ಮಾಜಿ ಸಂಸದೆ ಸುಮಲತಾ ವಿರೋಧಿಸಿದ್ದ ಕೆಆರ್‌ಎಸ್ ಬಳಿ ಟ್ರಯಲ್ ಬ್ಲಾಸ್ಟ್‌ಗೆ ಜಿಲ್ಲಾಡಳಿತ ಸಿದ್ಧತೆ!

By Suvarna News  |  First Published Jul 2, 2024, 2:33 PM IST

ಕೆಆರ್‌ಎಸ್  ಬಳಿ ಮೂರು ಬಾರಿ ಪರೀಕ್ಷಾರ್ಥ ಸ್ಫೋಟ ನಡೆಸುವ ಪ್ರಯತ್ನ ನಡೆಸಿ ವಿಫಲವಾಗಿರುವ ಜಿಲ್ಲಾಡಳಿತ ಇದೀಗ ಅಂತಹುದೇ ಮತ್ತೊಂದು ಪ್ರಯತ್ನಕ್ಕೆ ಸಿದ್ಧತೆ ಆರಂಭಿಸಿದೆ.


ಮಂಡ್ಯ (ಜು.2): ಕೆಆರ್‌ಎಸ್ (ಕೃಷ್ಣರಾಜಸಾಗರ ಜಲಾಶಯ) ಬಳಿ ಮೂರು ಬಾರಿ ಪರೀಕ್ಷಾರ್ಥ ಸ್ಫೋಟ ನಡೆಸುವ ಪ್ರಯತ್ನ ನಡೆಸಿ ವಿಫಲವಾಗಿರುವ ಜಿಲ್ಲಾಡಳಿತ ಇದೀಗ ಅಂತಹುದೇ ಮತ್ತೊಂದು ಪ್ರಯತ್ನಕ್ಕೆ ಸಿದ್ಧತೆ ಆರಂಭಿಸಿದೆ. ಇದರ ಬೆನ್ನಲ್ಲೇ ರೈತ ಸಂಘದ ಕಾರ್ಯಕರ್ತರು ಟ್ರಯಲ್ ಬ್ಲಾಸ್ಟ್ ವಿರೋಧಿಸಿ ಮತ್ತೆ ಗೋ-ಬ್ಯಾಕ್ ಚಳವಳಿಗೆ ರೆಡಿಯಾಗಿದ್ದಾರೆ.

ಮೂರು ಬಾರಿ ಟ್ರಯಲ್ ಬ್ಲಾಸ್ಟ್‌ಗೆ ಪ್ರಯತ್ನ ನಡೆಸಿದಾಗಲೂ ವಿಜ್ಞಾನಿಗಳ ತಂಡವನ್ನು ಮೊದಲೇ ಕರೆಸಿಕೊಂಡು ಅವರು ತೋರಿಸುತ್ತಿದ್ದ ಜಾಗದಲ್ಲಿ ಕುಳಿಗಳನ್ನು ನಿರ್ಮಿಸಲಾಗುತ್ತಿತ್ತು. ಆದರೆ, ಈ ಬಾರಿ ವಿಜ್ಞಾನಿಗಳ ತಂಡ ಬರುವ ಮುನ್ನವೇ ಕುಳಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳುವ ಪ್ರಕ್ರಿಯೆಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ತೊಡಗಿದ್ದಾರೆ. ಮಾಹಿತಿ ಎಲ್ಲಿಯೂ ಸೋರಿಕೆಯಾಗದ ರೀತಿಯಲ್ಲಿ ಎಚ್ಚರಿಕೆ ಕಾಯ್ದುಕೊಂಡಿದ್ದಾರೆ.

Tap to resize

Latest Videos

ವಿಜಯಪುರದಲ್ಲಿ ಒಂಟಿ ಎತ್ತು ದಾಖಲೆಯ ಮಾರಾಟ, 18 ಲಕ್ಷ 1 ಸಾವಿರಕ್ಕೆ ಸೋಲ್ಡ್‌!

