ಕೇಂದ್ರದ ಮಾಜಿ ಸಚಿವ M V ರಾಜಶೇಖರನ್ ಇನ್ನಿಲ್ಲ

By Suvarna News  |  First Published Apr 13, 2020, 11:36 AM IST
ಕೇಂದ್ರದ ಮಾಜಿ ಸಚಿವ ಎಂ.ವಿ. ರಾಜಶೇಖರನ್ ನಿಧನ| ಬೆಂಗಳೂರಿನ ಸಾಗರ ಅಪೊಲೊ ಆಸ್ಪತ್ರೆಯಲ್ಲಿ ಕೊನೆಯುಸಿರು|ಎಂ.ವಿ. ರಾಜಶೇಖರನ್ ನಿಧನಕ್ಕೆ ಸಂತಾಪ ಸೂಚಿಸಿದ ಡಿಸಿಎಂ ಡಿಸಿಎಂ ಲಕ್ಷ್ಮಣ ಸವದಿ|

ರಾಮನಗರ(ಏ.13): ಕರ್ನಾಟಕದ ಹಿರಿಯ ರಾಜಕಾರಣಿ ಹಾಗೂ ಕೇಂದ್ರದ ಮಾಜಿ ಸಚಿವ ಎಂ.ವಿ. ರಾಜಶೇಖರನ್(92) ಅವರು ಇಂದು(ಸೋಮವಾರ) ನಿಧನರಾಗಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಅನಾರೋಗ್ಯದಿಂದ ಬೆಂಗಳೂರಿನ ಸಾಗರ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಇಹಲೋಕ ತ್ಯಜಿಸಿದ್ದಾರೆ. 

ಸಜ್ಜನ ರಾಜಕಾರಣಿ ಎಂ.ವಿ.ರಾಜಶೇಖರನ್ ಕಿರು ಪರಿಚಯ

ಎಂ.ವಿ. ರಾಜಶೇಖರನ್ ಈಗಿನ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮರಳವಾಡಿಯವರು. 12.09.1928 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕನಕಪುರ ತಾಲ್ಲೂಕಿನ ಮರಳವಾಡಿಯಲ್ಲಿ ಜನಿಸಿರುವ ಎಂ.ವಿ. ರಾಜಶೇಖರನ್ ಅವರು ಕರ್ನಾಟಕದ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. 1947-48ರ ಮೈಸೂರು ಚಲೋ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಎಂ.ವಿ. ರಾಜಶೇಖರನ್, ಅಪ್ಪರ್ ಸೆಕೆಂಡರಿ (ಮಾಧ್ಯಮಿಕ ಶಾಲೆಯಲ್ಲಿ) ವ್ಯಾಸಂಗ ಮಾಡುತ್ತಿದ್ದಾಗಲೇ ಭಾರತದ ಸ್ವಾತಂತ್ರ್ಯ ಹೋರಾಟದ ಮಹಾನ್ ಮೌಲ್ಯಗಳಿಗೆ ತಮ್ಮನ್ನ ತೆತ್ತುಕೊಂಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಗ ಮಿತ್ರಮೇಳ ಎಂಬ ಸಾಂಸ್ಕೃತಿಕ ಸಂಘಟನೆಯಲ್ಲಿ ದುಡಿದು ತಮ್ಮ ಮುಂದಿನ ಬದುಕನ್ನು ರಚನಾತ್ಮಕ ಕೆಲಸಗಳಿಗೆ ಮೀಸಲಾಗಿಟ್ಟಿದ್ದಾರೆ.

1953ರಲ್ಲಿ ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಕಾನೂನು ವ್ಯಾಸಂಗ ಮುಗಿಸುವ ಮುಂಚೆಯೇ ತಮ್ಮ ತಂದೆಯವರ ಅಕಾಲ ಮರಣದಿಂದ ಮರಳವಾಡಿಗೆ ಮರಳಿ ವ್ಯವಸಾಯಕ್ಕೆ ತಮ್ಮ ಸಂಪೂರ್ಣ ಸಮಯವನ್ನು ಮೀಸಲಿಟ್ಟು ಪ್ರಗತಿಪರ ರೈತರೆನಿಸಿಕೊಂಡಿದ್ದಾರೆ. 

ಫೀಲ್ಡಿಗಿಳಿದ ಸಿಎಂ: ಬೆಂಗ್ಳೂರು ರೌಂಡ್ಸ್‌ ವೇಳೆ ಸಾರ್ವಜನಿಕರಿಂದ ಬಿಎಸ್‌ವೈಗೆ ಮೆಚ್ಚುಗೆ..!

