತಿಯಲ್ಲಿದೆ. ಈ ಸ್ಥಳದಲ್ಲಿ ಸುಂದರ ಉದ್ಯಾನ(Garden) ನಿರ್ಮಿಸಲು ಎಎಐ(Airports Authority of India) ನಿರ್ಧರಿಸಿದೆ. ಇದಕ್ಕಾಗಿ ಟೆಂಡರ್‌ ಕರೆದಿದ್ದು, ನ. 27 ಅರ್ಜಿ ಸಲ್ಲಿಸಲು ಕೊನೆ ದಿನ.

ಸದ್ಯ ನಿಲ್ದಾಣದ ಮುಂಭಾಗ, ಅಕ್ಕಪಕ್ಕ ಮಾತ್ರ ಹುಲ್ಲುಹಾಸು ಚಿಕ್ಕದಾದ ಉದ್ಯಾನವಿದೆ. ಇದೀಗ ನಿಲ್ದಾಣ ಎದುರಿನ ಬೃಹತ್‌ ಧ್ವಜಸ್ತಂಬ, ಭದ್ರತಾ ಸಿಬ್ಬಂದಿಯ ನಿಯೋಜನೆ ಆಗುವ ಸ್ಥಳ, ವಿಐಪಿ ಕಾರ್‌ ಪಾರ್ಕಿಂಗ್‌ ಹಿಂಭಾಗದ ಸ್ಥಳ ಸೇರಿದಂತೆ ಇತರ ಸ್ಥಳದಲ್ಲಿ ಗಾರ್ಡನ್‌ ನಿರ್ಮಿಸಲು ನಿರ್ಧರಿಸಲಾಗಿದೆ. ಉದ್ಯಾನವನ ಎರಡು ವಿಭಾಗದಲ್ಲಿ ನಿರ್ಮಾಣ ಆಗಲಿದೆ. ಪ್ರಯಾಣಿಕರಿಗೆ(Passengers) ಕುಳಿತುಕೊಳ್ಳಲು, ಸಂಚರಿಸಲು ಅವಕಾಶ ಇರಲಿದೆ.

Hubballi| ಉತ್ತರ ಕರ್ನಾಟಕದ ಮೊದಲ ವೈಮಾನಿಕ ಕಾರ್ಗೋ ಸೇವೆ ಆರಂಭ

ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ ಠಾಕ್ರೆ, ಇದು ಪ್ರತಿಷ್ಠಿತ ಕಂಪನಿಗಳು ಸಂಪೂರ್ಣ ತಮ್ಮ ಖರ್ಚು ವೆಚ್ಚದಲ್ಲೇ ನಿರ್ಮಿಸುವ ಉದ್ಯಾನ. ಎಎಐ ಅದಕ್ಕಾಗಿ ಹಣ ಖರ್ಚು ಮಾಡಲ್ಲ. ಆದರೆ, ಉದ್ಯಾನ ನಿರ್ಮಿಸುವ ಕಂಪನಿಯ ಬ್ರ್ಯಾಂಡ್‌ ಪ್ರಚಾರಕ್ಕೆ ಸಹಕಾರಿ ಆಗುವಂತೆ ಫಲಕ ಅಳವಡಿಸಿಕೊಳ್ಳಲು ಅವಕಾಶ ನೀಡುತ್ತೇವೆ. ಅವರು ನಮಗೆ ಉದ್ಯಾನ ನಿರ್ಮಿಸಿಕೊಡುತ್ತಾರೆ. ಜತೆಗೆ ಮೂರು ವರ್ಷ ನಿರ್ವಹಣೆ ಜವಾಬ್ದಾರಿ ಹೊರುತ್ತಾರೆ. ಇದರಿಂದ ವಿಮಾನ ನಿಲ್ದಾಣ ನಮ್ಮ ಖರ್ಚಿಲ್ಲದೆ ಸುಂದರವಾಗುತ್ತದೆ. ಜತೆಗೆ ಅವರ ಜಾಹೀರಾತು(Advertisement) ಆದಂತಾಗುತ್ತದೆ ಎಂದರು.

ಈ ಬಗ್ಗೆ ಮಾತನಾಡಿದ ವಿಮಾನ ನಿಲ್ದಾಣ ಟರ್ಮಿನಲ್‌ ಉಸ್ತುವಾರಿ ನಿಖಿಲ್‌, ವಿಮಾನ ನಿಲ್ದಾಣದ ಒಳಾಂಗಣದಲ್ಲಿ ಈಗಾಗಲೇ ಟಾಟಾ ಹಿಟಾಚಿ ಉದ್ಯಾನ ನಿರ್ಮಿಸಿದೆ. ವಿವಿಧ ರಾಜ್ಯ, ದೇಶಗಳಿಂದ ಇಲ್ಲಿಗೆ ಬರುವವರಿಗೆ ನಿಲ್ದಾಣ ಸುಂದರವಾಗಿ ಕಾಣಲಿ ಎಂಬ ಉದ್ದೇಶದಿಂದ ಹೊರಾಂಗಣದಲ್ಲಿ ಬಾಕಿ ಉಳಿದ ಸ್ಥಳದಲ್ಲಿ ಉದ್ಯಾನ ನಿರ್ಮಿಸಲಾಗುತ್ತಿದೆ. ಇವುಗಳನ್ನು ಎರಡು ವಿಭಾಗವಾಗಿ ಮಾಡಿಕೊಳ್ಳಲಾಗಿದೆ. ಎರಡೂ ಕಡೆ ಒಂದೇ ಕಂಪನಿ ಉದ್ಯಾನ ರೂಪಿಸಲೂ ಟೆಂಡರ್‌(Tender) ಪಡೆವ ಅವಕಾಶವಿದೆ ಎಂದರು.