ನೀರಾವರಿ ಇಲಾಖೆ ಅಧಿಕಾರಿಗಳು ಟ್ರಯಲ್ ಬ್ಲಾಸ್ಟ್ ಪ್ರಕ್ರಿಯೆಗಳ ಕುರಿತಂತೆ ವಿಜ್ಞಾನಿಗಳಿಂದ ಮೊದಲೇ ನಿರ್ದೇಶನ ಪಡೆದುಕೊಂಡು ಗಣಿ ಇಲಾಖೆ ಅಧಿಕಾರಿಗಳ ನೆರವಿನೊಂದಿಗೆ ಕುಳಿಗಳನ್ನು ನಿರ್ಮಿಸುವ ಕಾರ್ಯ ನಡೆಸುತ್ತಿದ್ದಾರೆ. ಈ ಬಾರಿ ಯಾವ ರಾಜ್ಯದ ವಿಜ್ಞಾನಿಗಳ ತಂಡ ಯಾವಾಗ ಕೆಆರ್‌ಎಸ್‌ಗೆ ಆಗಮಿಸಲಿದೆ ಎನ್ನುವುದನ್ನೂ ಗೌಪ್ಯವಾಗಿಡಲಾಗಿದೆ. ಒಮ್ಮೆ ವಿಜ್ಞಾನಿಗಳ ತಂಡ ಈಗಾಗಲೇ ಬಂದಿದ್ದರೂ ಅವರು ಎಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂಬ ಗುಟ್ಟನ್ನೂ ಬಿಟ್ಟುಕೊಡುತ್ತಿಲ್ಲ. ಈ ಬಾರಿ ಟ್ರಯಲ್ ಬ್ಲಾಸ್ಟ್‌ನ್ನು ಯಶಸ್ವಿಗೊಳಿಸಲೇಬೇಕೆಂಬ ಹಠಕ್ಕೆ ಬಿದ್ದಿರುವ ಜಿಲ್ಲಾಡಳಿತ ಬಹಳ ವ್ಯವಸ್ಥಿತವಾಗಿ ಟ್ರಯಲ್ ಬ್ಲಾಸ್ಟ್‌ನ ಪ್ರಕ್ರಿಯೆಗಳನ್ನು ನಡೆಸುತ್ತಿರುವುದಾಗಿ ತಿಳಿದುಬಂದಿದೆ.

ಟ್ರಯಲ್ ಬ್ಲಾಸ್ಟ್‌ಗೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿರುವ ರೈತ ಸಂಘದ ಕಾರ್ಯಕರ್ತರು ಎಂದಿನಂತೆ ಗೋ-ಬ್ಯಾಕ್ ಚಳವಳಿಗೆ ಚಾಲನೆ ನೀಡಲು ಸಜ್ಜಾಗಿದ್ದಾರೆ. ಮಂಗಳವಾರ ಮೈಸೂರು, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯ ರೈತರನ್ನು ಸೇರಿಸಿ ಚಳವಳಿಯನ್ನು ತೀವ್ರಗೊಳಿಸುವುದಕ್ಕೆ ಮುಂದಾಗಿದ್ದಾರೆ.

ಮಂಗಳವಾರ ಕೆಆರ್‌ಎಸ್ ಬಳಿ ಇರುವ ಎಂಜಿನಿಯರ್ ಕಚೇರಿ ಬಳಿ ಹೋರಾಟಕ್ಕಿಳಿಯಲಿರುವ ರೈತಸಂಘದ ಕಾರ್ಯಕರ್ತರು ಟ್ರಯಲ್ ಬ್ಲಾಸ್ಟ್‌ಗೆ ಪ್ರತಿರೋಧ ಒಡ್ಡುವುದಕ್ಕೆ ರೈತರನ್ನು ಸಂಘಟಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ರೈತರು ಅಲ್ಲಿ ಜಮಾಯಿಸುವ ಸಾಧ್ಯತೆಗಳಿವೆ. ನೀರಾವರಿ ಇಲಾಖೆ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಮೂರು ದಿನಾಂಕಗಳನ್ನು ಗೊತ್ತುಪಡಿಸಿದ್ದು, ಅದರಲ್ಲಿ ಜು.೩ ಕೂಡ ಒಂದಾಗಿದೆ. ಅಂದೇ ಟ್ರಯಲ್ ಬ್ಲಾಸ್ಟ್ ನಡೆಸುವ ಸಾಧ್ಯತೆಗಳಿರಬಹುದೆಂಬ ಬಗ್ಗೆ ಶಂಕೆ ವ್ಯಕ್ತಪಡಿಸಿ ಮುಂಚಿತವಾಗಿಯೇ ಹೋರಾಟ ನಡೆಸುವುದಕ್ಕೆ ಸರ್ವ ಸನ್ನದ್ಧರಾಗುತ್ತಿದ್ದಾರೆ.

