ಚಿತ್ತೂರಿನಲ್ಲಿ ರೈಲು ಸೀಟಿನ ವಿಚಾರಕ್ಕೆ ಮಾರಾಮಾರಿ

Published : Jul 30, 2023, 02:53 PM IST
ಚಿತ್ತೂರಿನಲ್ಲಿ ರೈಲು ಸೀಟಿನ ವಿಚಾರಕ್ಕೆ ಮಾರಾಮಾರಿ

ಸಾರಾಂಶ

ಮೈಸೂರು, ರಾಮನಗರ ಹಾಗೂ ಮಂಡ್ಯ ಜಿಲ್ಲೆಯ ವಿವಿಧೆಡೆಯಿಂದ ತಿರುಪತಿ ಪ್ರವಾಸಕ್ಕೆ ತೆರಳಿ ವಾಪಸಾಗುತ್ತಿದ್ದ ಯಾತ್ರಾರ್ಥಿಗಳ ಮೇಲೆ ಅನ್ಯ ಧರ್ಮೀಯ ಯುವಕರ ಗುಂಪು ಆಂಧ್ರ ಪ್ರದೇಶದ ಚಿತ್ತೂರು ಬಳಿ ಇರುವ ಪಾಕಲಾಂನಲ್ಲಿ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ರಾತ್ರಿ ಜರುಗಿದೆ.

ಮಂಡ್ಯ ಮಂಜುನಾಥ/ಎಚ್‌.ಜಿ.ರವಿಕುಮಾರ್‌

ಮಂಡ್ಯ/ ಮದ್ದೂರು (ಜು.30) :  ಮೈಸೂರು, ರಾಮನಗರ ಹಾಗೂ ಮಂಡ್ಯ ಜಿಲ್ಲೆಯ ವಿವಿಧೆಡೆಯಿಂದ ತಿರುಪತಿ ಪ್ರವಾಸಕ್ಕೆ ತೆರಳಿ ವಾಪಸಾಗುತ್ತಿದ್ದ ಯಾತ್ರಾರ್ಥಿಗಳ ಮೇಲೆ ಅನ್ಯ ಧರ್ಮೀಯ ಯುವಕರ ಗುಂಪು ಆಂಧ್ರ ಪ್ರದೇಶದ ಚಿತ್ತೂರು ಬಳಿ ಇರುವ ಪಾಕಲಾಂನಲ್ಲಿ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ರಾತ್ರಿ ಜರುಗಿದೆ.

ರೈಲಿನಲ್ಲಿ ಮುಂಗಡ ಬುಕ್ಕಿಂಗ್‌ ಮಾಡಿದ್ದ ಸೀಟಿನಲ್ಲಿ ಕುಳಿತಿದ್ದ ಕೆಲವು ಯುವಕರನ್ನು ಪ್ರಶ್ನಿಸಿದಾಗ, ಸೀಟು ಬಿಟ್ಟುಕೊಡದೆ ದರ್ಪ ಪ್ರದರ್ಶಿಸಿ ಮಾತಿನ ಚಕಮಕಿ ನಡೆಸಿದ್ದಾರೆ. ಜೊತೆಗೆ ಪಾಕಲಾಂ ಬಳಿ ಲೋಕೋ ಪೈಲಟ್‌ಗೆ ಬೆದರಿಕೆ ಹಾಕಿ ರೈಲನ್ನು 45 ನಿಮಿಷ ನಿಲ್ಲಿಸಿದರಲ್ಲದೇ, ತಮ್ಮ ಸ್ನೇಹಿತರಿಗೆಲ್ಲಾ ಕರೆ ಮಾಡಿ ರೈಲಿಗೆ ಕರೆಸಿಕೊಂಡು ಪುರುಷರು, ಮಹಿಳೆಯರು, ಮಕ್ಕಳ ಮೇಲೂ ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ರೈಲ್ವೆ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರಿಂದ ಪ್ರಧಾನಿ ಕಾರ್ಯಾಲಯ, ರೈಲ್ವೆ ಸಚಿವಾಲಯಕ್ಕೆ ಟ್ವೀಟರ್‌ ಮೂಲಕ ಹಲ್ಲೆಗೊಳಗಾದವರು ದೂರು ನೀಡಿದ್ದಾರೆ.

ತಿಲಕ ಅಳಿಸಿ ಹಿಂದೂ ಬಾಲಕನಿಗೆ ಥಳಿಸಿದ ಮುಸ್ಲಿಂ ವಿದ್ಯಾರ್ಥಿಗಳ ಗುಂಪು, ಶಾಲೆಯಲ್ಲಿ ಮಾರಾಮಾರಿ!

