ಶರಾವತಿ ಹಿನ್ನೀರು ಪ್ರದೇಶದಲ್ಲಿ ಇನ್ನಷ್ಟು ಲಾಂಚ್‌ಗಳು

By Kannadaprabha News  |  First Published Feb 28, 2021, 1:01 PM IST

ಶರಾವತಿ ಹಿನ್ನೀರಿನ ಸಂತ್ರಸ್ತ ಜನರಿಗೆ ಅಗತ್ಯ ಇರುವ ಕಡೆಗಳಲ್ಲಿ ಲಾಂಚ್‌ ಹಾಗೂ ಸೇತುವೆ ನಿರ್ಮಾಣದ ಕೆಲಸಕ್ಕೆ ಆದ್ಯತೆ ನೀಡುತ್ತಿರುವುದಾಗಿ  ಶಾಸಕ ಹರತಾಳು ಹಾಲಪ್ಪ ಹೇಳಿದರು.


ಸಾಗರ (ಫೆ.28):  ತಾಲೂಕಿನ ಶರಾವತಿ ಹಿನ್ನೀರಿನ ಸಂತ್ರಸ್ತ ಜನರಿಗೆ ಅಗತ್ಯ ಇರುವ ಕಡೆಗಳಲ್ಲಿ ಲಾಂಚ್‌ ಹಾಗೂ ಸೇತುವೆ ನಿರ್ಮಾಣದ ಕೆಲಸಕ್ಕೆ ಆದ್ಯತೆ ನೀಡುತ್ತಿರುವುದಾಗಿ ಎಂಎಸ್‌ಐಎಲ್‌ ಅಧ್ಯಕ್ಷರೂ ಆಗಿರುವ ಕ್ಷೇತ್ರದ ಶಾಸಕ ಎಚ್‌.ಹಾಲಪ್ಪ ಹೇಳಿದರು.

ತಾಲೂಕಿನ ಚನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶರಾವತಿ ಹಿನ್ನೀರಿನ ಎಣ್ಣೆಹೊಳೆಯ ಶಿಗ್ಗಲು-ಕೋಗಾರು ಲಾಂಚ್‌ ಸೇವೆಗೆ ಶನಿವಾರ ಚಾಲನೆ ನೀಡಿ, ಗ್ರಾಮಸ್ಥರು ನೀಡಿದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.

Tap to resize

Latest Videos

ಮುಳುಗಡೆ ಸಂತ್ರಸ್ತರ ಕಷ್ಟಅನುಭವಿಸಿದವರಿಗೆ ಗೊತ್ತು. ನಾನು ಮುಳುಗಡೆ ಸಂತ್ರಸ್ತ ಕುಟುಂಬದಿಂದ ಬಂದ ಹಿನ್ನೆಲೆಯಲ್ಲಿ ಸಂತ್ರಸ್ತ ಜನರ ನೋವಿಗೆ ಸ್ಪಂದಿಸಿ, ಲಾಂಚ್‌ ವ್ಯವಸ್ಥೆ ಕಲ್ಪಿಸುತ್ತಿರುವುದಾಗಿ ಹೇಳಿದರು.

ಹಂದಿ ಕೊಲ್ಲಲು ಅನುಮತಿ ನೀಡಿ: ಶಾಸಕ ಹಾಲಪ್ಪ ...

ಶಿಗ್ಗಲು-ಕೋಗಾರು ನಡುವೆ ಸಂಪರ್ಕ ಸಾಧಿಸಬೇಕಾದರೆ ಒಂದು ಗ್ರಾಮದವರು ಮತ್ತೊಂದು ಗ್ರಾಮಕ್ಕೆ ಸುಮಾರು 40 ಕಿ.ಮೀ. ಕ್ರಮಿಸಬೇಕಾಗಿತ್ತು. ಈ ಭಾಗದಲ್ಲಿ ಲಾಂಚ್‌ ಸೇವೆ ಕಲ್ಪಿಸಿ ಎನ್ನುವ ಸಾರ್ವಜನಿಕರ ಒತ್ತಾಯದ ಮೇರೆಗೆ ಹೊಸ ಲಾಂಚ್‌ ಕಲ್ಪಿಸಲಾಗಿದೆ. ಕೇವಲ 3 ಕಿ.ಮೀ.ನಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಲು ಸಾಧ್ಯವಾಗಿದೆ. ಸದ್ಯದಲ್ಲಿಯೇ ಈ ಲಾಂಚ್‌ ತಂಗುವ ಸ್ಥಳಕ್ಕೆ ರಸ್ತೆ ಸೌಲಭ್ಯವನ್ನು ಸಹ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಶರಾವತಿ ಹಿನ್ನೀರು ಪ್ರದೇಶದಲ್ಲಿ ಇನ್ನಷ್ಟುಲಾಂಚ್‌ಗಳ ವ್ಯವಸ್ಥೆ ಅಗತ್ಯವಿದೆ. ಜಡ್ಡಿನಬೈಲು-ಕಿರುತೊಡೆ ಮೂಲಕ ಇನ್ನೊಂದು ಲಾಂಚ್‌ ಸೌಲಭ್ಯ ಕಲ್ಪಿಸಲು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದು, ಅದಕ್ಕೆ ಅವರು ಪೂರಕವಾಗಿ ಸ್ಪಂದಿಸಿ ಲಾಂಚ್‌ ಮಂಜೂರು ಮಾಡುವ ಭರವಸೆ ನೀಡಿದ್ದಾರೆ. ಇದರ ಜೊತೆಗೆ ಅಗತ್ಯ ಇರುವ ಕಡೆಗಳಲ್ಲಿ ಇನ್ನಷ್ಟುಲಾಂಚ್‌ ಸೇವೆ ಒದಗಿಸಲು ಸಹ ಪ್ರಯತ್ನ ನಡೆಸಲಾಗುತ್ತದೆ ಎಂದರು.

