ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ತನ್ನ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಹರಿಯಬಿಡುತ್ತಿದೆ. ಇದರಿಂದಾಗಿ ಕಲ್ಬುರ್ಗಿ ಜಿಲ್ಲೆಯ ಭೀಮಾನದಿ ತೀರದಲ್ಲಿ ಪ್ರವಾಹದ ಆತಂಕ ಸೃಷ್ಟಿಯಾಗಿದೆ.
ವರದಿ: ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಲಬುರಗಿ
ಕಲಬುರಗಿ (ಸೆ.11): ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ತನ್ನ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಹರಿಯಬಿಡುತ್ತಿದೆ. ಇದರಿಂದಾಗಿ ಕಲ್ಬುರ್ಗಿ ಜಿಲ್ಲೆಯ ಭೀಮಾನದಿ ತೀರದಲ್ಲಿ ಪ್ರವಾಹದ ಆತಂಕ ಸೃಷ್ಟಿಯಾಗಿದೆ. ಮಹಾರಾಷ್ಟ್ರ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಭೀಮಾ ನದಿ ಸಹ ತುಂಬಿ ಹರಿಯುತ್ತಿದೆ. ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಬಳಿ ಇರುವ ಬ್ಯಾರೇಜ್ ನಿಂದ ಇಂದು ಒಂದು ಲಕ್ಷ ಕ್ಯೂಸೆಕ್ಸ ನೀರು ಹರಿಬಿಡಲಾಗಿದೆ. ಇದರಿಮದಾಗಿ ನದಿ ಕೆಳಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಹಲವು ಗ್ರಾಮಗಳ ಸೇತುವೆಗಳು ಮುಳುಗಡೆಯಾಗಿವೆ.
ಗಾಣಗಾಪೂರ, ಘತ್ತರಗಾ ಸೇತುವೆ ಮೇಲೆ ನೀರು: ಅಫಜಲಪುರ ತಾಲೂಕಿನ ಸುಕ್ಷೇತ್ರ ಘತ್ತರಗಿ ಭಾಗ್ಯವಂತಿ ದೇವಸ್ಥಾನಕ್ಕೆ ತೆರಳುವ ಸೇತುವೆ ಭಾರಿ ನೀರಿನಿಂದ ಸಂಪೂರ್ಣ ಮುಳುಗಡೆಯಾಗಿದ್ದು, ಸಂಚಾರ ಸ್ಥಗಿತವಾಗಿದೆ. ಅಲ್ಲದೇ ಜಿಲ್ಲೆಯ ಇನ್ನೊಂದು ಪ್ರಸಿದ್ದ ದೇವಸ್ಥಾನ ಹೊಂದಿರುವ ದತ್ತಾತ್ರೆಯನ ಸನ್ನಿಧಿ ಗಾಣಗಾಪೂರದಿಂದ ಇಟಗಾಗೆ ತೆರಳುವ ಸೇತುವೆಯ ಮೇಲೆ ನೀರು ದುಮ್ಮುಕ್ಕುತ್ತಿದೆ. ಇದರಿಂದಾಗಿ ಆ ಮಾರ್ಗದ ಸಂಚಾರವೂ ಕಳೆದ ರಾತ್ರಿಯಿಂದಲೇ ಬಂದ್ ಆಗಿದೆ. ಇನ್ನೊಂದೆಡೆ ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ನೀದಿ ತೀರದಲ್ಲಿ ಇರುವ ಯಲ್ಲಮ್ಮ ದೇವಸ್ಥಾನ ಬಹುತೇಕ ಮುಳುಗಡೆಯಾಗಿದೆ.
