ಚಿಕ್ಕಮಗಳೂರು: ಮಹಾಮಳೆಗೆ ಮಣ್ಣಲ್ಲಿ ಮರೆಯಾಯ್ತು ಮನೆಗಳು

By Kannadaprabha News  |  First Published Aug 25, 2019, 12:42 PM IST

ಮಲೆನಾಡಿನಲ್ಲಿ ಸುರಿದ ಮಹಾಮಳೆಗೆ ಬಹಳಷ್ಟು ಮನೆಗಳು ಧರೆಯಲ್ಲಿ ಸಮಾಧಿಯಾಗಿವೆ. ಮೂಡಿಗೆರೆ ತಾಲೂಕಿನ ಮಲೆಮನೆ, ದುರ್ಗದಹಳ್ಳಿ, ಚನ್ನಹಡ್ಲು ಗ್ರಾಮಗಳಲ್ಲಿ ಹಲವು ಮನೆಗಳು ಮಹಾಮಳೆಯ ಆರ್ಭಟಕ್ಕೆ ಕೊಚ್ಚಿಹೋಗಿವೆ. ಕೆಲವೆಡೆ ನೋಡು ನೋಡುತ್ತಿದ್ದಂತೆ ನೆರಳಾಗಿದ್ದ ಸೂರು ಮಣ್ಣಿನಲ್ಲಿ ಮಣ್ಣಾಗಿಹೋಯಿತು.


ಚಿಕ್ಕಮಗಳೂರು(ಆ.25): ಅನುಕೂಲಕ್ಕೆ ತಕ್ಕಂತೆ ಮನೆ, ಅದರ ಸುತ್ತಲೂ ಜೀವನಕ್ಕೊಂದು ಕಾಫಿ ತೋಟ, ಬತ್ತದ ಗದ್ದೆ. ಇವೆರಡನ್ನು ಕಳೆದುಕೊಂಡು ಅದೇಷ್ಟೋ ಮಂದಿ ಮಲೆನಾಡಿನಲ್ಲಿ ಬೀದಿಗೆ ಬಿದ್ದಿದ್ದಾರೆ.

ಮೂಡಿಗೆರೆ ತಾಲೂಕಿನ ಮಲೆಮನೆ, ದುರ್ಗದಹಳ್ಳಿ, ಚನ್ನಹಡ್ಲು ಗ್ರಾಮಗಳಲ್ಲಿ ಹಲವು ಮನೆಗಳು ಮಹಾಮಳೆಯ ಆರ್ಭಟಕ್ಕೆ ಕೊಚ್ಚಿಹೋಗಿವೆ. ಕೆಲವೆಡೆ ನೋಡು ನೋಡುತ್ತಿದ್ದಂತೆ ನೆರಳಾಗಿದ್ದ ಸೂರು ಮಣ್ಣಿನಲ್ಲಿ ಮಣ್ಣಾಗಿಹೋಯಿತು. ಈ ದೃಶ್ಯವನ್ನು ಕಂಡ ಅದೆಷ್ಟೋ ಕುಟುಂಬಗಳಿಗೆ ಆಘಾತವಾಗಿದೆ. ಮನೆಯಲ್ಲಿನ ಪಾತ್ರೆ, ಬಟ್ಟೆಗಳು ಇತರೆ ದಿನ ಬಳಕೆ ವಸ್ತುಗಳು ಭೂಮಿಯ ಮಡಿಲು ಸೇರಿಕೊಂಡಿವೆ. ಬೈಕು, ಕಾರುಗಳು ಕೆಸರಿನಲ್ಲಿ ಹೂತುಹೋಗಿವೆ.

Tap to resize

Latest Videos

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಗುಡ್ಡ ಕುಸಿತಕ್ಕೆ ಮಹಾಮಳೆಯೇ ಕಾರಣ..?