ಹೆಚ್.ಸಿ. ದಾಸಪ್ಪ ಮತ್ತು ಯಶೋಧರಮ್ಮ ದಾಸಪ್ಪನವರ ಮಧ್ಯಸ್ತಿಕೆಯಿಂದ ಕರ್ನಾಟಕದ ರೂವಾರಿ ಎಸ್. ನಿಜಲಿಂಗಪ್ಪನವರ ನಾಲ್ಕನೆಯ ಮಗಳು ಗಿರಿಜಾ ಅವರನ್ನು 1959ರಲ್ಲಿ ವಿವಾಹವಾದರು. ಅಖಿಲ ಭಾರತ ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯ ಘಟಕದ ವಿವಿಧ ಸ್ಥಾನಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಅವರದಾಯಿತು. ವಿಶೇಷವಾಗಿ ಯೂತ್ ಕಾಂಗ್ರೆಸ್ ರಾಜ್ಯದಲ್ಲಿ ಬಲಗೊಳ್ಳಲು ಅವರು ಕಾರಣಕರ್ತರಾಗಿದ್ದಾರೆ. 

1967ರಲ್ಲಿ 50 ಸಾವಿರಕ್ಕೂ ಹೆಚ್ಚಿನ ಮತಗಳಿಂದ ಕನಕಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಎಂ.ವಿ.ರಾಜಶೇಖರನ್ ಯಾವ ಲೋಕಸಭಾ ಸದಸ್ಯರೂ ಯೋಚಿಸದ ರೀತಿ ಚಿಂತಿಸಿ, ಅವುಗಳನ್ನು ಅನುಷ್ಠಾನ ಮಾಡಿದರು. ಮಂಚನಬೆಲೆ ನೀರಾವರಿ ಯೋಜನೆ ಹೀಗೆಯೇ ಅನುಷ್ಠಾನಗೊಂಡ ಒಂದು ಯೋಜನೆಯಾಗಿದೆ. 

1978ರಲ್ಲಿ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದ ರಾಜಶೇಖರನ್ ತಮ್ಮ ರಚನಾತ್ಮಕ ಕೆಲಸಗಳಿಂದ ತಮ್ಮ ಕ್ಷೇತ್ರದ ಎಲ್ಲೆಡೆ ಪ್ರಸಿದ್ಧಿಯಾಗಿದ್ದರು. 1999ರಲ್ಲಿ ವಿಧಾನಪರಿಷತ್ತಿನ ಸದಸ್ಯತ್ವ, 2002ರಲ್ಲಿ ರಾಜ್ಯಸಭಾ ಸದಸ್ಯತ್ವ ಸ್ಥಾನವು ಅವರನ್ನು ಅರಸಿಕೊಂಡು ಬಂದಿತು. ಭಾರತ ಸರ್ಕಾರದಲ್ಲಿ ಯೋಜನಾ ರಾಜ್ಯ ಮಂತ್ರಿಯಾಗಿ ದುಡಿದರು. 2009ರ ವರೆಗೂ ಬದ್ಧತೆ, ಸಂಘಟನೆ ಹಾಗೂ ವಿಚಾರಶೀಲತೆಗೆ ರಾಜಶೇಖರನ್ ಸದಾ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಗ್ರಾಮೀಣ ಅಭಿವೃದ್ಧಿ ಕುರಿತಂತೆ 100ಕ್ಕೂ ಹೆಚ್ಚಿನ ಪ್ರಬಂಧಗಳನ್ನು ಮಂಡಿಸಿದ್ದಾರೆ. ರಾಜಶೇಖರನ್ ಅವರ ಏಷ್ಯಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ರಾಮೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಂಸ್ಥೆಯಾಗಿದೆ. ಸರಳತೆ, ಸಜ್ಜನಿಕೆ, ತಾಳ್ಮೆಗಳನ್ನು ರೂಢಿಸಿಕೊಂಡಿರುವ ರಾಜಶೇಖರನ್ ಮಹಾತ್ಮ ಗಾಂಧೀಜಿ ಹೇಳಿದ ಜೀವನ ಮೌಲ್ಯಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು.

ಎಂ. ವಿ. ರಾಜಶೇಖರನ್ ಅನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಎಂ. ವಿ. ರಾಜಶೇಖರನ್ ಅವರು ಸರಳತೆ, ಸಜ್ಜನಿಕೆಯ ಪ್ರಬುದ್ಧ ರಾಜಕಾರಣಿಯಾಗಿದ್ದರು. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಅಳಿಯನಾದ ಅವರು, ಗ್ರಾಮೀಣ ಆರ್ಥಿಕತೆಯ ವಿಚಾರದಲ್ಲಿ ಆಳವಾದ ಜ್ಞಾನ ಹೊಂದಿದ್ದರು. ಗ್ರಾಮೀಣ ಅಭಿವೃದ್ಧಿ ಕುರಿತು ಅಧ್ಯಯನ ಸಂಸ್ಥೆಯೊಂದನ್ನು ಸ್ಥಾಪಿಸಿದ್ದರು. 
 