3 ಸಲ ಬಿತ್ತೀವಿ, ಮಳಿ ಎಲ್ಲ ಸತ್ಯಾನಾಶ ಮಾಡ್ಯದ: ಕೇಂದ್ರದ ನೆರೆ ಅಧ್ಯಯನ ತಂಡದ ಮುಂದೆ ಕಣ್ಣೀರಿಟ್ಟ ರೈತರು
ಗ್ರಾಮಗಳಿಗೂ ನುಗ್ಗುವ ಭೀತಿ: ಮಳೆ ಇದೇ ರೀತಿ ಮುಂದುವರೆದು ಮಹಾರಾಷ್ಟ್ರದಿಂದ ಇನ್ನಷ್ಟು ನೀರು ಹರಿಬಿಟ್ಟರೆ ಭೀಮಾ ತೀರದಲ್ಲಿರುವ ಹಲವು ಗ್ರಾಮಗಳಿಗೂ ನೀರು ನುಗ್ಗುವ ಅಪಾಯವಿದೆ. ಭೀಮಾ ನದಿ ಹರಿದು ಹೋಗುವ ಕಲಬುರಗಿ ಜಿಲ್ಲೆಯ ಅಫಜಲಪುರ, ಜೇವರ್ಗಿ, ಚಿತ್ತಾಪುರ ತಾಲೂಕಿನ ಅನೇಕ ಗ್ರಾಮದ ಜನರಿಗೆ ಪ್ರ ಅಹದ ಆತಂಕ ಕಾಡುವಂತಾಗಿದೆ.
ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ: ಇನ್ನೂ ಮೂರ್ನಾಲ್ಕು ದಿನಗಳ ಕಾಲ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದು, ನದಿ ತೀರಗಳಿಗೆ ತೆರಳದಂತೆ ಕಲಬುರಗಿ ಜಿಲ್ಲಾಡಳಿತ ಜನತೆಗೆ ಎಚ್ಚರಿಕೆ ನೀಡಿದೆ. ವಿಶೇಷವಾಗಿ ಮಹಾರಾಷ್ಟ್ರದಿಂದ ನೀರು ಬಿಡಲಾಗುತ್ತಿದ್ದು, ಭೀಮಾ ನದಿ ತೀರಕ್ಕೆ ಜನ ಹೋಗಬಾರದು, ಜಾನುವಾರುಗಳು ತೆರಳದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.
ಕಲಬುರಗಿ: ತುಕ್ಕು ಹಿಡಿದ ಪೈಪ್‌ಲೈನ್ ಗೊಬ್ಬುರವಾಡಿ ಜನರಿಗೆ ಕಂಟಕವಾಯ್ತೆ?
ಮಳೆಗೆ ಮನೆ ಕುಸಿತ-ತಪ್ಪಿದ ಅನಾಹುತ: ಕಲಬುರಗಿ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಮನೆ ಕುಸಿದು ಬಿದ್ದು, ಓರ್ವ ಮಹಿಳೆ ಗಾಯಗೊಂಡ ಘಟನೆ ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ತೆಲಗಬಾಳ ಗ್ರಾಮದಲ್ಲಿ ನಡೆದಿದೆ. ಇಂದು ನಸುಕಿನ ಜಾವ ಮನೆಯ ಗೋಡೆ ಮತ್ತು ಮೇಲ್ಛಾವಣಿ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಕುಟುಂಬಸ್ಥರು ಮಲಗಿದ್ದರು. ಮೊದಲು ಗೋಡೆ ಬೀಳುವ ಶಬ್ದ ಬರುತ್ತಿದ್ದಂತೆಯೇ ಮಲಗಿದ್ದವರೆಲ್ಲಾ ಹೊರಗಡೆ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಈ ನಡುವೆ ಕುಸಿದ ಗೋಡೆಯ ಕಲ್ಲು ಬಿದ್ದ ಪರುಣಾಮ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಮಹಾಂತೇಶ್ ಸಜ್ಜನ್ ಅನ್ನೋರಿಗೆ ಸೇರಿದ ಮನೆ ಇದಾಗಿದ್ದು, ಮನೆಯಲ್ಲಿದ್ದ ಶಿಲ್ಪಾ ಎನ್ನುವ ಮಹಿಳೆಗೆ ಗಾಯಗಳಾಗಿವೆ, ಉಳಿದವರು ಬಚಾವ್ ಆಗಿದ್ದಾರೆ.