ವಿಜಯನಗರ: ಕೈಕೊಟ್ಟ ಮಳೆ, ಒಣಗುತ್ತಿದೆ ಬೆಳೆ..!

By Kannadaprabha News  |  First Published Aug 19, 2023, 10:30 PM IST

ಈ ವರ್ಷ ಮುಂಗಾರು ಆರಂಭವಾಗಿದ್ದೇ ತುಂಬಾ ತಡವಾಗಿ. ಅದರಲ್ಲಿಯೂ ಹೋಬಳಿಯಲ್ಲಿ ಇನ್ನೂ ತಡವಾಗಿ ಮಳೆ ಬಂತು. ಅದೂ ನಿರೀಕ್ಷಿತ ಮಟ್ಟದಲ್ಲಿ ಬರಲಿಲ್ಲ. ಅಷ್ಟೋ ಇಷ್ಟೋ ಮಳೆ ಬಂದು ಭೂಮಿ ತೇವಾಂಶದಿಂದ ಕೂಡಿತ್ತು. ಅದರಿಂದ ಖುಷಿಗೊಂಡ ರೈತರು ಬಿತ್ತನೆ ಮಾಡಿದ್ದಾರೆ. ಈಗ ಬೆಳೆ ಮಳೆಯಿಲ್ಲದೆ ಒಣಗುತ್ತಿದೆ. ಆಗಸ್ಟ್‌ ತಿಂಗಳು ಅರ್ಧ ಕಳೆದರೂ ಅಗತ್ಯ ಮಳೆ ಇಲ್ಲದೆ ರೈತರು ಆತಂಕಕ್ಕೆ ಈಡಾಗಿದ್ದಾರೆ.


ಸಿ.ಕೆ. ನಾಗರಾಜ್‌

ಮರಿಯಮ್ಮನಹಳ್ಳಿ(ಆ.19):  ಮಳೆರಾಯ ಕೈಕೊಟ್ಟಿದ್ದರಿಂದ ಮರಿಯಮ್ಮನಹಳ್ಳಿ ಹೋಬಳಿ ರೈತರಿಗೆ ಸಂಕಷ್ಟಎದುರಾಗಿದೆ. ಹೀಗಾಗಿ ಅನ್ನದಾತರು ನಿತ್ಯ ಮುಗಿಲು ನೋಡುತ್ತಾ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಈ ವರ್ಷ ಮುಂಗಾರು ಆರಂಭವಾಗಿದ್ದೇ ತುಂಬಾ ತಡವಾಗಿ. ಅದರಲ್ಲಿಯೂ ಹೋಬಳಿಯಲ್ಲಿ ಇನ್ನೂ ತಡವಾಗಿ ಮಳೆ ಬಂತು. ಅದೂ ನಿರೀಕ್ಷಿತ ಮಟ್ಟದಲ್ಲಿ ಬರಲಿಲ್ಲ. ಅಷ್ಟೋ ಇಷ್ಟೋ ಮಳೆ ಬಂದು ಭೂಮಿ ತೇವಾಂಶದಿಂದ ಕೂಡಿತ್ತು. ಅದರಿಂದ ಖುಷಿಗೊಂಡ ರೈತರು ಬಿತ್ತನೆ ಮಾಡಿದ್ದಾರೆ. ಈಗ ಬೆಳೆ ಮಳೆಯಿಲ್ಲದೆ ಒಣಗುತ್ತಿದೆ. ಆಗಸ್ಟ್‌ ತಿಂಗಳು ಅರ್ಧ ಕಳೆದರೂ ಅಗತ್ಯ ಮಳೆ ಇಲ್ಲದೆ ರೈತರು ಆತಂಕಕ್ಕೆ ಈಡಾಗಿದ್ದಾರೆ.

Tap to resize

Latest Videos

undefined

ಈಗಲೂ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಮುಗಿಲ ಕಡೆಗೆ ಮುಖ ಮಾಡಿದ್ದಾರೆ. ರೈತರ ಮೊಗದಲ್ಲಿ ನಗು ಮಾಯವಾಗಿದೆ. ನಿರಾಸೆಯ ಭಾವ ಆವರಿಸಿದೆ. ಯಾಕೆಂದರೆ ಬಿತ್ತಿದ ಬೆಳೆಯೆಲ್ಲ ಸಮರ್ಪಕ ಮಳೆಯಿಲ್ಲದೇ ಬಾಡುತ್ತಿದೆ. ಒಂದೊಮ್ಮೆ ಮುಂದೆಯೂ ಮಳೆ ಸಾಕಷ್ಟುಮಳೆಯಾಗದಿದ್ದರೆ ಪರಿಸ್ಥಿತಿ ಚಿಂತಾಜನಕವಾಗಲಿದೆ.

ಕಾಂಗ್ರೆಸ್‌ನಲ್ಲಿ ಮತ್ತೆ ಅಸಮಾಧಾನ ಸ್ಫೋಟ..!