ಒಂದು ಕಾಲದಲ್ಲಿ ತುಮರಿ ಸೇತುವೆ ನಿರ್ಮಾಣವೇ ಅಸಾಧ್ಯ ಎನ್ನುತ್ತಿದ್ದರು. ಇದೀಗ 423 ಕೋಟಿ ವೆಚ್ಚದಲ್ಲಿ ಸೇತುವೆ ಹಾಗೂ ಸೇತುವೆ ಇಕ್ಕೆಲಗಳಲ್ಲಿ 20 ಕೋಟಿ ರು. ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.  100 ಕೋಟಿ ವೆಚ್ಚದಲ್ಲಿ ಹಸಿರುಮಕ್ಕಿ ಸೇತುವೆ,  56 ಕೋಟಿ ವೆಚ್ಚದಲ್ಲಿ ಪಟಗುಪ್ಪೆ ಸೇತುವೆ ಕಾವåಗಾರಿ ನಡೆಯುತ್ತಿದೆ. ಸದ್ಯದಲ್ಲಿಯೇ ಬೆಕ್ಕೋಡಿ ಸೇತುವೆ ನಿರ್ಮಾಣ ಸಹ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಲಾಂಚ್‌ ಸೌಲಭ್ಯವನ್ನು ಗ್ರಾಮಸ್ಥರು ಸದ್ಭಳಕೆ ಮಾಡಿಕೊಳ್ಳಬೇಕು. ಮರಳಗಳ್ಳರಿಗೆ, ಶಿಕಾರಿ ಮಾಡುವವರಿಗೆ ಈ ಲಾಂಚ್‌ ಉಪಯೋಗವಾಗಬಾರದು. ಅರಣ್ಯ ಸಂರಕ್ಷಣೆ ಬಗ್ಗೆ ಸಹ ಜನರು ಗಮನಹರಿಸಬೇಕು. ಅರಣ್ಯದಲ್ಲಿರುವ ಪ್ರಾಣಿಗಳು ಕಾಡಿನ ಆಭರಣ ಇದ್ದಂತೆ. ಅದನ್ನು ಬೇಟೆಯಾಡುವ ದುಸ್ಸಾಹಸಕ್ಕೆ ಕೈ ಹಾಕಬಾರದು. ಅರಣ್ಯ ಉಳಿದರೆ ಮಾತ್ರ ಕಾಡುಪ್ರಾಣಿ ಉಳಿಯುತ್ತದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ರಾಜಶೇಖರ ಗಾಳಿಪುರ ಮಾತನಾಡಿ, ಈ ಭಾಗದ ಜನರ ಬಹುಕಾಲದ ಬೇಡಿಕೆಯನ್ನು ಶಾಸಕರು ಈಡೇರಿಸುವ ಮೂಲಕ ಜನರ ಸಮಸ್ಯೆ ಬಗೆಹರಿಸಿದ್ದಾರೆ. ಶಿಗ್ಗಲು ಮತ್ತು ಕೋಗಾರು ಭಾಗದ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತರಲಾಗಿತ್ತು. ತೂಗುಸೇತುವೆ ನಿರ್ಮಾಣದ ಬಗ್ಗೆ ಒತ್ತಾಯ ಮಾಡಲಾಗಿತ್ತು. ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ತಾಲೂಕು ಪಂಚಾಯಿತಿ ಸದಸ್ಯೆ ಪ್ರಭಾವತಿ ಚಂದ್ರಕಾಂತ್‌ ಮಾತನಾಡಿದರು. ಚನ್ನಗೊಂಡ ಗ್ರಾಪಂ ಅಧ್ಯಕ್ಷ ಪದ್ಮರಾಜ್‌ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪವಿತ್ರಾ, ಕಾರ್ಗಲ್‌ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಾಸಂತಿ ರಮೇಶ್‌, ಉಪಾಧ್ಯಕ್ಷ ಮಂಜುನಾಥ ಪಿ., ಪ್ರಮುಖರಾದ ಮಂಜಯ್ಯ ಜೈನ್‌, ವಾಟೆಮಕ್ಕಿ ನಾಗರಾಜ್‌, ಓಂಕಾರ್‌ ಜೈನ್‌, ನೇಮಿರಾಜ್‌, ಸೋಮರಾಜ್‌ ಕೋಮನಕುರಿ, ಬಂದರು ಮತ್ತು ಒಳನಾಡು ಇಲಾಖೆಯ ವಿ.ಆರ್‌.ನಾಯಕ್‌ ಇನ್ನಿತರರು ಹಾಜರಿದ್ದರು.

click me!