ಹಲ್ಲೆಯಿಂದ ಮೈಸೂರಿನ ದಿನೇಶ್‌ಗೌಡ, ಸುನಿಲ್‌, ಜಯಲಕ್ಷಿ ್ಮೕ, ಹರೀಶ್‌, ವಸಂತ, ದಿವ್ಯಾ, ಭಾಗ್ಯ, ತುಂಗಾ, ಕನ್ಯಾ, ಪುನೀತ್‌, ಪವಿತ್ರಾ, ಮದ್ದೂರಿನ ವಿವೇಕಾನಂದ ನಗರದ ಶಾರದಾ ಅವರು ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ ದಿನೇಶ್‌ಗೌಡ, ಸುನಿಲ್‌, ಹರೀಶ್‌ ಅವರನ್ನು ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ.

ನಡೆದಿದ್ದೇನು?

ಮೈಸೂರು, ಮಂಡ್ಯ, ರಾಮನಗರ, ಚನ್ನಪಟ್ಟಣ, ಶ್ರೀರಂಗಪಟ್ಟಣ, ಮದ್ದೂರು, ಮಳವಳ್ಳಿ ಭಾಗಗಳಿಂದ 240 ಮಂದಿ ಒಟ್ಟಿಗೆ ತಿರುಪತಿ ಪ್ರವಾಸ ಕೈಗೊಂಡಿದ್ದರು. ಜು.24ರಂದು ತಿರುಪತಿಗೆ ಹೊರಟು ದರ್ಶನ ಮುಗಿಸಿ ನಂತರ ಸಮೀಪದ ಪ್ರವಾಸಿ ತಾಣಗಳಿಗೆ ತೆರಳಿ ಜು.28ರಂದು ರಾತ್ರಿ ಆಂಧ್ರಪ್ರದೇಶದ ತಿರುಪತಿಯಿಂದ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದ್ದರು.

ಯಾತ್ರೆಗೆ ತೆರಳಿದ್ದ 240 ಮಂದಿಯೂ ಹೋಗುವುದಕ್ಕೆ ಮತ್ತು ಹಿಂತಿರುಗುವುದಕ್ಕೆ ಮುಂಗಡ ಬುಕ್ಕಿಂಗ್‌ ಮಾಡಿದ್ದರು. ಅದರಂತೆ ತಿರುಪತಿಯಲ್ಲಿ ರೈಲಿನ ತಮ್ಮ ಸೀಟುಗಳಲ್ಲಿ ಕೂರಲು ಬಂದಾಗ ಆ ಆಸನಗಳಲ್ಲಿ ಒಬ್ಬ ಮಹಿಳೆಯೂ ಸೇರಿದಂತೆ ಕೆಲವು ಅನ್ಯ ಧರ್ಮೀಯ ಯುವಕರು ಕುಳಿತಿದ್ದರು. ಅವರನ್ನು ಸೀಟು ಬಿಟ್ಟುಕೊಡುವಂತೆ ಕೇಳಿದಾಗ ಅವರು ಬಿಟ್ಟುಕೊಡುವುದಕ್ಕೆ ನಿರಾಕರಿಸಿದರು. ರಿಸರ್ವೇಷನ್‌ ಸೀಟು ಎಂದು ಹೇಳಿದರೂ ಸುಮ್ಮನೆ ಕುಳಿತಿದ್ದರು.

ಆ ವೇಳೆಗೆ ರೈಲು ತಿರುಪತಿಯಿಂದ ಪಾಕಲಾಂ ಕಡೆಗೆ ಹೊರಟಿತ್ತು. ಆ ಸಮಯದಲ್ಲಿ ಮಹಿಳೆಯರು-ಮಕ್ಕಳಿರುವುದನ್ನು ಕಂಡೂ ಉಡಾಫೆಯಿಂದ ವರ್ತಿಸಿದ ಅವರನ್ನು ಕೆಲವರು ತೀವ್ರವಾಗಿ ಪ್ರಶ್ನಿಸುತ್ತಿದ್ದಂತೆ ಏಕಾಏಕಿ ಹಲ್ಲೆಗೆ ಮುಂದಾದರು. ಇವರೂ ಪ್ರತಿದಾಳಿ ನಡೆಸಿದಾಗ ಆಕ್ರೋಶಗೊಂಡರು. ಅವರ ಜೊತೆಗಿದ್ದ ಮಹಿಳೆ ದೂರವಾಣಿ ಮೂಲಕವೇ ಕರೆ ಮಾಡಿ ಸುಮಾರು 150 ರಿಂದ 200 ಅವರ ಧರ್ಮದ ಯುವಕರನ್ನು ಬರುವಂತೆ ತಿಳಿಸಿದ್ದಾಳೆ. ಪಾಕಲಾಂನಲ್ಲಿ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಆವೇಶದಿಂದಲೇ ಬೆದರಿಕೆ ಹಾಕಿದಳು ಎಂದು ಹಲ್ಲೆಗೊಳಗಾದವರು ತಿಳಿಸಿದ್ದಾರೆ.

