
ಬೆಂಗಳೂರು(ಅ.11): ನಗರದಲ್ಲಿ(Bengaluru) ಮಳೆಯ(Rain) ಆರ್ಭಟ ಭಾನುವಾರವೂ ಮುಂದುವರಿದಿದೆ. ಮಳೆಯ ರಭಸಕ್ಕೆ ನಗರದ ಮೂರು ಕಡೆ ಮರ ಬಿದ್ದಿದ್ದು ಉಳಿದಂತೆ ತಗ್ಗು ಪ್ರದೇಶದಲ್ಲಿ ಜನರ ಓಡಾಟಕ್ಕೆ ತೊಂದರೆಯಾಗಿದೆ.
ಬೆಳಗ್ಗೆಯಿಂದಲೇ ನಗರವನ್ನು ದಟ್ಟಮೋಡ ಆವರಿಸಿತ್ತು. ಅಲ್ಲಲ್ಲಿ ತುಂತುರು ಮಳೆಯೂ ಸುರಿಯುತ್ತಿತ್ತು. ಸಂಜೆಯ ಹೊತ್ತು ಕೆಲ ಭಾಗದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ. ನಗರದ ದಕ್ಷಿಣ, ಪಶ್ಚಿಮ ಮತ್ತು ದಾಸರಹಳ್ಳಿ ಭಾಗದಲ್ಲಿ ಭರ್ಜರಿ ಮಳೆ ಸುರಿದಿದೆ. ಉಳಿದೆಡೆ ಸಾಧಾರಣ ಮಳೆಯಾಗಿದೆ.
ಮಳೆಯ ಹೊಡೆತಕ್ಕೆ ಪುಷ್ಪಾಂಜಲಿ ಬಡಾವಣೆ, ಕದಿರೇನಹಳ್ಳಿ 9ನೇ ಅಡ್ಡ ರಸ್ತೆ ಮತ್ತು ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ತಲಾ ಒಂದು ಮರ ಬಿದ್ದಿದ್ದು ಯಾವುದೇ ಹಾನಿ ಸಂಭವಿಸಿಲ್ಲ ಎಂದು ಬಿಬಿಎಂಪಿ(BBMP) ಅಧಿಕಾರಿಗಳು ತಿಳಿಸಿದ್ದಾರೆ.
ದೊರೆಸಾನಿಪಾಳ್ಯ 3.5 ಸೆಂಟಿ ಮೀಟರ್, ಬಿಳೇಕಳ್ಳಿ 3.3, ನಂದಿನಿ ಬಡಾವಣೆ 2.9, ಪೀಣ್ಯ ಕೈಗಾರಿಕ ಪ್ರದೇಶ, ಕೊಟ್ಟಿಗೆಪಾಳ್ಯ, ಬಿಟಿಎಂ ಬಡಾವಣೆ, ಬೆಳ್ಳಂದೂರು 2.8, ರಾಜಾಜಿನಗರ 2.7, ಬೇಗೂರು 2.3, ಹಂಪಿ ನಗರ 2.2, ನಾಗಪುರ, ಪಟ್ಟಾಭಿರಾಮ ನಗರ ಮತ್ತು ಯಲಹಂಕದಲ್ಲಿ 2 ಸೆಂ.ಮೀ ಮಳೆಯಾಗಿದೆ.
ಸಂಬಂಧಿಕರ ಮನೆಗೆ ಹೋದ ತಂದೆ ಮಗನಿಗೆ ನೈಸ್ ರೋಡ್ ನಲ್ಲಿ ಕಾದಿತ್ತು ಸಿಡಿಲಿನ ಮೃತ್ಯು!
ದೊಡ್ಡಬಿದರಕಲ್ಲು, ಹೆಗ್ಗನಹಳ್ಳಿ, ಬೊಮ್ಮನಹಳ್ಳಿ, ಬಾಗಲಕುಂಟೆ, ಸಾರಕ್ಕಿ, ಮಾರುತಿ ಮಂದಿರ ವಾರ್ಡ್, ಕೊಡಿಗೆಹಳ್ಳಿ, ಗಾಳಿ ಆಂಜನೇಯ ದೇವಸ್ಥಾನ, ನಾಗರಬಾವಿ, ಮಾರತ್‌ಹಳ್ಳಿ, ಲಕ್ಕಸಂದ್ರ, ಜ್ಞಾನಭಾರತಿ, ಸಂಪಂಗಿರಾಮ ನಗರ, ಕೋಣನಕುಂಟೆ, ವಿದ್ಯಾಪೀಠ, ಶೆಟ್ಟಿಹಳ್ಳಿ ಮತ್ತು ದಾಸರಹಳ್ಳಿಯಲ್ಲಿ ಹೆಚ್ಚು ಮಳೆಯಾಗಿದೆ.
ನಗರದಲ್ಲಿ ಮಳೆಯ ವಾತಾವರಣ(Weather)ಇರುವುದರಿಂದ ನಗರದಲ್ಲಿ ತಣ್ಣನೆಯ ವಾತಾವರಣ ಸೃಷ್ಟಿಯಾಗಿದೆ. ಸೋಮವಾರವೂ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಗುಡುಗು ಸಹಿತ ಮಳೆ ಆಗುವ ಲಕ್ಷಣಗಳಿವೆ. ನಗರದ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಕ್ರಮವಾಗಿ 27 ಮತ್ತು 21 ಡಿಗ್ರಿ ಸೆಲ್ಸಿಯಸ್ ಉಷ್ಣತೆಗಳಿರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ(Department of Meteorology) ತಿಳಿಸಿದೆ.