ಯಾದಗಿರಿ: ಕೃಪೆ ತೋರದ ವರುಣ, ರೈತರು ಕಂಗಾಲು

By Kannadaprabha NewsFirst Published Jul 19, 2023, 11:30 PM IST
Highlights

ಕೊಡದಿಂದ ನೀರು ಹಾಕಿ ಬೆಳೆಗಳಿಗೆ ಜೀವ ತುಂಬುತ್ತಿರುವ ರೈತರು, ವರುಣ ಕೃಪೆ ತೋರದ ಪರಿಣಾಮ ಒಣಗುತ್ತಿರುವ ಬೆಳೆಗಳು, ಬಾರದ ಮಳೆ ರೈತರು ಕಂಗಾಲು, ರೈತರ ನೆರವಿಗೆ ಸರ್ಕಾರ ಧಾವಿಸಿ ಬೆಳೆ ಪರಿಹಾರ ನೀಡಲಿ. 

ಬಸವರಾಜ ಎಂ. ಕಟ್ಟಿಮನಿ

ಹುಣಸಗಿ(ಜು.19): ಮಳೆಯ ಕೊರತೆಯಿಂದಾಗಿ ತಾಲೂಕಿನಲ್ಲಿ ಬಿತ್ತಿದ ವಿವಿಧ ಬೆಳೆಗಳು ಬಾಡುತ್ತಿರುವುದರಿಂದ ರೈತರು ಕಂಗಾಲಾಗಿದ್ದು, ಹೇಗಾದರೂ ಮಾಡಿ ಬೆಳೆ ಉಳಿಸಿಕೊಂಡ್ರೆ ಒಪ್ಪೊತ್ತಿನ ಗಂಜಿಯಾದ್ರು ಸಿಗುತ್ತೆ ಅನ್ನೋ ಕನಸು ಕಂಡಿರೋ ತಾಲೂಕಿನ ಮಾರನಾಳ ತಾಂಡದ ಗುಂಡಪ್ಪ ಹಾಗೂ ಮಾವಿನಗಿಡ ತಾಂಡದ ರಮಕಿಬಾಯಿ ರೈತರು ತಮ್ಮ ಹೆಗಲ ಮೇಲೆ ಕೊಡಗಳನ್ನು ಹೊತ್ತು ಬೆಳೆಗೆ ನೀರುಣಿಸಲು ಮುಂದಾಗಿದ್ದಾರೆ.

ಬಿತ್ತನೆ ಸಂದರ್ಭದಲ್ಲಿ ಮಳೆಯ ನಿರೀಕ್ಷೆಯಿಟ್ಟುಕೊಂಡು ಮಾರನಾಳ ತಾಂಡಾದ ನಿವಾಸಿ ಗುಂಡಪ್ಪ ಅವರು ತಮ್ಮ 2 ಎಕರೆ ಸ್ವಂತ ಜಮೀನಿನಲ್ಲಿ ಸಜ್ಜೆ, ತೊಗರಿ ಹಾಗೂ ಮಾವಿನಗಿಡ ಹಾಕಿದ್ದು, ಇನ್ನು ಅದೇ ತಾಂಡಾದ ನಿವಾಸಿ ರಮಕಿಬಾಯಿ ಅವರ 1.5 ಎಕರೆ ಜಮೀನಿನಲ್ಲಿ ತೊಗರಿ ಹಾಗೂ ಸಜ್ಜೆ ಬಿತ್ತನೆ ಮಾಡಿದ್ದಾರೆ. ಬೆಳೆದ ಬೆಳೆಗೆ ವರುಣ ಕೃಪೆ ತೋರದ ಪರಿಣಾಮ ಬೆಳೆಗಳು ಒಣಗುತ್ತಿದ್ದು, ಕುಟುಂಬದ ಸದಸ್ಯರೆಲ್ಲರೂ ಸೇರಿ ಭಾವಿಯಿಂದ ಕೊಡದ ಮೂಲಕ ನೀರು ತಂದು ಬೆಳೆಗಳಿಗೆ ನೀರುಣಿಸಿ. ಸಾಧ್ಯವಾದಷ್ಟೂಬೆಳೆಗಳು ಕಾಪಾಡಿಕೊಳ್ಳಬೇಕೆಂದು ಪ್ರಯತ್ನ ನಡೆಸುತ್ತಿದ್ದೇವೆ ಎಂದು ಅವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಬಾರದ ಮಳೆ: ಯಾದಗಿರಿಯಲ್ಲಿ ಅಳಿದುಳಿದ ಬೆಳೆ ಸಂರಕ್ಷಣೆಗೆ ರೈತರ ಹರಸಾಹಸ..!