ಸ್ವಲ್ಪ ಸಮಯದಲ್ಲೇ ಸ್ಥಳಕ್ಕೆ ಬಂದ ಯುವಕರ ಗುಂಪು ಗಲಾಟೆ ನಡೆಸಿದವರನ್ನು ಹುಡುಕಿ ಹುಡುಕಿ ಚಪ್ಪಲಿಗಳಿಂದ ಮನಸೋಇಚ್ಛೆ ಹಲ್ಲೆ ನಡೆಸಿದರು. ಮಹಿಳೆಯರು, ಮಕ್ಕಳೆನ್ನದೆ ಕೈಗಳಿಂದ ಹಲ್ಲೆ ನಡೆಸಿದ್ದಾರೆ. ಕೆಲವರಿಗೆ ಚಾಕುವಿನಿಂದ ಹಲ್ಲೆ ಮಾಡಿ ತೀವ್ರವಾಗಿ ಗಾಯಗೊಳಿಸಿದ್ದಾರೆ. ಲಾಂಗ್‌, ಮಚ್ಚು ಸೇರಿ ಇನ್ನಿತರ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ. ಆ ಯುವಕರು ನಡೆಸಿದ ದಾಳಿ ಕುರಿತು ವೀಡಿಯೋ ಮಾಡುತ್ತಿದ್ದವರಿಂದ ಮೊಬೈಲ್‌ಗಳನ್ನು ಕಸಿದು ವಿಡಿಯೋಗಳನ್ನು ಡಿಲೀಟ್‌ ಮಾಡಿದ್ದರೆ, ಹಲವರ ಮೊಬೈಲ್‌ಗಳನ್ನು ಜಜ್ಜಿ ಹಾಳು ಮಾಡಿದ್ದಾರೆ. ಆ ಯುವಕರ ದಾಳಿಯಿಂದ ಬೆದರಿದ ಹಲವರು ರೈಲಿನಿಂದ ಕೆಳಗಿಳಿದಿದ್ದಾರೆ.

ಆ ಯುವಕರ ದಾಳಿಯ ಬಗ್ಗೆ ಅಲ್ಲಿನ ರೈಲ್ವೆ ಪೊಲೀಸರಿಗೆ ವಿಷಯ ತಿಳಿಸಿದರೂ ನಮ್ಮ ನೆರವಿಗೆ ಬರಲಿಲ್ಲ. ಇಲ್ಲಿಂದ ಸುಮ್ಮನೆ ಹೋಗುವಂತೆ ಹೇಳಿ ನಮ್ಮನ್ನು ಕಳುಹಿಸಿದರು. 45 ನಿಮಿಷಗಳ ಕಾಲ ನಿಲ್ದಾಣದಲ್ಲೇ ರೈಲು ನಿಂತಿದ್ದರೂ, ದಾಳಿಕೋರರು ಹಲ್ಲೆ ನಡೆಸುತ್ತಿದ್ದರೂ ಪೊಲೀಸರಾದಿಯಾಗಿ ನಮಗೆ ಯಾರಿಂದಲೂ ರಕ್ಷಣೆಯೇ ಸಿಗಲಿಲ್ಲ ಎಂದು ಅಳಲು ವ್ಯಕ್ತಪಡಿಸಿದರು.

ಆತಂಕ-ಅಳಲು

ಅನ್ಯ ಧರ್ಮೀಯ ಯುವಕರ ದಾಳಿಗೊಳಗಾಗಿ ಮದ್ದೂರು ಪಟ್ಟಣಕ್ಕೆ ಬಂದಿಳಿದ ಯಾತ್ರಾರ್ಥಿಗಳಲ್ಲಿ ಭಯ, ಆತಂಕ ಮಡುಗಟ್ಟಿತ್ತು. ಹಲ್ಲೆಗೊಳಗಾದವರು ತಮ್ಮ ದುಃಖವನ್ನು ತೋಡಿಕೊಳ್ಳಲಾಗದೆ ಸುಮ್ಮನಿದ್ದರು. ಕೆಲವರು ತಮಗಾದ ನೋವಿನಿಂದ ಕಣ್ಣೀರಿಡುತ್ತಿದ್ದರು. ಯಾತ್ರೆಗೆ ತೆರಳಿದ್ದವರ ಕುಟುಂಬದವರು ವಿಷಯ ತಿಳಿದು ಮದ್ದೂರು ನಿಲ್ದಾಣಕ್ಕೆ ಆಗಮಿಸಿದ್ದರು. ಅವರಿಗೆ ಏನಾಗಿದೆಯೋ ಎಂಬ ಆತಂಕದಲ್ಲಿದ್ದರು. ರೈಲಿನಲ್ಲಿ ತವರಿಗೆ ಮರಳಿದವರನ್ನು ಸಮಾಧಾನಪಡಿಸಿ ಅಲ್ಲಿಂದ ತಮ್ಮ ಮನೆಗಳಿಗೆ ಕರೆದೊಯ್ದರು.

