ಹೊಸಪೇಟೆ: ಗದಗ ಬಳಿ ಭೀಕರ ಅಪಘಾತ: ಸಾಹಿತ್ಯಪ್ರೇಮಿ ಡಾ. ಬಾಲರಾಜ್‌, ವಿನಯ್‌ ದುರ್ಮರಣ

By Kannadaprabha News  |  First Published Sep 29, 2023, 11:42 AM IST

ಡಾ. ಎಚ್‌. ಬಾಲರಾಜ್‌ ಹಾಗೂ ಅವರ ಪುತ್ರ ಗಂಗಾವತಿಯ ಎಂಜಿನಿಯರಿಂಗ್‌ ಕಾಲೇಜಿನ ಉಪನ್ಯಾಸಕ ಡಾ. ವಿನಯ್‌ ಗದಗ ಜಿಲ್ಲೆಯ ಲಕ್ಕುಂಡಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಗುರುವಾರ ಮೃತಪಟ್ಟಿದ್ದಾರೆ. ಇವರ ನಿಧನಕ್ಕೆ ಇಡೀ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಸಾರಸ್ವತ ಲೋಕ ಕಂಬನಿ ಮಿಡಿದಿದೆ.


ಹೊಸಪೇಟೆ(ಸೆ.29):  ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು ಹಾಗೂ ಶಿಕ್ಷಣ ಇಲಾಖೆಯ ರಾಜ್ಯ ನಿರ್ದೇಶಕರಾಗಿ ನಿವೃತ್ತರಾಗಿದ್ದ ಡಾ. ಎಚ್‌. ಬಾಲರಾಜ್‌ (68) ಹಾಗೂ ಅವರ ಪುತ್ರ ಗಂಗಾವತಿಯ ಎಂಜಿನಿಯರಿಂಗ್‌ ಕಾಲೇಜಿನ ಉಪನ್ಯಾಸಕ ಡಾ. ವಿನಯ್‌ (40) ಗದಗ ಜಿಲ್ಲೆಯ ಲಕ್ಕುಂಡಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಗುರುವಾರ ಮೃತಪಟ್ಟಿದ್ದಾರೆ. ಇವರ ನಿಧನಕ್ಕೆ ಇಡೀ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಸಾರಸ್ವತ ಲೋಕ ಕಂಬನಿ ಮಿಡಿದಿದೆ.

ಹಗರಿಬೊಮ್ಮನಹಳ್ಳಿ ತಾಲೂಕಿನ ಲಡಕನಬಾವಿ (ಈಗಿನ ನಾರಾಯಣದೇವರಕೆರೆ) ಗ್ರಾಮದಲ್ಲಿ 1953ರಲ್ಲಿ ಜನಿಸಿದ ಬಾಲರಾಜ್‌ ಅವರು, ಮುಂದೆ ರಾಜ್ಯದ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದ್ದಾರೆ. ತುಂಗಭದ್ರಾ ಜಲಾಶಯ ನಿರ್ಮಾಣ ಕಾಲಕ್ಕೆ ಲಡಕನಬಾವಿ ಗ್ರಾಮ ಮುಳುಗಡೆಯಾಯಿತು. ಆ ಗ್ರಾಮದಿಂದ ಇವರ ಪೂರ್ವಜರು ಈಗಿನ ನಾರಾಯಣದೇವರ ಕೆರೆಗೆ ವಲಸೆ ಬಂದಿದ್ದರು.

Tap to resize

Latest Videos

ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಅಪಘಾತ, ಇನ್ಫೋಸಿಸ್, ಆ್ಯಕ್ಸೆಂಚರ್‌ನ ನಾಲ್ವರು ಟೆಕ್ಕಿ ಮೃತ!

ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ವಲಯದಲ್ಲಿ ತೊಡಗಿಸಿಕೊಂಡಿದ್ದ ಇವರು ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದಾಗಲೇ ನಾನು ಮತ್ತು... ಎಂಬ ಕವನ ಸಂಕಲನ ಹೊರತಂದಿದ್ದರು. ಕ್ಯಾದಿಗೆಹಳ್ಳಿ ಅಂಬವ್ವ ಪದಗಳು, ಸೂರ್ಯ, ಬೆಳಕು ಮತ್ತು ಕತ್ತಲು ಕಥಾ ಸಂಕಲನ ಹಾಗೂ ನೀಲಕುಮಾರನ ಕತೆ ಎಂಬ ಕಥಾ ಸಂಕಲನ ಕೂಡ ಹೊರ ತಂದಿದ್ದರು.

