ಚಿಕ್ಕಮಗಳೂರು(ಆ.24): ಜಿಲ್ಲೆಯ ಮೂಡಿಗೆರೆ ಹಾಗೂ ಚಿಕ್ಕಮಗಳೂರು ತಾಲೂಕುಗಳ 14 ಗ್ರಾಮಗಳ ಸುತ್ತಮುತ್ತ ಆ.9ರಂದು ಮಹಾಮಳೆಗೆ ಗುಡ್ಡಗಳು ಕುಸಿದಿವೆ. ಇದಕ್ಕೆ ವೈಜ್ಞಾನಿಕವಾಗಿ ಕಾರಣ ಕಂಡುಹಿಡಿಯಲು ಭಾರತೀಯ ಸರ್ವೇಕ್ಷಣಾ ಇಲಾಖೆ ವಿಜ್ಞಾನಿಗಳು ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಅಧ್ಯಯನ ನಡೆಸುತ್ತಿದ್ದಾರೆ.

ಬೆಟ್ಟದಲ್ಲಿ ಗುಡುಗಿದ ಶಬ್ಧ ಬಂತು, ನೆಲ ಅಲುಗಾಡಿದಂತಾಯಿತು. ಇದರಿಂದ ಆತಂಕವಾಯಿತು ಎಂದು ಘಟನಾ ಸ್ಥಳಗಳ ಗ್ರಾಮಸ್ಥರು ಹೇಳುತ್ತಿದ್ದಾರೆ. ಆದರೆ, ಇದ್ಯಾವುದು ಕಾರಣವಲ್ಲ ಎಂದು ತಜ್ಞರು ಹೇಳಿ, ಮಹಾಮಳೆಯಿಂದ ಈ ಅನಾಹುತ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಭೂಕುಸಿತಕ್ಕೆ ಮಳೆಯೇ ಕಾರಣ:

ಒಂದು ಪ್ರದೇಶದಲ್ಲಿ ನಿರಂತರವಾಗಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದರೆ ಈ ರೀತಿಯ ಅನಾಹುತವಾಗುತ್ತದೆ. ಕಳೆದ ವರ್ಷದಿಂದ ಕೇರಳದಲ್ಲಿ ಇದೇ ಕಾರಣಕ್ಕೆ ಧರೆ ಕುಸಿತ ಉಂಟಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಮೇಲ್ನೋಟಕ್ಕೆ ಇದೇ ಕಾರಣ ಕಂಡುಬರುತ್ತಿದೆ ಎಂದು ತಜ್ಞರ ತಂಡದಲ್ಲಿರುವ ಹಿರಿಯ ಭೂ ವಿಜ್ಞಾನಿ ದಯಾನಂದ್‌ ತಿಳಿಸಿದ್ದಾರೆ.

ಚಾರ್ಮಾಡಿ ರಸ್ತೆ ಬಂದ್: ಆಹಾರವಿಲ್ಲದೇ ಮಂಗಗಳ ಪರದಾಟ!

ಮಳೆಯ ನೀರು ಭೂಮಿ ಇಂಗಿಸಿಕೊಳ್ಳುತ್ತದೆ. ನಿರಂತರವಾಗಿ ಹೆಚ್ಚು ಮಳೆ ಬಂದರೆ ನೀರನ್ನು ಹೀರಿಕೊಳ್ಳಲು ಭೂಮಿ ಮೇಲ್ಪದರಕ್ಕೆ ಸಾಧ್ಯವಾಗದೇ ಹೋಗುವುದರಿಂದ ಹರಿಯುತ್ತದೆ ಎಂದು ಹೇಳಿದ್ದಾರೆ.

ಎಲ್ಲೆಲ್ಲಿ ಧರೆ ಕುಸಿತ?:

ಕಪ್ಪುಶಿಲೆಗಳ ಕಲ್ಲು ಇರುವ ಗುಡ್ಡಗಳಲ್ಲಿ ಧರೆ ಕುಸಿದಿಲ್ಲ, ಸಡಿಲ ಮಣ್ಣು ಇರುವ ಗುಡ್ಡಗಳಲ್ಲಿ ಈ ಅನಾಹುತ ಸಂಭವಿಸಿದೆ. ಗಿಡ ಮರಗಳು ಹಾಗೂ ಸಣ್ಣ ಸಣ್ಣ ಝರಿಗಳಲ್ಲಿ ಮಳೆಯ ನೀರಿನ ಒತ್ತಡ ಹೆಚ್ಚಾಗಿ ಹಳ್ಳದಂತೆ ಹರಿಯುತ್ತಿದ್ದಂತೆ ಸಡಿಲವಾದ ಗುಡ್ಡದ ಮಣ್ಣು, ಗಿಡ ಮರಗಳು ನೀರಿನಲ್ಲಿ ತಗ್ಗಿನ ಪ್ರದೇಶದಲ್ಲಿ ಹರಿದುಹೋಗಿದೆ. ಈ ಭಾಗದಲ್ಲಿದ್ದ ಮನೆ, ತೋಟ, ಗದ್ದೆಗಳಿಗೆ ಹಾನಿ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ. ಆಗಾಗ ಮಳೆ ಬರುತ್ತಿದೆ, ಹಾನಿಗೊಳಗಾದ ಮಧುಗುಂಡಿಯಂತಹ ಕೆಲವು ಪ್ರದೇಶಗಳಲ್ಲಿ ನೀರು ನಿಂತಿದೆ ಅದುದರಿಂದ ಸ್ಥಳಕ್ಕೆ ಹೋಗಲು ಆಗುತ್ತಿಲ್ಲ. ಈ ಕಾರಣಕ್ಕಾಗಿ ಅಧ್ಯಯನ ಇನ್ನಷ್ಟುದಿನ ಮುಂದುವರಿಯಲಿದೆ.

ಧರೆ ಕುಸಿದಿರುವ ಗ್ರಾಮಗಳು: ಬಾಳೂರು ಹೊರಟ್ಟಿ, ಮಲೆಮನೆ, ಕೆಳಗೂರು, ಬಲಿಗೆ, ದುರ್ಗದಹಳ್ಳಿ, ಮಧುಗುಂಡಿ, ಬಲ್ಲಾಳರಾಯನದುರ್ಗ, ಮಲ್ಲೇಶ್ವರನ ಗುಡ್ಡ, ಅಲೇಖಾನ್‌ ಹೊರಟ್ಟಿ, ದೇವನಗುಲ್‌ ಗುಡ್ಡ, ಕಾರಗದ್ದೆ, ಕೋಟೆ ಮಕ್ಕಿ, ಕಸ್ಕೆಬೈಲು, ಶಿರವಾಸೆ

ಹೇಗಿತ್ತು ಮಹಾಮಳೆ?:

ಆ.9ರಂದು ಮಧ್ಯಾಹ್ನ 2.30 ರಿಂದ 5 ಗಂಟೆಯವರೆಗೆ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯಿತು. ಅದರಲ್ಲೂ ಮೂಡಿಗೆರೆ ತಾಲೂಕಿನಲ್ಲಿ ವರುಣನ ಆರ್ಭಟ ಜೋರಾಗಿ ಅದೇ ದಿನ 4 ಮಂದಿ ಇದರಿಂದ ಮೃತಪಟ್ಟರು.

ಚಾರ್ಮಾಡಿ ರಸ್ತೆ ಬಂದ್: ಆಹಾರವಿಲ್ಲದೇ ಮಂಗಗಳ ಪರದಾಟ!

ಅಂದಿನ ಮಳೆಯ ವಿವರ ಈ ಕೆಳಕಂಡಂತೆ ಇದೆ. ಮೂಡಿಗೆರೆ ತಾಲೂಕಿನ ಒಟ್ಟು ಸರಾಸರಿ ವಾಡಿಕೆ 25 ಮಿ.ಮೀ. ಬಂದ ಮಳೆ 273 ಮಿ.ಮೀ. ಅಂದರೆ, ಶೇ. 993 ರಷ್ಟುಒಂದೇ ದಿನ ಮಳೆ ಬಂದಿದೆ. ಮೂಡಿಗೆರೆ ಹೋಬಳಿಯ ವಾಡಿಕೆ 17 ಮಿ.ಮೀ. ಬಂದ ಮಳೆ 264 ಮಿ.ಮೀ. ಬಣಕಲ್‌ ಹೋಬಳಿಯ ವಾಡಿಕೆ 17 ಮಿ.ಮೀ. ಬಂದ ಮಳೆ 249 ಮಿ.ಮೀ. ಗೋಣಿಬೀಡು ವಾಡಿಕೆ 17, ಬಿದ್ದ ಮಳೆ 251, ಕಳಸ ವಾಡಿಕೆ 33 ಮಿ.ಮೀ. ಬಿದ್ದ ಮಳೆ 291, ಜಾವಳಿ ಹೋಬಳಿ ವಾಡಿಕೆ 30 ಮಿ.ಮೀ. ಬಿದ್ದ ಮಳೆ 294 ಮಿ.ಮೀ. ಈ ವರ್ಷದಲ್ಲಿ ಬೇರೆ ದಿನಗಳಿಗೆ ಹೋಲಿಕೆ ಮಾಡಿದರೆ ಅತಿ ಹೆಚ್ಚು ಮಳೆ ಬಂದ ದಿನ ಇದಾಗಿದೆ.