ತಮಿಳುನಾಡಿನ ದಾಹ ಇಂಗಿಸಲು ರಾಮನಗರದ ಡ್ಯಾಂಗಳ ಮೇಲೆ ಸರ್ಕಾರದ ವಕ್ರದೃಷ್ಟಿ..!

By Kannadaprabha NewsFirst Published Sep 29, 2023, 1:05 PM IST
Highlights

ತಮಿಳುನಾಡಿಗೆ ಕೆಆರ್‌ ಎಸ್‌ ಜಲಾಶಯದಿಂದ ಒಂದು ಹನಿ ನೀರು ಬಿಡುಗಡೆ ಮಾಡದೆ ಕಾವೇರಿ ವ್ಯಾಪ್ತಿಯ ಬೇರೆ ಮೂಲಗಳಿಂದ 1 ಸಾವಿರ ಕ್ಯುಸೆಕ್ ನೀರು ಪರ್ಯಾಯ ವ್ಯವಸ್ಥೆ ಮಾಡುತ್ತೇವೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿರುವ ಮಾತುಗಳು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ತವರು ಜಿಲ್ಲೆಯಲ್ಲಿರುವ ಜಲಾಶಯಗಳ ಮೇಲೆಯೇ ಡಿ.ಕೆ.ಶಿವಕುಮಾರ್‌ ಅವರ ಕಣ್ಣು ಬಿದ್ದಿದಿಯೇ ಎಂಬ ಅನುಮಾನವೂ ಮೂಡುತ್ತಿದೆ.

ಎಂ.ಅಫ್ರೋಜ್ ಖಾನ್‌

ರಾಮನಗರ(ಸೆ.29): ತಮಿಳುನಾಡಿನ ನೀರಿನ ದಾಹ ಇಂಗಿಸಲು ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿರುವ ಸಣ್ಣ ಜಲಾಶಯಗಳ ಮೇಲೆ ರಾಜ್ಯ ಸರ್ಕಾರದ ವಕ್ರದೃಷ್ಟಿ ಬಿದ್ದಿದಿಯೇ ಎಂಬ ಆತಂಕ ರೈತರನ್ನು ಕಾಡಲಾರಂಭಿಸಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಪ್ರಕಾರ ತಮಿಳುನಾಡಿಗೆ 3 ಸಾವಿರ ಕ್ಯುಸೆಕ್ ನೀರು ಹರಿಸಬೇಕಾಗಿದೆ. ಸೀಪೇಜ್‌ ನೀರು 2 ಸಾವಿರ ಕ್ಯುಸೆಕ್‌ ಸಹಜವಾಗಿಯೇ ಹರಿದು ಹೋದರು ಉಳಿದ 1 ಸಾವಿರ ಕ್ಯುಸೆಕ್‌ ನೀರಿಗಾಗಿ ಜಿಲ್ಲೆಯಲ್ಲಿನ ಸಣ್ಣ ಜಲಾಶಯಗಳಿಗೆ ಕನ್ನ ಹಾಕುವ ಸಾಧ್ಯತೆಗಳೇ ಹೆಚ್ಚಾಗಿದೆ.

ತಮಿಳುನಾಡಿಗೆ ಕೆಆರ್‌ ಎಸ್‌ ಜಲಾಶಯದಿಂದ ಒಂದು ಹನಿ ನೀರು ಬಿಡುಗಡೆ ಮಾಡದೆ ಕಾವೇರಿ ವ್ಯಾಪ್ತಿಯ ಬೇರೆ ಮೂಲಗಳಿಂದ 1 ಸಾವಿರ ಕ್ಯುಸೆಕ್ ನೀರು ಪರ್ಯಾಯ ವ್ಯವಸ್ಥೆ ಮಾಡುತ್ತೇವೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿರುವ ಮಾತುಗಳು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ತವರು ಜಿಲ್ಲೆಯಲ್ಲಿರುವ ಜಲಾಶಯಗಳ ಮೇಲೆಯೇ ಡಿ.ಕೆ.ಶಿವಕುಮಾರ್‌ ಅವರ ಕಣ್ಣು ಬಿದ್ದಿದಿಯೇ ಎಂಬ ಅನುಮಾನವೂ ಮೂಡುತ್ತಿದೆ.
ಈ ಹಿಂದೆ ಅತಿವೃಷ್ಟಿಯಾದ ಸಮಯದಲ್ಲಿ ಜಿಲ್ಲೆಯ ಮಂಚನಬೆಲೆ, ಹಾರೋಬೆಲೆ ಹಾಗೂ ಇಗ್ಗಲೂರು ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿದು ಹೋಗಿರುವ ಉದಾಹರಣೆಗಳಿವೆ. ಮಂಚನಬೆಲೆ ಡ್ಯಾಂ ನೀರು ಹಾರೋಬೆಲೆ ಜಲಾಶಯಕ್ಕೆ ಹರಿದು ಅಲ್ಲಿಂದ ಚುಂಚಿಫಾಲ್ಸ್‌ ಮೂಲಕ ಸಂಗಮದಲ್ಲಿ ಕಾವೇರಿ ನದಿ ಸೇರಲಿದೆ. ಇಗ್ಗಲೂರು ಜಲಾಶಯದ ನೀರು ಟಿ.ಕೆ.ಹಳ್ಳಿ ಮೂಲಕ ಸಂಗಮದಲ್ಲಿ ಕಾವೇರಿ ನದಿಗೆ ಸೇರಿ ತಮಿಳುನಾಡಿಗೆ ಹರಿಯಲಿದೆ.

