ಏರ್ ಪೋರ್ಟ್ ಆಥಾರಿಟಿ ಆಫ್ ಇಂಡಿಯಾದ ಸೂಚನೆ ಮೇರೆಗೆ ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅವಶ್ಯಕತೆಯಿರುವ ಭೂಮಿ ಲಭ್ಯತೆ ಪರಿಶೀಲಿಸುವ ಕಾರ್ಯ ನಡೆಸಲಾಗುತ್ತಿದೆ.
ಬೆಂಗಳೂರು(ಜು.02): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಒತ್ತಡ ಹಾಗೂ ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ವಿಮಾನ ನಿಲ್ದಾಣ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರು ಸುತ್ತಮುತ್ತ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಮುಂದಾಗಿದ್ದು, ಅದಕ್ಕಾಗಿ ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಜಾಗ ಹುಡುಕುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ವರ್ಷದಿಂದ ವರ್ಷಕ್ಕೆ ಕೆಐಎ ಮೇಲಿನ ಪ್ರಯಾಣಿಕರ ಒತ್ತಡ ಹೆಚ್ಚುತ್ತಿದೆ. 2023-24ರಲ್ಲಿ 3.75 ಕೋಟಿ ಜನರು ಕೆಐಎ ಮೂಲಕ ವಿಮಾನಯಾನ ಮಾಡಿದ್ದಾರೆ. ಅಲ್ಲದೆ ಪ್ರತಿ ವರ್ಷ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.10ರಷ್ಟು ಏರಿಕೆಯಾಗುತ್ತಿದೆ. ಟರ್ಮಿನಲ್ 2 ನಿರ್ಮಾಣದ ನಂತ ರವೂ ಪ್ರಯಾಣಿಕರ ಒತ್ತಡ ಹೆಚ್ಚುತ್ತಲೇ ಇದ್ದು, ಇದೀಗ ಟರ್ಮಿನಲ್ 3ರ ನಿರ್ಮಾಣಕ್ಕೆ ಚಿಂತನೆ ನಡೆಸಿದೆ. ಹೀಗಾಗಿ ಕೆಐಎ ಮೇಲಿನ ಪ್ರಯಾಣಿಕರ ಒತ್ತಡವನ್ನು ಕಡಿಮೆ ಮಾಡಲು ಬೆಂಗಳೂರು ಸುತ್ತಮುತ್ತ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಚಿಂತನೆ ನಡೆಸಿತ್ತು. ಅದರ ನಡುವೆಯೇ ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಘೋಷಿಸಿದೆ.
ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ತುಮಕೂರು ಬಳಿ ನಿರ್ಮಾಣ
ಈ ಕಾರಣದಿಂದಾಗಿ ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದ್ದು, ಅದಕ್ಕಾಗಿ ಸ್ಥಳ ಗುರುತಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಇತ್ತೀಚೆಗೆ ಅಧಿಕಾರಿಗಳ ಸಭೆ ನಡೆಸಿ ಕೆಐಎ ಮೇಲಿನ ಒತ್ತಡ ನಿವಾರಣೆಗೆ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬೇಕಿರುವ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಅಲ್ಲದೆ, ಅದಕ್ಕೆ ಬೇಕಾದ ಡಿಪಿಆರ್ ಸಿದ್ದಪಡಿಸಿ ಸಲ್ಲಿಸುವಂತೆ ಹೇಳಿದ್ದರು. ಅದರಂತೆ ಅಧಿಕಾರಿಗಳು ಡಿಪಿಆರ್ ಸಿದ್ಧಪ ಡಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು, ಅವರ ಜತೆಗೆ ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಸ್ಥಳದ ಹುಡುಕಾಟದಲ್ಲಿ ತೊಡಗಿದ್ದಾರೆ. ಪ್ರಮುಖವಾಗಿ ಏರ್ ಪೋರ್ಟ್ ಆಥಾರಿಟಿ ಆಫ್ ಇಂಡಿಯಾದ ಸೂಚನೆ ಮೇರೆಗೆ ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅವಶ್ಯಕತೆಯಿರುವ ಭೂಮಿ ಲಭ್ಯತೆ ಪರಿಶೀಲಿಸುವ ಕಾರ್ಯ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
150 ಕಿ.ಮೀ. ವ್ಯಾಪ್ತಿಯಲ್ಲಿ 3 ನಿಲ್ದಾಣದಿಂದ ಸಮಸ್ಯೆ ?
ಸದ್ಯ ನಿಯಮದಂತೆ ಯಾವುದೇ ವಿಮಾನ ನಿಲ್ದಾಣದ ಸುತ್ತಲಿನ 150 ಕಿ.ಮೀ. ವ್ಯಾಪ್ತಿಯಲ್ಲಿ ಮತ್ತೊಂದು ನಿಲ್ದಾಣ ನಿರ್ಮಿಸುವಂತಿಲ್ಲ. ಹಾಗೆ ನಿರ್ಮಾಣಗೊಂಡರೆ ವಿಮಾನಗಳ ಹಾರಾಟಕ್ಕೆ ಸಮಸ್ಯೆಯಾಗಲಿದೆ. ಆದರೆ, ತಮಿಳುನಾಡು ಘೋಷಿಸಿರುವ ಹೊಸೂರು ವಿಮಾನ ನಿಲ್ದಾಣ ಹಾಗೂ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯಿಂದ ನಿರ್ಮಿಸಲು ಉದ್ದೇಶಿಸಲಾ ಗಿರುವ ವಿಮಾನ ನಿಲ್ದಾಣಗಳು ಕೆಐಎಯಿಂದ 150 ಕಿ.ಮೀ. ಒಳಗೇ ಬರಲಿದೆ.
ಹೊಸ ವಿಮಾನ ನಿಲ್ದಾಣ ಯಾಕೆ?
* ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
* ಈ ವಿಮಾನ ನಿಲ್ದಾಣದಲ್ಲಿ ಕಳೆದ ಸಾಲಿನಲ್ಲಿ 3.75 ಕೋಟಿ ಜನರಿಂದ ಪ್ರಯಾಣ
* ಟರ್ಮಿನಲ್ 2 ನಿರ್ಮಾಣ ಮಾಡಿದ್ದರೂ ಹೆಚ್ಚುತ್ತಲೇ ಇರುವ ಪ್ರಯಾಣಿಕ ಸಂಖ್ಯೆ
* ಹಾಗಾಗಿ ಮತ್ತೊಂದು ವಿಮಾನ ನಿಲ್ದಾಣ ಬೆಂಗಳೂರಿಗೆ ತೀರಾ ಅನಿವಾರ್ಯ