ಪ್ರಸಕ್ತ ಸಾಲಿನ ಬಿತ್ತನೆ:

ಮರಿಯಮ್ಮನಹಳ್ಳಿ ಹೋಬಳಿಯಾದ್ಯಂತ ಇಲ್ಲಿಯವರೆಗೆ ಅಂದಾಜು ಭತ್ತ 180 ಹೆಕ್ಟೇರ್‌, ಜೋಳ 936 ಹೆಕ್ಟೇರ್‌, ಮೆಕ್ಕೆಜೋಳ 2980 ಹೆಕ್ಟೇರ್‌, ಸಜ್ಜೆ 250 ಹೆಕ್ಟೇರ್‌, ರಾಗಿ 300 ಹೆಕ್ಟೇರ್‌, ಶೇಂಗಾ 250 ಹೆಕ್ಟೇರ್‌, ತೊಗರಿ 150 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ಮುಂಗಾರು ಮಳೆ ವರದಿಯು ಜೂ. 1ರಿಂದ ಆ. 1ವರೆಗೆ ವಾಡಿಕೆ 174 ಮಿಮೀ ಮಳೆಯಾಗಬೇಕಾಗಿತ್ತು. ಇದುವರೆಗೂ 34 ಮಿಮೀ ಮಳೆ ಬಿದ್ದಿದೆ. ಹೋಬಳಿಯಲ್ಲಿ ಮಳೆಯ ಕೊರತೆ ವಾಡಿಕೆಗಿಂತ ಶೇ. 80ರಷ್ಟುಕಡಿಮೆ ಮಳೆಯಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿ ಶಿವಮೂರ್ತಿ ತಿಳಿಸಿದರು. ತಕ್ಷಣವೇ ಬರ ಘೋಷಣೆ ಮಾಡಿ ರೈತರಿಗೆ ಆದ ನಷ್ಟ ಭರಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ.

ಅಕ್ರಮ ಮರಳು ಸಾಗಾಟ, ಮಟ್ಕಾ ದಂಧೆಗೆ ಬ್ರೆಕ್‌ ಹಾಕಿ: ಸಚಿವ ಜಮೀರ್‌ ಅಹ್ಮದ್‌

ಏನೋ ಮಳೆಯಾತಲ್ಲಾ ಅಂತ ಸಾಲ- ಸೊಲ ಮಾಡಿ ಗೊಬ್ಬರ, ಬೀಜ ಖರೀದಿ ಮಾಡಿ ಬಿತ್ತನೆ ಮಾಡಿದೆವು. ಆದ್ರ ಇನ್ನೇನು ತೆನೆ ಬಿಡುವ ಹೊತ್ತಿನ್ಯಾಗ ಮಳೆ ಬಾರದ ಬೆಳೆ ಬಾಡಾಕ ಹತ್ತೈತಿ. ಇನ್ನೆರಡು ದಿನದಾಗ ಮಳೆಯಾಗದಿದ್ರ ಬೆಳೆಯಲ್ಲಾ ಒಣಗಿ ಹೋಗುತ್ತೈತಿ. ಹಿಂಗಾದ್ರ ರೈತರು ಬದುಕಿ ಬಾಳೋದಾದ್ರು ಹ್ಯಾಂಗ ಅನ್ನೋ ಚಿಂತೆ ಕಾಡಾಕತೈತಿ. ಮಾಡಿದ ಸಾಲ ತೀರಿಸೋದ ಹಾಂಗ ಅನ್ನೋ ಚಿಂತಿ ಆಗೈತಿ ಎಂದು ಜಿ. ನಾಗಲಾಪುರ ರೈತ, ಕೊಟ್ಗಿ ಮಲ್ಲನಗೌಡ ಹೇಳಿದ್ದಾರೆ.  

ಮರಿಯಮ್ಮನಹಳ್ಳಿ ಹೋಬಳಿಯಾದ್ಯಂತ ಜೋಳ, ಮೆಕ್ಕೆಜೋಳ, ರಾಗಿ, ಭತ್ತ, ಸಜ್ಜೆ, ಶೇಂಗಾ ಮತ್ತು ತೊಗರಿ ಬೆಳೆ ಸೇರಿದಂತೆ ಒಟ್ಟಾರೆ 5,046 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಸದ್ಯ ಎಲ್ಲ ಬೆಳೆಗಳು ಬೆಳವಣಿಗೆ ಹಂತದಲ್ಲಿದ್ದು, ಮಳೆ ಆಶ್ರಿತ ಬೆಳೆಗಳಿಗೆ ಮಳೆಯ ಕೊರತೆಯಿಂದಾಗಿ ಬಾಡಿ ಹೋಗಿವೆ. ಇನ್ನೂ 4-5 ದಿನದೊಳಗೆ ಮಳೆ ಬಾರದಿದ್ದಲ್ಲಿ ಬೆಳವಣಿಗೆ ಕುಂಠಿತವಾಗಿ ಇಳುವರಿ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಮರಿಯಮ್ಮನಹಳ್ಳಿ ಕೃಷಿ ಇಲಾಖೆ ಅಧಿಕಾರಿ ಶಿವಮೂರ್ತಿ ತಿಳಿಸಿದ್ದಾರೆ. 

click me!