ಅಂದದ ಆ ಮನೆ, ಅದರ ಅಂಗಳದಲ್ಲಿ ಮಕ್ಕಳ ಓಡಾಟ, ಹಿರಿಯ ಜೀವದೊಂದಿಗೆ ಸಾಗುತ್ತಿದ್ದ ಸಂಸಾರ ನೌಕೆ ಕ್ಷಣಾರ್ಧದಲ್ಲಿ ಕಣ್ಮರೆಯಾಗಿದೆ. ಧರೆ ಕುಸಿತ ಹಾಗೂ ಮಹಾ ಮಳೆಯಿಂದಾಗಿ ಗಂಜಿ ಕೇಂದ್ರದಲ್ಲಿ ಉಳಿದುಕೊಂಡಿದ್ದ ಬಹುತೇಕ ಮಂದಿಗಳು ಮರಳಿ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಮನೆಯನ್ನು ಕಳೆದುಕೊಂಡರು ಇಂದಿಗೂ ಗಂಜಿ ಕೇಂದ್ರದಲ್ಲಿಯೇ ಉಳಿದುಕೊಂಡಿದ್ದಾರೆ. ವಾಸಕ್ಕೆ ಮನೆ ಇಲ್ಲ, ಜೀವನಕ್ಕೆ ಆಶ್ರಯ ಮಾಡಿಕೊಂಡಿದ್ದ ತೋಟಗಳು ಇಲ್ಲ, ಬಹಳಷ್ಟುಮಂದಿಗೆ ಮುಂದೇನೂ ಎಂಬ ಬಹುದೊಡ್ಡ ಪ್ರಶ್ನೆ ಕಾಡುತ್ತಿದೆ.

987 ಮನೆಗಳಿಗೆ ಹಾನಿ:

ಜಿಲ್ಲೆಯಲ್ಲಿ ಮಳೆಯಿಂದಾಗಿ ಈವರೆಗೆ ಒಟ್ಟು 987 ಮನೆಗಳಿಗೆ ಹಾನಿ ಸಂಭವಿಸಿದೆ. ಇದರಲ್ಲಿ ಮಲೆನಾಡಿನ 5 ತಾಲೂಕುಗಳಲ್ಲಿ 694 ಮನೆಗಳಿಗೆ ಹಾನಿಯಾಗಿದ್ದರೆ, ಬಯಲು ಸೀಮೆಯ 5 ತಾಲೂಕಲ್ಲಿ 293 ಮನೆಗಳಿಗೆ ಹಾನಿಯಾಗಿದೆ. ಮಲೆನಾಡಿನ 5 ತಾಲೂಕುಗಳಲ್ಲಿ 501 ಪಕ್ಕಾ ಮನೆಗಳಿಗೆ ಹಾನಿಯಾಗಿದೆ. ಇದರಲ್ಲಿ ಮೂಡಿಗೆರೆ ತಾಲೂಕು 106 ಮನೆಗಳಿಗೆ ಶೇ.75ಕ್ಕಿಂತ ಮೇಲ್ಪಟ್ಟು ಹಾನಿಯಾಗಿದೆ. ಕೊಪ್ಪ ತಾಲೂಕಿನಲ್ಲಿ 66 ಮನೆಗಳಿಗೆ ಹಾನಿ ಸಂಭವಿಸಿದೆ. ಮೂಡಿಗೆರೆ ತಾಲೂಕಿನಲ್ಲಿ ಶೇ. 15 ರಿಂದ 25ರವರೆಗೆ 195, ಶೇ. 26 ರಿಂದ ಶೇ.75 ರಷ್ಟು208 ಹಾಗೂ ಶೇ.75 ಕ್ಕಿಂತ ಮೇಲ್ಪಟ್ಟು 90 ಮನೆಗಳಿಗೆ ಹಾನಿಯಾಗಿದೆ. ಈ ತಾಲೂಕಿನಲ್ಲಿ ಸುಮಾರು 76 ಮನೆಗಳು ನೆಲ ಸಮವಾಗಿವೆ.

ಸರ್ವೆ ಕಾರ್ಯ:

ಯಾವ ಊರಿನಲ್ಲಿ ಎಷ್ಟೆಷ್ಟುಮನೆಗಳು ಹೋಗಿವೆ, ಅವುಗಳ ಸ್ಥಿತಿಗತಿಗಳ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಓ, ಗ್ರಾಮ ಲೆಕ್ಕಿಗರಿಂದ ಸರ್ವೆ ಕೆಲಸ ನಡೆಯುತ್ತಿದೆ. ವರದಿಯ ನಂತರದಲ್ಲಿ ಮುಂದಿನ ಕ್ರಮವಾಗಲಿದೆ. ಮನೆಯನ್ನು ಕಳೆದುಕೊಂಡಿರುವ ಜಾಗದಲ್ಲಿ ಮತ್ತೆ ಮನೆ ಕಟ್ಟಿಕೊಳ್ಳಲು ಸಾಧ್ಯವಿಲ್ಲ, ಇನ್ನು ಕೆಲವೆಡೆ ಗ್ರಾಮಸ್ಥರು ತಮಗೆ ಬೇರೆಡೆಗೆ ಸ್ಥಳಾಂತರ ಮಾಡಬೇಕೆಂದು ಕೇಳಿಕೊಂಡಿದ್ದಾರೆ.

