ಅಫಜಲ್ಪುರ: ಧರೆಗಿಳಿಯದ ಮಳೆ, ಆತಂಕದಲ್ಲಿ ರೈತರು

By Kannadaprabha News  |  First Published Jul 14, 2023, 10:15 PM IST

ಅಫಜಲ್ಪುರದಲ್ಲಿರುವ ಭೀಮಾ ಅಣೆಕಟ್ಟೆ, ಬೆಣ್ಣೆತೊರಾ ಜಲಾಶಯಗಳಲ್ಲಿಯೂ ನೀರಿಲ್ಲ. ಹೀಗಾಗಿ ಜಿಲ್ಲೆಯ ಪ್ರಮುಖ ಜಲಾಶಯಗಳೆಲ್ಲವೂ ಬತ್ತಿ ಬರಿದಾಗಿವೆ. ಮಲೆ ಇಲ್ಲದ್ದರಿಂದ ಜಲಾಶಯ ಬರಿದಾಗಿದ್ದರಿಂದಲೇ ಜಿಲ್ಲಾದ್ಯಂತ ಅಂತರ್ಜಲ ಕೊರತೆ ತೀವ್ರ ಕಾಡುತ್ತಿದೆ.


ಬಿಂದುಮಾಧವ ಮಣ್ಣೂರ

ಅಫಜಲ್ಪುರ(ಜು.14):  ಮುಂಗಾರಿನ ಆರಂಭ ಶೂರತ್ವ ನಂಬಿದ ರೈತಾಪಿ ವರ್ಗದವರಲ್ಲಿ ಈಗ ಆತಂಕ ಶುರುವಾಗಿದೆ. ಉತ್ತಮ ಮುಂಗಾರು ನಿರೀಕ್ಷೆಯೊಂದಿಗೆ ಬಿತ್ತನೆಯ ಆಸೆ ಇಟ್ಟುಕೊಂಡಿದ್ದ ಅನ್ನದಾತರ ಆಸೆ ನಿರಾಸೆಯಾಗಿದೆ, ಬಿತ್ತನೆ ಮಾಡಬೇಕೆಂದರೆ ಅಗತ್ಯ ತೇವಾಂಶ ಇಲ್ಲ. ಆರಿದ್ರಾ ಮತ್ತು ಪುನರ್ವಸು ಮಳೆ ಸುರಿಯುತ್ತಿಲ್ಲ. ಬಿತ್ತಿದ ಬೀಜ ಗಾಳಿಗೆ ಹಾರಿ ಹೋಗುವ ಆತಂಕ ಕಾಡುತ್ತಿದೆ.

Latest Videos

undefined

ಮುಂಗಾರು ಮಳೆಗಳು ಎಲ್ಲ ಭಾಗದಲ್ಲೂ ಸಮೃದ್ಧವಾಗಿ ಸುರಿಯಲಿಲ್ಲ. ತಾಲೂಕಿನ ಕೆಲ ಗ್ರಾಮಗಳಲ್ಲಿ ಮಾತ್ರ ಅಷ್ಟಕಷ್ಟೆಮಳೆಯಾಗಿದೆ, ಕೆಲವೆಡೆ ಬಿತ್ತನೆಗೆ ಅಗತ್ಯ ಮಳೆ ಬೀಳದೆ ಇಂದಿಗೂ ಬಿತ್ತನೆಯಾಗಿಲ್ಲ. ಬೆಳಗ್ಗೆಯಿಂದ ಬರಿದಾದ ಮುಗಿಲು ಮಧ್ಯಾಹ್ನದವರೆಗೆ ಮೋಡಗಳಿಂದ ತುಂಬಿ ಸಂಜೆ ಗಾಳಿಗೆ ಬರಿದಾಗುತ್ತಿದೆ.

ಗದಗ: ಮಳೆ ಮುನಿಸು, ಶೇ. 90 ಪ್ರದೇಶದಲ್ಲಿ ಬಿತ್ತನೆಯೇ ಆಗಿಲ್ಲ, ಅತಂಕದಲ್ಲಿ ಅನ್ನದಾತ..!

ಬಿತ್ತನೆ ಮಾಡಿದ ಕೆಲ ರೈತರ ಬೆಳೆಗಳು ತೇವಾಂಶವಿಲ್ಲದೆ ಒಣಗುತ್ತಿವೆ. ಕೊಳವೆಬಾವಿಗಳ ನೀರಿನಿಂದ ಜೀವ ಉಳಿಸಬೇಕೆಂದರೆ ತಾಲೂಕಿನ ಜೀವನಾಡಿಯಾಗಿರುವ ಭೀಮಾ ನದಿ ಉಗಮ ಸ್ಥಾನ ಮಹಾರಾಷ್ಟ್ರದಲ್ಲೂ ವರುಣ ಕೃಪೆ ತೋರದ್ದಕ್ಕೆ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟಕಡಿಮೆಯಾಗಿರುವುದರಿಂದ ರೈತರ ಬೆಳೆಗಳಿಗೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಒಣಗುತ್ತಿರುವ ಬೆಳೆ ಕಂಡು ರೈತರು ಮಮ್ಮಲ ಮರುಗುವುದು ಬಿಟ್ಟರೆ ವಿಧಿಯಿಲ್ಲ ಎಂಬ ಸ್ಥಿತಿ ಎದುರಾಗಿದೆ.