ಚಿಕ್ಕಪುಟ್ಟ ಸಸಿ, ಅಲಂಕಾರಿಕ ಪೊದೆ, ಹುಲ್ಲುಹಾಸು ಬೆಳೆಸಿ ಸುಂದರವಾಗಿವುದು ಗುತ್ತಿಗೆ ಕಂಪನಿಯ ಕೆಲಸ. ಅದನ್ನು ಹೊರತುಪಡಿಸಿ ಮುಂದೆ ತುಂಬಾ ದೊಡ್ಡದಾಗುವ ಮರಗಳನ್ನು ಬಳಸಲು ಅವಕಾಶ ಇಲ್ಲ. ಪಕ್ಷಿಗಳು ಹೆಚ್ಚಾಗಿ ಬಂದು ವಿಮಾನ ಸಂಚಾರಕ್ಕೆ ತೊಂದರೆ ಆಗುವ ಕಾರಣ ನಿಗದಿತ ಎತ್ತರದಷ್ಟು ಮಾತ್ರ ಸಸಿ, ಮರ(Trees) ಬೆಳೆಸಲು ಅವಕಾಶ ಇರುತ್ತದೆ ಎಂದರು.

ಹುಬ್ಬಳ್ಳಿ ಏರ್‌ಪೋರ್ಟ್‌ ಬಳಿಯೆ ಹೆಲಿಪೋರ್ಟ್‌!

ವಿಮಾನ ನಿಲ್ದಾಣದ ಎದುರಿನ ರಸ್ತೆಗೆ ಹೊಂದಿಕೊಂಡ ಭಾಗದಲ್ಲಿರುವ ಜಾಗದಲ್ಲಿ ಉದ್ಯಾನ ನಿರ್ಮಿಸಲು ಟೆಂಡರ್‌ ಕರೆದಿದ್ದೇವೆ. ಪ್ರತಿಷ್ಠಿತ ಕಂಪನಿಗಳ ಬ್ರ್ಯಾಂಡಿಗ್‌(Branding) ಇದರಿಂದ ಆಗುವುದರಿಂದ ಅವರೆ ಸಂಪೂರ್ಣ ಖರ್ಚು, ವೆಚ್ಚ ನೋಡಿಕೊಳ್ಳುತ್ತಾರೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ ಠಾಕ್ರೆ ತಿಳಿಸಿದ್ದಾರೆ. 

ವಿಮಾನ ನಿಲ್ದಾಣಕ್ಕೆ ಮತ್ತೊಂದು ಪ್ರಶಸ್ತಿ:

ಈಚೆಗೆ ಓಡಿಶಾದಲ್ಲಿ(Odisha) ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಉಡಾನ್‌ ಆರ್‌ಸಿಎಸ್‌ (Regional Connectivity Plan) ಅಡಿ ಹೆಚ್ಚಿನ ಪ್ರಯಾಣಿಕರು ಸಂಚರಿಸಿದ ವಿಭಾಗದಲ್ಲಿ ಉತ್ತಮ ವಿಮಾನ ನಿಲ್ದಾಣ ಪ್ರಶಸ್ತಿ(Best Airport Award) ದೊರೆತಿದೆ. ಬಿಹಾರದ ದರ್ಭಂಗಾ, ಅಸ್ಸಾಂನ ಜೊರ್ಹತ್‌, ರಾಜಸ್ತಾನದ ಕಿಶನ್‌ಗರ್‌, ಮಹಾರಾಷ್ಟ್ರದ ನಾಂದೆಡ ವಿಮಾನ ನಿಲ್ದಾಣಗಳು ಕೂಡ ಈ ಪ್ರಶಸ್ತಿ ಪಡೆದಿವೆ. ಕಳೆದ ವರ್ಷ ಕೂಡ ಉಡಾನ್‌ ಅಡಿ ಉತ್ತಮ ವಿಮಾನ ನಿಲ್ದಾಣವೆಂಬ ಪ್ರಶಸ್ತಿಯನ್ನು ಹುಬ್ಬಳ್ಳಿ ಏರ್‌ಪೋರ್ಟ್‌ ಪಡೆದಿತ್ತು.
 

click me!