2002ರಲ್ಲಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಮುದಾಯ ಭಾಗವಹಿಸುವಿಕೆಯ ಮುಖಾಂತರ ಶೈಕ್ಷಣಿಕ ಅಭಿವೃದ್ಧಿ ಎಂಬ ವಿಷಯ ಕುರಿತು ಮಹಾಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಕೂಡ ಪಡೆದಿದ್ದರು. ಕನ್ನಡ ಭಾಷೆಯ ಮೇಲೆ ಅಪಾರ ಪ್ರೀತಿ ಹೊಂದಿದ್ದ ಇವರನ್ನು ಹೊಸಪೇಟೆ ಕನ್ನಡ ಸಾಹಿತ್ಯ ಪರಿಷತ್ತು ಗುರುತಿಸಿ 2023ರ ಮಾರ್ಚ್‌ನಲ್ಲಿ ನಡೆದ ತಾಲೂಕಿನ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿತ್ತು. ಕನ್ನಡ ಕಟ್ಟುವ ಆಶಯವನ್ನು ಸರ್ವಾಧ್ಯಕ್ಷರಾಗಿದ್ದ ಡಾ. ಎಚ್‌. ಬಾಲರಾಜ್‌ ವ್ಯಕ್ತಪಡಿಸಿದ್ದರು.

ಮಂಡ್ಯ: ನಾಗಮಂಗಲ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಕಾರು, ಸ್ಥಳದಲ್ಲೇ ನಾಲ್ವರ ದುರ್ಮರಣ

ಡಾ. ವಿನಯ್‌ ಕೂಡ ಹಸನ್ಮುಖಿಯಾಗಿದ್ದರು. ತಂದೆಯಂತೆ ಸರಳ ಸ್ವಭಾವದ ಅವರು, ಗಂಗಾವತಿಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಡಾ. ಎಚ್‌. ಬಾಲರಾಜ್‌ ಅವರಿಗೆ ಮೂವರು ಮಕ್ಕಳಲ್ಲಿ ಡಾ. ವಿನಯ್‌ ಹಿರಿಯ ಪುತ್ರ. ಇಬ್ಬರು ಪುತ್ರಿಯರು. ಇವರ ಪತ್ನಿ ಸರ್ವಮಂಗಳಾ ಅವರು ಈ ವಿಷಯ ತಿಳಿದು ಆಘಾತಗೊಂಡಿದ್ದಾರೆ. ಡಾ. ವಿನಯ್‌ ಅವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.

ಬಳ್ಳಾರಿಯ ಡಿಡಿಪಿಐ ಆಗಿ ಡಾ. ಎಚ್. ಬಾಲರಾಜ್‌ ಈ ಭಾಗದಲ್ಲಿ ಶಿಕ್ಷಣದಲ್ಲಿ ಸುಧಾರಣೆ ತಂದಿದ್ದರು. ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಶಿಕ್ಷಕರ ಪ್ರೀತಿ ಗಳಿಸಿದ್ದರು. ಕಲ್ಯಾಣ ಕರ್ನಾಟಕದಲ್ಲೂ ಅವರು ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು. ಕಲಬುರಗಿ ವಿಭಾಗದ ಜಂಟಿ ನಿರ್ದೇಶಕರಾಗಿಯೂ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ನಿಧನಕ್ಕೆ ಸಾಹಿತ್ಯ ಹಾಗೂ ಶಿಕ್ಷಣ ವಲಯ ಕಂಬನಿ ಮಿಡಿದಿದೆ. ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ರಾಜಕಾರಣಿಗಳು, ಮಠಾಧೀಶರು ಸಂತಾಪ ವ್ಯಕ್ತಪಡಿಸಿದ್ದಾರೆ.

click me!