ತಾಲೂಕಿನಲ್ಲಿ ಭತ್ತ 26200 ಹೆಕ್ಟೇರ್‌, ಹತ್ತಿ 18500 ಹೆಕ್ಟೇರ್‌, ತೊಗರಿ 13800 ಹೆಕ್ಟೇರ್‌, ಸಜ್ಜೆ 4300 ಹೆಕ್ಟೇರ್‌, ಕಬ್ಬು 200 ಹೆಕ್ಟೇರ್‌, ಸೂರ್ಯಕಾಂತಿ 320 ಹೆಕ್ಟೇರ್‌, ಇತರೆ 500 ಹೆಕ್ಟೇರ್‌ ಒಟ್ಟು 63820 ಹೆಕ್ಟೇರ್‌ ಬೆಳೆಗಳನ್ನು ಬೆಳೆಯಲು ನಿಗದಿತ ಗುರಿ ಹೊಂದಲಾಗಿತ್ತು. ತಾಲೂಕಿನ ರೈತರು ಮಳೆಯನ್ನೆ ನಂಬಿಕೊಂಡು ಅಂದಾಜು ಹತ್ತಿ 2775 ಹೆಕ್ಟೇರ್‌, ತೊಗರಿ 2070 ಹೆಕ್ಟೇರ್‌, ಸಜ್ಜೆ 645 ಹೆಕ್ಟೇರ್‌, ಕಬ್ಬು 40 ಹೆಕ್ಟೇರ್‌ ಬೆಳೆಗಳನ್ನು ಬೆಳೆಯಲಾಗಿದೆ ಎಂದು ಅಂದಾಜಿಸಲಾಗಿದೆ.

ಅಂತರ್ಜಲ ಮಟ್ಟ ಕುಸಿತ:

ತಾಲೂಕಿನ ವಿವಿಧ ಗ್ರಾಮದ ರೈತರು ಬೋರವೆಲ್‌ಗಳ ಆಶ್ರಯದಿಂದ ಬೆಳೆಗಳಿಗೆ ನೀರು ಹರಿಸುತ್ತಿದ್ದರು. ಸದ್ಯ ಮಳೆಯ ಕೊರತೆಯಿಂದಾಗಿ ಅಂತರ್ಜಲ ಮಟ್ಟಕಡಿಮೆ ಆಗಿ ಬೋರವೆಲ್‌ನಲ್ಲಿಯೂ ನೀರು ಕಡಿಮೆಯಾಗುತ್ತಿವೆ. ಇದ್ದ ನೀರನ್ನು ಬಳಸಿಕೊಳ್ಳಬೇಕೆಂದರೆ ಸಮರ್ಪಕ ವಿದ್ಯುತ್‌ ಪೂರೈಕೆ ಇಲ್ಲ. ಇದು ಗಾಯದ ಮೇಲೆ ಮತ್ತೊಂದು ಬರೆ ಎಳೆದಂತೆ ಎಂದು ರೈತರು ನೋವಿನಿಂದ ನುಡಿದರು.

ಭತ್ತಿದ ಬಸವಸಾಗರ ಜಲಾಶಯ:

ಪ್ರತಿ ವರ್ಷವು ಮುಂಗಾರು ಸಂದರ್ಭದಲ್ಲಿ ಬಸವಸಾಗರ ಜಲಾಶಯ ಭರ್ತಿಯಾಗಿ ಕೃಷ್ಣಾ ನದಿಗೆ ನೀರು ಹರಿಬಿಡಲಾಗುತ್ತಿತ್ತು. ಆದರೆ, ಸದ್ಯ ಮಹಾರಾಷ್ಟ್ರ ಸೇರಿದಂತೆ ಕೃಷ್ಟ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಮಳೆಯ ಆಭಾವ ಇರುವುದರಿಂದ ಜಲಾಶಯವು ಖಾಲಿಯಾಗುತ್ತಿದ್ದು, ರೈತರನ್ನು ನಿದ್ದೆಗೆಡಿಸುವಂತೆ ಮಾಡಿದೆ.