ಬೋರನಕಣಿವೆ ಜಲಾಶಯದ ನೀರು ಹರಿವು ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಕೆಆರ್‌ಎಸ್ ಅಣೆಕಟ್ಟು ಸಂರಕ್ಷಿಸುವ ವಿಚಾರವಾಗಿ ಅಣೆಕಟ್ಟು ಸುರಕ್ಷತಾ ಕಾಯಿದೆ ರಚಿಸುವಂತೆ ಹಾಗೂ ಅಣೆಕಟ್ಟು ಸುರಕ್ಷತಾ ಸಮಿತಿ ರಚನೆ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ರೈತ ಮುಖಂಡರು ಭೇಟಿಯಾಗಿ ನಡೆಸಿದ ಮಾತುಕತೆ ಫಲಪ್ರದವಾಗಿಲ್ಲ. ಡಿ.ಕೆ.ಶಿವಕುಮಾರ್ ಕೂಡ ಟ್ರಯಲ್ ಬ್ಲಾಸ್ಟ್ ಕಡೆಗೇ ಒಲವನ್ನು ತೋರಿರುವುದರಿಂದ ರೈತ ಮುಖಂಡರು ಅಸಮಾಧಾನಗೊಂಡಿದ್ದಾರೆ. ಇದೀಗ ಹೋರಾಟದ ಮೂಲಕವೇ ಟ್ರಯಲ್ ಬ್ಲಾಸ್ಟ್ ತಡೆಯುವ ನಿರ್ಧಾರಕ್ಕೆ ಬಂದಿದ್ದಾರೆ.

ಈಗಾಗಲೇ ದುಂಡು ಮೇಜಿನ ಸಭೆ ನಡೆಸಿ ಗೋ-ಬ್ಯಾಕ್ ಚಳವಳಿಗೆ ರೈತರನ್ನು ಕರೆತರುವ ಪ್ರಯತ್ನ ನಡೆಸಿದ್ದಾರೆ. ಟ್ರಯಲ್ ಬ್ಲಾಸ್ಟ್‌ಗೆ ಅವಕಾಶ ಮಾಡಿಕೊಟ್ಟರೆ ರೈತರ ಪರವಾದ ವರದಿ ಬರುವ ಸಾಧ್ಯತೆಗಳಿಲ್ಲ. ಗಣಿ ಮಾಲೀಕರ ಪರವಾಗಿ ವರದಿ ನೀಡುವ ಸಾಧ್ಯತೆಗಳೇ ಹೆಚ್ಚಾಗಿವೆ. ಗಣಿಧಣಿಗಳ ಒತ್ತಡಕ್ಕೆ ಮಣಿದು ನೀರಾವರಿ ಇಲಾಖೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದರೊಂದಿಗೆ ಕಾನೂನಾತ್ಮಕವಾಗಿ ಗಣಿಗಾರಿಕೆ ನಡೆಸಲು ಅನುಮತಿ ದೊರಕಿಸುವುದಕ್ಕೆ ಷಡ್ಯಂತ್ರ ನಡೆಸಿದೆ ಎಂಬ ಆರೋಪಗಳು ವ್ಯಕ್ತವಾಗುತ್ತಿದೆ.

ಕೆಆರ್‌ಎಸ್ ಸುತ್ತ ನಡೆಯುವ ಕಲ್ಲು ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯವಿದೆ ಎಂಬ ಅಂಶವನ್ನು ರಾಷ್ಟ್ರೀಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವರದಿಯಲ್ಲಿ ಸೂಕ್ಷ್ಮವಾಗಿ ತಿಳಿಸಿದ್ದರೂ ಉದ್ದೇಶ ಪೂರ್ವಕವಾಗಿಯೋ, ಬೇಜವಾಬ್ದಾರಿತನದಿಂದಲೋ ಸರ್ಕಾರ ಅದನ್ನು ಮೂಲೆಗುಂಪು ಮಾಡುತ್ತಲೇ ಇರುವುದಕ್ಕೆ ಹಾಗೂ ಪದೇ ಪದೇ ನ್ಯಾಯಾಲಯದ ಎದುರು ಟ್ರಯಲ್ ಬ್ಲಾಸ್ಟ್‌ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸುವ ನೀರಾವರಿ ಇಲಾಖೆ ಅಧಿಕಾರಿಗಳ ಕ್ರಮದ ವಿರುದ್ಧ ರೈತಸಂಘದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಲತಾ ವಿರೋಧ: ಸುಮಲತಾ ಅವರು ಮಂಡ್ಯ ಸಂಸದೆಯಾಗಿದ್ದ ಸಮಯದಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕೃಷ್ಣರಾಜಸಾಗರ ಜಲಾಶಯದ ಬಳಿ ಟ್ರಯಲ್ ಬ್ಲಾಸ್ಟ್ ನಡೆಸುವುದರ ಹಿಂದೆ ಅಕ್ರಮ ಗಣಿ ಲಾಬಿ ಇದೆ ಎಂದು ಸಂಸದೆ ಸುಮಲತಾ ಅಂಬರೀಶ್ ಆರೋಪಿಸಿದ್ದರು. ಜಿಲ್ಲಾಡಳಿತ ದಿಕ್ಕು ತಪ್ಪಿಸುತ್ತಿದೆ ಎಂದಿದ್ದರು. ಇದೀಗ ಮತ್ತೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುವುದಕ್ಕೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲವಿದೆ. ಇಲ್ಲಿ ಅನುಮತಿಯನ್ನು ಮೀರಿ ಅಪಾಯದ ಮಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ಜಾರಿಯಲ್ಲಿದೆ.

