ತಾಲೂಕಿನ ಅರಳಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಗೊಪ್ಪೇನಹಳ್ಳಿ(ಗೊಂದಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಸಹಾಯಕಿಗೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಲ್ಲದೇ, ಅಪಪ್ರಚಾರದಲ್ಲಿ ತೊಡಗಿರುವ ಶಾಲಾಭಿವೃದ್ಧಿ ಸಮಿತಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ (ಸೆ.2) : ತಾಲೂಕಿನ ಅರಳಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಗೊಪ್ಪೇನಹಳ್ಳಿ(ಗೊಂದಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಸಹಾಯಕಿಗೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಲ್ಲದೇ, ಅಪಪ್ರಚಾರದಲ್ಲಿ ತೊಡಗಿರುವ ಶಾಲಾಭಿವೃದ್ಧಿ ಸಮಿತಿ ವಿರುದ್ಧ ಕಾನೂನು ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಪೊಲೀಸ್ ಉಪ ಅಧೀಕ್ಷಕರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಗ್ರಾಮದ ಎ.ಕೆ.ಕಾಲೋನಿ ನಿವಾಸಿ, ಪರಿಶಿಷ್ಟ ಜಾತಿ ಮಾದಿಗ ಸಮುದಾಯದ ರೂಪ ಅವರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಲಿಯಾಗಿದ್ದ ಅಡುಗೆ ಸಹಾಯಕಿ ಹುದ್ದೆಗೆ ನಿಯಮಾನುಸಾರ ಅರ್ಜಿ ಸಲ್ಲಿಸಿದ್ದು, 2008ರ ಅಕ್ಷರ ದಾಸೋಹ ಮಾರ್ಗಸೂಚಿ ಅನ್ವಯ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು 2003-04ರ ಸುತ್ತೋಲೆ, ಜಂಟಿ ನಿರ್ದೇಶಕರು, ಮಧ್ಯಾಹ್ನ ಉಪಹಾರ ಯೋಜನೆ, ಬೆಂಗಳೂರು ಅವರ ಪತ್ರ ಹಾಗೂ ಗ್ರಾಮ ಪಂಚಾಯಿತಿ ಕಾರ್ಯಾಲಯ, ಅರಳಿಕೊಪ್ಪ ಮತ್ತು ತಾಲೂಕು ಪಂಚಾಯಿತಿ ಅನುಮೋದನೆಯಂತೆ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಜಾತಿನಿಂದನೆ ಕೇಸ್, ಇಂದು ಮತ್ತೆ ಹೈಕೋರ್ಟ್‌ಗೆ ನಟ ಉಪೇಂದ್ರ ಅರ್ಜಿ
ರೂಪ ಅವರು ಪರಿಶಿಷ್ಟ ಜಾತಿಗೆ ಸೇರಿರುವ ಹಿನ್ನೆಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೈಯದ್ ಶಫಿ ಉಲ್ಲಾ, ಸದಸ್ಯರಾದ ಅರುಣ್, ಅಸ್ಮಾಬಾನು, ಸಮೀನ ಬಾನು, ಎಸ್. ನಾಗರಾಜ್, ಜಯಮ್ಮ, ಕೆ.ನಾಗರಾಜ, ಮಂಜುಳ ಮತ್ತು ಬಾಲು ನಾಯ್ಕ ಸೇರಿದಂತೆ ಇನ್ನಿತರರು ಕರ್ತವ್ಯ ನಿರ್ವಹಿಸದಂತೆ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೇ, ಜಾತಿ ನಿಂದನೆ ಮಾಡಿ ಎಲ್ಲೆಡೆ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆಂದು ಆರೋಪಿಸಲಾಯಿತು.
ಈ ಸಂಬಂಧ 3 ದಿನಗಳ ಹಿಂದೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಲಾಯಿತು. ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಲಾಯಿತು.
ಸ್ಥಳಕ್ಕೆ ಆಗಮಿಸಿದ ಪೊಲೀಸ್ ಉಪ ಅಧೀಕ್ಷಕ ನಾಗರಾಜ್ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆದರೂ ಪ್ರತಿಭಟನೆ ಮುಂದುವರಿಸಿ ತಕ್ಷಣ ಬಂಧಿಸಬೇಕೆಂದು ಆಗ್ರಹಿಸಲಾಯಿತು. ಈ ನಡುವೆ ಪೊಲೀಸರು ಪ್ರತಿಭಟನೆ ಕೈಬಿಡುವಂತೆ ಮನವೊಲಿಸಲು ಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ.
Bengaluru Crime: ಪತ್ನಿಗೆ ಎಸ್‌ಐನಿಂದ ಜಾತಿ ನಿಂದನೆ, ಕಿರುಕುಳ ಆರೋಪ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ
ಪ್ರತಿಭಟನೆಯಲ್ಲಿ ಪ್ರಮುಖರಾದ ಬಾಲಕೃಷ್ಣ, ಸುರೇಶ್ (ಪ್ರಜಾಪ್ರತಿನಿಧಿ), ಕೃಷ್ಣಪ್ಪ, ಎಸ್.ಕೆ. ಸುಧೀಂದ್ರ, ಚನ್ನಪ್ಪ, ಸಿ. ಜಯಪ್ಪ, ಜಿ.ರಾಜು, ವಿಲ್ಸನ್ ಬಾಬು ಸೇರಿದಂತೆ ಗ್ರಾಮದ ಮುಖಂಡರು, ಗ್ರಾಮಸ್ಥರು ಹಾಗೂ ರೂಪ ಕುಟುಂಬಸ್ಥರು ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.