ಇಂದಿನ ಕರ್ನಾಟಕ ಬಂದ್‌ಗೆ ಬಿಜೆಪಿಯಿಂದ ಪೂರ್ಣ ಬೆಂಬಲ: ಬೊಮ್ಮಾಯಿ

ಮಂಚನಬೆಲೆ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯಲು, ಇಗ್ಗಲೂರು ಜಲಾಶಯದ ನೀರನ್ನು ಬೆಳೆ ಮತ್ತು ಕುಡಿಯಲು ಹಾಗೂ ಹಾರೋಬೆಲೆ ಜಲಾಶಯದ ನೀರನ್ನು ಬೆಳೆಗಳಿಗೆ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ. ತಮಿಳುನಾಡಿನ ನೀರಿನ ದಾಹ ಇಂಗಿಸಲು ಕಾವೇರಿ ವ್ಯಾಪ್ತಿಯ ಬೇರೆ ಮೂಲಗಳೆಂದರೆ ಈ ಜಲಾಶಯಗಳ ನೀರನ್ನು ಎಲ್ಲಿ ಹರಿಸುತ್ತಾರೊ ಎಂಬ ಆತಂಕ ರೈತರಿಗೆ ಕಾಡುತ್ತಿದೆ.

ಮಾಗಡಿಯ ಮಂಚನಬೆಲೆ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಲು 3.50 ಅಡಿ ಬಾಕಿ ಇದೆ. ಈ ಜಲಾಶಯವು 1.037 ಟಿಎಂಸಿ ಶೇಖರಿಸಿಕೊಳ್ಳಲಿದ್ದು, ಸದ್ಯಕ್ಕೆ .979 ಟಿಎಂಸಿ ನೀರು ಸಂಗ್ರಹವಾಗಿದೆ. ಒಳ ಮತ್ತು ಹೊರ ಹರಿವು ಸ್ಥಗಿತಗೊಂಡಿದ್ದು, ಕುಡಿಯಲು ಮಾತ್ರ ನೀರನ್ನು ಉಪಯೋಗಿಸಲಾಗುತ್ತಿದೆ.

ಚನ್ನಪಟ್ಟಣ ತಾಲೂಕಿನಲ್ಲಿರುವ ಇಗ್ಗಲೂರು ಬ್ಯಾರೇಜ್ ನಲ್ಲಿ 0.18 ಟಿಎಂಸಿ ನೀರು ಸಂಗ್ರಹವಾಗಿದೆ. ಸದ್ಯಕ್ಕೆ ಜಲಾಶಯದ ನೀರಿನ ಮಟ್ಟ 18.6 ಅಡಿಗಳಿಷ್ಟಿದ್ದು, ಗರಿಷ್ಠ 19 ಅಡಿಗಳಷ್ಟು ನೀರು ತುಂಬಲಿದೆ. ಮೂರು ದಿನಗಳಿಂದ ಒಳ ಹರಿವು 200 ಕ್ಯುಸೆಕ್‌ ಇದ್ದು, ಬುಧವಾರ 300 ಕ್ಯುಸೆಕ್‌ ನೀರನ್ನು ಹೊರ ಬಿಡಲಾಗಿತ್ತು. ಈ ಜಲಾಶಯದ ನೀರನ್ನು ಕಣ್ವ ಜಲಾಶಯ ಹಾಗೂ ಕೆರೆಗಳನ್ನು ತುಂಬಿಸಿ ಕುಡಿಯಲು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಕಾವೇರಿ ಉಗಮ ಸ್ಥಾನ ಕೊಡಗಿನಲ್ಲೇ ಇಂದು ಬಂದ್‌ ಇಲ್ಲ..!

ಇನ್ನು ಕನಕಪುರ ತಾಲೂಕು ಕೋಡಿಹಳ್ಳಿ ಹೋಬಳಿಯಲ್ಲಿರುವ ಹಾರೋಬೆಲೆ ಜಲಾಶಯವು 18.30 ಅಡಿ ಎತ್ತರವಿದ್ದು, 17.90 ಅಡಿಯಷ್ಟು ನೀರು ಸಂಗ್ರಹವಾಗಿದೆ. ಒಟ್ಟು 1.579 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು, 1.498 ಟಿಎಂಸಿ ನೀರು ಶೇಖರಣೆಯಾಗಿದೆ. 150 ಕ್ಯುಸೆಕ್‌ ಒಳ ಹರಿವಿದ್ದು, ಬೆಳೆಗಳಿಗಾಗಿ ನಾಲೆಗಳಲ್ಲಿ ನೀರು ಹರಿಸಲಾಗುತ್ತಿದೆ. ಹೆಚ್ಚುವರಿ ಮಳೆಯಾದಾಗ ಹಾಗೂ 2016ರ ಅಕ್ಟೋಬರ್‌ ನಲ್ಲಿ ಇದೇ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗಿತ್ತು.

ಹಾಗೊಂದು ವೇಳೆ ರಾಜ್ಯ ಸರ್ಕಾರ ಈ ಜಲಾಶಯಗಳಿಂದ ನೀರು ಹರಿಸಿದಲ್ಲಿ ಬರ ಪೀಡಿತ ತಾಲೂಕುಗಳಲ್ಲಿ ಕುಡಿಯಲು ಹಾಗೂ ಬೆಳೆಗಳಿಗೆ ಇದೇ ನೀರನ್ನು ನಂಬಿಕೊಂಡಿರುವ ರೈತರು ಮತ್ತು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಿದೆ.

click me!