ಕೆಆರ್‌ಎಸ್ ಡ್ಯಾಂ ರಾಜ್ಯದ ಜೀವನಾಡಿಯಂತೆ. ಈ ಡ್ಯಾಂನಿಂದಾಗಿ ಲಕ್ಷಾಂತರ ಜನರಿಗೆ ಕುಡಿಯುವ ನೀರು ಮತ್ತು ನೀರಾವರಿ ಸೌಲಭ್ಯ ದೊರೆಯುತ್ತಿದೆ. ಟ್ರಯಲ್ ಬ್ಲಾಸ್ಟ್‌ನಿಂದ ಡ್ಯಾಂಗೆ ಹಾನಿಯಾಗುವ ಸಾಧ್ಯತೆ ಇದೆ. ಹಾಗಾಗಿ, ಈ ಯೋಜನೆಯನ್ನು ರದ್ದುಗೊಳಿಸಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ. ರೈತರ ಬೇಡಿಕೆಗಳು ಸಮಂಜಸವಾಗಿವೆ. ಸರ್ಕಾರ ಈ ಬಗ್ಗೆ ತಕ್ಷಣ ಗಮನಹರಿಸಿ ಕ್ರಮ ಕೈಗೊಳ್ಳಬೇಕು. ಟ್ರಯಲ್ ಬ್ಲಾಸ್ಟ್‌ನಿಂದ ಉಂಟಾಗಬಹುದಾದ ಅಪಾಯಗಳನ್ನು ಪರಿಗಣಿಸಿ, ಡ್ಯಾಮ್ ರಕ್ಷಣೆಗೆ ಮುಂದಾಗಬೇಕು ಎಂದು ನನ್ನ ಆಗ್ರಹವಾಗಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇದೊಂದು ಭಂಡ ಸರ್ಕಾರ, ಭಂಡತನದಿಂದಲೇ ಆಡಳಿತ ನಡೆಸುವ ರಾಜಕೀಯ ನಾಯಕರಿಗೆ ಕೆಆರ್‌ಎಸ್ ಉಳಿವಿನ ಬಗ್ಗೆ ಕನಿಷ್ಠ ಕಾಳಜಿ ಇಲ್ಲ. ರಾಷ್ಟ್ರೀಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ನಂತರವೂ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲು ಉತ್ಸಾಹ ತೋರುತ್ತಿರುವ ಜನಪ್ರತಿನಿಧಿಗಳು ರೈತ ವಿರೋಧಿಗಳಾಗಿದ್ದಾರೆ. ೯೨ ವರ್ಷ ಹಳೆಯದಾದ ಅಣೆಕಟ್ಟೆಯ ಸಾಮರ್ಥ್ಯ ಪರೀಕ್ಷೆಗೆ ಹೊರಟಿರುವ ಇವರ ಧನದಾಹಿತ್ವಕ್ಕೆ ರೈತ ಸಮುದಾಯ ಮತ್ತು ಅಣೆಕಟ್ಟೆ ಬಲಿಯಾಗುವುದು ನಿಶ್ಚಿತ. ಟ್ರಯಲ್ ಬ್ಲಾಸ್ಟ್‌ನ್ನು ಈ ನೆಲದ ಪ್ರತಿಯೊಬ್ಬರೂ ವಿರೋಧಿಸಬೇಕು.
ಲಿಂಗಪ್ಪಾಜಿ, ರೈತ ಮುಖಂಡರು

click me!