ವರುಣನ ಕೃಪೆಗಾಗಿ ನಾನಾ ಗ್ರಾಮಗಳಲ್ಲಿ ವ್ರತ, ಪೂಜೆ, ಪುನಸ್ಕಾರ ಮಾಡಿದ್ದೂ ಆಗಿದೆ. ತಾಲೂಕಿನ ಕರಜಗಿ ಹೋಬಳಿಯ ಕೆಲವೊಂದು ಗ್ರಾಮಗಳಲ್ಲಿ ಎರಡು ದಿನಗಳ ಹಿಂದೆ ಅತ್ಯಲ್ಪ ಮಳೆ ಹೊರತುಪಡಿಸಿದರೆ ಮತ್ತೆ ಮಳೆ ಸಿಂಚನವಿಲ್ಲ. ಈ ಭಾಗದ ರೈತರಿಗೆ ವರದಾನವಾಗುತ್ತಿದ್ದ ಭೀಮಾ ಕಾಲುವೆ ನೀರು ಕೂಡ ಮರೀಚಿಕೆಯಾಗಿದೆ. ಎರಡ್ಮೂರು ವರ್ಷಗಳಿಂದ ಸರಿಯಾಗಿ ಮಳೆ ಬೀಳದೆ ಕಾಲುವೆಗೆ ನಿಯಮಿತವಾಗಿ ನೀರು ಬರುತ್ತಿಲ್ಲ.

ಬಳ್ಳಾರಿ: ಅಂತೂ ಮಳೆ ಬಂತು, ನಿಟ್ಟುಸಿರು ಬಿಟ್ಟ ಅನ್ನದಾತ...!

ಈಗ ಅಲ್ಲಲ್ಲಿ ಮಳೆ ಬಿದ್ದ ಹಿನ್ನೆಲೆ ಭೀಮಾ ಜಲಾಶಯದಿಂದ ನದಿಗೆ ಅಲ್ಪ ಸ್ವಲ್ಪ ನೀರು ಹರಿದು ಬರುತ್ತಿದೆ. ಈ ನೀರು ನೋಡಿದ ಕೂಡಲೇ ಕಾಲುವೆಗೆ ನೀರು ಹರಿಸಿದರೆ ಬೆಳೆಗಳನ್ನು ಉಳಿಸಿಕೊಳ್ಳಬಹುದು ಎನ್ನುತ್ತಿದ್ದಾರೆ ತಾಲೂಕಿನ ರೈತರು.

ಕಲಬುರಗಿ ಜಿಲ್ಲೆಯ ಪ್ರಮುಖ ಜಲಾಶಯಗಳು ಬರಿದೋ ಬರಿದು (ಅಡಿಗಳಲ್ಲಿ)

1) ಅಮರ್ಜಾ- ಸಾಮರ್ಥ್ಯ- 461. 50 ಅಡಿ, ಸದ್ಯದ ನೀರಿನ ಮಟ್ಟ- 0. 737
2) ಗಂಡೋರಿ ನಾಲಾ- ಸಾಮರ್ಥ್ಯ- 467 ಅಡಿ, ಸದ್ಯದ ನೀರಿನ ಮಟ್ಟ- 1. 173
3) ಕೆಳದಂಡೆ ಮುಲ್ಲಾಮಾರಿ- ಸಾಮರ್ಥ್ಯ- 491 ಅಡಿ, ಸದ್ಯ ಇರುವ ನೀರು- 1. 443

ಅಫಜಲ್ಪುರದಲ್ಲಿರುವ ಭೀಮಾ ಅಣೆಕಟ್ಟೆ, ಬೆಣ್ಣೆತೊರಾ ಜಲಾಶಯಗಳಲ್ಲಿಯೂ ನೀರಿಲ್ಲ. ಹೀಗಾಗಿ ಜಿಲ್ಲೆಯ ಪ್ರಮುಖ ಜಲಾಶಯಗಳೆಲ್ಲವೂ ಬತ್ತಿ ಬರಿದಾಗಿವೆ. ಮಲೆ ಇಲ್ಲದ್ದರಿಂದ ಜಲಾಶಯ ಬರಿದಾಗಿದ್ದರಿಂದಲೇ ಜಿಲ್ಲಾದ್ಯಂತ ಅಂತರ್ಜಲ ಕೊರತೆ ತೀವ್ರ ಕಾಡುತ್ತಿದೆ.

click me!