ಸದ್ಯದ ಪರಿಸ್ಥಿತಿ ನೋಡಿದರೆ ರೈತರಿಗೆ ಮುಂದಿನ ದಿನಗಳಲ್ಲಿ ಕಷ್ಟದ ದಿನಗಳು ಬರುವ ಸಾಧ್ಯತೆ ಹೆಚ್ಚಾಗಿದೆ. ಸಕಾಲಕ್ಕೆ ಮಳೆಯಾಗದಿರುವುದಕ್ಕೆ ಬಿತ್ತನೆಗೆ ಖರ್ಚು ಮಾಡಿದ ಹಣವಾದರೂ ವಾಪಸ್‌ ಬರುವ ಯಾವುದೇ ಧೈರ್ಯ ರೈತರಿಗಿಲ್ಲ. ಸರಕಾರದ ಹಾನಿಯಾದ ರೈತರಿಗೆ ಸೂಕ್ತ ಪರಿಹಾರ ನೀಡಿ ರೈತರ ಪರವಾಗಿ ಸರಕಾರ ನಿಲ್ಲಬೇಕಾಗಿದೆ ಎಂದು ರಮಕಿಬಾಯಿ ಪತ್ರಿಕೆಯೊಂದಿಗೆ ತಮ್ಮ ಅಳಲು ತೋಡಿಕೊಂಡರು.

ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಅಗತ್ಯಕ್ಕೆ ಅನುಗುಣವಾಗಿರುವ ಬೀಜ, ಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ. ರಸಗೊಬ್ಬರವು ಇಲಾಖೆಯಿಂದ ಮಾರಟಗಾರರಿಗೆ ಸರಬರಾಜು ಮಾಡಲಾಗಿದೆ. ರೈತರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಕ್ರಮ ವಹಿಸಲಾಗಿದೆ ಎಂದು ಹುಣಸಗಿ ರೈತ ಸಂಪರ್ಕ ಕೇಂದ್ರದ ಅಧಿಕಾರಿ  ಪರಶುನಾಥ ಹೇಳಿದ್ದಾರೆ.  

ಯಾದಗಿರಿ: ಮಳೆಗಾಗಿ ಆಷಾಢ ಪರವು ಆಚರಣೆ, ಗುರುಲಿಂಗಮಾಹ ಸ್ವಾಮೀಜಿಯಿಂದ ವಿಶೇಷ ಪೂಜೆ

ಮಳೆಯನ್ನು ನಂಬಿ ಜೀವನ ನಡೆಸುತ್ತಿರುವ ರೈತರು ಸದ್ಯ ಮಳೆಯಿಲ್ಲದೆ ಒದ್ದಾಡುತ್ತಿದ್ದಾರೆ. ಸಕಾಲಕ್ಕೆ ಮಳೆ ಬಂದರೆ ರೈತರ ಜೀವನ ಹಸನಾಗುತಿತ್ತು. ಆದರೆ, ತಾಲೂಕು ಅಲ್ಲದೇ ಜಿಲ್ಲೆಯಲ್ಲಿಯೂ ಬರಗಾಲ ಪರಿಸ್ಥಿತಿ ಎದುರಾಗಿದೆ. ಸರಕಾರ ರೈತರಿಗೆ ಪರಿಹಾರ ಒದಗಿಸಿ ರೈತರ ಹಿತ ಕಾಪಾಡಬೇಕಾಗಿದೆ ಎಂದು ಹುಣಸಗಿ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷೆ ಮಹಾದೇವಿ ಬೇವಿನಾಳಮಠ ಹೇಳಿದ್ದಾರೆ. 

ರೈತರು ಮಳೆಯನ್ನು ನಂಬಿ ಬಿತ್ತನೆ ಮಾಡಿದ್ದಾರೆ. ಸದ್ಯ ಬೆಳೆಗಳು ಭೂಮಿ ಬಿಟ್ಟು ಮೇಲಕ್ಕೆ ಬರುವ ಸಂದರ್ಭದಲ್ಲಿ ಮಳೆ ಕೈಕೊಟ್ಟಿರುವುದರಿಂದ ಬೆಳೆದ ಬೆಳೆಗಳು ಬಾಡತೋಡಗಿವೆ. ರೈತರ ಪರಿಸ್ಥಿತಿ ನೋಡಲಾಗದ ಸ್ಥಿತಿಗೆ ತಲುಪಿದೆ. ಸರಕಾರ ಪ್ರತಿ ಹೆಕ್ಟೇರ್‌ಗೆ 25 ಸಾವಿರ ಬರ ಪರಿಹಾರ ನೀಡುವುದರ ಜೊತೆಗೆ ಹುಣಸಗಿ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಯಾದಗಿರಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ ಮೇಟಿ ಬಣ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ ತಿಳಿಸಿದ್ದಾರೆ.  

click me!