ಆತ್ಮೀಯರು,ಕೇಂದ್ರದ ಮಾಜಿ ಸಚಿವರಾಗಿದ್ದ ಎಂ ವಿ ರಾಜಶೇಖರನ್ ಅವರ ನಿಧನ ದುಃಖಕರ.

ಸರಳ, ಸಜ್ಜನಿಕೆಗಳ ಎಂ ವಿ ಆರ್ ಅವರ ಅಗಲಿಕೆಯಿಂದ ಮೌಲ್ಯಾಧಾರಿತ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ.

ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

— B.S. Yediyurappa (@BSYBJP)


ಮೌಲ್ಯಾಧಾರಿತ ರಾಜಕಾರಣ ದಿಂದಾಗಿಯೆ ಗುರುತಿಸಿಕೊಂಡಿದ್ದರು. ಅವರ ನಿಧನ ಅತ್ಯಂತ ದುಃಖದ ಸಂಗತಿ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬ ವರ್ಗ, ಅಭಿಮಾನಿ ಬಳಗಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ಸಂತಾಪ ಸೂಚಿಸಿದ್ದಾರೆ.

ರಾಜಶೇಖರನ್ ನಿಧನಕ್ಕೆ ಡಿಸಿಎಂ ಲಕ್ಷ್ಮಣ ಸವದಿ ಅವರು ಸಂತಾಪ ಸೂಚಿಸಿದ್ದಾತೆ. ರಾಯಚೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು,  ಹಿರಿಯ ಮುತ್ಸದ್ಧಿಯಾಗಿ, ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ, ರಾಜ್ಯ ರಾಜಕಾರಣದಲ್ಲಿಯೂ ಅತ್ಯಂತ ಸಕ್ರಿಯರಾಗಿ ನಾಡಿಗೆ ಬಹುಶ್ರುತವಾಗಿ ಸೇವೆಸಲ್ಲಿಸಿದ ಹಿರಿಯರಾದ ಎಂ.ವಿ ರಾಜಶೇಖರನ್ ನಿಧನರಾಗಿರುವುದು ತುಂಬಾ ದುಃಖದ ಸಂಗತಿಯಾಗಿದೆ ಎಂದು ಕಂಬಣಿ ಮಿಡಿದಿದ್ದಾರೆ. 
 

ಹಿರಿಯ ಮುತ್ಸದ್ಧಿಯಾಗಿ, ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ, ರಾಜ್ಯ ರಾಜಕಾರಣದಲ್ಲಿಯೂ ಅತ್ಯಂತ ಸಕ್ರಿಯರಾಗಿ ನಾಡಿಗೆ ಬಹುಶ್ರುತ ವಾಗಿ ಸೇವೆಸಲ್ಲಿಸಿದ ಹಿರಿಯರಾದ ಶ್ರೀ ಎಂವಿ ರಾಜಶೇಖರನ್ ಅವರು ಇಂದು ನಿಧನರಾಗಿರುವುದು ತುಂಬಾ ದುಃಖದ ಸಂಗತಿಯಾಗಿದೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. pic.twitter.com/SSYMjvjTjY

— ಲಕ್ಷ್ಮಣ್ ಸಂಗಪ್ಪ ಸವದಿ | Laxman Sangappa Savadi (@LaxmanSavadi)


ಎಂ. ವಿ. ರಾಜಶೇಖರನ್‌ ನಿಧನರಾಗಿದ್ದಕ್ಕೆ ಬಹಳ ದುಃಖವಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ಸಂತಾಪ ಸೂಚಿಸಿದ್ದಾರೆ. ಇಂದು ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ಪಾರ್ಥಿವ ಶರೀರದ ಕೊನೆಯ ದರ್ಶನವನ್ನ ಪಡೆದಿದ್ದೇನೆ. ಎಂ. ವಿ. ರಾಜಶೇಖರನ್‌ ಅವರ ಅಗಲಿಕೆ ಸುದ್ದಿ ಭರಿಸುವಂತ ಶಕ್ತಿ ಅವರ ಕುಟುಂಬಕ್ಕೆ ನೀಡಲಿ ಎಂದು ತಿಳಿಸಿದ್ದಾರೆ. 
 

Deeply saddened by the demise of Former Union Minister and Senior Congress leader Shri MV Rajasekharan

Paid my respects to this statesman at the hospital this morning. His contributions to the state and nation are innumerable. My Condolences to his family. pic.twitter.com/XmNOp6oipu

— DK Shivakumar (@DKShivakumar)
 
click me!