Bengaluru: ಟಿಕೆಟ್‌ ವಿಚಾರಕ್ಕೆ ಗಲಾಟೆ, ಪ್ರಯಾಣಿಕ-ಕಂಡಕ್ಟರ್‌ ನಡುವೆ ಬಸ್‌ನಲ್ಲೇ ಫೈಟ್‌!

ಯಾರೂ ರಕ್ಷಣೆಗೆ ಬರಲಿಲ್ಲ

ಸೀಟಿನ ವಿಚಾರವಾಗಿ ತಿರುಪತಿಯಲ್ಲೇ ಗಲಾಟೆ ಶುರುವಾಯಿತು. ಕಾಯ್ದಿರಿಸಿದ ಸೀಟಿನಲ್ಲಿ ಕುಳಿತು ಸೀಟು ಬಿಟ್ಟುಕೊಡದೆ ಗೂಂಡಾ ವರ್ತನೆ ಪ್ರದರ್ಶಿಸಿದರು. ಅದರಲ್ಲೊಬ್ಬ ಮಹಿಳೆ ಫೋನ್‌ ಮಾಡಿ 150 ರಿಂದ 200 ಜನರನ್ನು ಪಾಕಲಾಂ ನಿಲ್ದಾಣಕ್ಕೆ ಕರೆಸಿದಳು. ಗಲಾಟೆ ಮಾಡಿದವರನ್ನು ಹುಡುಕಿ ಹುಡುಕಿ ಚಪ್ಪಲಿಯಿಂದ ಹೊಡೆದರು. ಮಹಿಳೆಯರು, ಮಕ್ಕಳೆನ್ನದೆ ಹಲ್ಲೆ ಮಾಡಿದರು. ಅಲ್ಲಿನ ಪೊಲೀಸರಿಗೆ ವಿಷಯ ತಿಳಿಸಿದರೂ ನಮ್ಮ ರಕ್ಷಣೆಗೆ ಬರಲಿಲ್ಲ. ನಾವು ನಿಸ್ಸಹಾಯಕರಾಗಿದ್ದೆವು.

- ಶಾರದಾ, ಯಾತ್ರೆಗೆ ತೆರಳಿದ್ದವರು

ಯಾತ್ರಾರ್ಥಿಗಳಿಗೆ ಎಲ್ಲಿದೆ ರಕ್ಷಣೆ

ತಿರುಪತಿಗೆ ತೆರಳುವ ಯಾತ್ರಾರ್ಥಿಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ. ರೈಲ್ವೆ ಇಲಾಖೆ ಪ್ರವಾಸಿಗರಿಗೆ ರಕ್ಷಣೆ ನೀಡುವುದಕ್ಕೆ ಹೆಚ್ಚಿನ ಕ್ರಮ ವಹಿಸಬೇಕು. ಪೊಲೀಸರೇ ರಕ್ಷಣೆ ನೀಡದೆ ದೂರ ಉಳಿದರೆ ಜನರಿಗೆ ರಕ್ಷಣೆ ಕೊಡುವವರು ಯಾರು. ಅನ್ಯ ಧರ್ಮೀಯ ಯುವಕರ ದಾಳಿ ವೇಳೆ ಯಾರಿಗಾದರೂ ಪ್ರಾಣಾಪಾಯ ಸಂಭವಿಸಿದ್ದರೆ ಯಾರು ಹೊಣೆ. ಗೂಂಡಾಗಿರಿ, ಪುಂಡಾಟದಿಂದ ಹಲವರು ಪ್ರಾಣಭಯಕ್ಕೊಳಗಾಗಿ ರೈಲಿನಿಂದ ಅರ್ಧದಾರಿಯಲ್ಲೇ ಕೆಳಗಿಳಿದು ಹೋಗಿದ್ದಾರೆ.

- ನಾಗರಾಜು, ಯಾತ್ರೆಗೆ ತೆರಳಿದ್ದವರು.

PREV
Read more Articles on
click me!

Recommended Stories

ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!