ಉತ್ತರ ಕನ್ನಡ: ಹೂಳೆತ್ತದ ಕಾರಣ ಮೀನುಗಾರರಿಗೆ ತಪ್ಪದ ಸಂಕಷ್ಟ

By Girish Goudar  |  First Published Dec 29, 2022, 7:00 AM IST

ಬೈತಖೋಲದ ಮೀನುಗಾರಿಕಾ ಬಂದರಿನಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಬೋಟು ನಿಲುಗಡೆಗೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನೂತನ ಜಟ್ಟಿ ನಿರ್ಮಿಸಿದ್ದಾರಾದರೂ ಸಹ ಬಂದರಿನಲ್ಲಿ ತುಂಬಿರುವ ಹೂಳಿನಿಂದಾಗಿ ಜಟ್ಟಿ ಬಳಕೆಗೆ ಬಾರದಂತಾಗಿದೆ.
 


ವರದಿ: ಭರತ್‌ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಕಾರವಾರ(ಡಿ.29): ಕರಾವಳಿಯ ಮೀನುಗಾರ ಸಮುದಾಯದ ಸಾಕಷ್ಟು ಮಂದಿ ಇಂದು ಕೂಡಾ ಆಳ ಸಮುದ್ರಕ್ಕೆ ತೆರಳಿ ಬೋಟುಗಳ ಮೂಲಕ ಮೀನುಗಾರಿಕೆ ನಡೆಸಿಕೊಂಡು ಬರುತ್ತಾರೆ. ಹಲವರು ಇದನ್ನೇ ಜೀವನ ಆಧಾರವನ್ನಾಗಿಸಿಕೊಂಡಿದ್ದಾರೆ. ಆದರೆ, ಹೀಗೆ ಮೀನುಗಾರಿಕೆಗೆ ತೆರಳುವ ಬೋಟುಗಳು ಹರಸಾಹಸಪಟ್ಟು ಬಂದರಿಗೆ ವಾಪಸ್ಸಾಗಬೇಕಾದ ಪರಿಸ್ಥಿತಿ ಇದೆ. ಕೆಲವಂತೂ ಬಂದರಿಗೆ ವಾಪಾಸಾದ ಕೂಡಲೇ ಡ್ಯಾಮೇಜ್‌ಗಳಾಗಿ ಬಿಡುತ್ತವೆ. ಅಷ್ಟಕ್ಕೂ ಮೀನುಗಾರರು ಈ ಸಮಸ್ಯೆಗಳನ್ನು ಯಾಕೆ ಎದುರಿಸುತ್ತಿದ್ದಾರೆ ಅಂತೀರಾ..? ಈ ಸ್ಟೋರಿ ನೋಡಿ..

Latest Videos

undefined

ಒಂದೆಡೆ ಜಟ್ಟಿಯಿದ್ರೂ ಬೋಟುಗಳು ನಿಲ್ಲದೇ ಖಾಲಿಯಾಗಿರುವ ಬಂದರು ಪ್ರದೇಶ. ಇನ್ನೊಂದೆಡೆ ಅದೇ ಬಂದರಿನ ಮತ್ತೊಂದು ಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ಬೋಟುಗಳು ಒತ್ತೊತ್ತಾಗಿ ನಿಂತುಕೊಳ್ಳಬೇಕಾದ ಅನಿವಾರ್ಯತೆ. ಮತ್ತೊಂದೆಡೆ ತೀರಕ್ಕೆ ಬಾರದ ಬೋಟಿನ ಬಳಿ ಸಣ್ಣ ದೋಣಿ ಮೂಲಕ ತೆರಳುತ್ತಿರುವ ಬೋಟಿನ ಕಾರ್ಮಿಕರು. ಈ ದೃಶ್ಯಗಳು ಕಂಡುಬಂದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರದ ಬೈತಖೋಲ ಬಂದರಿನಲ್ಲಿ. ಹೌದು, ಇಲ್ಲಿನ ಬೈತಖೋಲದ ಮೀನುಗಾರಿಕಾ ಬಂದರಿನಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಬೋಟು ನಿಲುಗಡೆಗೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನೂತನ ಜಟ್ಟಿ ನಿರ್ಮಿಸಿದ್ದಾರಾದರೂ ಸಹ ಬಂದರಿನಲ್ಲಿ ತುಂಬಿರುವ ಹೂಳಿನಿಂದಾಗಿ ಜಟ್ಟಿ ಬಳಕೆಗೆ ಬಾರದಂತಾಗಿದೆ.

Karwar: ಇಲಿ ಬಿದ್ದ ಸಾಂಬಾರನ್ನೇ ಬಡಿಸಿದ ಅಡುಗೆ ಸಹಾಯಕರು, ಶಾಲಾ ಬಿಸಿಯೂಟ ತಿಂದು ವಿದ್ಯಾರ್ಥಿಗಳು ಅಸ್ವಸ್ಥ