ಚಾರ್ಮಾಡಿ ರಸ್ತೆ ಬಂದ್: ಆಹಾರವಿಲ್ಲದೇ ಮಂಗಗಳ ಪರದಾಟ!

ಜಿಲ್ಲಾಳಿತ ಜನಾಭಿಪ್ರಾಯ ಕ್ರೋಡಿಕರಿಸಲಿದೆ. ಹೊಸ ಮನೆ ನಿರ್ಮಾಣಕ್ಕೆ ಸರ್ಕಾರ .5 ಲಕ್ಷ ನೀಡಲಿದೆ. ಈ ಹಣ ಸಾಕಾಗುವುದಿಲ್ಲ. ಸಾಲ ಮಾಡಿ ಮನೆ ಕಟ್ಟೋಣ ಎಂದರೆ ಇದ್ದ ತೋಟ ನೀರಿನಲ್ಲಿ ಕೊಚ್ಚಿಹೋಗಿದೆ. ಈ ದುಸ್ಥಿತಿಯಲ್ಲಿ ಹಲವು ಮಂದಿ ಇದ್ದಾರೆ. ನಿರಾಶ್ರಿತರ ನೆರವಿಗೆ ಸಂಸ್ಥೆಗಳು ಮುಂದೆ ಬಂದು ಗುಂಪು ಮನೆಗಳನ್ನು ನಿರ್ಮಾಣ ಮಾಡಿಕೊಟ್ಟರೆ ಅನುಕೂಲವಾಗಬಹುದು.

ಜಾಗ ಗುರುತು:

ಜಿಲ್ಲೆಯ 8 ತಾಲೂಕುಗಳ ಪೈಕಿ ಮೂಡಿಗೆರೆ ತಾಲೂಕಿನಲ್ಲಿ ಜನರು ಮನೆ ಮತ್ತು ಜಮೀನು ಕಳೆದುಕೊಂಡಿದ್ದು, ಅವರಿಗೆ ಪುನರ್ವವಸತಿ ಕಲ್ಪಿಸಲು ಜಿಲ್ಲಾಡಳಿತ ಸೂಚನೆಯ ಮೇರೆಗೆ ಮೂಡಿಗೆರೆ ತಾಲೂಕು ಆಡಳಿತ ಈಗಾಗಲೇ ಕೆಲವೆಡೆ ಜಾಗವನ್ನು ಗುರುತು ಮಾಡಿದೆ. ದುರ್ಗದಹಳ್ಳಿಯ ಸರ್ವೆ ನಂಬರ್‌ 30ರಲ್ಲಿ 2 ಎಕರೆ, ಬಣಕಲ್‌ ಸರ್ವೆ ನಂಬರ್‌ 353ರಲ್ಲಿ 58 ಎಕರೆ, 345ರಲ್ಲಿ 4.30 ಎಕರೆ, ಬಿ.ಹೊಸಹಳ್ಳಿಯ ಸರ್ವೆ ನಂಬರ್‌. 65ರಲ್ಲಿ 51 ಎಕರೆ, ಕೂಡಳ್ಳಿಯ ಸರ್ವೆ ನಂಬರ್‌ 47ರಲ್ಲಿ 10.28 ಎಕರೆ, ಗೋಣಿಬೀಡು ಹೋಬಳಿಯ ಹಂದೂರಿನ ಸರ್ವೆ ನಂಬರ್‌ 1 ರಲ್ಲಿ 18 ಎಕರೆ, ಅಂಗಡಿಯ ಸರ್ವೆ ನಂಬರ್‌ 55ರಲ್ಲಿ 4.20 ಎಕರೆ ಜಾಗವನ್ನು ಗುರುತು ಮಾಡಲಾಗಿದೆ.

ತಾಲೂಕುಗಳು ಹಾನಿಯಾದ ಮನೆಗಳು

ಚಿಕ್ಕಮಗಳೂರು 57, ಮೂಡಿಗೆರೆ 493

ಶೃಂಗೇರಿ 42, ಕೊಪ್ಪ 23

ಎನ್‌.ಆರ್‌.ಪುರ 79, ತರೀಕೆರೆ 84

ಕಡೂರು 58, ಅಜ್ಜಂಪುರ 151

-ಆರ್‌.ತಾರಾನಾಥ್‌

click me!