ರಾಣೇಬೆನ್ನೂರು ವಕೀಲ ನಾಗರಾಜ್ ಕುಡುಕಲಿ ವಿರುದ್ಧ ಸಾಗರ ವಕೀಲ ಪ್ರವೀಣ್‌ರಿಂದ ದೂರು, ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ವೈಯಕ್ತಿಕವಾಗಿಯೂ ನಿಂದನೆ.
ಸಾಗರ(ಆ.19): ರಾಣೇಬೆನ್ನೂರಿನ ನ್ಯಾಯವಾದಿ ನಾಗರಾಜ್ ಕುಡುಕಲಿ ಎಂಬವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಹಾಗೂ ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಕ್ರಮವನ್ನು ಖಂಡಿಸಿ ಅವರನ್ನು ಠಾಣೆಗೆ ಕರೆಸಿ, ವಿಚಾರಣೆ ನಡೆಸುಬೇಕೆಂದು ಸಾಗರದ ನ್ಯಾಯವಾದಿ ಕೆ.ವಿ.ಪ್ರವೀಣ್ ಪೇಟೆ ಪೊಲೀಸ್ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ.
ಮೈಸೂರಿನಲ್ಲಿ ಆ.12 ಮತ್ತು 13ರಂದು ನಡೆದ ರಾಜ್ಯಮಟ್ಟದ ವಕೀಲರ ಸಮ್ಮೇಳನದಲ್ಲಿ ನನಗೆ ನಾಗರಾಜ ಕುಡುಕಲಿ ಅವರ ಪರಿಚಯವಾಗಿತ್ತು. ಆ.13ರಂದು ನಾಗರಾಜ್ ಅವರು ನನ್ನೊಂದಿಗೆ ಮಾತನಾಡುತ್ತ ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿ ಆಗುವುದಿಲ್ಲ ಎಂದು ಚಾಲೆಂಜ್ ಮಾಡಿದ್ದಾರೆ. ಹೀಗೆ ಚಾಲೆಂಜ್ ಮಾಡಿದ ವಿಡಿಯೋವನ್ನು ನಾವಿಬ್ಬರು ಪರಸ್ಪರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇವೆ. ನಾಗರಾಜ್ ಕುಡುಕಲಿ ಅವರು ತಮ್ಮ ಫೇಸ್‌ಬುಕ್ ಖಾತೆ ಸುದ್ದಿ ಚಾವಡಿಗೆ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ.
ರಾಜ್ಯದಲ್ಲಿ ವಿಚಿತ್ರವಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ: ಶಾಸಕ ಬಿ.ವೈ.ವಿಜಯೇಂದ್ರ
ಆಗಸ್ಟ್ 14ರಂದು ಪುನಃ ನಾಗರಾಜ್ ಕುಡುಕಲಿ ಅವರು ಇನ್ನೊಂದು ವಿಡಿಯೋವನ್ನು ತಯಾರಿಸಿ, ಅದನ್ನು ತಮ್ಮ ಸುದ್ದಿ ಚಾವಡಿ ಖಾತೆಗೆ ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಬಿಜೆಪಿಮುಕ್ತ ಕರ್ನಾಟಕ ಆಗಬೇಕು. ಮೋದಿಯೇನು ದೇವರೇನ್ರಿ, ಹಿ ವಾಸ್ ಒನ್ ಆಫ್ ದಿ ಟೆವೆಂಡರ್, ಹುದ್ದೆ ಬಿಟ್ಟರೆ ಯಾರವರು, ಹೂ ಈಸ್ ಹಿ, ಸ್ವತಂತ್ರವಾಗಿ ವಿಮಾನದಲ್ಲಿ ಅಡ್ಡಾಡುವ ಶಕ್ತಿ ಅವನಿಗೆ ಇಲ್ಲ, ನಾನು ದುಡಿದ ಹಣದಲ್ಲಿ ವಿಮಾನದ ಟಿಕೆಟ್ ತೆಗೆದುಕೊಂಡು ಓಡಾಡುತ್ತೇನೆ. ಅವರದೇನಿದೆ ದುಡಿಮೆ? ಎಂದು ಹೇಳಿದ್ದಾರೆ. ಜೊತೆಗೆ ಇವತ್ತು ಒಬ್ಬ ಪ್ರವೀಣ ಎಂಬ ಕೋಮುವಾದಿ ನನ್ನನ್ನು ಭೇಟಿಯಾಗಿದ್ದು, ಫೇಸ್‌ಬುಕ್ ಮತ್ತು ಫೋನ್‌ನಲ್ಲಿರುವ ದುಷ್ಟಬುದ್ಧಿ ಇರುವವನು ಎಂದು ಅವಹೇಳನಕಾರಿಯಾಗಿ ದೇಶದ ಪ್ರಧಾನಿ ಮತ್ತು ನನ್ನ ಬಗ್ಗೆ ಮಾತನಾಡಿದ್ದಾರೆ.
ದೇಶದ ಪ್ರಧಾನಿ ವಿರುದ್ಧ ಅವಹೇಳನಕಾರಿಯಾಗಿ ಏಕವಚನದಲ್ಲಿ ಮಾತನಾಡಿದ್ದಲ್ಲದೇ, ನನ್ನ ವಿರುದ್ಧವೂ ಮಾನಹಾನಿ ಆಗುವಂತಹ ಟೀಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಗರಾಜ್ ಕುಡುಕಲಿ ಅವರನ್ನು ಕರೆಸಿ, ವಿಚಾರಣೆ ನಡೆಸುವ ಜೊತೆಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಕೆ.ವಿ.ಪ್ರವೀಣ್ ಒತ್ತಾಯಿಸಿದ್ದಾರೆ.