ಬೈತಖೋಲ ಬಂದರಿನಲ್ಲಿ ಪರ್ಸಿನ್ ಹಾಗೂ ಟ್ರಾಲರ್ ಸೇರಿ ಸುಮಾರು ಇನ್ನೂರಕ್ಕೂ ಅಧಿಕ ಬೋಟುಗಳಿದ್ದು, ಪ್ರತಿನಿತ್ಯ ಇಲ್ಲಿನ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುತ್ತವೆ. ಬೋಟುಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆ ಬಂದರು ಪ್ರದೇಶದಲ್ಲಿ ಜಟ್ಟಿಯನ್ನು ವಿಸ್ತರಣೆ ಮಾಡಿ ನೂತನ ಜಟ್ಟಿಯನ್ನು ನಿರ್ಮಿಸಿದ್ದು, ಬೋಟುಗಳು ಲಂಗರು ಹಾಕಲು ಅನುಕೂಲವಾಗಬೇಕಿತ್ತು. ಆದರೆ, ಈ ಭಾಗದಲ್ಲಿ ತುಂಬಿಕೊಂಡಿರುವ ಹೂಳಿನಿಂದಾಗಿ ಬೋಟುಗಳು ಜಟ್ಟಿಯ ಸಮೀಪವೂ ಆಗಮಿಸುವುದು ಸಾಧ್ಯವಿಲ್ಲವಾಗಿದ್ದು, ಕೇವಲ ಸಣ್ಣ ಬೋಟುಗಳು ಮಾತ್ರ ನಿಲ್ಲುವಂತಾಗಿದೆ. ಕೇವಲ ಕಾರವಾರ ಮಾತ್ರವಲ್ಲದೇ ಜಿಲ್ಲೆಯ ಯಾವುದೇ ಮೀನುಗಾರಿಕಾ ಬಂದರಿನಲ್ಲೂ ಕಳೆದ ಐದು ವರ್ಷದಿಂದ ಹೂಳು ತೆಗೆಯುವ ಕಾರ್ಯ ನಡೆದಿರದ ಕಾರಣ ಮೀನುಗಾರರು ಪರದಾಡುವಂತಾಗಿದೆ ಅಂತ ಮೀನುಗಾರ ಮುಖಂಡ ವಿನಾಯಕ್ ತಿಳಿಸಿದ್ದಾರೆ.  

ಇನ್ನು ಜಿಲ್ಲೆಯ ಕಾರವಾರ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲ್ಲೂಕುಗಳಲ್ಲಿ 2 ಸಾವಿರಕ್ಕೂ ಅಧಿಕ ಮೀನುಗಾರಿಕಾ ಬೋಟುಗಳಿದ್ದು, ಪ್ರತಿನಿತ್ಯ ಬಂದರಿನಿಂದ ಓಡಾಟ ನಡೆಸುತ್ತವೆ. ಆದರೆ, ಬಹುತೇಕ ಎಲ್ಲ ಮೀನುಗಾರಿಕಾ ಬಂದರುಗಳಲ್ಲೂ ಹೂಳು ತುಂಬಿಕೊಂಡಿದ್ದು, ಪೂರ್ಣ ಪ್ರಮಾಣದಲ್ಲಿ ಮೀನು ತುಂಬಿಕೊಂಡು ಬಂದಲ್ಲಿ ಬೋಟುಗಳು ಬಂದರಿಗೆ ಆಗಮಿಸುವುದೇ ಸಾಧ್ಯವಿಲ್ಲವಾಗಿದೆ. ಹೂಳು ತುಂಬಿದ ವೇಳೆ ಮೀನು ತುಂಬಿಕೊಂಡು ಬಂದಲ್ಲಿ ಬೋಟುಗಳ ತಳಕ್ಕೆ ಹಾನಿಯಾಗುತ್ತಿದ್ದು, ಈಗಾಗಲೇ ಸಾಕಷ್ಟು ಬಾರಿ ಬೋಟುಗಳು ಅವಘಡಕ್ಕೀಡಾಗಿ ಲಕ್ಷಾಂತರ ರೂಪಾಯಿ ಹಾನಿಯನ್ನೂ ಅನುಭವಿಸಿವೆ. ಹೀಗಾಗಿ ಆದಷ್ಟು ಬೇಗ ಬಂದರುಗಳಲ್ಲಿ ಹೂಳೆತ್ತುವ ಕಾರ್ಯವಾಗಬೇಕು ಅನ್ನೋದು ಮೀನುಗಾರ ಮುಖಂಡರ ಆಗ್ರಹವಾಗಿದೆ. 

Utttara Kannada: ರಾಷ್ಟ್ರೀಯ ಹೆದ್ದಾರಿ 63ರ ರಿಪೇರಿಗೆ ಘಳಿಗೆ ಬಂದಿಲ್ವಾ?: ಸಾರ್ವಜನಿಕರ ಆಕ್ರೋಶ

ಇನ್ನು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ಕೇಳಿದ್ರೆ ಹೂಳು ತೆಗೆಯುವ ಸಂಸ್ಥೆಗಳ ಆಂತರಿಕ ಕಚ್ಚಾಟದಿಂದಾಗಿ ಹೂಳೆತ್ತುವ ಟೆಂಡರ್ ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ಹೀಗಾಗಿ ಮೀನುಗಾರರ ಸಂಘಗಳ ಮೂಲಕವೇ ಹೂಳೆತ್ತುವ ಪ್ರಕ್ರಿಯೆ ನಡೆಸುವ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆಸಲಾಗಿದ್ದು, ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. 

ಒಟ್ಟಿನಲ್ಲಿ ಕಾಲಕಾಲಕ್ಕೆ ಬಂದರುಗಳಲ್ಲಿ ಹೂಳೆತ್ತದ ಪರಿಣಾಮ ಮೀನುಗಾರರು ಮೀನುಗಾರಿಕೆ ನಡೆಸಲು ಸಂಕಷ್ಟ ಎದುರಿಸುವಂತಾಗಿದೆ. ಇನ್ನಾದ್ರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಬಂದರುಗಳಲ್ಲಿ ಹೂಳು ತೆಗೆಸುವ ಮೂಲಕ ಮೀನುಗಾರರಿಗೆ ಸಹಾಯ ಮಾಡಬೇಕಾಗಿದೆ.

click me!